ಮಂಗಳವಾರ, ಅಕ್ಟೋಬರ್ 22, 2019
22 °C

ಸಂಗೀತ ಮೇಷ್ಟರ ಸನ್ನಿಧಿಯಲ್ಲಿ...

Published:
Updated:
ಸಂಗೀತ ಮೇಷ್ಟರ ಸನ್ನಿಧಿಯಲ್ಲಿ...

ಸಂಗೀತದ ಬಗ್ಗೆ ಮೇಷ್ಟ್ರು ಏನಂತಾರೆ, ಈಗ ಕೇಳೋಣ...

ಹಾಗೆಂದು ಹೇಳಿದ ನಿರೂಪಕಿ ಮೈಕನ್ನು ಹಸ್ತಾಂತರಿಸಿದರು. ಸಂಗೀತದ ಮೇಷ್ಟ್ರ ಮಾತಿಗೆ ಸಭಾಂಗಣಕ್ಕೆ ಸಭಾಂಗಣವೇ ಮೈಯೆಲ್ಲ ಕಿವಿಯಾದಂತಿತ್ತು. ಮೇಷ್ಟ್ರು ಮಾತನಾಡತೊಡಗಿದರು-`ಸಂಗೀತದ ಬಗ್ಗೆ ಮಾತನಾಡಲಿಕ್ಕೆ ಲೋಕದಲ್ಲಿ ಯಾರಿಂದಲೂ ಆಗಲ್ಲ. ಅಷ್ಟು ಮಾತ್ರವಲ್ಲ, ಅದನ್ನು ವಿಶ್ಲೇಷಿಸಲಿಕ್ಕೆ ಕೂಡ ಸಾಧ್ಯವಿಲ್ಲ. ಸಂಗೀತ ಸಂಗೀತವೇ ಆಗಿರಬೇಕು ಎಂದರೆ ಅದನ್ನು ಹಾಡಬೇಕು. ಅದರಲ್ಲಿ ಶ್ರುತಿ ಇರಬೇಕು, ಅದಕ್ಕೆ ಲಯಬೇಕು. ಹಾಡಿನಲ್ಲಷ್ಟೇ ಏನು, ನಮ್ಮ ಮಾತಿನಲ್ಲೂ ಲಯ ಇದೆ...~ಮಾತಿನ ಲಯ ಕತ್ತರಿಸಿಹೋಯಿತು. `ಅಗೋ, ಅಂಬರೀಷ್ ಬಂದರು~ ಎಂದು ನಿರೂಪಕರು ಪ್ರಕಟಿಸಿದರು. ಸಂಗೀತದ ಮೇಷ್ಟ್ರ ಮಾತು ತುಂಡಾಯಿತು. ಅಂಬರೀಷ್ ಸಪತ್ನೀಕರಾಗಿ ವೇದಿಕೆಗೆ ಬಂದರು. ಕ್ಯಾಮೆರಾ ಮಿಂಚುಗಳು ಕೋರೈಸಿದವು. ಮಾತುಗಳು ಕಲಸಿಹೋದವು. ವೇದಿಕೆಯ ಮೇಲಿದ್ದವರು ಅಂಬರೀಷ್ ಅವರನ್ನು ಜೊತೆಗೆ ನಿಲ್ಲಿಸಿಕೊಂಡು ಮತ್ತೆ ಕ್ಯಾಮೆರಾಗಳಿಗಾಗಿ ನಕ್ಕರು.ಅದು, `ಪ್ರಸಾದ್~ ಸಿನಿಮಾದ ಧ್ವನಿಮುದ್ರಿಕೆ ಸಮಾರಂಭ. ಅಲ್ಲಿದ್ದ ಸಂಗೀತ ಮೇಷ್ಟ್ರ ಹೆಸರು ಇಳಯರಾಜಾ.ಸಾಮಾನ್ಯವಾಗಿ ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಸಿಗದ, ಸುದ್ದಿಗಾರರ ಎದುರು ಕೂರದ ಇಳಯರಾಜಾ ತೀರಾ ಅಪರೂಪಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಾಗೆ ನೋಡಿದರೆ, ಸಂಘಟಕರಿಗೆ ಕೂಡ ಅವರು ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯಿರಲಿಲ್ಲ. ಹಾಗಾಗಿಯೇ ಮಾಧ್ಯಮಗಳಿಗೆ ತಲುಪಿಸಿದ್ದ ಕಾರ್ಯಕ್ರಮದ ಅತಿಥಿಗಳ ಪಟ್ಟಿಯಲ್ಲಿ ಅವರ ಹೆಸರಿರಲಿಲ್ಲ. ಕಾರ್ಯಕ್ರಮಕ್ಕೆ ಬಂದವರಿಗೆಲ್ಲ ಇಳಯರಾಜಾ ಅವರ ಹಾಜರಿ ಒಂದು ಹಿತವಾದ ಅಚ್ಚರಿ.ದಕ್ಷಿಣ ಭಾರತ ಸಿನಿಮಾದ ಪಾಲಿಗೆ ಇಳಯರಾಜಾ ಒಂದು ದಂತಕಥೆ ಇದ್ದಂತೆ. ಸುಮಾರು ಮೂರು ದಶಕಗಳಲ್ಲಿ ಒಂಬೈನೂರ ಐವತ್ತಕ್ಕೂ ಹೆಚ್ಚು ಸಿನಿಮಾಗಳಿಗೆ, ನಾಲ್ಕೂವರೆ ಸಾವಿರ ಗೀತೆಗಳಿಗೆ ಸಂಗೀತ ನೀಡಿದ ಖ್ಯಾತಿ ಅವರದು. ಕನ್ನಡದ ಸಿನಿಮಾ ರಸಿಕರಿಗೂ ಅವರ ಸಂಗೀತ ಅಪರಿಚಿತವಲ್ಲ. `ಪಲ್ಲವಿ ಅನುಪಲ್ಲವಿ~, `ನಮ್ಮೂರ ಮಂದಾರ ಹೂವೆ~, `ಗೀತಾ~, `ನೀ ನನ್ನ ಗೆಲ್ಲಲಾರೆ~, `ಆ ದಿನಗಳು~ ಸೇರಿದಂತೆ ಹತ್ತಾರು ಕನ್ನಡ ಚಿತ್ರಗಳಿಗೆ ಅವರು ಸಂಗೀತ ನೀಡಿದ್ದಾರೆ. ಈಗ `ಪ್ರಸಾದ್~ ಸರದಿ.ಆಕಾಶನೀಲಿಯಲ್ಲಿ ತೋಯ್ದಂತಿದ್ದ ಬಿಳಿ ಅಂಗಿ ಹಾಗೂ ಪಂಚೆಯನ್ನು ತೊಟ್ಟಿದ್ದರು ಇಳಯರಾಜಾ. ಅವರು ಸುಳಿದೆಡೆಯಲ್ಲೆಲ್ಲ ಸ್ವರವೊಂದು ಇಣುಕಿದಂತೆ ಭಾಸವಾಗುತ್ತಿತ್ತು. `ಈಗ ಮಾತನಾಡಿ ಸಾರ್~ ಎಂದು ನಿರೂಪಕರು ಹಸಿರು ನಿಶಾನೆ ತೋರಿದರು. ಲಯ ಕೂಡಿಕೊಳ್ಳಲಿಲ್ಲ. ಅವರ ಮಾತು ಸಂಗೀತದಿಂದ ಸಿನಿಮಾಕ್ಕೆ ಹೊರಳಿತು.

 

`ಮೊದಲು ಈ ಸಿನಿಮಾ ನೋಡಿ ಆಮೇಲೆ ಸಂಗೀತ ನೀಡಿದೆ. ಅವರು ಕೇಳಿದ್ದನ್ನೆಲ್ಲ ನಾನು ಕೊಡಲಿಲ್ಲ. ಅಂದರೆ, ಇದರಲ್ಲಿನ ಅನೇಕ ಸಂಗತಿಗಳನ್ನು ಹೇಳಲಿಕ್ಕೆ ಬರೊಲ್ಲ. ಈ ಸಿನಿಮಾ, ಕಲಾದೇವಿ ಸರಸ್ವತಿಗೆ ಕಲೆಯ ರೂಪದಲ್ಲಿ ನೈವೇದ್ಯದ ಅರ್ಪಣೆ~- ಇಳಯರಾಜಾ ಮಾತು ಮುಗಿಸಿದರು.`ಪ್ರಸಾದ್~ ಉದ್ಯಮಿ ಅಶೋಕ್ ಖೇಣಿ ನಿರ್ಮಾಣದ ಮೊದಲ ಕನ್ನಡ ಸಿನಿಮಾ. ಮಧ್ಯಮ ವರ್ಗದ ಕುಟುಂಬದ ಅಂಗವಿಕಲ ಬಾಲಕನೊಬ್ಬನ ಸಾಧನೆಯ ಕಥೆ ಚಿತ್ರದ್ದು. ಬಾಲಕನ ಅಪ್ಪಅಮ್ಮನಾಗಿ ಅರ್ಜುನ್ ಸರ್ಜಾ, ಮಾಧುರಿ ಭಟ್ಟಾಚಾರ್ಯ ನಟಿಸಿದ್ದಾರೆ. ಹಿಂದಿನ ದಿನವಷ್ಟೇ ಆಹ್ವಾನಿತರಿಗೆ ಸಿನಿಮಾ ತೋರಿಸಿದ್ದ ಖೇಣಿ, ಒಳ್ಳೆಯ ಸಿನಿಮಾ ನಿರ್ಮಿಸಿದ ಖುಷಿಯಲ್ಲಿದ್ದರು. ಧ್ವನಿಮುದ್ರಿಕೆ ಸಮಾರಂಭಕ್ಕೆ ಅವರು ಗಣ್ಯರ ದಂಡನ್ನೇ ಕಲೆಹಾಕಿದ್ದರು. ಅಂತರರಾಷ್ಟ್ರೀಯ ಖ್ಯಾತಿಯ ನೃತ್ಯ ಸಂಯೋಜಕ ಶಾಮ್ ಅಕ್ದರ್ ಚಿತ್ರತಂಡದೊಂದಿಗಿದ್ದರು.ಅರ್ಜುನ್ ಸರ್ಜಾ, ಅಂಬರೀಷ್, ಸುಮಲತಾ, ದ್ವಾರಕೀಶ್, ಸುದೀಪ್, ಮಾಧುರಿ ಭಟ್ಟಾಚಾರ್ಯ, ಲಹರಿ ವೇಲು, ಅಶೋಕ್ ಖೇಣಿ, ಸುಧಾರಾಣಿ, ಚಿತ್ರದ ನಿರ್ದೇಶಕ ಮನೋಜ್ ಸತಿ ವೇದಿಕೆಯ ಮೇಲಿದ್ದರು. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಂಕಲ್ಪ್ ಎನ್ನುವ ಬಾಲಕನೂ ಅಲ್ಲಿದ್ದ. ಆ ಹುಡುಗನಿಗೆ ಮಾತು ಬಾರದು, ದನಿ ಕೇಳಿಸದು.

ವೇದಿಕೆಯ ಮೇಲಿದ್ದವರೆಲ್ಲ ಇಳಯರಾಜಾ ಬಣ್ಣನೆಯಲ್ಲಿ ತೊಡಗಿದರು. `ಅವರು ಬರಿ ಸಂಗೀತಮೇಷ್ಟ್ರು ಮಾತ್ರವಲ್ಲ; ನಮ್ಮ ತಲೆಮಾರಿನವರ ಪಾಲಿಗೆ ಸಂಗೀತದ ದೇವರು~ ಎನ್ನುವುದು ಸುಮಲತಾ ಅಂಬರೀಷ್ ಬಣ್ಣನೆ. `ನಮ್ಮ ಸಂಸ್ಕೃತಿಯನ್ನು ಬೆಳೆಸಿದ ಮೇಧಾವಿಗಳಲ್ಲಿ ಅವರೂ ಒಬ್ಬರು~ ಎಂದರು ಅಂಬರೀಷ್.ಅರ್ಜುನ್ ಸರ್ಜಾ `ಪ್ರಸಾದ್~ ಚಿತ್ರದ ತಾರಾಗಣದ ಪ್ರಮುಖ ಆಕರ್ಷಣೆ. `ಈ ಸಿನಿಮಾ ಮುಗಿದ ಮೇಲೆ ಇದಕ್ಕೆ ಸಂಗೀತ ನೀಡುವಂತೆ ಇಳಯರಾಜ ಅವರನ್ನು ಕೇಳಿಕೊಂಡೆವು. ಸಮಯ ಇಲ್ಲ ಎಂದರು. ಕಥೆ ಹೇಳಿದೆವು. ನಾನೊಮ್ಮೆ ಸಿನಿಮಾ ನೋಡಬೇಕು ಎಂದರು. ಸಿನಿಮಾ ನೋಡಿದ ಮೇಲೆ, ಇನ್ನು ನಾಲ್ಕು ದಿನಗಳಲ್ಲಿ ಕೆಲಸ ಶುರು ಮಾಡುತ್ತೇನೆ ಎಂದರು~- ಅರ್ಜುನ್ ಸರ್ಜಾ ಮಾತುಗಳಲ್ಲಿ ಮೇಷ್ಟ್ರ ಸಂಗೀತದಿಂದ ಸಿನಿಮಾದ ಗುಣಮಟ್ಟ ಎತ್ತರಕ್ಕೇರಿದ ಭಾವವಿತ್ತು.ಸಂಗೀತದ `ಪ್ರಸಾದ~ ಮುಗಿಯಿತು. ಸಭಾಂಗಣದ ಹೊರಗೆ ಹಿತವಾದ ಬಿಸಿಲು. ಇಳಯರಾಜಾ ಹಾಜರಿಯಲ್ಲಿ ಬಿಸಿಲಿಗೂ ಒಂದು ಮಾರ್ದವತೆ ಒದಗಿದಂತಿತ್ತು.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)