ಸಂಗೀತ ಕಲಾವಿದರಿಗೆ ಬಿಗ್ ಪ್ರಶಸ್ತಿ

7

ಸಂಗೀತ ಕಲಾವಿದರಿಗೆ ಬಿಗ್ ಪ್ರಶಸ್ತಿ

Published:
Updated:

`ಆಕಾಶವಾಣಿ ಕೇಂದ್ರ ಮೈಸೂರಿನಲ್ಲಿ  ಆರಂಭವಾದಾಗ ಮೊದಲ ಕಾರ್ಯಕ್ರಮ ಹರಿಕಥೆಯನ್ನು ಪ್ರಸಾರ ಮಾಡಲು ಯೋಜಿಸಲಾಗಿತ್ತು. ಆದರೆ ಕಲಾವಿದ ಸ್ಟುಡಿಯೊ ಒಳಗೆ ಬಂದರು. ಮೈಕ್ ಮುಂದೆ ಧ್ವನಿಯೇ ಹೊರಡುತ್ತಿಲ್ಲ. ಕಾರಣ ಅವರ ಮುಂದೆ ಪ್ರೇಕ್ಷಕರು ಇರಲಿಲ್ಲ. ಆದರೆ ಇಂದಿನ ಎಫ್.ಎಂ ವಾಹಿನಿಗಳಲ್ಲಿ ರೇಡಿಯೊ ಜಾಕಿಗಳು ಪಟಪಟನೆ ಮಾತನಾಡುತ್ತಾರೆ~ ಎಂದು ಸಂಗೀತ ನಿರ್ದೇಶಕ ರಾಜನ್ ಅವರು ಹಳೆಯ ದಿನಗಳನ್ನು ನೆನಪಿಸಿಕೊಂಡರು.ಅವೆನ್ಯೂ ರಸ್ತೆಯ ರಿಗಾಲೀಸ್ ಹೋಟೆಲ್‌ನಲ್ಲಿ 92.7 ಬಿಗ್ ಎಫ್‌ಎಂ ವಾಹಿನಿ ಬಳಗ ಆಯೋಜಿಸಿದ್ದ `ಬಿಗ್ ಕನ್ನಡ ಮ್ಯೂಸಿಕ್ ಅವಾರ್ಡ್~ ಲಾಂಛನ ಬಿಡುಗಡೆ ಸಮಾರಂಭದಲ್ಲಿ ರಾಜನ್ ಮಾತಿಗಿಳಿದರು.`ನಾನು ಚಿಕ್ಕವನಿದ್ದಾಗಿನಿಂದಲೂ ಆಕಾಶವಾಣಿ ಕೇಳುತ್ತ ಸಂಗೀತ ಕಲಿತೆ. ನಾಲ್ಕು ದಶಕಗಳ ಸಂಗೀತ ಯಾನಕ್ಕೆ ಅಭಿಮಾನಿಗಳ ಜೊತೆಗೆ ಮಾಧ್ಯಮ ಮಿತ್ರರೂ ಕಾರಣಕರ್ತರು~ ಎಂದು ಸ್ಮರಿಸಿಕೊಂಡರು. `ಈಗಿನ ಸಿನಿಮಾ ಕಥೆ ಮತ್ತು ಗೀತೆ ಇಂದಿನ ಪೀಳಿಗೆಗೆ ತಕ್ಕಂತೆ ಇರುತ್ತದೆ. ಅವರಿಗೇನು ಅಗತ್ಯವಿದೆ ಎಂಬುದನ್ನು ಅರಿತು ಮಾಡುತ್ತಾರೆ. ಅದರ ನಡುವೆಯೂ ಉತ್ತಮ ಸಾಹಿತ್ಯದ ಗೀತೆಗಳು ಬರುತ್ತಿವೆ. ಅಂಥವೇ ಗೀತೆಗಳು ಮೊದಲಿನ ಸ್ಥಾನಕ್ಕೆ ಬರಬೇಕು~ ಎಂದು ಸಲಹೆ ನೀಡಿದರು.ಹಿನ್ನೆಲೆ ಗಾಯಕಿ ಮಂಜುಳಾ ಗುರುರಾಜ್  ಮಾತನಾಡಿ `ಇಂದಿನ ಗೀತೆಗಳಲ್ಲಿ ಮಾಧುರ್ಯದೊಂದಿಗೆ ಟಪ್ಪಾಂಗುಚ್ಚಿ ಗುಣಗಳಿವೆ. ಮೊದಲೆಲ್ಲಾ ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡಿ ಹಾಡುತ್ತಿದ್ದೆವು. ಈಗಿನ ಮಕ್ಕಳಿಗೆ ಅದು ಇಷ್ಟವಾಗೋದಿಲ್ಲ. ಇಂದಿಗೂ ಉತ್ತಮ ಸಾಹಿತ್ಯಕ್ಕೆ ಬೆಲೆ ಇದೆ. ಸಂಗೀತ ಸಾಮಾನ್ಯರಿಗೂ ಹತ್ತಿರವಾಗುತ್ತದೆ. ಈ ಕೆಲಸವನ್ನು ಎಫ್‌ಎಂ ವಾಹಿನಿಗಳು ಮಾಡುತ್ತಿವೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಗೀತ ಕ್ಷೇತ್ರದ ಪ್ರತಿಭೆಗಳನ್ನು ಗುರುತಿಸುವ ಉದ್ದೇಶದಿಂದ 92.7 ಬಿಗ್ ಎಫ್‌ಎಂ ವಾಹಿನಿಯು ಎರಡನೇ ವರ್ಷದ `ಬಿಗ್ ಕನ್ನಡ ಮ್ಯೂಸಿಕ್ ಅವಾರ್ಡ್~ ನೀಡುತ್ತಿದೆ. 2011ರ ಜನವರಿಯಿಂದ 2012 ಮಾರ್ಚ್‌ವರೆಗೆ ತೆರೆಕಂಡ ಕನ್ನಡ ಸಿನಿಮಾಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ.ಇಪ್ಪತ್ತು ವಿಧದ ಪ್ರಶಸ್ತಿ ನೀಡಲಾಗುತ್ತಿದ್ದು, ಪಾಪ್ಯುಲರ್ ವಿಭಾಗದಲ್ಲಿ. `ಬಿಗ್ ಟಪ್ಪಾಂಗುಚ್ಚಿ ಸಾಂಗ್~, `ಬಿಗ್ ವಿಚಿತ್ರ ಸಾಂಗ್~, `ಬಿಗ್  ಐಟಂ ಸಾಂಗ್~, `ಬಿಗ್ ಫೀಲಿಂಗ್ ಸಾಂಗ್~, `ಬಿಗ್ ಜೋಶ್ ಸಾಂಗ್~ ಪ್ರಶಸ್ತಿಗಳಿದ್ದು, ಜ್ಯೂರಿ ವಿಭಾಗದಲ್ಲಿ `ಬಿಗ್ ಮ್ಯೂಸಿಕ್ ಡೈರೆಕ್ಟರ್~, `ಬಿಗ್ ಲಿರಿಕ್ಸಿಸ್ಟ್~, `ಬಿಗ್ ಸಾಂಗ್~, `ಬಿಗ್ ಫೀಮೇಲ್ ಸಿಂಗರ್~, `ಬಿಗ್ ಮೇಲ್ ಸಿಂಗರ್~, `ಬಿಗ್ ಪ್ರಾಮಿಸಿಂಗ್ ಮೇಲ್ ಸಿಂಗರ್~, `ಬಿಗ್ ಪ್ರಾಮಿಸಿಂಗ್ ಫೀಮೇಲ್ ಸಿಂಗರ್~ ಹಾಗೂ `ಬಿಗ್ ಸಿಂಗಿಂಗ್ ಆಕ್ಟರ್ಸ್~ `ಬಿಗ್ ಮ್ಯೂಸಿಕಲ್ ಹಿಟ್ ಫಿಲ್ಮ್~ ಪ್ರಶಸ್ತಿಗಳನ್ನು ಒಳಗೊಂಡಿವೆ.ಜೊತೆಗೆ ಹಂಸಲೇಖ ಅವರಿಗೆ ಸಿನಿಮಾ ಸಂಗೀತ ಕ್ಷೇತ್ರದ ಜೀವಮಾನ ಸಾಧನೆ ಪ್ರಶಸ್ತಿಯನ್ನು, ಪಿ.ಬಿ.ಶ್ರೀನಿವಾಸ್ (ಹಿನ್ನೆಲೆ ಗಾಯಕ), ವಿದ್ಯಾಭೂಷಣ (ಭಕ್ತಿ ಸಂಗೀತ), ರತ್ನಮಾಲ ಪ್ರಕಾಶ್ (ಸುಗಮ ಸಂಗೀತ), ಸ್ಯಾಕ್ಸೊಫೋನ್ ವಾದಕ ಕದ್ರಿ ಗೋಪಾಲನಾಥ್ (ವಾದ್ಯ ವಿಭಾಗ) ಹಾಗೂ ರಘು ದೀಕ್ಷಿತ್ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.ಜ್ಯೂರಿ ವಿಭಾಗದಲ್ಲಿ ಸಂಗೀತ ನಿರ್ದೇಶಕರಾದ ರಾಜನ್, ವಿ.ಮನೋಹರ್, ಹಿನ್ನೆಲೆ ಗಾಯಕಿ ಮಂಜುಳಾ ಗುರುರಾಜ್ ತೀರ್ಪುಗಾರರಾಗಿದ್ದಾರೆ. ಪ್ರಶಸ್ತಿ ವಿತರಣೆ ಕಾರ್ಯಕ್ರಮದ ರಾಯಭಾರಿಯಾಗಿ ನಟ ರಮೇಶ್ ಅರವಿಂದ್ ಕಾರ್ಯ ನಿರ್ವಹಿಸಲಿದ್ದಾರೆ.ಪ್ರೇಕ್ಷಕರು ಸಹ 92.7 ಬಿಗ್ ಎಫ್‌ಎಂ ವಾಹಿನಿ ಕೇಳುವ ಮೂಲಕ ಮತ ಚಲಾಯಿಸಿ ನೆಚ್ಚಿನ ಗೀತೆ ಆಯ್ಕೆ ಮಾಡಬಹುದು. ಅ.25 ರಂದು ಬೆಂಗಳೂರು ವಿ.ವಿ ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ (ಮೈಸೂರು ಬ್ಯಾಂಕ್ ವೃತ್ತದ ಬಳಿ) ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಅಂದು ಸಿನಿ ತಾರೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಚಿತ್ರರಂಗದ ಗಣ್ಯರು ಉಪಸ್ಥಿತರಿರಲಿದ್ದಾರೆ. ಲಾಂಛನ ಬಿಡುಗಡೆಯ ಸಮಾರಂಭದಲ್ಲಿ ರೇಡಿಯೊ ಜಾಕಿಗಾಳಾದ ರೋಹಿತ್, ರಶ್ಮಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry