ಸಂಗೀತ ಕುಮಾರ!

ಗುರುವಾರ , ಜೂಲೈ 18, 2019
28 °C

ಸಂಗೀತ ಕುಮಾರ!

Published:
Updated:

ಆಫೀಸಿಗೆ ತಡವಾದರೆ ಆಟೊ ಹತ್ತುವುದು ರೂಢಿ. ಎಂದಿನಂತೆ  ಅಂದೂ ಸಹ ನಾನು ಆರ್.ಎಂ.ವಿ.ಯಿಂದ ಮಹಾತ್ಮ ಗಾಂಧಿ ರಸ್ತೆಗೆ ಆಟೊ ಹತ್ತಿದೆ. ಸಾಮಾನ್ಯವಾಗಿ ಆಟೊ ಹತ್ತುವ ಮೊದಲು ಚಾಲಕರನ್ನು ಹಾಗೂ ಆಟೊದ ಆಸನದ ಸ್ಥಿತಿ-ಗತಿಯನ್ನು ಅವಲೋಕಿಸಿಯೇ ಆಟೊ ಹತ್ತುವುದು ನನ್ನ ಅಭ್ಯಾಸ.ಅಂದೂ ಹಾಗೇ ನಾನು ಆಟೊ ಹತ್ತಿದ ಮೇಲೆ ಚಾಲಕ ಹತ್ತಿದವನೇ ರೇಡಿಯೊ ಹಚ್ಚಿದ. ದೇವರನಾಮ ಬಂತು. ಮೇಡಂ ಎಷ್ಟು ಚೆನ್ನಾಗಿದೆ ಅಲ್ವಾ~ ಎಂದು ತಾನೇ ಮಾತಿಗೆ ಶುರುಮಾಡಿದ. ಮಾತ್ರವಲ್ಲ, ಆ ಹಾಡಿನ ಬಗ್ಗೆ ಒಂದಷ್ಟು ವಿವರಣೆ ಕೊಟ್ಟ. ನಾನೂ ನನಗೆ ಗೊತ್ತಿದ್ದ ಸಂಗೀತ ಜ್ಞಾನವನ್ನು ಅವನೊಡನೆ ಹಂಚಿಕೊಂಡೆ.ಹಾಗೇ ಮಾತು ಆಡುತ್ತಾ ಆಡುತ್ತಾ ಹೋದಂತೆ ತಿಳಿಯಿತು, ಅವನೊಬ್ಬ ಉತ್ತಮ ಗಾಯಕನೆಂದು!ನನಗಾದ ಸಂತೋಷ ಅಷ್ಟಿಷ್ಟಲ್ಲ. ಬೀಡಿ, ಸಿಗರೇಟು ಸೇದಿಕೊಂಡು, ಜರ್ದಾ, ಬೀಡಾ ಹಾಕಿಕೊಂಡು ಕಂಡಕಂಡಲ್ಲಿ ಪಿಚಕ್ಕನೆ ಉಗುಳುತ್ತಾ ಪ್ರಯಾಣಿಕರಿಗೆ ಅಸಮಾಧಾನವಾದರೂ ಲೆಕ್ಕಿಸದೆ ತಮ್ಮದೇ ಮರ್ಜಿ ತೋರುವ ಆಟೊ ಚಾಲಕರ ನಡುವೆ ಈತನೊಬ್ಬ ಸಂಗೀತರತ್ನ!ಆತ ಮತ್ತೆ ಮಾತು ಮುಂದುವರಿಸಿದ- `ಮೇಡಂ, ನನ್ನ ಮಕ್ಕಳಿಗೂ ಒಳ್ಳೆಯ ಅಭ್ಯಾಸಗಳನ್ನೇ ಹೇಳಿಕೊಟ್ಟಿದ್ದೇನೆ. ಉತ್ತಮ ನಡೆ, ನುಡಿ ಇದೆ. ಮಕ್ಕಳು ಇಬ್ಬರೂ ದೊಡ್ಡವರಾಗಿದ್ದಾರೆ. ಇಬ್ಬರೂ ಸಂಗೀತ ಪ್ರಿಯರು~.ಅಷ್ಟರಲ್ಲಿ ಅರಮನೆ ಮೈದಾನದ ಬಳಿ ತಲುಪಿದ್ದೆವು. ಆತ ಒಮ್ಮೆಲೆ ಆಟೊ ನಿಲ್ಲಿಸಿ “ಆಡಿಸಿದಳು ಯಶೋದಾ...”  ಎಂದು ಹಾಡಲಾರಂಭಿಸಿದ. ಅನುಭವಪೂರ್ಣವಾಗಿ, ಇಂಪಾಗಿ, ಶಾಸ್ತ್ರೀಯವಾಗಿ ಹಾಡಿಬಿಟ್ಟ!ಈ ಸಂಗೀತಪ್ರಿಯ ಚಾಲಕನ ಹೆಸರು ಕುಮಾರ್ ಎಂದು. ನನಗೋ ಆಫೀಸಿಗೆ ಲೇಟಾಯಿತಲ್ಲಪ್ಪಾ ಎಂಬ ಚಿಂತೆ. ಇತ್ತ ಸಂಗೀತ ಕೇಳಲು ಆಸೆ. ಏನು ಮಾಡುವುದು? ದಾರಿಯುದ್ದಕ್ಕೂ ಮೇಡಂ ಬೇರೆ ಆಟೊದವರೋ ಎಫ್.ಎಂ. ಹಾಕಿರುತ್ತಾರೆ.

 

ನನ್ನ ಆಟೊದಲ್ಲೂ ರೇಡಿಯೋ ಇದೆ ಒಳ್ಳೆಯ ಹಾಡು ಬಂದರೆ ಹಾಕುತ್ತೇನೆ.  ಕೆಲವು ಹಾಡುಗಳನ್ನು ಕೇಳುತ್ತಿದ್ದರಂತೂ ಮನಸ್ಸಿಗೆ ತುಂಬಾ ಹರ್ಷವಾಗುತ್ತದೆ ಎಂದು ಹೇಳಿದ ಕುಮಾರ್. ಆಫೀಸಿಗೆ ಬರುವ ಆತುರದಲ್ಲೂ ಅವನ ಮಾತಿಗೆ ಕಿವಿಯಾದೆ. 

ಈಗಲೂ ಆಟೊ ಹತ್ತುವಾಗ ಕುಮಾರ್‌ನನ್ನು ಜ್ಞಾಪಿಸಿಕೊಳ್ಳುತ್ತೇನೆ.

ಆಟೊ ಚಾಲಕರ ಕುರಿತು ದೂರುಗಳೇ ತುಂಬಿರುವ ನಗರವಿದು. ಅದಕ್ಕೆ ಅಪವಾದವೆಂಬಂತೆ ಬದುಕುವ ಅನೇಕ ಚಾಲಕರು ಇದ್ದಾರೆ. ಅಂಥವರು ನಿಮ್ಮ ಅನುಭವಕ್ಕೂ ಬಂದಿರಬಹುದು.ಆ ಕಥನವನ್ನು 350 ಪದಗಳ ಮಿತಿಯಲ್ಲಿ ಬರೆದು ಕಳುಹಿಸಿ. ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಬರವಣಿಗೆ ಇರಲಿ. ಇ-ಮೇಲ್: metropv@prajavani.co.in. ವಿಳಾಸ: ಆಟೊ ಕತೆಗಳು, ಮೆಟ್ರೊ, ನಂ.75, ಎಂ.ಜಿ.ರಸ್ತೆ, ಬೆಂಗಳೂರು- 560 001

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry