ಸೋಮವಾರ, ಜೂನ್ 14, 2021
21 °C

ಸಂಗೀತ ರಸಗ್ರಹಣ: ಶ್ರೋತೃಗಳಿಗೆ ರಸದೌತಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅವರದು ಮಧ್ಯ ವಯಸ್ಸು ದಾಟಿದ ದಾಂಪತ್ಯ. 20-25 ವರ್ಷದಿಂದ ಸತತ ಎಂಬಂತೆ ಸಂಗೀತ ಕಛೇರಿಗಳಿಗೆ ಹಾಜರಾಗುವ ಬೆಂಗಳೂರಿನ ಪರಿಚಿತ ಮುಖ. ತಾವು ಹೋಗಿ ಬರಲು ತೊಂದರೆ ಇಲ್ಲದಷ್ಟು ದೂರದಲ್ಲಿ ನಡೆಯುವ ಸಂಗೀತ ಕಛೇರಿಗಳಲ್ಲಿ ಒಂದನ್ನೂ ಅವರಾಗಿ ತಪ್ಪಿಸಿಕೊಂಡ ಉದಾಹರಣೆ ಇಲ್ಲ.ಎಲ್ಲ ಶ್ರೋತೃಗಳಂತೆ ಅವರೂ ಸಂಗೀತಾಭಿರುಚಿಯುಳ್ಳ ದಂಪತಿ ಎಂದೇ ಈ ಹವ್ಯಾಸ. ತಲೆ ಅಲ್ಲಾಡಿಸುತ್ತ, ತೊಡೆಯ ಮೇಲೆ ತಾಳ ತಟ್ಟುತ್ತ ಸಂಗೀತಧಾರೆಯನ್ನು ಸುಖಿಸುವ ನೂರಾರು ಜನರ ಸಾಲಿನಲ್ಲಿ ಅವರೂ ಇದ್ದಾರೆ. ಸಭಾಂಗಣದಲ್ಲಿ ಆಗೀಗ ಚಪ್ಪಾಳೆ ಅಡರುತ್ತಿದ್ದಂತೆಯೇ ಅವರ ಕೈಗಳೂ ಆ ಸದ್ದಿನ ಧಾರೆಯಲ್ಲಿ ಒಂದಾಗುತ್ತವೆ. ಹಾಗಂತ ಅವರಲ್ಲಿ ಸಂಗೀತ ಜ್ಞಾನ ಎನ್ನುವುದಿಲ್ಲ. ಅದನ್ನು ಸಂಕೋಚವಿಲ್ಲದೆ ಅವರೇ ಹೇಳುತ್ತಾರೆ. ನಾವು ಸಂಗೀತ ಕೇಳುತ್ತೇವೆ, ಅದೂ ತನ್ಮಯತೆಯಿಂದ. ಅಡುಗೆ ಚೆನ್ನಾಗಿದೆ ಎನ್ನಲು, ಕಥೆ ಕಾದಂಬರಿ ಸೊಗಸಾಗಿದೆ ಎನ್ನಲು ಬಹಳ ಜ್ಞಾನದ ಅಗತ್ಯವಿಲ್ಲ. ಅದೇ ತಮ್ಮಲ್ಲಿರುವ ಸಂಗೀತ ಜ್ಞಾನಕ್ಕೂ ಅನ್ವಯ ಎನ್ನುವ ಮುಗ್ಧ ವಿವರಣೆ ಅವರದು. ಇಂಥ ಸಾವಿರಾರು ಜನ ಸಂಗೀತಾಭಿಮಾನಿಗಳು ಈ ಊರೊಂದರಲ್ಲಿಯೇ ಇದ್ದಾರೆ. ಸಂಗೀತ ವ್ಯಾಕರಣದ ಗಂಧ ಗಾಳಿಯೂ ಅವರಲ್ಲಿಲ್ಲ. ಹಾಗಂತ ಅವರು ಅಬ್ಬೆಪಾರಿಗಳಲ್ಲ. ಅವರಲ್ಲಿ ಸಂಗೀತ ಪ್ರೇಮವಿದೆ. ಸಂಗೀತ ಕೊಡುವ ಸುಖದ ಜ್ಞಾನವಿದೆ. ಸಂಗೀತ ಕೇಳುವುದರಿಂದ ವರ್ಣನೆಗೆ ನಿಲುಕದ ಮನಃಶಾಂತಿಯೊಂದು ದಕ್ಕುತ್ತದೆಂಬುದರ ಪರಿಜ್ಞಾನವೂ ಇದೆ. ಇದು ಬಹುತೇಕ ಎಲ್ಲ ಶ್ರೋತೃಗಳ ಅನುಭವ.ಸೀಮಿತ ಜ್ಞಾನಅದರಿಂದ ಆಚೆಗೆ ಕರ್ನಾಟಕ ಸಂಗೀತ ಕಛೇರಿಯಲ್ಲಿ ಸಾಮಾನ್ಯವಾಗಿರುವ ವರ್ಣ ಎಂದರೆ ಏನು...? ಕಛೇರಿಯ ಆರಂಭದಲ್ಲೇ ಅದರ ಪ್ರಸ್ತುತಿ ಏಕೆ...? ಕೃತಿ ಗಾಯನ ಪೂರ್ವದಲ್ಲಿ ರಾಗಾಲಾಪನೆಗೇಕೆ ಅಷ್ಟೊಂದು ಪ್ರಾಮುಖ್ಯ...? ಕೆಲವು ರಾಗಗಳನ್ನು ಹಾಡುವುದು ಸರಳವಾದರೆ ಇನ್ನು ಕೆಲವು ಏಕೆ ಕ್ಲಿಷ್ಟ...?ರಾಗಾಲಾಪನೆಯ ವ್ಯಾಪ್ತಿ ಎಷ್ಟು ಮತ್ತು ಏಕೆ...? ತನಿಯಾವರ್ತನೆ ಕಛೇರಿಯೊಂದಕ್ಕೆ ಅನಿವಾರ್ಯವೇ...? ಯಾವುದು ಯಾವ ರಾಗ...? ಅದನ್ನು ಗುರುತಿಸುವ ಬಗೆ ಹೇಗೆ...? ರಾಗ ರಾಗಗಳ ನಡುವಣ ಒಳ ಸೂಕ್ಷ್ಮಗಳ ವ್ಯತ್ಯಾಸ ಗುರುತಿಸಿ ಗೆರೆ ಎಳೆಯುವುದು ಹೇಗೆ...? ಅದಕ್ಕೆ ಎಂಥ ಸಿದ್ಧತೆ ಅಗತ್ಯ...? ಮಿಶ್ರ ರಾಗ, ಕಲ್ಪನಾ ಸ್ವರಗಳ ವಿಶೇಷವೇನು....?ಸಂಗೀತದಲ್ಲಿ ರಾಗವೊಂದರ ಸ್ಥಾನಮಾನ, ಸ್ವರಗಳ ಜಾಯಮಾನ ಏನು...? ಇತ್ಯಾದಿ ಇತ್ಯಾದಿ ಯಾವುದೂ ಆ ದಂಪತಿ ಸೇರಿದಂತೆ ಬಹಳ ಜನರಿಗೆ ಗೊತ್ತಿಲ್ಲ. ಅವರಿಗೆಲ್ಲ ಗೊತ್ತಿರುವ ಏಕಮೇವ ಸಂಗತಿ ಎಂದರೆ ಸಂಗೀತವನ್ನು ಖುಷಿಯಿಂದ ಕೇಳುವುದು; ಮಂಗಳ ಹಾಡುತ್ತಿದ್ದಂತೆ ಮನೆ ದಾರಿ ಹಿಡಿಯುವುದು.ಬಹುತೇಕ ಸಂಗೀತಾಸಕ್ತರಿಗೆ ಸಂಗೀತವನ್ನು ಸುಖದ ಮಜಲಿನಲ್ಲಿ ಅನುಭವಿಸುವುದು ಗೊತ್ತು. ಆದರೆ ಅದರ ರಸ ಹಿಡಿಯುವುದು ಗೊತ್ತಿಲ್ಲ. ಹಿಂದೂಸ್ತಾನಿಯೇ ಇರಲಿ, ಕರ್ನಾಟಕ ಸಂಗೀತವೇ ಆಗಿರಲಿ ಅದರ ಮೂಲ ಉದ್ದೇಶ ರಸಾನುಭವವನ್ನು ಶ್ರೋತೃಗಳಿಗೆ ಮುಟ್ಟಿಸುವುದು. ಸಂಗೀತ ಅದನ್ನು ಸದಾಕಾಲಕ್ಕೂ ಕೊಡುತ್ತ ಬಂದಿದೆ. ಸ್ವೀಕರಿಸುವ ಸಿದ್ಧತೆ ಶ್ರೋತೃಗಳಲ್ಲಿ ಕಡಿಮೆ. ಹಾಗಾಗಿ ಸಂಗೀತ ಕಛೇರಿ ಎಂದರೆ ಕೇಳಿ ಆನಂದಿಸುವುದಕ್ಕೆ ಸೀಮಿತವಾಗಿದೆಯೇ ಹೊರತಾಗಿ ಸಂಗೀತದ ಅನುಭಾವಕ್ಕೆ, ಅನುಭೂತಿಗೆ ತೆರೆದುಕೊಂಡಿಲ್ಲ.ಸಂಗೀತ ರಸಗ್ರಹಣ

ಯುಗಾದಿ, ರಾಮನವಮಿ ನೆಪದಲ್ಲಿ ಕೋಟೆ ಪ್ರೌಢಶಾಲೆ ಆವರಣದಲ್ಲಿ, ಶೇಷಾದ್ರಿಪುರದಲ್ಲಿ, ಹಲಸೂರಿನಲ್ಲಿ ಮತ್ತೆ ಅಲ್ಲಲ್ಲಿ ನಡೆಯುವ ಸಂಗೀತೋತ್ಸವದ ರಸ ಘಳಿಗೆಗೆ ಜನ ಕಾತುರದಲ್ಲಿದ್ದಾರೆ. ಸಂಗೀತೋತ್ಸವದಲ್ಲಿ ಯಾರೆಲ್ಲ ಕಲಾವಿದರು ಭಾಗವಹಿಸಲಿದ್ದಾರೆಂಬ ಪಟ್ಟಿಯನ್ನು ಇಟ್ಟುಕೊಂಡಿರುವ ಅನೇಕರು ಕ್ಯಾಲೆಂಡರಿನಲ್ಲಿ ಆ ದಿನದ ಗುರುತು ಹಾಕಿಟ್ಟಿದ್ದಾರೆ. ಇಂಥ ಸಂಗೀತ ಸನ್ನಿಯ ದಿನಗಳಿಗೆ ಮುನ್ನುಡಿಯೋ ಎಂಬಂತೆ ಕರ್ನಾಟಕ ಶಾಸ್ತ್ರೀಯ ಸಂಗೀತ ರಸಗ್ರಹಣ ಕಾರ್ಯಕ್ರಮವೊಂದು ನಡೆಯಲಿದೆ. ಆಸಕ್ತನೊಬ್ಬ ಸಂಗೀತಾಭ್ಯಾಸ ಮಾಡುವುದಕ್ಕೂ ಶ್ರೋತೃವೊಬ್ಬ ಅದನ್ನು ಸ್ವೀಕರಿಸುವುದಕ್ಕೂ ನಡುವಣ ಅಂತರ ಅಜಗಜ. ಆ ಅಂತರವನ್ನು ಸಾಧ್ಯವಾದಷ್ಟೂ ತಗ್ಗಿಸುವ ಮಹದಾಶಯ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎನ್ನುವುದು ಸಂಚಾಲಕ ಮೃದಂಗ ವಿದ್ವಾನ್ ಎಚ್.ಎಸ್. ಸುಧೀಂದ್ರ ವಿವರಣೆ.ಕರ್ನಾಟಕ ಸಂಗೀತವನ್ನು ಆಸ್ವಾದಿಸುವುದಕ್ಕೆ ಅದರದೇ ಆದೊಂದು ಸಂಸ್ಕಾರದ ಅಗತ್ಯವಿದೆಯೇ...? ಎಂಬ ಪ್ರಶ್ನೆ ಬಹುಕಾಲದಿಂದಲೂ ಇದೆ. ಅದಕ್ಕೆ ತನ್ನದೇ ವ್ಯಾಪ್ತಿಯಲ್ಲಿ ಅರ್ಥ ವಿವರಣೆ ನೀಡುವ ಕೆಲಸವನ್ನೂ ಈ ರಸ ಗ್ರಹಣ ಕಾರ್ಯಕ್ರಮ ಮಾಡಲಿದೆ. ಶ್ರವಣ ಸ್ವರೂಪದಲ್ಲಿ ಒಂದೇ ತೆರನಾಗಿರುವ ಕೆಲವು ರಾಗಗಳನ್ನು (ಉದಾಹರಣೆಗೆ ಪಂತುವರಾಳಿ, ಪೂರ್ವಿ ಕಲ್ಯಾಣಿ) ಒಂದಾದನಂತರ ಒಂದರಂತೆ ಗಾಯಕರು ಹಾಡುವುದಿಲ್ಲವೇಕೆ..? ಶ್ರುತಿ ಭೇದ ತಾಂತ್ರಿಕ ಅಂಶಗಳನ್ನು ಅರಿತು ಯಾವುದೇ ಗೊಂದಲವೂ ಇಲ್ಲದೆ ರಸಾಸ್ವಾದನೆ ಮಾಡುವುದು ಹೇಗೆ..?ಹತ್ತಾರು ಶಂಕೆಗೆ ಉತ್ತರ

 ಸ್ತ್ರೀರಾಗ, ಪುರುಷ ರಾಗಗಳೆಂಬ ಪ್ರಭೇದವಿದೆಯಂತೆ, ಅದನ್ನು ಗುರುತಿಸುವುದು ಹೇಗೋ...? ವೈದ್ಯಕೀಯ ವಿಜ್ಞಾನವೂ ಈ ಆಧುನಿಕ ಯುಗದಲ್ಲಿ ಕರ್ನಾಟಕ ಸಂಗೀತದ ರೋಗ ನಿಯಂತ್ರಣ, ರೋಗ ನಿರೋಧಕ ಶಕ್ತಿಯನ್ನು ಗುರುತಿಸಿದೆಯಂತೆ ಹೌದೇ...? ಚಲನಚಿತ್ರ ಹಾಗೂ ಜನಪ್ರಿಯ ಸಂಗೀತದ ಪ್ರವಾಹದ ನಡುವೆ ಶಾಸ್ತ್ರೀಯ ಕರ್ನಾಟಕ ಸಂಗೀತದ ಪಾತ್ರವೇನು...? ಅದು ಕೇವಲ ಸಂಗೀತ ಬಲ್ಲ ಬುದ್ಧಿಜೀವಿಗಳಿಗೆ ಮಾತ್ರವೇ ಮೀಸಲೇ...? ಹೀಗೆ ನೂರಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ವೇದಿಕೆಯಾಗಿ ಈ ರಸಗ್ರಹಣ ಕಾರ್ಯಕ್ರಮ ನಡೆಯುತ್ತಿದೆ. ಜಿ. ರಾಜನಾರಾಯಣ್, ಎಸ್.ಶಂಕರ್, ಎಂ.ಎಸ್. ಶೀಲಾ, ಡಾ.ಟಿ.ಎಸ್. ಸತ್ಯವತಿ, ಡಾ.ಕೆ.ವರದರಂಗನ್, ಮೈಸೂರು ಎಂ.ನಾಗರಾಜ್, ಮೈಸೂರು ಎಂ. ಮಂಜುನಾಥ್, ಆನೂರು ಅನಂತಕೃಷ್ಣ ಶರ್ಮಾ, ಎಚ್. ಕೆ.ವೆಂಕಟರಾಂ, ಡಾ.ಜಯಂತಿ ಕುಮರೇಶ್, ಯು.ಎನ್. ಗಿರಿಧರ ಉಡುಪ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರ ಹತ್ತಾರು ಬಗೆಯ ಸಂಶಯ, ಶಂಕೆ, ಕುತೂಹಲಗಳಿಗೆ ಉತ್ತರ ನೀಡಲಿದ್ದಾರೆ.ಸಾಂಪ್ರದಾಯಿಕ ಸಂಗೀತ ಎಂದರೇನು...? ಅದನ್ನು ಗುರುತಿಸಿ ಮೆಚ್ಚುವುದು ಹೇಗೆಂಬ ಪ್ರಶ್ನೆಗೂ ಇಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ. ಸಂಗೀತ ತನ್ನ ಸಾಂಪ್ರದಾಯಿಕ ಚೌಕಟ್ಟನ್ನು ಮೀರಿದೆ ಎಂಬ ಆರೋಪವಿದೆ. ಸುಪ್ರಸಿದ್ಧ ಸಂಗೀತ ವಿದ್ವಾಂಸ ಡಾ. ಬಾಲಮುರಳೀಕೃಷ್ಣ ಅವರ ಪ್ರಕಾರ ಸಂಪ್ರದಾಯದ ಮಿತಿಯಲ್ಲಿ ಸಂಗೀತವನ್ನು ಕೂರಿಸುವುದೂ ಒಂದೇ, ಅಪ್ಪ ನೆಟ್ಟಾಲಕ್ಕೆ ನೇಣು ಹಾಕಿಕೊಳ್ಳುವುದೂ ಒಂದೇ. ಇಷ್ಟಕ್ಕೂ ಸಂಪ್ರದಾಯ ಎನ್ನುವುದು ಆಯಾ ಕಾಲದ ಸಂಗೀತ ವಿದ್ವಾಂಸರು ಆರಂಭಿಸಿದ ಪರಂಪರೆಯೇ ಹೊರತೂ ಇನ್ನೇನೂ ಅಲ್ಲ.ಆ ಪರಂಪರೆಗೆ ಹೊಸತನ್ನು ತುಂಬುವ ಕೆಲಸವಾದಾಗೆಲ್ಲ ಸಂಪ್ರದಾಯದ ವಕ್ತಾರರು ತಾವು ಎನ್ನುವವರು ವಿರೋಧಿಸಿದ್ದಾರೆ ಎನ್ನುವುದು ಅವರ ಮಾತು. ಈ ರಸಗ್ರಹಣ ಕಾರ್ಯಕ್ರಮದಲ್ಲಿ ಈ ನಿಟ್ಟಿನಲ್ಲಿ ಒಂದಿಷ್ಟು ಆರೋಗ್ಯಕರ ಸಂವಾದ ನಡೆಯುವ ಸಾಧ್ಯತೆಯೂ ಇದೆ. ಶ್ರಿರಾಮ ಲಲಿತ ಕಲಾ ಮಂದಿರದ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದ ಕೊನೆಯಲ್ಲಿ ಹಿರಿಯ ಸಂಗೀತ ವಿದ್ವಾಂಸ ಡಾ.ಆರ್.ಕೆ. ಶ್ರಿಕಂಠನ್ ಪಾಲ್ಗೊಂಡು ಸಮಾಪನ ಮಾಡಲಿದ್ದಾರೆ. ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ. ಸಮಯ: ಬೆಳಗಿನ 10ರಿಂದ ಮಧ್ಯಾಹ್ನ 2ರವರೆಗೆ. ಪ್ರವೇಶ ಉಚಿತ. 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.