ಸೋಮವಾರ, ಮಾರ್ಚ್ 8, 2021
29 °C
ನನ್ನ ಕಥೆ: ಅನಘಾ ಭಟ್

ಸಂಗೀತದ ಸುರಲೋಕದಲಿ

ನಿರೂಪಣೆ:ಸುಮಲತಾ ಎನ್. Updated:

ಅಕ್ಷರ ಗಾತ್ರ : | |

ಸಂಗೀತದ ಸುರಲೋಕದಲಿ

ಸಂಗೀತದ ಗಂಧ ಗಾಳಿಯೊಂದಿಗೇ ಬೆಳೆದವಳು ನಾನು. ಅಪ್ಪ ಶ್ರೀಪತಿ ಭಟ್ ಸಂಗೀತ ಕಲಿತಿದ್ದರು. ಆದರೆ ಪೂರ್ಣ ಪ್ರಮಾಣವಾಗಿ ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿರಲಿಲ್ಲ. ತಾತ ಲಕ್ಷ್ಮೀನಾರಾಯಣ ಭಟ್ ಹಾರ್ಮೋನಿಯಂ ವಾದಕರಾಗಿದ್ದರು. ಹಾಗಾಗಿ ಸಂಗೀತದ ತಿರುಳು ಕುಟುಂಬದೊಂದಿಗೆ ಕಂಡೂ ಕಾಣದಂತೆ ಹರಿದು ಬಂದಿತ್ತು. ಅದನ್ನು ನನ್ನಲ್ಲಿ ತುಂಬಲು ಹೊರಟವರು ಅಪ್ಪ.ಅಪ್ಪನಿಗೆ ಸಂಗೀತವೆಂದರೆ ತುಂಬಾ ಪ್ರೀತಿ. ಆದರೆ ಅವರಿಗೆ ಕಲಿಯಲು ಸಾಧ್ಯವಾಗದ ಕಾರಣ ನನ್ನಿಂದ ಸಂಗೀತದ ಕನಸನ್ನು ನನಸು ಮಾಡಲು ಹೊರಟರು. ಈ ಕಾರಣದಿಂದ ನನಗೆ ನಾಲ್ಕು ವರ್ಷವಿರುವಾಗಲೇ ಸಂಗೀತಾಭ್ಯಾಸದಲ್ಲಿ ತೊಡಗಿಕೊಳ್ಳು­ವಂತೆ ಪ್ರೇರೇಪಿಸಿದರು. ಅವರೇ ನನಗೆ ಸಂಗೀತದ ಮೂಲ ಪಾಠಗಳನ್ನು ಹೇಳಿಕೊಟ್ಟಿದ್ದು. ಅಪ್ಪನೇ ನನ್ನ ಮೊದಲ ಗುರು. ಈಗ ಸಂಗೀತ ನನ್ನ ಜೀವನದ ಭಾಗವೇ ಆಗಿಹೋಗಿದೆ. ಚಿಕ್ಕವಳಿರುವಾಗಲೂ ಅಷ್ಟೆ, ಸಂಗೀತವೇ ನಿದ್ದೆಗೆ ಮದ್ದು. ಹಾಡು ಕೇಳಲಿಲ್ಲ ಎಂದರೆ ನಾನು ನಿದ್ದೆಯೇ ಮಾಡುತ್ತಿರಲಿಲ್ಲವಂತೆ.ನಾನು ಹುಟ್ಟಿದ್ದು ಶಿವಮೊಗ್ಗದ ಸಾಗರದಲ್ಲಿ. ಬೆಳೆದಿದ್ದು, ವಿದ್ಯಾಭ್ಯಾಸ ಎಲ್ಲವೂ ಬೆಂಗಳೂರಿನಲ್ಲಿ. ಶಿಕ್ಷಣಕ್ಕೆ ಕೊಟ್ಟಷ್ಟೇ ಪ್ರಾಮುಖ್ಯವನ್ನು ಸಂಗೀತಕ್ಕೂ ನೀಡುವ ಕುಟುಂಬ ನಮ್ಮದು. ಹಾಗಾಗಿ ನಾನು ಎರಡನೇ ತರಗತಿಯಲ್ಲಿದ್ದಾಗಲೇ ಲಲಿತಾ ಕಾಯ್ಕಿಣಿ ಅವರ ಬಳಿ ಸಂಗೀತಾಭ್ಯಾಸಕ್ಕೆ ಸೇರಿಸಿದರು. ಸಂಗೀತ ಎಂದರೆ ಕೇವಲ ಕಲಿಕೆಯಲ್ಲ, ಅದು ಸಂಸ್ಕಾರದ ಮೂಲ ಎಂಬ ಮಾತನ್ನು ಅಪ್ಪ ಬಹುವಾಗಿ ನಂಬಿದ್ದರು. ಅದರ ಫಲವಾಗಿಯೇ ಸಂಗೀತಕ್ಕೆ ಮನೆಯಲ್ಲಿ ಅಷ್ಟು ಮಹತ್ವವಿತ್ತು. ಲಲಿತಾ ಕಾಯ್ಕಿಣಿ ಅವರ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಭ್ಯಾಸವನ್ನು ಆರಂಭಿಸಿದೆ. ನಂತರ ಗೀತಾ ಹೆಗಡೆ ಅವರಲ್ಲಿ ಅಭ್ಯಾಸ ಮುಂದುವರೆಯಿತು.ಗದಗದಲ್ಲಿ ನಡೆದ ‘ಕಲಾಚೇತನ’ ಸಮಾರಂಭದಲ್ಲಿ ನನ್ನ ಮೊದಲ ಕಾರ್ಯಕ್ರಮ ನೀಡಿದ್ದು. ನನಗಾಗ ಎಂಟು ವರ್ಷ. ಅದೊಂದು ಮರೆಯಲಾರದ ಅನುಭವ. ನನಗೆ ಅದು ಕಾರ್ಯಕ್ರಮ ಅನಿಸಿರಲೇ ಇಲ್ಲ. ಮನೆಯಲ್ಲಿ ಹಾಡಿದಷ್ಟೇ ಸರಾಗವಾಗಿ ವೇದಿಕೆ ಮೇಲೂ ಹಾಡಿದ್ದೆ. ಅಷ್ಟೊಂದು ಜನರ ಮುಂದೆ ಹಾಡಿದ್ದನ್ನು ನೆನೆಸಿಕೊಂಡರೆ ಈಗಲೂ ಖುಷಿ ಎನಿಸುತ್ತದೆ. ಆ ಸಮಯದಲ್ಲೇ ಆಕಾಶವಾಣಿಯ ‘ಯುವವಾಣಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು.ಒಂದು ಮಾತಂತೂ ನಿಜ. ಸಂಗೀತವನ್ನು ಪ್ರೀತಿಯಿಂದ ಒಲಿಸಿಕೊಳ್ಳಬೇಕೇ ಹೊರತು ಲಾಭದ ಉದ್ದೇಶವಿಟ್ಟುಕೊಂಡರೆ ಅದು ಒಲಿಯುವುದಿಲ್ಲ. ನಾನೂ ವೃತ್ತಿಪರ ಸಂಗೀತಗಾರ್ತಿಯಾಗಬೇಕೆಂದು ಹೊರಟವಳಲ್ಲ. ಆದರೆ ಸಂಗೀತದೆಡೆಗಿನ ಆಸಕ್ತಿ ಎಲ್ಲಿಗೆ ನನ್ನನ್ನು ಕರೆದೊಯ್ಯುತ್ತದೋ ಅಲ್ಲಿವರೆಗೂ ಹೋಗುತ್ತೇನೆ. ನನ್ನೊಳಗಿನ ನನ್ನನ್ನು ಹೊರತಂದಿದ್ದು ಸಂಗೀತವೆಂಬ ಮಹಾಶಕ್ತಿ. ಎಷ್ಟೋ ಸಂದರ್ಭಗಳಲ್ಲಿ ನನ್ನ ಬುದ್ಧಿ ಮತ್ತು ಮನಸ್ಸು ಸಮತೋಲನದಲ್ಲಿರುವಂತೆ ಕಾಯ್ದುಕೊಂಡಿದ್ದೂ ಈ ಶಕ್ತಿ ಎಂದರೆ ತಪ್ಪಿಲ್ಲ.ನನ್ನ ಬಾಲ್ಯದ ದಿನಗಳೂ ಸಂಗೀತದೊಂದಿಗೇ ನಂಟು ಹಾಕಿಕೊಂಡಿತ್ತು. ಬೆಂಗಳೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ನನ್ನ ಶಿಕ್ಷಣ ಆರಂಭಗೊಂಡಿದ್ದು. ಪಿಯುಸಿವರೆಗೂ ಅಲ್ಲೇ ಓದಿದೆ. ಶಾಲೆಯಲ್ಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೆ. ಆದರೆ ಹೆಚ್ಚಾಗಿ ಗುರುತಿಸಿಕೊಂಡಿದ್ದು ಹೊರಗಿನ ಸಮಾರಂಭಗಳಲ್ಲಿ. ಶಾಲೆಯಲ್ಲೂ ನನ್ನ ಸಂಗೀತಾಭ್ಯಾಸಕ್ಕೆ ಪೂರಕ ಬೆಂಬಲವಿತ್ತು. ನನ್ನನ್ನು ಸ್ಪರ್ಧೆಗಳಿಗೆ ಪ್ರತಿನಿಧಿಯಾಗಿ ಕಳುಹಿಸುತ್ತಿದ್ದರು. ಆಗ ತುಂಬಾ ಖುಷಿ ಎನಿಸುತ್ತಿತ್ತು. ನನ್ನ ಶಾಲಾ ಶಿಕ್ಷಕರೂ ನನ್ನನ್ನು ಹುರಿದುಂಬಿಸುತ್ತಿದ್ದರು. ನನ್ನ ಕಾರ್ಯಕ್ರಮಗಳಿಗೂ ಬರುತ್ತಿದ್ದರು. ಈಗಲೂ ಬರುತ್ತಾರೆ. ಸ್ನೇಹಿತರೂ ನನ್ನನ್ನು ತುಂಬು ಮನಸ್ಸಿನಿಂದ ಪ್ರೋತ್ಸಾಹಿಸುತ್ತಿದ್ದರು. ನಂತರ ಕಂಪ್ಯೂಟರ್ ಸೈನ್ಸ್‌ ಎಂಜಿನಿಯರಿಂಗ್‌ನಲ್ಲಿ ಪದವಿಗೆ ಸೇರಿಕೊಂಡೆ. ಸಂಗೀತಾಭ್ಯಾಸ, ಶಿಕ್ಷಣ ಎರಡನ್ನೂ ಒಟ್ಟಿಗೇ ನಿಭಾಯಿಸುವುದು ಒಮ್ಮೊಮ್ಮೆ ಕಷ್ಟವೆನಿಸುತ್ತಿತ್ತು. ಆದರೆ ಸಂಗೀತದೆಡೆಗಿನ ಒಲುಮೆ ಆ ಕಷ್ಟಗಳನ್ನು ಹಿಮ್ಮೆಟ್ಟುವಂತೆ ಪ್ರೇರೇಪಿಸುತ್ತಿತ್ತು. ಕಾಲೇಜಿನಲ್ಲಿ ಶಾಸ್ತ್ರೀಯ ಸಂಗೀತವನ್ನು ಕೇಳುವವರು ಕಡಿಮೆಯೇ. ಆದ್ದರಿಂದ ಕಾಲೇಜಿನಲ್ಲಿ ಅಷ್ಟಾಗಿ ಭಾಗವಹಿಸುತ್ತಿರಲಿಲ್ಲ.ಮುಂದಿನ ಪಯಣ ನೌಕರಿಯೆಡೆಗೆ. ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ. ಎರಡು ಮೂರು ಸಾಫ್ಟ್‌ವೇರ್ ಕಂಪೆನಿಗಳಲ್ಲಿ ಕೆಲಸ ಮಾಡಿದೆ. ಆದರೆ ಏಕೋ ಮನಸ್ಸಿಗೆ ಕೆಲಸ ಒಗ್ಗಿಕೊಳ್ಳಲೇ ಇಲ್ಲ. ಕೆಲಸದ ನಡುವೆ ಸಂಗೀತಾಭ್ಯಾಸಕ್ಕೆ ಸಮಯವೇ ಸಿಗುತ್ತಿರಲಿಲ್ಲ. ಒಂದಷ್ಟು ದಿನ ಎರಡನ್ನೂ ನಿಭಾಯಿಸುವ ಪ್ರಯತ್ನದಲ್ಲಿದ್ದೆ. ಆದರೆ ಅದು ವ್ಯರ್ಥ ಎನಿಸಲು ಶುರುವಾಯಿತು. ನೌಕರಿಗೆ ವಿದಾಯ ಹೇಳಿ ಸಂಗೀತದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ನಿಶ್ಚಯಿಸಿದೆ.ನನ್ನ ಈ ನಿರ್ಧಾರಕ್ಕೆ ಪೋಷಕರೂ ವಿರೋಧಿಸಲಿಲ್ಲ. ಅವರದ್ದು ನಿರೀಕ್ಷೆ ಮೀರಿದ ಬೆಂಬಲ. ಅಪ್ಪ ಅಮ್ಮ ನನ್ನನ್ನು ಎಂದಿಗೂ ಒತ್ತಾಯಿಸಲೇ ಇಲ್ಲ. ಅಮ್ಮ ಜಯಾ ಭಟ್, ನನ್ನ ಪ್ರತಿ ಕಾರ್ಯಕ್ರಮದ ಸಿದ್ಧತೆಯನ್ನೂ ಮಾಡಿಕೊಡುತ್ತಾರೆ. ಇದಕ್ಕಿಂತ ಅದೃಷ್ಟ ಇನ್ನೇನು ಬೇಕು ಹೇಳಿ?ಚಿಕ್ಕವಳಿದ್ದಾಗಲೇ ಬಾಲ ಪ್ರತಿಭಾ, ಕಿಶೋರಪ್ರತಿಭಾ, ಸಂಗೀತದಲ್ಲಿ ‘ಬೆಸ್ಟ್‌ ಕ್ರಿಯೇಟಿವ್’ ಹೀಗೆ ಹಲವು ಬಿರುದುಗಳೂ ಬಂದವು. ಸಂಘ ಸಂಸ್ಥೆಗಳು ಆಯೋಜಿಸಿದ್ದ ಕಾರ್ಯಕ್ರಮಗಳ ಸಲುವಾಗಿ ಮಂಗಳೂರು, ಧಾರವಾಡ, ಗದಗ್, ದಾವಣಗೆರೆ, ಹುಬ್ಬಳ್ಳಿ, ಪುಣೆ, ದೆಹಲಿ, ಕೊಚ್ಚಿ, ಹೈದರಾಬಾದ್, ಚೆನ್ನೈ, ಮಾರಿಷಸ್, ರೋಡ್ರಿಗ್, ಹೀಗೆ ಊರು ಊರುಗಳನ್ನು ಸುತ್ತಿಬಂದೆ. ಒಂದೊಂದು ಊರು, ಕಾರ್ಯಕ್ರಮವೂ ನೀಡಿದ ಅನುಭವಗಳನ್ನು ಒಟ್ಟಿಗೆ ಮಾಡಿಕೊಂಡು ಮುನ್ನಡೆದೆ. ನನ್ನಲ್ಲಿ ಉಳಿದಿರುವ ನೆನಪುಗಳಲ್ಲಿ ತುಂಬಾ ವಿಶೇಷವಾದದ್ದು ಎಂದರೆ ಟಿ. ಶ್ರೀನಿವಾಸ್‌ ಅವರು ನನ್ನಿಂದ ಶಿಶುಗೀತೆ ಹಾಡಿಸಿದ್ದು.ಇನ್ನು ಸಿನಿಮಾ ಸಂಗೀತದೆಡೆಗೆ ನನಗೆ ಆಕರ್ಷಣೆ ಕಡಿಮೆ. ಮೊದಲಿನಿಂದಲೂ ಶಾಸ್ತ್ರೀಯ ಸಂಗೀತದ ವಾತಾವರಣದಲ್ಲೇ ಬೆಳೆದು, ಅದನ್ನೇ ಆರಾಧಿಸುತ್ತಿದ್ದವಳು. ಹಾಗಾಗಿ ಸಿನಿಮಾ ಸಂಗೀತ ಅಷ್ಟು ಒಗ್ಗಿಕೊಳ್ಳಲಿಲ್ಲ. ಎರಡೂ ಪ್ರಕಾರಗಳು ಬೇರೆ ಬೇರೆ.ಇದುವರೆಗೂ ನೂರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಇತ್ತೀಚೆಗೆ ಮುಂಬೈ ಮತ್ತು ಕೋಲ್ಕತ್ತಾದಲ್ಲಿ ನಡೆದ ‘ನಾದ್‌ಭೇದ್‌’ ಎಂಬ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದೆ. ಅದು ಶಾಸ್ತ್ರೀಯ ಸಂಗೀತದ ರಾಷ್ಟ್ರೀಯ ಮಟ್ಟದ ಸ್ಪರ್ಧೆ. ಫೈನಲ್ಸ್‌ನವರೆಗೂ ಹೋಗಿದ್ದೆ. ಅತಿ ಕಡಿಮೆ ಅವಧಿಯಲ್ಲಿ ಅತ್ಯುತ್ತಮವಾಗಿ ಮೂಡಿಬಂದ ಶೋ ಅದಾಗಿತ್ತು. ಗಣ್ಯರ ಮುಂದೆ ಹಾಡುವ ಅವಕಾಶ ನನ್ನದಾಗಿತ್ತು.ಕೈವಲ್ಯ ಕುಮಾರ್‌, ಗಿರಿಜಾದೇವಿ, ಶುಭಾಂಕರ್ ಬ್ಯಾನರ್ಜಿ, ಬೇಗಂ ಪರ್ವೀನ್ ಸುಲ್ತಾನ್ ಹೀಗೆ ಹಲವು ಸಂಗೀತಗಾರರ ಮುಂದೆ ಹಾಡಿದ್ದು ರೋಮಾಂಚನಕಾರಿ ಅನುಭವ. ಅಲ್ಲಿ ನನ್ನಂಥ ಹಲವು ಮಂದಿ ಹಾಡಲು ಬಂದಿದ್ದರು. ಅವರ ಪ್ರತಿಭೆ, ಆತ್ಮವಿಶ್ವಾಸ ಎಲ್ಲವನ್ನೂ ಕಂಡು ಅಚ್ಚರಿಗೊಂಡಿದ್ದೆ. ನನ್ನ ಹಾಡಿಗೂ ಅನೇಕ ಮಂದಿ ಒಳ್ಳೆ ಪ್ರತಿಕ್ರಿಯೆ ನೀಡಿದರು. ಅದೊಂದು ಆರೋಗ್ಯಕರ ಸ್ಪರ್ಧೆ ಅನಿಸಿತ್ತು.2010ರಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ‘ಗಾನಲಹರಿ’ ಬಿರುದು ಪಡೆದುಕೊಂಡೆ. 2013ರಲ್ಲಿ ಪಂಜಾಬ್‌ನ ಜಲಂಧರ್‌ನಲ್ಲಿ ನಡೆದ ಹರಿವಲ್ಲಭ ಸಂಗೀತ ಸಮ್ಮೇಳನದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಸಿಕ್ಕಿತು. ಅದೇ ವರ್ಷ ಇಂಡೋ ಚೈನಾ ಕಲ್ಚರಲ್ ಕೌನ್ಸಿಲ್‌ನಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ಮೊದಲ ಸ್ಥಾನ ಪಡೆದುಕೊಂಡೆ.ಅದೇ ಸಮಯದಲ್ಲಿ ಲಹರಿ ರೆಕಾರ್ಡಿಂಗ್ ಕಂಪೆನಿ ನನ್ನ ಹಿಂದೂಸ್ತಾನಿ ಸಂಗೀತದ ಹಾಡುಗಳ ‘ಆದ್ಯ’ ಎಂಬ ಆಲ್ಬಂ ಬಿಡುಗಡೆ ಮಾಡಿತು. ಲಘು ಸಂಗೀತದ ಹಲವು ಕ್ಯಾಸೆಟ್ ಮತ್ತು ಸಿ.ಡಿಗಳಲ್ಲೂ ಹಾಡಿದ್ದೇನೆ. ಇವೆಲ್ಲಾ ಒಂದು ರೀತಿ ನನ್ನ ಬದುಕಿನ ಬುತ್ತಿ ತುಂಬಿದ ಅನುಭವಗಳು ಎನ್ನಬಹುದು.ಬಿಡುವಿನ ವೇಳೆಯಲ್ಲಿ ಪೇಂಟಿಂಗ್ ಮಾಡುತ್ತಿದ್ದೆ. ಆದರೆ ಓಡಾಟದ ನಡುವೆ ಅದಕ್ಕೆ ಸಮಯ ಮೀಸಲಿಡಲು ಸಾಧ್ಯವಾಗಲಿಲ್ಲ. ಆಗಾಗ್ಗೆ ಚಿತ್ರಕಲಾ ಪ್ರದರ್ಶನಕ್ಕೆ ಭೇಟಿ ನೀಡುವುದನ್ನಂತೂ ತಪ್ಪಿಸಿಲ್ಲ. ಇನ್ನು ಪುಸ್ತಕ ಓದುವುದೂ ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದು. ನೃತ್ಯವೆಂದರೆ ನನಗೆ ತುಂಬಾ ಇಷ್ಟ. ಆದರೆ ನೃತ್ಯ ಮಾಡುವುದಿಲ್ಲ. ನೋಡಿ ಖುಷಿ ಪಡುತ್ತೇನೆ.ಸದ್ಯಕ್ಕೆ ಹಿಂದೂಸ್ತಾನಿ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದು, ನನ್ನ ಕೈಲಾದ ಮಟ್ಟಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪರಿಣತಿ ಸಾಧಿಸಬೇಕು ಎನ್ನುವುದು ನನ್ನ ಗುರಿ. ಏನಾದರೂ ಮಾಡುವಂತಿದ್ದರೆ, ಅದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲೇ ಆಗಬೇಕು ಎನ್ನುವುದು ನನ್ನ ಬಯಕೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.