ಸಂಗೀತ ಕಟ್ಟುವವರ ಲಗೋರಿ

7

ಸಂಗೀತ ಕಟ್ಟುವವರ ಲಗೋರಿ

Published:
Updated:
ಸಂಗೀತ ಕಟ್ಟುವವರ ಲಗೋರಿ

`ಸಂಗೀತ ಉಸಿರು. ಅದುವೇ ಜೀವನ, ಬೆಳದಿಂಗಳ ರಾತ್ರಿಯಲಿ ಸುಮ್ಮನೇ ಕುಳಿತು ಆಕಾಶ ನೋಡಿದರೆ ಅಲ್ಲಿ ಒಂದು ಪದ ಹುಟ್ಟಿಕೊಳ್ಳುತ್ತದೆ. ಆ ಚುಕ್ಕಿ, ಚಂದ್ರಮ ಎಲ್ಲವೂ ನನ್ನೊಳಗೊಂದು ಸ್ಫೂರ್ತಿ ತುಂಬುತ್ತದೆ. ಎಲ್ಲಾ ನೋವನ್ನು ಮರೆಸುವ ಶಕ್ತಿ ಸಂಗೀತಕ್ಕಿದೆ. ನೋವಿದ್ದರೂ, ನಲಿವಿದ್ದರೂ ಮನಸ್ಸು ವಾಲುವುದು ಸಂಗೀತದತ್ತ. ಸಂಗೀತಕ್ಕೆ ಎಲ್ಲವನ್ನೂ ಮರೆಸುವ ಶಕ್ತಿ ಇದೆ...' ಹೀಗೆ ಭಾವೋದ್ವೇಗದಿಂದ ಮಾತನಾಡುತ್ತಾ ಸಾಗಿದರು ತೇಜಸ್.`ನಮ್ಮ ತಂಡದ ಹೆಸರು `ಲಗೋರಿ'. ಯಾಕೆ ಈ ಹೆಸರಿಟ್ಟಿರಿ ಎಂದು ತುಂಬಾ ಜನ ಕೇಳುತ್ತಾರೆ. ಹಾಡಿಗೂ, ಚೆಂಡಿನಾಟಕ್ಕೂ ಏನು ಸಂಬಂಧ ಎಂದು? ಇದೆ, ಎರಡೂ ನಮ್ಮ ಭಾವ ತಂತಿಯನ್ನು ಮೀಟುತ್ತವೆ. ಲಗೋರಿ ಎಂದಾಕ್ಷಣ ಒಮ್ಮೆಯಾದರೂ ಬಾಲ್ಯ ನೆನಪಾಗದೇ ಇರದು. ಅದಕ್ಕೇ ಈ ಹೆಸರು ಆಪ್ತವೆನಿಸಿತು' ಎನ್ನುತ್ತಾ ಹೆಸರಿನ ಗುಟ್ಟು ಬಿಚ್ಚಿಟ್ಟರು.`ನಮ್ಮ ತಂಡದ ಬೆನ್ನೆಲುಬು ಗೀತ್ (ಲೀಡ್ ಗಿಟಾರ್), ಎಡ್ವರ್ಡ್ (ಗಿಟಾರ್) ಶಾಲಿನಿ (ಬೇಸ್ ಗಿಟಾರ್) ಮತ್ತು ವಿನಿಲ್ (ಡ್ರಮ್ಸ), ನಾನು ತೇಜಸ್ (ಗಾಯನ)' ಎಂದು ತಂಡದ ವಿವರಣೆಯನ್ನೂ ನೀಡುತ್ತಾರೆ ಅವರು.`ತಂಡ ಕಟ್ಟಿ ಒಂದೂವರೆ ವರ್ಷವಾಯಿತು. ಎಂದೂ ನಮ್ಮಳಗೆ ಒಡಕು ಮೂಡಿಲ್ಲ. ಸಂಗೀತದಿಂದ ಮನಸ್ಸು ನಿರ್ಮಲವಾಗಿರುತ್ತದೆ ಎಂಬುದು ನಮ್ಮ ಅಭಿಪ್ರಾಯ. ನನಗೆ ಶಾಸ್ತ್ರೀಯ ಸಂಗೀತ ಇಷ್ಟ. ಇನ್ನೊಬ್ಬರಿಗೆ ರಾಕ್, ಮತ್ತೊಬ್ಬರಿಗೆ ಕಂಟ್ರಿ ಸಂಗೀತ ಇಷ್ಟ. ಆದರೆ ನಮ್ಮಿಷ್ಟಗಳು ನಮ್ಮ ಶೋ ಮೇಲೆ ಪರಿಣಾಮ ಬೀರಿಲ್ಲ. ಸ್ನೇಹದ ಬಾಂಧವ್ಯ ಪ್ರತಿ ಶೋ ನಂತರವೂ ಗಟ್ಟಿಗೊಳ್ಳುತ್ತಲೇ ಇದೆ' ಎಂದು ತಂಡದ ಒಗ್ಗಟ್ಟಿನ ಬಗ್ಗೆ ತೇಜಸ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.`ಭೀಮಸೇನ ಜೋಷಿ ನನಗೆ ಸ್ಫೂರ್ತಿ. ನನ್ನೊಳಗೆ ಸಂಗೀತ ಹುಚ್ಚು ಸೇರಿಕೊಂಡಿದ್ದರ ಬಗ್ಗೆ ಮೊದಲು ಗೊತ್ತಾಗಿದ್ದು ನನ್ನ ತಾಯಿಗೆ. ಆಡಿಯೋ ಎಂಜಿನಿಯರಿಂಗ್ ಮಾಡಬೇಕು ಎಂಬ ಹಟದಿಂದ ಮುಂಬೈಗೆ ಹೋದೆ. ಮನೆಯಲ್ಲಿ ನನ್ನ ಹಟಕ್ಕೆ ಮಣಿದು ಬೆಂಬಲ ನೀಡಿದರು. ಈಗ ಸಂಗೀತವೇ ನನ್ನ ಪೂರ್ಣಾವಧಿ ಕೆಲಸವಾಗಿದೆ. ತಂಡದ ಇತರೆ ಸದಸ್ಯರು ಬೇರೆ ಬೇರೆ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಆದರೆ ಅವರ ಕೆಲಸ ಯಾವತ್ತೂ ಸಂಗೀತಕ್ಕೆ ಅಡ್ಡ ಬಂದಿಲ್ಲ' ತಮ್ಮ ತಂಡದ ವಿವರಣೆ ನೀಡುತ್ತಾರೆ ಅವರು.ಕಾಶ್ಮೀರದಲ್ಲಿ ಕನ್ನಡ ಕಂಪು

ಮೊದಲ ಅನುಭವವನ್ನು ಮೆಲುಕು ಹಾಕುವಾಗ ಈಗಲೂ ಮುಖದಲ್ಲಿ ನಗೆಯೊಂದು ಮೂಡುತ್ತದೆ. `ಕಾಶ್ಮೀರದಲ್ಲಿ ಮೊದಲ ಶೋ ಕೊಡುವ ಅವಕಾಶ ಸಿಕ್ಕಿತು. ಅದರ ಖುಷಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ಪ್ರಕೃತಿ ಸೌಂದರ್ಯದ ನಡುವೆ ಹಾಡುವಾಗ ಗಂಧರ್ವ ಲೋಕ ಇದೇನಾ ಎನಿಸಿದ್ದು ಸುಳ್ಳಲ್ಲ. ಉತ್ತರದ ತುದಿಯಲ್ಲಿ ಕನ್ನಡದ ಗಂಧ ಹರಡಲಿ ಎಂದು ನಾವೇ ಸಂಯೋಜನೆ ಮಾಡಿದ ಕನ್ನಡ ಹಾಡನ್ನು ಹಾಡಿದೆವು. ಕೇಳುಗರು ಆನಂದಿಸುವುದನ್ನು ಕಂಡು ಒಂದೆರಡು ಸಾಲು ಅವರಿಂದಲೂ ಹಾಡಿಸಿದೆವು. ಕಾಶ್ಮೀರಿಗಳಿಗೆ ಭಾಷೆ ಅರ್ಥವಾಗದಿದ್ದರೂ ಭಾವನೆಯನ್ನು ಗುರುತಿಸುವಂತೆ ಮಾಡಿದ್ದೆವು. ಅವರಿಂದ ತಂಡದ ಹೆಸರನ್ನೂ ಹೇಳಿಸಿದೆವು. ಕನ್ನಡವನ್ನು ಸಂಗೀತದಂತೆ ಎಲ್ಲಾ ಕಡೆ ಪಸರಿಸುವ ಆಸೆ ನಮ್ಮದು. ಇದಕ್ಕೆ ಸಂಗೀತ ಮಾಧ್ಯಮ. ಒಂದು ಶೈಲಿಗೆ ನಾವು ಅಂಟಿಕೊಂಡಿಲ್ಲ. ಎಲ್ಲಾ ಹಾಡುಗಳ ಸಮ್ಮಿಶ್ರಣವೇ ನಮ್ಮ ಶೈಲಿ. ಶೋ ನೀಡುವಾಗ 15 ಹಾಡುಗಳಲ್ಲಿ 12 ಹಾಡುಗಳನ್ನು ನಾವೇ ಸಂಯೋಜನೆ ಮಾಡುತ್ತೇವೆ'.`ಕೆಲವರಿಗೆ ಹಾಡು ಕಟ್ಟುವಾಗ ಪ್ರಶಾಂತವಾದ ಸ್ಥಳಕ್ಕೆ ಹೋಗಬೇಕು ಎಂಬ ಆಸೆ ಇರುತ್ತದೆ. ಆದರೆ ನನಗೆ ಯಾವತ್ತೂ ಅದರ ಅವಶ್ಯಕತೆ ಬಂದಿಲ್ಲ. ನಿಂತ ಜಾಗದಲ್ಲಿಯೇ ಇರುವ ಸನ್ನಿವೇಶಗಳ ಮೇಲೆ ಹಾಡು ಹೆಣೆಯುವುದು ನನಗಿಷ್ಟ' ಎನ್ನುತ್ತ ತೇಜಸ್ ತಮ್ಮ ಮಾತಿಗೆ ಪೂರ್ಣವಿರಾಮ ಹಾಕಿದರು.ಇನ್ನು ತಮ್ಮ ಸರದಿ ಎನ್ನುವಂತೆ ತಂಡದ ಗೀತ್ ಮಾತಿಗಿಳಿದರು. `ಬೇರೆ ಕಡೆ ಕೆಲಸ ಮಾಡಿದ ಅನುಭವವಿತ್ತು. ಈಗ ನಮ್ಮದೇ ತಂಡ ಕಟ್ಟಿಕೊಂಡಿದ್ದೇವೆ. ನಮ್ಮ ತಂಡವಂತೂ ಸೂಪರ್. ಜನರಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಕನ್ನಡ, ಹಿಂದಿ ಹಾಡುಗಳನ್ನು ಹೆಚ್ಚು ಹಾಡುತ್ತೇವೆ. ಕೆಲಸ ಮಾಡುತ್ತಾ ಶೋ ನೀಡುತ್ತಿದ್ದೇನೆ. ಎರಡು ಕೆಲಸವನ್ನು ಅಸ್ವಾದಿಸುವುದು ನನಗೆ ತುಂಬಾ ಖುಷಿ' ಎನ್ನುತ್ತಾರೆ.ತಂಡದ ಗಿಟಾರ್ ಕಲಾವಿದೆ ಶಾಲಿನಿ ಮೋಹನ್ ತಮ್ಮ ಸಂಗೀತ ಪ್ರೀತಿ ವ್ಯಾಖ್ಯಾನಿಸಿದ್ದು ಹೀಗೆ:

`ನನಗೆ ಮೊದಲಿನಿಂದಲೂ ಸಂಗೀತದಲ್ಲಿ ಆಸಕ್ತಿ. ಮನೆಯಲ್ಲಿ ಕೂಡ ವಿರೋಧವಿರಲಿಲ್ಲ. ನನ್ನ ಅತ್ತೆ, ಹಿರಿಯ ಗಾಯಕಿ ರತ್ನಮಾಲಾ ಪ್ರಕಾಶ್ ನನ್ನ ಹವ್ಯಾಸಕ್ಕೆ ಒತ್ತಾಸೆಯಾಗಿ ನಿಂತರು. ಗಂಡ ಸಹ ಬೆಂಬಲಿಸಿದರು. ನಾನೊಬ್ಬಳೇ ಯುವತಿ ಈ ತಂಡದಲ್ಲಿ. ಇತ್ತೀಚೆಗಷ್ಟೆ ತಿಂಗಳ ಸಂಬಳ ಬರುವ ಸಾಫ್ಟ್‌ವೇರ್ ಹುದ್ದೆ ಬಿಟ್ಟುಬಿಟ್ಟೆ. ಸಂಗೀತದ ಕಡೆ ಹೆಚ್ಚು ಗಮನ ಹರಿಸುವ ಉದ್ದೇಶಕ್ಕೆ ಈ ನಿರ್ಧಾರ. ನಮ್ಮ ತಂಡದಲ್ಲಿ ನಾನು ಬೇಸ್ ಗಿಟಾರ್ ನುಡಿಸುತ್ತೇನೆ. ಸಂಗೀತ ಕ್ಷೇತ್ರದಲ್ಲಿ ನನಗೆ ಎ.ಆರ್. ರೆಹಮಾನ್ ಸ್ಫೂರ್ತಿ. ಸಂಗೀತವೆಂದರೆ ಜೀವನ. ಬೆಳಿಗ್ಗೆ ಎದ್ದಾಗ ಇವತ್ತು ಸಂಗೀತದಲ್ಲಿ ಏನು ಮಾಡಬಹುದು ಎಂದು ಯೋಚಿಸುತ್ತೇನೆ. ರಾತ್ರಿ ನಿದ್ದೆಗೂ ಮುನ್ನ ಆಯಾ ದಿನದ ಕೆಲಸಗಳನ್ನೆಲ್ಲ ಒಮ್ಮೆ ಸಿಂಹಾವಲೋಕನ ಮಾಡುತ್ತೇನೆ. ತಂಡದಲ್ಲಿ ಎಲ್ಲರೂ ಒಂದೇ ಕುಟುಂಬದಂತೆ ಇದ್ದೇವೆ. ಶೋ ಕೊಟ್ಟು ಮನೆಗೆ ಬಂದಾಗ ಮನಸ್ಸು ತುಂಬಾ ಖುಷಿಯಾಗಿರುತ್ತದೆ'.`ಎಲ್ಲರ ಮನಸ್ಸಿನಲ್ಲಿಯೂ ಒಂದು ಆಸೆ, ಕನಸಿರುತ್ತದೆ. ಕೆಲವರು ಸಾಧಿಸಿ ತೋರಿಸಿದರೆ ಇನ್ನು ಕೆಲವರು ಸುಮ್ಮನೆ ಇರುತ್ತಾರೆ. ನಾವು ಹಾಗಲ್ಲ. ಎಲ್ಲರ ಕೈಯಲ್ಲೂ ಒಂದು ದಿನ ಲಗೋರಿ ಆಡಿಸುತ್ತೇವೆ' ಎಂದ ಸವಾಲಿನ ನಗೆ ಸೂಸುತ್ತಾರೆ. ಇವರ ಕನ್ನಡ ಹಾಡುಗಳನ್ನು ಕೇಳಲು ಬಯಸುವವರು ಟ್ವಿಟರ್ ಹಾಗೂ ಫೇಸ್‌ಬುಕ್‌ನಲ್ಲಿರುವ lagoriindia ಪುಟಕ್ಕೆ ಭೇಟಿ ನೀಡಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry