ಶನಿವಾರ, ಜೂನ್ 12, 2021
28 °C

ಸಂಗೀತ-ನೃತ್ಯದ ಸಾಂಸ್ಕೃತಿಕ ಉತ್ಸವ

ರಮೇಶ ಜಹಗೀರದಾರ್ Updated:

ಅಕ್ಷರ ಗಾತ್ರ : | |

ಆ ವೇದಿಕೆಯಲ್ಲಿ ಯುವ ವಿದ್ಯಾರ್ಥಿನಿಯರ ಲೋಕವೇ ಅನಾವರಣಗೊಂಡಿತ್ತು. ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಇತರ ಸಿಬ್ಬಂದಿ ಹೊರತುಪಡಿಸಿದರೆ ಮಹಿಳೆಯರೇ ತುಂಬಿಕೊಂಡಿದ್ದರು. ಅಲ್ಲಿ ಓದುವ ಯುವತಿಯರೊಂದಿಗೆ ತಾಯಂದಿರಿಗೆ ಮಾತ್ರ ಕಾರ್ಯಕ್ರಮಕ್ಕೆ ಬರಲು ಅವಕಾಶ ನೀಡಲಾಗಿತ್ತು.ದಾವಣಗೆರೆಯ ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ವಾರ್ಷಿಕೋತ್ಸವದ ಅಂಗವಾಗಿ ಪ್ರತಿಭಾ ವಿಕಾಸ ಸಂಘದ ಸಮಾರೋಪ ಸಮಾರಂಭ ನಡೆಯಿತು. ಅತಿಥಿಗಳ ಭಾಷಣ ಮುಗಿಯುತ್ತಿದ್ದಂತೆಯೇ ವೇದಿಕೆಯಲ್ಲಿ ಸಾಂಸ್ಕೃತಿಕ ರಂಗು ತುಂಬಿಕೊಂಡಿತು. ಒಂದೊಂದೇ ತಂಡಗಳು ತಮ್ಮ ಕಲಾಪ್ರದರ್ಶನ ನೀಡಿದವು.ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ನಿರ್ದೇಶನದ `ಮಾ ತುಝೆ ಸಲಾಮ್~ ಎಂಬ ಸ್ವಾಗತ ಗೀತೆಯೊಂದಿಗೆ ಸಂಗೀತ-ನೃತ್ಯದ ಉತ್ಸವಕ್ಕೆ ಚಾಲನೆ ದೊರೆಯಿತು. ವರಲಕ್ಷ್ಮೀ ಮತ್ತು ಸಂಗಡಿಗರು ಶ್ವೇತ ವಸ್ತ್ರಧಾರಿಗಳಾಗಿ, ಕೈಯಲ್ಲಿ ದೀಪ, ಭಾರತದ ಧ್ವಜ ಹಿಡಿದು ಭರತನಾಟ್ಯದ ಮೂಲಕ ದೇಶಭಕ್ತಿ ಗೀತೆಯನ್ನು ಪ್ರಸ್ತುತಪಡಿಸಿದರು.ಅದಾದ ನಂತರ ಅಲ್ಲಿ ಜನಪ್ರಿಯ ಹಿಂದಿ ಚಲನಚಿತ್ರ ಗೀತೆಗಳು, ರೀಮಿಕ್ಸ್‌ಗಳದೇ ಕಾರುಬಾರು. ಬಣ್ಣ ಬಣ್ಣದ ಉಡುಪುಗಳನ್ನು ಧರಿಸಿದ್ದ ರಾಜೇಶ್ವರಿ ಮತ್ತು ಸಂಗಡಿಗರು `ರಂಗೀಲಾ ಬಾರೋ ಡೋಲನಾ...~ ಗೀತೆಗೆ ಹೆಜ್ಜೆ ಹಾಕಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಅಶ್ವಿನಿ ಮತ್ತು ರೂಪಾ `ಲೇಕೆ ಪೆಹಲಾ...~ ಎಂಬ ಹಾಡಿಗೆ ಲಯಬದ್ಧವಾಗಿ ನರ್ತಿಸಿದರು.ಅಪೂರ್ವಾ ಮತ್ತು ಸಂಗಡಿಗರು `ಬಾಳ ಬಂಗಾರ ನೀನು...~ ಎಂಬ ಕನ್ನಡ ರೀಮಿಕ್ಸ್‌ನಲ್ಲಿ ಮಿಂಚಿದರು. ಚೈತ್ರಾ ಮತ್ತು ಸಂಗಡಿಗರು `ಕಿಟ್ಟಪ್ಪ ಕಿಟ್ಟಪ್ಪ~ ಎಂಬ ಹಾಡಿಗೆ ನರ್ತಿಸಿ ರಂಜಿಸಿದರು. `ಲೇ ಲೇ ಪಾಡಿಗ...~ ಗೀತೆಗೆ ಪಲ್ಲವಿ ಮತ್ತು ಸಂಗಡಿಗರು, `ಮೋಜಾಯಿ ಮೋಜ...~ ಹಾಡಿಗೆ ವರಲಕ್ಷ್ಮೀ ಮತ್ತು ಸಂಗಡಿಗರು, ಚಿಕ್ನಿ ಚಮೇಲಿ~ ಗೀತೆಗೆ ಆಯೇಷಾ ಮತ್ತು ಸಂಗಡಿಗರು ಕುಣಿದು ಚಪ್ಪಾಳೆ ಗಿಟ್ಟಿಸಿದರು.`ಧೂಮಚಾಲೆ...~ ರೀಮಿಕ್ಸ್ ಕಾರ್ಯಕ್ರಮದ ಹೈಲೈಟ್ ಆಗಿತ್ತು. ವಿದ್ಯಾರ್ಥಿನಿ ಟಿ.ಸಿ. ಪ್ರಿಯಾ, ಸೋಲೋ ಪ್ರದರ್ಶನದಲ್ಲಿ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡರು. ನೃತ್ಯದಲ್ಲಿ ತನ್ಮಯತೆ ತೋರುವ ಜತೆಗೆ ಭಾವಾಭಿನಯದ ಮೂಲಕವೂ ಪ್ರತಿಭೆಯನ್ನು ಮೆರೆದರು.`ಜಾಕಿ ಜಾಕಿ...~  ಗೀತೆಯ ಮೂಲಕ ರೂಪಾಬಾಯಿ ವೇದಿಕೆಯಲ್ಲಿ ಕಾಣಿಸಿಕೊಂಡರು. ಅಮಿತಾ ಮತ್ತು ತೇಜಸ್ವಿನಿ, ಅಶ್ವಿನಿ ಹಾಗೂ ರೂಪಾ ಜೋಡಿ ರೀಮಿಕ್ಸ್‌ಗಳ ಮೂಲಕ ಗಮನ ಸೆಳೆದರು. `ದೀವಾ ದೀವಾ~ ಎಂಬ ಹಾಡಿನೊಂದಿಗೆ ಬಿ. ಕುಸುಮಾ ಉತ್ತಮ ಪ್ರದರ್ಶನ ನೀಡಿದರು. ಎಂ. ನಿವೇದಿತಾ ಪ್ರಸ್ತುತಪಡಿಸಿದ `ಯಾರಾದ್ರೂ ಹಾಳಾಗೋಗ್ಲಿ...~ ಹಾಡು ಕೂಡಾ ಕರತಾಡನಕ್ಕೆ ಪಾತ್ರವಾಯಿತು.

 

ಈ ನಡುವೆ ಮಧುಮತಿ ಜನಪದ ಗೀತೆಯೊಂದನ್ನು ಹಾಡಿ ತಂಪು ಹೊತ್ತಿನಲ್ಲಿ ಜಾನಪದದ ಕಂಪು ಮೂಡಿಸಿದರು. ಬಹುತೇಕ ಹಿಂದಿ ಗೀತೆಗಳ ಅಬ್ಬರದ ನಡುವೆಯೇ ಅಲ್ಲೊಂದು ಇಲ್ಲೊಂದು ದೇಸಿ ಗೀತೆಗಳು ಮೂಡಿಬಂದವು.ಸಂಜೆ 7.30ಕ್ಕೆ ಆರಂಭವಾದ ಕಾರ್ಯಕ್ರಮ ಸುಮಾರು ಎರಡು ಗಂಟೆ ನಿರಂತರವಾಗಿ ನಡೆಯಿತು. ಪ್ರತಿ ಐಟೆಮ್‌ಗೂ 4 ನಿಮಿಷ ನಿಗದಿ ಮಾಡಲಾಗಿತ್ತು. ಅಲ್ಲಿ ವ್ಯವಸ್ಥೆಗೊಳಿಸಲಾಗಿದ್ದ ಬಣ್ಣ ಬಣ್ಣದ ವಿದ್ಯುದ್ದೀಪಗಳು ವೇದಿಕೆಯ ಅಂದವನ್ನು ಹೆಚ್ಚಿಸಿದ್ದವು.ಧ್ವನಿವರ್ಧಕ ಎಲ್ಲೂ ಕೈಕೊಡದಿರುವ ಕಾರಣ ಕಾರ್ಯಕ್ರಮ ಅಬಾಧಿತವಾಗಿ ಸಾಗಿತು. ಧ್ವನಿಮುದ್ರಿತ ಗೀತೆಗಳ ಸಿಡಿಯನ್ನು ಬಳಸಿಕೊಳ್ಳಲಾಯಿತು. ಇದಕ್ಕಾಗಿ ಸಾಕಷ್ಟು ಪೂರ್ವತಯಾರಿ ನಡೆದಿತ್ತು. ಒಟ್ಟಾರೆ 120 ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು.ಪ್ರಾಂಶುಪಾಲ ಜೆ.ಆರ್. ಮೋಹನ್ ಕುಮಾರ್ ಮಾರ್ಗದರ್ಶನದಲ್ಲಿ, ಸಾಂಸ್ಕೃತಿಕ ಕಾರ್ಯದರ್ಶಿ ಜಿ. ಹಾಲೇಶಪ್ಪ, ಸಹ ಕಾರ್ಯದರ್ಶಿ ಅನ್ನಪೂರ್ಣಾ ಪಾಟೀಲ್ ಮತ್ತು ಇತರ ಉಪನ್ಯಾಸಕರು ಸಹಕರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.