ಭಾನುವಾರ, ಮೇ 22, 2022
27 °C

ಸಂಗೀತ ಲೋಕದ ದಿಕ್ಸೂಚಿಗಳು

ಪ್ರೊ. ಮೈಸೂರು ವಿ. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಬೆಂಗಳೂರು ಗಾಯನ ಸಮಾಜ ವಾರಕಾಲ ಯುವ ಸಂಗೀತೋತ್ಸವವನ್ನು ಸಡಗರದಿಂದ ನಡೆಸಿತು. 25ಕ್ಕೂ ಹೆಚ್ಚು ತರುಣ ಕಲಾವಿದರು ಗಾಯನ-ವಾದನಗಳಲ್ಲಿ ಮಿಂಚಿದರು. ಹಾಡುಗಾರಿಕೆ, ವೀಣೆ, ಪಿಟೀಲು, ಮೃದಂಗ, ಘಟ, ಖಂಜರಿ, ಮೋರ್ಚಿಂಗ್‌ಗಳಲ್ಲಿ ತಮ್ಮ ಸಾಧನೆಯನ್ನು ಮೆರೆದ ಈ ವರ್ಧಿಷ್ಣು ಕಲಾವಿದರು ನಾದಲೋಕದ ನಾಳೆಗಳ ದಿಕ್ಸೂಚಿಯಂತೆ ಕಂಡರು.ಗಾಯನ ಸಮಾಜದ ಪ್ರಯತ್ನವನ್ನು ಶ್ಲಾಘಿಸಿದ ಹಿರಿಯರು ಈ ಉತ್ಸವವನ್ನು ಪ್ರತಿವರ್ಷ ಮುಂದುವರಿಸಿಕೊಂಡು ಹೋಗುವ ಅಗತ್ಯವನ್ನು ಮನಗಾಣಿಸಿದರು.

ಯುವ ಸಂಗೀತೋತ್ಸವದಲ್ಲಿ ಶುಕ್ರವಾರ ಶಿಲ್ಪಾ ಶಶಿಧರ್ ಹಾಡಿದರು. ಮೀನಾಕ್ಷಿ ಅವರಲ್ಲಿ ಸಂಗೀತ ಶಿಕ್ಷಣವನ್ನು ಪ್ರಾರಂಭಿಸಿ, ಚಿಂತಲಪಲ್ಲಿ ರಮೇಶ್ ಅವರಲ್ಲಿ ಮುಂದುವರಿಸಿ, ಡಾ. ಟಿ.ಎಸ್. ಸತ್ಯವತಿ ಅವರಲ್ಲಿ ಪ್ರೌಢ ವ್ಯಾಸಂಗ ಮಾಡುತ್ತಿದ್ದಾರೆ.ಸಂಗೀತದಲ್ಲಿ ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಎಲೆಕ್ಟ್ರಾನಿಕ್ಸ್‌ನಲ್ಲಿ ಬಿ.ಇ. ಪದವೀಧರೆ. ನಗರದ ಒಳ-ಹೊರಗೆ ಕಛೇರಿಗಳನ್ನು ಮಾಡಿದ ಅನುಭವವೂ ಗಾಯಕಿಗೆ ಇದೆ.ಶಿಲ್ಪಾ ಅವರೊಂದಿಗೆ ಮೂವರು ಪ್ರತಿಭಾವಂತ ತರುಣ ಕಲಾವಿದರು ಪಕ್ಕವಾದ್ಯಗಳನ್ನು ನುಡಿಸಿದರು. ಪಿಟೀಲು ನುಡಿಸಿದ ಸಿಂಧು ಚೇತನ್, ಎಚ್.ಕೆ. ನರಸಿಂಹಮೂರ್ತಿ ಅವರ ಶಿಷ್ಯೆಯಾದರೆ ಮೃದಂಗ ನುಡಿಸಿದ ಸುದರ್ಶನ್ ಚಕ್ರವರ್ತಿ ಆನೂರು ಅನಂತಕೃಷ್ಣ ಶರ್ಮ ಅವರ ಶಿಷ್ಯ. ಖಂಜರಿ ನುಡಿಸಿದ ಎ. ವಿನೋದ್ ಶರ್ಮ ಅವರು ಗಣ್ಯ ಲಯವಾದ್ಯಗಾರ ಆನೂರು ಅನಂತಕಷ್ಣ ಶರ್ಮ ಅವರ ಮಗ ಹಾಗೂ ಶಿಷ್ಯ. ಇವರೆಲ್ಲರೂ ಕೂಡಿ ಕಛೇರಿಯನ್ನು ಯಶಸ್ವಿಗೊಳಿಸಿದರು.ಪಲ್ಲವಿಸಿದ ಪಲ್ಲವಿ

ಘನವಾದ ಕಾಂಬೋಧಿ ವರ್ಣದೊಂದಿಗೆ ಶಿಲ್ಪಾ ಶಶಿಧರ್ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು. ಎತ್ತಂಗಡೆಯನ್ನು ದ್ರುತಕಾಲದಲ್ಲಿ ತೆಗೆದುಕೊಂಡು ಕಾವು ತುಂಬಿದರು. ಸ್ವಾಮಿ ದೀಕ್ಷಿತರ ಶ್ರೀರಾಗದ `ಶ್ರೀ ಮೂಲಾಧಾರ ಚಕ್ರ~ವು ಮಾಮೂಲಿ ರಚನೆಗಳಿಗಿಂತ ಭಿನ್ನವಾಗಿದ್ದು ಸ್ವಾಗತಾರ್ಹ ಆಯ್ಕೆ.ಮುಂದೆ ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್ ಅವರ `ಇಕನನ್ನು ಬ್ರೋವರಾದ~ ಆರಿಸಿಕೊಂಡರು. ಷಹನ ರಾಗದ ಈ ಕೀರ್ತನೆಗೆ ಹಾಕಿದ ಸರ್ವಲಘುವಿನ ಸ್ವರ ಪುಂಜಗಳು ಕೇಳಲು ಹಿತವಾಗಿತ್ತು. ಕರ್ನಾಟಕ ಸಂಗೀತದ ರಕ್ತಿ ರಾಗಗಳಲ್ಲಿ ವರಾಳಿಯೂ ಒಂದು. ಅದನ್ನು ಶಿಲ್ಪಾ ಸ್ವಾದಿಷ್ಟವಾಗಿ ಹಾಡಿದರು. ಈ ರಾಗದ ರಚನೆಗಳಲ್ಲಿ  ಏಟಿಜನ್ಮ  ಪ್ರಮುಖವಾದುದು.ಈ ಕೀರ್ತನೆಯಲ್ಲಿ ತ್ಯಾಗರಾಜರು ಭಗವದನುಗ್ರಹಕ್ಕಾಗಿ ಸದಾ ಚಿಂತಿಸುತ್ತಾ, ನಾಯಕಾ-ನಾಯಿಕಾ ಭಾವದಿಂದ ಪ್ರಾರ್ಥಿಸುವುದನ್ನು ಕಾಣುತ್ತೇವೆ. ಮಧುರಾನುಭವವಿಲ್ಲದ ಜನ್ಮ ವ್ಯರ್ಥ. ಆ ಭಗವದನುಗ್ರಹವೇ ಸಾರ್ಥಕತೆ! ಆ ಅಂತರ್ಯಾಮಿಯಲ್ಲಿ `ಮಧುರಾನುಭವ ನೀಡು~ ಎಂದು ಭಿನ್ನವಿಸಿದ್ದಾರೆ. ಈ ಭಕ್ತಭಾವಕ್ಕೆ ಸಂಗೀತ ಭಾವ ಹಾಸುಹೊಕ್ಕಾಗಿ ಹೊಮ್ಮಿದೆ! ಹಾಡಿದ ಕಾಲ ಪ್ರಮಾಣವೂ ಸೂಕ್ತ! ಕಛೇರಿಗಳಲ್ಲಿ ಈ ನಡುವೆ ಮೈಸೂರು ಸದಾಶಿವರಾಯರ ಕೃತಿಗಳು ಹೆಚ್ಚಾಗಿ ಕೇಳುತ್ತಿಲ್ಲ ಎಂದು ಹಿರಿಯರು ಆಕ್ಷೇಪಿಸುವುದುಂಟು. ಇದಕ್ಕೆ ಅಪವಾದವಾಗಿ ಶಿಲ್ಪಾ, ರಾಯರ ಒಂದು ಆಹ್ಲಾದಕರ ಕೃತಿಯನ್ನು ಹಾಡಿದರು. ಗಂಭೀರನಾಟ ರಾಗದ ವನಜಾಕ್ಷವನ್ನು ಸ್ವಲ್ಪ ದ್ರುತ ಕಾಲದಲ್ಲಿ ನಿರೂಪಿಸಿದ್ದು ಸೂಕ್ತವಾಗೇ ಇತ್ತು. ಕಛೇರಿಯ ಮುಖ್ಯ ಭಾಗವಾಗಿ ಪಲ್ಲವಿಯನ್ನೇ ಆಯ್ದು ಶ್ಲಾಘನೆ ಪಡೆದರು.ವರ್ಣ ಹಾಡಿದ ರಾಗದಲ್ಲೇ ಪಲ್ಲವಿಯನ್ನೂ ಹಾಡುವುದು ಹಿಂದಿನಿಂದ ಬಂದ ಸಂಪ್ರದಾಯ. ಅದರಂತೆ ಶಿಲ್ಪಾ ಸಹ ಪಲ್ಲವಿಯನ್ನು (ವೇಲಾಯುಧ ಧರನೆ ಕುಮಾರನೆ) ಕಾಂಬೋಧಿಯಲ್ಲೇ ತೆಗೆದುಕೊಂಡರು. ಹಿತಮಿತವಾಗಿ ಆಲಾಪನೆ ಮಾಡಿ, ತಾನ ಹಾಡಿ, ಪಲ್ಲವಿಯನ್ನು ಮಿಶ್ರ ತ್ರಿಪುಟ ತಾಳದಲ್ಲಿ ಮಂಡಿಸಿದರು.

 

ಆದರೆ ರಾಗಮಾಲಿಕೆ ತೆಗೆದುಕೊಳ್ಳುವುದಕ್ಕೆ ಮೊದಲು ಇನ್ನೂ ಕೆಲವು ಆವರ್ತ ಮೂಲ ರಾಗದಲ್ಲೇ (ಕಾಂಬೋಧಿ) ಸ್ವರಪ್ರಸ್ತಾರ ಮಾಡಿದ್ದರೆ ಔಚಿತ್ಯಪೂರ್ಣವಾಗಿತ್ತು! ಆದರೂ ಭೌಳಿ, ಕನ್ನಡ, ಅಮೃತವರ್ಷಿಣಿ ರಾಗಗಳಲ್ಲಿ ಹಾಕಿದ ಸ್ವರ ಹಸನಾಗೇ ಹೊಮ್ಮಿತು ಎಂದು ಹೇಳಬೇಕು. ಮೃದಂಗದಲ್ಲಿ ಸುದರ್ಶನ್ ಚಕ್ರವರ್ತಿ ಹಾಗೂ ಖಂಜರಿಯಲ್ಲಿ ಎ. ವಿನೋದ ಶರ್ಮಾ ಹೊಂದಾಣಿಕೆಯಿಂದ ತನಿ ನುಡಿಸಿದರು.ಹಾಡಿದ್ದು ಒಂದೇ ದೇವರನಾಮವಾದರೂ ಅಪರೂಪವೂ-ಅರ್ಥಪೂರ್ಣವೂ ಆದ ಪುರಂದರ ದಾಸರ `ಅನ್ಯ ವೈದ್ಯರ ನಾನರಿಯೆ~ ಆರಿಸಿದ್ದು ಅಭಿನಂದನೀಯ. ಮುತ್ತಯ್ಯ ಭಾಗವತರ ಜನಪ್ರಿಯ ತಿಲ್ಲಾನದೊಂದಿಗೆ ಮಂಗಳಕ್ಕೆ ಸರಿದರು. ಉತ್ತಮ ಕಂಠ ಹಾಗೂ ಸದಭಿರುಚಿಯ ನಿರೂಪಣೆಗಳಿರುವ ಶಿಲ್ಪಾ ಶಶಿಧರ್ ಹೆಚ್ಚಿನ ಅನುಭವದಿಂದ ಉನ್ನತ ಸ್ಥಾನಕ್ಕೇರಬಹುದು. ಪಿಟೀಲಿನಲ್ಲಿ ಸಿಂಧು ಚೇತನ್ ಒತ್ತಾಸೆಯಾಗಿ ನುಡಿಸುತ್ತಾ, ಕಛೇರಿಯ ಉದ್ದಕ್ಕೂ ಬೆಂಬಲಿಸಿದರು.ವಿದುಷಿಯರಿಂದ ವಿಚಾರ ಸಂಕಿರಣ

ಒಬ್ಬನೇ ವಾಗ್ಗೇಯಕಾರನ ವಿವಿಧ ರಚನೆಗಳನ್ನು ವಿಶ್ಲೇಷಿಸುವ ಒಂದು ವಿಶೇಷ ಗೋಷ್ಠಿ ಭಾನುವಾರ ನಡೆಯಿತು. ಸ್ವರಮೂರ್ತಿ ವಿ.ಎನ್. ರಾವ್ ಮೆಮೋರಿಯಲ್ ಟ್ರಸ್ಟ್ ಮತ್ತು ಶ್ರೀರಾಮ ಲಲಿತಕಲಾ ಮಂದಿರಗಳ ಸಹಭಾಗಿತ್ವದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮೂವರು ಗಣ್ಯ ವಿದುಷಿಯರು ವೀಣೆ ಶೇಷಣ್ಣನವರ ರಚನೆಗಳ ಬಗೆಗೆ ಪ್ರಾತ್ಯಕ್ಷಿಕೆ ನೀಡಿದರು.ಡಾ. ಶೋಭನಾ ಸ್ವಾಮಿನಾಥನ್ ಶೇಷಣ್ಣನವರ ಸ್ವರಜತಿಗಳ ವೈಶಿಷ್ಟ್ಯಗಳನ್ನು ವಿವರಿಸಿದರು. ಅವರು ರಚಿಸಿರುವ 11 ಸ್ವರಜತಿಗಳು ಜನ್ಯ, ಜನಕರಾಗಗಳೆರಡರಲ್ಲೂ ಇದ್ದು, ಯಾವುದಕ್ಕೂ ಸಾಹಿತ್ಯ ಇಲ್ಲ. ಅವುಗಳಲ್ಲಿ ದಾಟು ಸ್ವರ ಪ್ರಯೋಗಗಳಿರುವುದಲ್ಲದೆ, ಒಂದೇ ಆವರ್ತದಲ್ಲಿ ಮೂರು ಸ್ಥಾಯಿಗಳಲ್ಲೂ ಸಂಚರಿಸುವ ಸ್ವರಪುಂಜಗಳಿವೆ ಎಂದರು. ವೀಣೆಯಲ್ಲಿ ಕಾಂಬೋಧಿ, ಖರಹರಪ್ರಿಯ, ಕಮಾಚ್ ಸ್ವರಜತಿಗಳನ್ನು ನುಡಿಸಿ ತೋರಿಸಿದರು.ಹಿರಿಯ ಗಾಯಕಿ ಡಾ. ಸುಕನ್ಯಾ ಪ್ರಭಾಕರ್, ಶೇಷಣ್ಣನವರ ಕೀರ್ತನೆಗಳನ್ನು ಕುರಿತು ಹಾಡಿ, ಮಾತನಾಡಿ ವಿಶ್ಲೇಷಿಸಿದರು. ಪರಿಚಿತ, ಅಪರೂಪ ರಾಗಗಳಲ್ಲಿ ಕೀರ್ತನೆಗಳಿದ್ದು, ಹೆಚ್ಚಿನವು ರೂಪಕ ತಾಳದಲ್ಲಿವೆ. ಕೆಲವು ನಿಂದಾಸ್ತುತಿಯಂತಿದ್ದರೆ, ಕೆಲವು ಸಂತೃಪ್ತ ಭಾವವನ್ನು ಸೂಚಿಸುತ್ತವೆ. ಉದಾಹರಣೆಯಾಗಿ (ಗಾನಮೂರ್ತೆ) ಶ್ರೀಪತೆ, ರಾಮನಿನ್ನು (ಆನಂದ ಭೈರವಿ) ಮುಂತಾದವುಗಳನ್ನು ಹಾಡಿ ತೋರಿಸಿದರು.ಶೇಷಣ್ಣನವರ ತಿಲ್ಲಾನಗಳು ಲೋಕ ಪ್ರಸಿದ್ಧ. 17 ತಿಲ್ಲಾನಗಳು ಘನರಾಗಗಳಲ್ಲದೆ, ಹಿಂದುಸ್ತಾನಿ ಪ್ರಭಾವಿತ ರಾಗಗಳಲ್ಲೂ ಇವೆ. ತ್ರಿಸ್ಥಾಯಿಗಳಲ್ಲೂ ಸಂಚಾರ ಇರುವ ತಿಲ್ಲಾನಗಳಲ್ಲಿ ಜಂಟೀ ಮತ್ತು ದಾಟು ವರಸೆ ಪ್ರಯೋಗಗಳು ವಿಶೇಷ ರಂಜಕತ್ವವನ್ನು ತಂದಿವೆ ಎಂದು ತಿಳಿಸಿದ ಎಂ.ಕೆ. ಸರಸ್ವತಿ ವೀಣೆಯಲ್ಲಿ ಹಿಂದುಸ್ತಾನಿ ಕಾಪಿ, ಕಾನಡ, ಬೇಹಾಗ್ ರಾಗಗಳ ತಿಲ್ಲಾನಗಳನ್ನು ನುಡಿಸಿ, ಪ್ರಖ್ಯಾತ ಜಿಂಜೋಟಿ ರಾಗದ ತಿಲ್ಲಾನದೊಂದಿಗೆ ಮುಕ್ತಾಯ ಮಾಡಿದರು.ಅಧ್ಯಕ್ಷತೆ ವಹಿಸಿದ್ದ ಡಿ. ಬಾಲಕೃಷ್ಣ, `ಶೇಷಣ್ಣನವರ ಸ್ವರಜತಿಗಳು ಸಭಾ ಗಾನಕ್ಕೂ ಸೂಕ್ತವಾದುದು. ವರ್ಣಗಳು ಬಹು ಕ್ಲಿಷ್ಟವಾದವು. ಕೀರ್ತನೆಗಳು ಸರಳವಾದವಾದರೂ ತಿಲ್ಲಾನಗಳಲ್ಲಿ ರಾಗದ ಬೆಳವಣಿಗೆ ಕ್ರಮವಾಗಿ ಅರಳಿದೆ~ ಎಂದು ಹೇಳಿ, ಪ್ರಾತ್ಯಕ್ಷಿಕೆಗಳ ಸಿಂಹಾವಲೋಕನ ಮಾಡಿದರು. ಆ ಮೊದಲು ಹಿರಿಯ ವೀಣಾ ವಿದುಷಿ ಡಾ. ಸುಮಾ ಸುಧೀಂದ್ರ ವಿಚಾರ ಸಂಕಿರಣವನ್ನು ದೀಪ ಹಚ್ಚಿ ಉದ್ಘಾಟಿಸಿ, ಶುಭ ಕೋರಿದರು. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ನೆರವಿನೊಂದಿಗೆ ಶ್ರೀರಾಮ ಲಲಿತಕಲಾ ಮಂದಿರದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.ಗುರುವಂದನಾ: ದಶವೀಣಾ

ಗುರು ಕೇಶವ ಸೂರ್ಯ ಮೆಮೋರಿಯಲ್ ಟ್ರಸ್ಟ್ ಆಶ್ರಯದಲ್ಲಿ ನಡೆದ ಗುರುವಂದನ, ದಶ ವೀಣಾದಲ್ಲಿ ಪ್ರಾರಂಭಕ್ಕೆ ದಿವಂಗತ ಆರ್.ಕೆ. ಸೂರ್ಯನಾರಾಯಣ ಅವರ ಹತ್ತು ಜನ ಶಿಷ್ಯೆ-ಶಿಷ್ಯರು ವೀಣೆ ನುಡಿಸಿದರು. ಪ್ರಾರಂಭಿಸಿದ ವೀಣೆ ಸುಬ್ಬಣ್ಣನವರ ಅಠಾಣ ವರ್ಣ ಕಾರ್ಯಕ್ರಮಕ್ಕೆ ಒಳ್ಳೆಯ ಚಾಲನೆ ನೀಡಿತು.     ಆರ್.ಕೆ. ಸೂರ್ಯನಾರಾಯಣ ಅವರ `ಉಚ್ಚಿಷ್ಟ ಗಣಪತಿ~ ಕೀರವಾಣಿ ರಾಗದಲ್ಲಿ ಹೊಮ್ಮಿ, ಮುತ್ತಯ್ಯ ಭಾಗವತರ ನಿರೋಷ್ಕಕ ರಾಗದ ಕೃತಿ ವಿನಿಕೆ ಮಾಡಿದರು. ರೇವತಿ ರಾಗದ ಸ್ವಲ್ಪ ಆಲಾಪನೆ ಮಾಡಿ, ಕಿರಿದಾಗಿ ತಾನ ನುಡಿಸಿ `ರಾಯರೆಂದರೆ ಗುರು ರಾಘವೇಂದ್ರ~ (ಆರ್.ಕೆ. ಸೂರ್ಯನಾರಾಯಣ ಅವರ ಕೃತಿ) ನಿರೂಪಿಸಿ, ಸ್ವಲ್ಪ ಸ್ವರವನ್ನೂ ಸೇರಿಸಿದರು. ಕೊನೆಯಲ್ಲಿ 3 ತಿಲ್ಲಾನಗಳನ್ನು ತೆಗೆದುಕೊಂಡರು.ಆರ್.ಕೆ.ಎಸ್. ಅವರ ದರ್ಬಾರಿ ಕಾನಡ, ವೀಣೆ ಶೇಷಣ್ಣನವರ ಬೇಹಾಗ್ ಹಾಗೂ ಸೂರ್ಯನಾರಾಯಣ ಅವರ ನಟಭೈರವಿ ತಿಲ್ಲಾನಗಳನ್ನು ನುಡಿಸಿ, ದಾಸರ `ಭಾಗ್ಯದ ಲಕ್ಷ್ಮೀ ಬಾರಮ್ಮ~ ನೊಂದಿಗೆ ಮುಕ್ತಾಯಗೊಳಿಸಿದರು.ಹತ್ತು ವೀಣೆಗಳನ್ನು ಒಟ್ಟಿಗೇ ಮೇಳೈಸುವುದು ಸುಲಭದ ಮಾತಲ್ಲ! ದಕ್ಷ ನಿರ್ದೇಶನ ಸಿಕ್ಕರೆ ದಶ ವೀಣೆ ಇನ್ನೂ ಹೆಚ್ಚು ಪ್ರಭಾವಕಾರಿ ಆಗಬಹುದು. ನಾಲ್ಕು ಲಯವಾದ್ಯಗಳಿದ್ದರೂ ಎಂದಿನ ಲಯ ಪಕ್ಕವಾದ್ಯವಾದ ಮೃದಂಗ ಇರಲಿಲ್ಲ! ಘಟದಲ್ಲಿ ಉಳ್ಳೂರು ಗಿರಿಧರ ಉಡುಪ, ತಬಲಾದಲ್ಲಿ ಮಧುಸೂದನ್, ಡ್ರಮ್ಸನಲ್ಲಿ ಅರುಣಕುಮಾರ್ ಹಾಗೂ ಕಾಂಗೋಸ್‌ನಲ್ಲಿ (ಆಫ್ರಿಕನ್ ಲಯವಾದ್ಯ) ಪ್ರಮಥ್ ಕಿರಣ್ ಉತ್ಸಾಹದಿಂದ ನುಡಿಸಿದರು.ಆದರೆ ಕೆಲವೊಮ್ಮೆ ಅಬ್ಬರ ಎನಿಸಿದರೂ, ಚೇತೋಹಾರಿಯಾಗಿತ್ತು. ಆರ್.ಕೆ. ಶಂಕರ್, ಮೀನಾಮೂರ್ತಿ, ಗೀತಾ ನವಲೆ, ಪುಷ್ಪಾ ರಾಜು, ಗಾಯತ್ರಿ ಸೂರ್ಯಕುಮಾರ್, ಶೀತಲ್, ರೇವತಿ ಕಾಮತ್, ವಿಜಯಲಕ್ಷ್ಮೀ, ಇಂದ್ರಾಣಿ ಲಕ್ಷ್ಮಣ್ ಮತ್ತು ನಾಗರತ್ನ ಅವರುಗಳು ಗುರುಭಕ್ತಿಯಿಂದ ವೀಣೆ ನುಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.