ಮಂಗಳವಾರ, ನವೆಂಬರ್ 19, 2019
25 °C
ಲಯ - ಲಾಸ್ಯ

`ಸಂಗೀತ ಪಾನಕ'ದ ರಸಾಸ್ವಾದ

Published:
Updated:

ಶ್ರೀ  ವಾಣೀ ವಿದ್ಯಾ ಕೇಂದ್ರವು ಕಳೆದ 21 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಕಲಾ ಕೈಂಕರ್ಯವನ್ನು ಈ ಬಾರಿಯೂ ಮುಂದುವರಿಸಿದೆ. ಬರೋಬ್ಬರಿ ಒಂದು ತಿಂಗಳ ಶ್ರೀರಾಮ ನವಮಿ ಸಂಗೀತ ನೃತ್ಯೋತ್ಸವವನ್ನು (ಏ. 6ರಿಂದ ಮೇ 6ರ ವರೆಗೆ) ಬಸವೇಶ್ವರನಗರ ಶಾಖೆಯ ಶ್ರೀ ವಾಣೀ ವಿದ್ಯಾ ಕೇಂದ್ರದ ಬಯಲು ರಂಗಮಂದಿರದಲ್ಲಿ ನಡೆಸಲಾಗುತ್ತಿದೆ.ದೇಶದ ನಾನಾ ಭಾಗಗಳಲ್ಲಿರುವ ಬಾಲ ಕಲಾವಿದರಿಂದ ಹಿಡಿದು ಪ್ರಬುದ್ಧ ಕಲಾವಿದರೂ ಸೇರಿದಂತೆ ನೂರಾರು ಕಲಾವಿದರಿಂದ ವೈವಿಧ್ಯಮಯವಾದ ಕಾರ್ಯಕ್ರಮಗಳು ನಡೆಯುತ್ತಿವೆ.ಹೆಸರಾಂತ ಕಲಾವಿದರ ಮಾರ್ಗದರ್ಶನದಲ್ಲಿ ವಿಶೇಷ ತರಬೇತಿ ಶಿಬಿರಗಳನ್ನು ನಡೆಸಿ ವಿದ್ಯಾ ಕೇಂದ್ರದ ಆಯ್ದ ಮಕ್ಕಳಿಗೆ ಸಂಗೀತ ಮತ್ತು ನೃತ್ಯ ಪ್ರಕಾರಗಳಲ್ಲಿ ತರಬೇತಿ ನೀಡಿ ಅವರಿಂದಲೇ ಕಾರ್ಯಕ್ರಮ ಕೊಡಿಸುವ, ವಿದ್ಯಾಕೇಂದ್ರದ ಕಾರ್ಯದರ್ಶಿ ಶಾರದಾಪ್ರಸಾದ್ ಅವರ ಯೋಜನೆಯೂ ಕಾರ್ಯಗತವಾಗಿದೆ.ಗುರುವಾರ ಸಂಜೆ ನಡೆದ ರಂಜಿನಿ ಮತ್ತು ಗಾಯತ್ರಿ ಅವರ ಜೋಡಿಗಾಯನ ಕಲೆ, ಸೌಂದರ್ಯ ಮತ್ತು ಮಾಧುರ್ಯದ ತ್ರಿವೇಣಿ ಸಂಗಮವಾಗಿತ್ತು. ದ್ವಂದ್ವ ಗಾಯನ ಎಂದರೆ ಹೇಗಿರಬೇಕೆಂಬುದಕ್ಕೆ ಅದೊಂದು ಮಾದರಿಯಾಯಿತು. ಅವರ ಪ್ರತಿಪಾದನಾ ಶೈಲಿ ಪರಸ್ಪರ ಅನುಕೂಲಕರವಾಗಿತ್ತು. ಭಾವ ಮತ್ತು ಭಾವನೆಗಳನ್ನು ಕಲಾತ್ಮಕ ಹಾಗೂ ಲಯಾತ್ಮಕವಾಗಿ ಅವರು ವಿನಿಮಯ ಮಾಡಿಕೊಂಡ ಪರಿ ಅಭಿನಂದನೀಯ. ಉತ್ತಮ ಮತ್ತು ವೈವಿಧ್ಯದ ಆಯ್ಕೆಗಳಿಂದ ಕಛೇರಿಯು ಚೇತೋಹಾರಿಯಾಗಿರುವಂತೆ ಅವರಿಬ್ಬರೂ ವರ್ತಿಸಿದರು. ಸ್ಫುಟವಾಗಿ ರೂಪುಗೊಂಡ ರಾಗಚಿತ್ರಗಳ ಸಮರಸ  ಆಕರ್ಷಕವಾಗಿತ್ತು.ಕೇದಾರಗೌಳ ರಾಗದ ವರ್ಣ (ಸ್ವಾಮಿ ದಯಜೂಡ)ವನ್ನು ಎರಡು ಕಾಲಗಳಲ್ಲಿ ಮತ್ತು ಚರಣ ಭಾಗವನ್ನು ದ್ರುತಕಾಲದಲ್ಲಿ ಹಾಡಿ ಕಛೇರಿಗೆ ಸೂಕ್ತ ಬುನಾದಿಯನ್ನು ಹಾಕಿದರು. ಪುರಂದರದಾಸರ ಜಯ ಜಯ ಜಾನಕೀಕಾಂತ ರಚನೆಗೆ ಗರಿಗರಿಯ ಸ್ವರಗಳನ್ನು ಪೋಣಿಸಿದರು.ಮಂದಾರಿ ರಾಗವನ್ನು ಹಾಡಬೇಕಾದರೆ ತೋರಬೇಕಾದ ಎಚ್ಚರ ಮತ್ತು ಜಾಣ್ಮೆಯನ್ನು ಗಾಯಕಿಯರು ತೋರಿ ಸಂಕ್ಷಿಪ್ತವಾಗಿ ಆಲಾಪಿಸಿ `ಪಟ್ಣಂಅವ ನಿನ್ನು ಜೆಪ್ಪಕಾರಣ' ಕೃತಿಯನ್ನು ವಿಶದಪಡಿಸಿದರು. ನೆರವಲ್ ರಹಿತ ಸ್ವರಗಳನ್ನು ಘನಲೋಲುಡೈನ ಪಂಕ್ತಿಗೆ ಕಲ್ಪನಾಸ್ವರಗಳನ್ನು ಲಗತ್ತಿಸಿ ಕೇಳುಗರನ್ನು ಅಚ್ಚರಿಗೊಳಿಸಿದರು. ತಮ್ಮ ಯುಗಳ ಗಾಯನವನ್ನು ಬೇರೆ ಕಛೇರಿಗಳಿಗಿಂತ ವಿಶಿಷ್ಟವಾಗಿಸುವ ಕಲೆ ಮತ್ತು ಪ್ರತಿಭಾ ಸಂಪನ್ನರು ಅವರು. ಅಂತಯೇ ನೀಲಾಂಬರಿ ರಾಗದಲ್ಲಿ  ತ್ಯಾಗರಾಜರ ಬಹು ಅಪರೂಪದ  `ನೀಕೇ ದಯರಾದ' ಕೀರ್ತನೆ ವಿಳಂಬ ಲಯದಲ್ಲಿ ಮನಮುಟ್ಟಿತು.ಅದೇ ಸೊಬಗು ಮುಂದಿನ ಮುಖಾರಿಯ `ಎಂತ ನಿನ್ನೆ' ಕೃತಿಯ ಗಾಯನ ಮತ್ತು `ಕಣ್ಣುಲಾರ' ಎಂಬಲ್ಲಿ ಲಗತ್ತಿಸಲಾಗಿದ್ದ ನೆರವಲ್ ಸಹಿತ ಕಲ್ಪನಾಸ್ವರಗಳು ರಸಿಕರನ್ನು ಮುಗ್ಧಗೊಳಿಸಿದವು. ದೀಕ್ಷಿತರ `ಮರಕತಲಿಂಗ' (ವಸಂತ) ಆಪ್ಯಾಯಮಾನವಾಗಿತ್ತು. ಇಂತಹ ಘನವಾದ ಹಿನ್ನೆಲೆಯಲ್ಲಿ ಖಮಾಚ್ ರಾಗದ ಆಲಾಪನೆ, ತಾನ ಮತ್ತು ಪಲ್ಲವಿ ಬಹು ರುಚಿಕರವಾಗಿತ್ತು. `ಬ್ರೋಚೆವಾರೆವರುರಾ ನಿನ್ನುವಿನಾ ರಘುವಂಶ ದೀಪ ಓ ರಾಮ' (ಖಂಡ ತ್ರಿಪುಟತಾಳ) ಪಲ್ಲವಿಯನ್ನು ಪ್ರೌಢ ವಿನ್ಯಾಸದಲ್ಲಿ ನಿರೂಪಿಸಿ ರಾಗ ಮತ್ತು ಲಯದ ಅಪಾರ ಸೌಂದರ್ಯವನ್ನು ದರ್ಶಿಸಿದರು. ಎಚ್.ಎನ್. ಭಾಸ್ಕರ್(ಪಿಟೀಲು), ಎಚ್.ಎಸ್. ಸುಧೀಂದ್ರ (ಮೃದಂಗ) ಮತ್ತು ಬಿ.ಎಸ್. ಪುರುಷೋತ್ತಮ (ಖಂಜರಿ) ವಿದ್ವತ್ಪೂರ್ಣವಾಗಿ ಸ್ಪಂದಿಸಿದರು.ಪರಿಪೂರ್ಣ ಗಾಯನ

ನುರಿತ ಗಾಯಕ ಒ.ಎಸ್.ಅರುಣ್ ಸಾಂಗವಾಗಿ ಹಾಡಿ ತಾವೊಬ್ಬ ಪರಿಪೂರ್ಣ ಗಾಯಕರೆಂಬುದನ್ನು ಸಾಬೀತುಪಡಿಸಿದರು. ಕೋಟೆ ಪ್ರೌಢಶಾಲೆಯ ಮೈದಾನದಲ್ಲಿ  ಕಾರ್ಪೊರೇಟ್ ಸ್ಪರ್ಶ ಮತ್ತು ನೋಟದ ಭವ್ಯ ಚಪ್ಪರದಲ್ಲಿ ನಡೆಯುತ್ತಿರುವ ಶ್ರೀ ರಾಮಸೇವಾ ಮಂಡಳಿಯ 75ನೆಯ ಶ್ರೀರಾಮ ನವಮಿ ಸಂಗೀತೋತ್ಸವದ ಸರಣಿಯಲ್ಲಿ ಅವರು ಮನೋಹರವಾಗಿ ಹಾಡಿ ತಮ್ಮ ಪಕ್ಕವಾದ್ಯಗಾರರನ್ನೂ ಸಂಗೀತಪ್ರೇಮಿಗಳನ್ನೂ ತಣಿಸಿದರು.ಮಾರ್ದವತೆ ಮತ್ತು ಮಧುರ ಕಂಠದ ಉಚಿತ ಉಪಯೋಗವನ್ನು ಮಾಡಿಕೊಂಡು ತಮ್ಮ ಮಂಡನೆಗಳಿಂದ ಅವರು ಗಮನ ಸೆಳೆದರು. ಆಲಾಪನೆ, ಗಂಭೀರ ಹಾಗೂ ಖಚಿತತೆಯ ಲಯ ಚಾಣಾಕ್ಷತನದಿಂದ ಹೆಣೆದ ಸ್ವರಪ್ರಸ್ತಾರ ಮುಂತಾದವುಗಳಿಂದ ನಾದದ ಅಖಂಡ ಪ್ರವಾಹವೇ ಹರಿಯಿತು.ನಾಗಸ್ವರಾವಳಿಯ ವಿಸ್ತರಣೆ `ಶ್ರೀ ಶಂಕರಗುರುವರಂ' ಕೃತಿ, ಚಿಟ್ಟೆಸ್ವರಗಳು ಮತ್ತು ಸ್ವರಗಳ ರೂಪದಲ್ಲಿ  ಅಭಿನಂದನೆಗೆ ಪಾತ್ರವಾಯಿತು. ಎಂದೋ ಕೇಳಿದ್ದ ತ್ಯಾಗರಾಜರ ಅಠಾಣ ರಾಗದ ಕೃತಿ `ಚೆಡೆ ಬುದ್ಧಿ ಮಾನುರಾ' ಮತ್ತೆ ಕೇಳಿ ಆನಂದಿಸುವಂತೆ ಅರುಣ್‌ಅವರು ಹಾಡಿದರು. ಸಾವಕಾಶ ಮತ್ತು ಸಾವಧಾನವಾಗಿ ಸಾದರಪಡಿಸಿದ ಯದುಕುಲ ಕಾಂಭೋಜಿ (ಹೆಚ್ಚರಿಕಗಾ ರಾರಾ) ಮತ್ತು ಲತಾಂಗಿ (ಪಟ್ಣಂ ಅವರ ಸುಪರಿಚಿತ `ಅಪರಾಧಮುಲ'  ರಾಗ ವೈಭವ ರಾರಾಜಿಸಿತು. ಅದರಲ್ಲೂ ವಿಶೇಷವಾಗಿ ಅವರು ಹಾಡಿದ ನೆರವಲ್ ಭೇಷ್ ಅನ್ನಿಸಿತ್ತು.`ಕೃಪ ಜೇಸಿ', `ಸದಾ ಕೃಪ ಜೇಸಿ', `ಮರಿ ಮರಿ ಕೃಪ ಜೇಸಿ' ಎಂತೆಲ್ಲಾ ಬದಲಾಯಿಸಿಕೊಂಡು ಹಾಡಿ ಅದಕ್ಕೆ ಹೊಂದುವಂತಹ ಸ್ವರಾಕ್ಷರಗಳನ್ನು ಬಳಸಿದುದು ಅವರ ವಿಶೇಷ ವಿದ್ವತ್ತನ್ನು ಪ್ರಮಾಣೀಕರಿಸಿತು. ಅದರ ಜೊತೆಗೆ ಸರ್ವಲಘು ಮತ್ತು ಮೇಲ್ಕಾಲ ಮಾದರಿಗಳೂ ರಂಜಿಸಿದವು. `ನಿನ್ನನೇ ಪಾಡುವೆ'ಯ ಮುನ್ನುಡಿಯೊಂದಿಗೆ ದಾಸರ `ಓಡಿ ಬಾರಯ್ಯ' ಪದವನ್ನು ಮೋಹನದಲ್ಲಿ ಹಾಡಿ ಚಕಿತಗೊಳಿಸಿದರು. ಆ ಹಾಡಿನ ಸಾಹಿತ್ಯದ ಕಡೆಗೆ ಮತ್ತು ಅದರ ಸರಿಯಾದ ಉಚ್ಚಾರಣೆಯ ಕಡೆಗೆ ಗಾಯಕರು ಮತ್ತಷ್ಟು ಎಚ್ಚರ ಮತ್ತು ಗಮನವನ್ನು ಕೊಡುವುದು ಲೇಸೆನಿಸಿತು.ಮಂಗಳಪ್ರದ ನಾಗಸ್ವರ

ಶೇಷಾದ್ರಿಪುರಂ ಕಾಲೇಜಿನ ಬಯಲು ರಂಗಮಂದಿರದಲ್ಲಿ ಎಂದಿನಂತೆ ಈ ಬಾರಿಯೂ ಶೇಷಾದ್ರಿಪುರಂ ಶ್ರಿರಾಮ ಸೇವಾ ಸಮಿತಿಯ ಆಶ್ರಯದಲ್ಲಿ 65ನೆ ವರ್ಷದ ಶ್ರಿರಾಮನವಮಿ ಸಂಗೀತೋತ್ಸವವು ರಾಮನವಮಿಯಂದು ಆರಂಭವಾಯಿತು.ಬಯಲು ವಾದ್ಯವಾದ ನಾಗಸ್ವರದಲ್ಲಿ ಮಂಗಳಕರ ಭಾವನೆಯನ್ನು ಸೃಷ್ಟಿಸಿದ ನಾಚಿಯಾರ್ ಕೋಯಿಲ್ ಎನ್.ಆರ್.ಪಿ. ರವಿಚಂದ್ರನ್, ಸ್ವಾಮಿಮಲೈ ರಾಜೇಶ್(ಎರಡನೆ ನಾಗಸ್ವರ), ಸುಂದರಂ (ಡೋಲು) ಮತ್ತು ತಂಡದವರ ಕಛೇರಿ ಶುಭಾರಂಭಕ್ಕೆ ಸಾಕ್ಷಿಯಾಯಿತು. ಬ್ರೋವಭಾರಮ (ಬಹುದಾರಿ), ಪೂರ್ವಿಕಲ್ಯಾಣಿ (ಓರಾಮ ನೀನಾಮಂ), ಶಂಕರಾಭರಣ  ಸ್ವರರಾಗಸುಧಾ), ಭೈರವಿ (ಉಪಚಾರಮು), ಮೋಹನ (ನನ್ನು ಪಾಲಿಂಪ), ಕಾಪಿ (ಜಗದೋದ್ಧಾರನ), ಆಹ್ಲಾದಕರವಾಗಿ ತೆರೆದುಕೊಂಡ ಶಹನಾ (ವಂದನಮು) ಮುಂತಾದ ರಾಗಗಳು ಮತ್ತು ರಚನೆಗಳು ಶ್ರೋತೃಗಳ ಮನಗೆದ್ದವು.

 

ಪ್ರತಿಕ್ರಿಯಿಸಿ (+)