ಮಂಗಳವಾರ, ನವೆಂಬರ್ 19, 2019
29 °C

ಸಂಗೀತ ಸಾಗರವ ಈಜಿದ ಸುಖ

Published:
Updated:
ಸಂಗೀತ ಸಾಗರವ ಈಜಿದ ಸುಖ

ಅದು 2008ರ ಇಸವಿ. ಧಾರವಾಡದ ಕಲಾಭವನದಲ್ಲಿ ಸಂಗೀತ ಹಾಲ್ತೊರೆಯಂತೆ ಪ್ರವಹಿಸುತ್ತಿತ್ತು. ನನ್ನ ಗಿನ್ನೆಸ್ ದಾಖಲೆಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ತವರೂರಿನ ಸಾವಿರಾರು ಜನ ಪ್ರೀತಿಯಿಂದ ಆ ಸಭಾಂಗಣದಲ್ಲಿ ನೆರೆದಿದ್ದರು. ಅವರ ಜೊತೆಗೆ ಶಾಸ್ತ್ರೀಯ ಸಂಗೀತವನ್ನು ದಾಖಲೆಯ ಮಟ್ಟಕ್ಕೆ ಹಾಡಲಿದ್ದ ನನಗೆ ಶುಭ ಹಾರೈಸಲು ಹಲವು ಹಿರಿಯ ಸಂಗೀತಗಾರರೂ ಅಲ್ಲಿಗೆ ಬಂದಿದ್ದರು.ಕಾರ್ಯಕ್ರಮ ಶುರುವಾಯಿತು. ಹಾಡಿನ ನಡು ನಡುವೆ ಸುಧಾರಿಸಿಕೊಳ್ಳಲು ಸಿಗುತ್ತಿದ್ದದ್ದು ಕೇವಲ ಮೂರು ಸೆಕೆಂಡುಗಳಷ್ಟೇ ಆದರೂ, ಏನಾದರೂ ಅಂದು ಸಾಧಿಸಲೇಬೇಕೆಂಬ ಛಲದಿಂದ ಬಿಟ್ಟು ಬಿಡದೇ ಸಂಗೀತ ಸುಧೆ ಹರಿಸಿದ ಒಟ್ಟು ಸಮಯ 26 ಗಂಟೆ 12 ನಿಮಿಷಗಳು. ನನ್ನ ಪ್ರಯತ್ನಕ್ಕೆ ಸತತ ಚಪ್ಪಾಳೆ ತಟ್ಟಿ ಹುರಿದಂಬಿಸಿದ ಕ್ಷಣ ಮರೆಯಲಸಾಧ್ಯ.ತಂದೆ ಪಂ. ಮಾಧವ ಗುಡಿ ಕಿರಾಣಾ ಘರಾಣೆಯ ಶ್ರೇಷ್ಠ ಸಂಗೀತಗಾರನೆಂಬ ಕೀರ್ತಿ ಪಡೆದವರು. ನನ್ನ ಮೂವರು ಸಹೋದರಿಯರು, ಚಿಕ್ಕಪ್ಪ ಶೇಷಗಿರಿ ಗುಡಿ ಹಾಗೂ ಅತ್ತೆಯಂದಿರನ್ನು ಹಿಡಿದು ನಮ್ಮ ಕುಟುಂಬದ ಬಹುಪಾಲು ಸದಸ್ಯರೆಲ್ಲರೂ ಸಂಗೀತಗಾರರೇ. ಆದರೂ ನನಗೆ ಚಿಕ್ಕಂದಿನಲ್ಲಿ ಸಂಗೀತದ ಆಸಕ್ತಿ ಅಷ್ಟೇನೂ ತೀವ್ರವಾಗಿರಲಿಲ್ಲ. ತಂದೆಯ ಹಾಡುಗಾರಿಕೆಯನ್ನು ಕೇಳುತ್ತಿದ್ದುದನ್ನು ಬಿಟ್ಟರೆ, ಆಗಾಗ ಭಜನೆಯನ್ನೋ ಯಾವುದೋ ಒಂದು ಹಾಡನ್ನೋ ಹೇಳಿಸಿಕೊಳ್ಳುತ್ತಿದ್ದೆ ಅಷ್ಟೆ.ಎರಡೂವರೆ ವರ್ಷಕ್ಕೇ ಈಜು ಕಲಿತ ನನಗೆ ಮನೆಯಲ್ಲಿ ನಡೆಯುತ್ತಿದ್ದ ಸಂಗೀತದ ಆರಾಧನೆಗಿಂತಲೂ, ನೀರಿನ ಸಖ್ಯವೇ ಹೆಚ್ಚು ಅಪ್ಯಾಯಮಾನ. ಕೆಲವು ಹಾಡುಗಳನ್ನಷ್ಟೇ ಕಲಿತು ತಿರುಗುತ್ತಿದ್ದ ನನಗೆ ಕುಳಿತು ಸಂಗೀತ ಅಭ್ಯಾಸ ಮಾಡು ಎಂದು ತಂದೆ ಹೇಳುತ್ತಲೇ ಇರುತ್ತಿದ್ದರು. ಓದಿನಲ್ಲೂ ತುಸು ಹಿಂದೆ. ಪರೀಕ್ಷೆಯಲ್ಲಿ ಗಳಿಸುತ್ತಿದ್ದ ಅಂಕಗಳೂ ಅಷ್ಟಕಷ್ಟೆ. ಓದದಿದ್ದರೇನಂತೆ ಒಂದು ಹಾಡು ಹೇಳಪ್ಪ ಎಂದು ಶಿಕ್ಷಕರು ಆಗಾಗ್ಗೆ ಹಾಡಿಸುತ್ತಿದ್ದರು. ಆ ಪ್ರೋತ್ಸಾಹದ ಕಾರಣವೇ ಇರಬೇಕು ಸಂಗೀತವನ್ನು ಗಂಭೀರವಾಗಿ ಕಲಿಯಲು ನಿರ್ಧರಿಸಿದೆ.ಆಗ ನನಗೆ 8 ಅಥವಾ 9 ವರ್ಷ. ಮನೆಯೇ ಸಂಗೀತ ಶಾಲೆಯಾಗಿರುವಾಗ ಗುರುಗಳನ್ನು ಹುಡುಕುವ ಅಗತ್ಯವಿಲ್ಲವಲ್ಲ. ಗರಡಿ ಮನೆಯಲ್ಲಿ ದೇಹ ದಂಡಿಸಿ ಪಳಗಿಸುವಂತೆ ಅಪ್ಪ ಸಂಗೀತ ಕಲಿಸಲು ಆರಂಭಿಸಿದರು. ಆದರೂ ನನ್ನಲ್ಲಿ ಹುಡುಗಾಟಿಕೆ ಇದ್ದೇ ಇತ್ತು. ತಂದೆಯವರೊಂದಿಗೆ ಹೊರಗೆ ಹೋದಾಗ `ಅಂಥಾ ಕಲಾಕಾರರ ಮಗ ನೀನು. ನೀನೂ ಅವರಂತೆ ಬೆಳೆಯಬೇಕು' ಎಂದು ಜನರು ಎನ್ನುತ್ತಿದ್ದರು. ಅವರ ಮಾತುಗಳು ಮನದಲ್ಲಿ ಆಳವಾಗಿ ಬೇರೂರತೊಡಗಿದಂತೆ, `ಹೌದು. ನಾನೂ ಅಪ್ಪನಂತೆ ಏನನ್ನಾದರೂ ಸಾಧಿಸಲೇಬೇಕು' ಎಂದು ಪಣತೊಟ್ಟೆ. ಸಂಗೀತ ಅಭ್ಯಾಸದಲ್ಲಿ ಗಂಭೀರವಾಗಿ ತೊಡಗಿಕೊಂಡೆ. ಜವಾಬ್ದಾರಿಯ ಭಾವ ನನ್ನೊಳ ಹೊಕ್ಕು, ಕಠಿಣ ಅಭ್ಯಾಸದಲ್ಲಿ ಮಗ್ನನಾದೆ. ಅದಾಗಲೇ ನನ್ನ ಹತ್ತೊಂಬತ್ತು ವಸಂತಗಳು ಕಳೆದಿದ್ದವು.

ಗುರುವಿನ ಸನ್ನಿಧಿಯಲ್ಲಿ...

ಶಿಷ್ಯರಾಗಿ ಬಹಳ ವಿನಯವಂತರಾಗಿದ್ದ ನನ್ನ ತಂದೆ, ಗುರುಗಳಾದಾಗ ಅಷ್ಟೇ ಕಠಿಣವಾಗಿರುತ್ತಿದ್ದರು. ಗುರು ಭೀಮಸೇನ ಜೋಶಿಯವರಲ್ಲಿ ಕೊನೆಯವರೆಗೂ ಅಪಾರ ಶ್ರದ್ಧೆ ಹಾಗೂ ಭಕ್ತಿಯನ್ನಿಟ್ಟುಕೊಂಡಿದ್ದವರು. ತಂದೆಯ ರೂಪದಲ್ಲಿ ಗುರುಗಳು ಲಭಿಸಿದ್ದರಿಂದ ನಾನೂ ಗುರು- ಶಿಷ್ಯ ಪರಂಪರೆಯಲ್ಲೇ ಕಲಿಯಲು ಅವಕಾಶ ದೊರೆಯಿತು. ಬೆಳಗ್ಗೆ 3.45ಕ್ಕೆ ಏಳಲೇಬೇಕು.4 ಗಂಟೆಗೆ ಸರಿಯಾಗಿ ತಂಬೂರಿ ನುಡಿ ಅಪ್ಪನ ಕಿವಿಗೆ ಬೀಳಲೇಬೇಕಿತ್ತು. ನಾಲ್ಕಕ್ಕೆ ಶುರುವಾದ ತಾಲೀಮು ಮಧ್ಯಾಹ್ನ 11-12 ಗಂಟೆಯವರೆಗೂ ನಿರರ್ಗಳವಾಗಿ ಸಾಗುತ್ತಿತ್ತು. ನಂತರ ಊಟೋಪಚಾರ, ಪೂಜೆ- ಪುನಸ್ಕಾರಗಳು. ಸಂಜೆ 4 ಗಂಟೆಗೆ ಮತ್ತೆ ಅಭ್ಯಾಸ ಶುರು. ಅದಕ್ಕೆ ವಿರಾಮ ಸಿಗುತ್ತಿದ್ದದ್ದು ರಾತ್ರಿ 11-12 ಗಂಟೆಯ ಬಳಿಕವೇ. ಸ್ವರಗಳನ್ನು ಅತೀವವಾಗಿ ಪ್ರೀತಿಸುತ್ತಿದ್ದ ಅವರು ಒಂದೇ ಒಂದು ಸ್ವರವನ್ನು ತಪ್ಪಾಗಿ ಹಾಡಿದರೂ ಸಹಿಸುತ್ತಿರಲಿಲ್ಲ. ಕೈಗೆ ಸಿಕ್ಕಿದ್ದನ್ನು ನಮ್ಮತ್ತ ಬೀಸುತ್ತಿದ್ದರು. ಭಯ ಶ್ರದ್ಧೆಯನ್ನೂ ಕಲಿಸಿತು. ತಂದೆಯ ಶಿಸ್ತಿನ ಸಂಗೀತ ಪಾಠ ಸಾಗುತ್ತಿದ್ದರೆ, ಅಮ್ಮನದು ನಮ್ಮೆಲ್ಲರ ಊಟೋಪಚಾರದಲ್ಲಿ ಅಷ್ಟೇ ಅಚ್ಚುಕಟ್ಟು, ಪ್ರೀತಿ.ನನ್ನ ಮೊದಲ ಕಾರ್ಯಕ್ರಮ ನಡೆದದ್ದು ಧಾರವಾಡದ ಜ್ಞಾನಭಾರತಿಯಲ್ಲಿ. ಅಲ್ಲಿ ನನ್ನ ಪ್ರತಿಭೆಯನ್ನು ಪ್ರೋತ್ಸಾಹಿಸಿ ಅವಕಾಶ ನೀಡಿದವರು ವೆಂಕಟೇಶ ಮಣ್ಣೂರರು. ಅಂದು ಯಮನ್ ರಾಗದ ಮೂಲಕ ಆರಂಭಗೊಂಡ ಈ ಸಂಗೀತ ಪಯಣ ಇಂದಿಗೂ ಸಾಗುತ್ತಲಿದೆ. ಪಂ. ಭೀಮಸೇನ ಜೋಶಿಯವರ ಒತ್ತಾಯದಿಂದ 1995-96 ರಲ್ಲಿ ನಮ್ಮ ಇಡೀ ಕುಟುಂಬ ಮುಂಬೈನಲ್ಲಿ ನೆಲೆಸಿತು. ಸುಮಾರು 12 ವರ್ಷ ಅಲ್ಲೇ ನಮ್ಮ ವಾಸ. ಸಂಗೀತದ ವಾತಾವರಣ ಬಹಳವಿದ್ದುದರಿಂದ ನಮ್ಮ ಸಾಧನೆಗೆ ಮುಂಬೈ ಉತ್ತಮ ವೇದಿಕೆಯಾಯಿತು.ಧಾರವಾಡದಲ್ಲಿ ನಮಗೆ ಪರಿಚಯದವರು ಹೆಚ್ಚಾಗಿ ಇದ್ದುದರಿಂದ ಅವರು ನಮ್ಮ ಮನೆಗೆ ಬಂದು ಹೋಗುವುದು, ನಮ್ಮನ್ನು ಅವರ ಮನೆಗೆ ಕರೆದುಕೊಂಡು ಹೋಗುವುದು ನಿರಂತರವಾಗಿ ನಡೆಯುತ್ತಿತ್ತು. ಸ್ನೇಹಿತರು ಬಂಧುಗಳು ಇದ್ದಲ್ಲಿ ಹೆಚ್ಚಿನ ಸಾಧನೆಗೆ ಅವಕಾಶವಿರಲಾರದು. ಆ ದೃಷ್ಟಿಯಿಂದಲೂ ಮುಂಬೈ ವಾಸ ನಮಗೆ ಲಾಭವೇ ಆಯಿತು. ಭೀಮಸೇನ ಜೋಶಿ, ಯಶವಂತ ಬುವಾ ಜೋಶಿ, ಜಸ್‌ರಾಜ್ ಹಾಗೂ ಇನ್ನಿತರ ಖ್ಯಾತನಾಮರ ಕಾರ್ಯಕ್ರಮಗಳನ್ನು ನೇರವಾಗಿ ಕೇಳಿ, ಕಲಿಯುವ ಭಾಗ್ಯ ನನ್ನದಾಗಿತ್ತು.ಕಿರಾಣಾ ಘರಾಣ ಪದ್ಧತಿಯ ಆಳವಾದ ಜ್ಞಾನ ನನಗೆ ಸಿದ್ಧಿಸಬೇಕೆಂಬ ಆಸೆ ತಂದೆಯವರದು. ಅದಕ್ಕೆಂದು 1998-99ರಲ್ಲಿ ಫಿರೋಜ್ ದಸ್ತೂರ್ ಬಳಿ ನನ್ನನ್ನು ಕಳುಹಿಸಿದರು. ಆದರೆ ಅವರಿಗೆ ಮನೆಯಲ್ಲಿ ಹೇಳಿಕೊಡುವಷ್ಟು ಸಮಯ ಲಭ್ಯವಾಗುತ್ತಿರಲಿಲ್ಲವಾದ್ದರಿಂದ ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಮೂರು ವರ್ಷ ಅಭ್ಯಾಸ ಮಾಡಿದೆ. ಅಲ್ಲಿ ಕಲಿತ ಬಳಿಕ ಕಿರಾಣಾ ಘರಾಣದಲ್ಲಿ 997 ಕಾರ್ಯಕ್ರಮಗಳನ್ನು ನೀಡಿದ್ದೇನೆ. ಕಾಶಿ, ಬದ್ರಿನಾಥ, ಬನಾರಸ್, ಮಧ್ಯಪ್ರದೇಶ, ಸಿಂಗಪುರ್‌ಗಳಲ್ಲಿ ನನ್ನ ಪ್ರತಿಭೆಯ ಅನಾವರಣಕ್ಕೆ ಅವಕಾಶ ಸಿಕ್ಕಿದೆ.ಇಷ್ಟೆಲ್ಲಾ ಕಾರ್ಯಕ್ರಮಗಳನ್ನು ನೀಡಿದ್ದರೂ ಸಾಧನೆ ಬಗ್ಗೆ ಅತೃಪ್ತಿ. ಬಾಲ್ಯದಲ್ಲಿ ಕಲಿತ ಈಜು ಮತ್ತೆ ಮತ್ತೆ ಕಾಡಿದ್ದಿದೆ. ಈಜಿನಲ್ಲಿ ಗಿನ್ನೆಸ್ ದಾಖಲೆ ಮಾಡಬೇಕೆಂಬ ಹಂಬಲ. ತಂದೆ ಬಳಿ ಚರ್ಚಿಸಿದಾಗ, ಈಜುವುದೇನಿದ್ದರೂ ಸಂಗೀತದಲ್ಲೇ ಈಜು ಎಂದರು. ತಂದೆ ಮತ್ತು ಭೀಮಸೇನ ಜೋಶಿಯವರು ದಿನಕ್ಕೆ 15 ತಾಸು ಅಭ್ಯಾಸ ನಡೆಸುತ್ತಿದ್ದವರು. ಅದೇ ನನ್ನ ಗಿನ್ನೆಸ್ ದಾಖಲೆಯ ಬಯಕೆಗೆ ಸ್ಫೂರ್ತಿಯಾಯಿತು.`ಹಲವು ದಶಕಗಳಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ದುಡಿಯುತ್ತಿದ್ದೇನೆ. ಆದರೆ ಈವರೆಗೂ ಶಾಸ್ತ್ರೀಯ ಸಂಗೀತವನ್ನು ದಾಖಲೆಯ ಮಟ್ಟದಲ್ಲಿ ಹಾಡಲು ಯಾರೂ ಪ್ರಯತ್ನಿಸಿರಲಿಲ್ಲ. ಆದರೆ ನನ್ನ ಪುತ್ರ ಅಂಥದ್ದೊಂದು ಸವಾಲನ್ನು ಸ್ವೀಕರಿಸಿರುವುದು ಹೆಮ್ಮೆಯ ವಿಷಯ. ಇದೇ ಒಂದು ಅದ್ಭುತವಾದ ಸಾಧನೆ' ಎಂದು ತಂದೆ ಪ್ರತಿಕ್ರಿಯಿಸಿದ್ದು ನನ್ನ ಪಾಲಿನ ದೊಡ್ಡ ಪ್ರಶಸ್ತಿ.ಪತ್ನಿ ಲಕ್ಷ್ಮಿ ಗುಡಿ, ಮಗ ನಿಷಾದ್ ಹಾಗೂ ತಾಯಿಯೊಂದಿಗೆ ಬೆಂಗಳೂರಿನಲ್ಲಿ ಸಂಗೀತಮಯ ಬದುಕು ಸಾಗುತ್ತಿದೆ. ಪತ್ನಿಯೂ ಸಂಗೀತಗಾರ್ತಿ. ಮಗನಲ್ಲಿ ಸಂಗೀತ ಪರಂಪರೆಯನ್ನು ಮುಂದುವರಿಸುವ ಗುಣಗಳು ಕಾಣಿಸುತ್ತಿವೆ. ಆ ನಂಬಿಕೆಯೂ ನನಗಿದೆ.ಸಂಗೀತ ಚಿಕಿತ್ಸೆ...

ಅಂದು ದಾಖಲೆಗಾಗಿ ಹಾಡಿದಾಗಲೂ ನನಗೆ ಆಯಾಸವಾಗಿರಲಿಲ್ಲ. ದೇಹದಲ್ಲಿ ಸಣ್ಣ ಪುಟ್ಟ ನೋವುಗಳು ಕಾಣಿಸಿಕೊಂಡಾಗ ಔಷಧಿಗಳನ್ನು ತೆಗೆದುಕೊಳ್ಳದೇ ಸಂಗೀತದ ಮುಖಾಂತರವೇ ಅದನ್ನು ಪರಿಹರಿಸಿಕೊಳ್ಳುತ್ತೇನೆ. ಸಂಗೀತಕ್ಕೆ ನೋವನ್ನು ಶಮನ ಮಾಡುವ ಶಕ್ತಿ ಖಂಡಿತವಾಗಿ ಇದೆ, ಆದ್ದರಿಂದ ಇದನ್ನು ಚಿಕಿತ್ಸೆಗೆ ಬಳಸಿಕೊಳ್ಳಬೇಕು ಎಂದೆನಿಸಿದೆ. ಹೀಗಾಗಿ ಸಂಗೀತ ಚಿಕಿತ್ಸೆಯ ಅಧ್ಯಯನ ಮಾಡುತ್ತಿದ್ದೇನೆ. ಜೊತೆಗೆ `ಸ್ವರಮಹಾಯಾಗ' ಎಂಬ ಸಂಗೀತ ಶಾಲೆಯನ್ನು ಆರಂಭಿಸುವ ಯೋಜನೆ ನನ್ನದು. ತಂದೆ ಹೆಸರಿನಲ್ಲಿ ಸಂಶೋಧನ ಕೇಂದ್ರ ಸ್ಥಾಪಿಸುವ ಗುರಿಯೂ ಇದೆ.

 

ಪ್ರತಿಕ್ರಿಯಿಸಿ (+)