ಸಂಗೀತ ಸ್ವರಲೋಕದಲಿ ತನ್ಮಯಿ

7
ನನ್ನ ಕಥೆ

ಸಂಗೀತ ಸ್ವರಲೋಕದಲಿ ತನ್ಮಯಿ

Published:
Updated:
ಸಂಗೀತ ಸ್ವರಲೋಕದಲಿ ತನ್ಮಯಿ

ರ್ನಾಟಕ ಶಾಸ್ತ್ರೀಯ ಸಂಗೀತದ ಗಾಯಕಿಯಾಗಿದ್ದ ಅಜ್ಜಿ ಕೃಷ್ಣವೇಣಿ ತಮ್ಮ ಸಂಗೀತದ ವಿದ್ಯೆಯನ್ನು ತಮ್ಮೆಲ್ಲಾ ಮಕ್ಕಳಿಗೂ ಧಾರೆಯೆರೆದು ಅವರನ್ನು ಸಂಗೀತಗಾರರನ್ನಾಗಿ ಮಾಡಿದ್ದರು. ಅಂಥದ್ದರಲ್ಲಿ ರಜೆಗೆಂದು ಆಕೆಯ ಮನೆಗೆ ತೆರಳುತ್ತಿದ್ದ ತನ್ನ ಪುಟಾಣಿ ಮೊಮ್ಮಕ್ಕಳಿಗೂ ಸಂಗೀತದ ರುಚಿಯುಣಿಸುವ ಆಸೆಯಿರುವುದಿಲ್ಲವೇ? ಹಾಗಾಗಿ ರಜಾ ದಿನಗಳಲ್ಲಿ ಅಜ್ಜಿಯಿಂದ ನಮಗೆಲ್ಲ ಸಂಗೀತದ ಪಾಠ ನಡೆಯುತ್ತಿತ್ತು.

ಹಾಗಾಗಿ ನಾವು ಆಕೆಯ ಮನೆಯಲ್ಲಿ ಸೇರಿದಾಗಲೆಲ್ಲ ಮೂರು ತಲೆಮಾರಿನ ಸಂಗೀತಗಾರರ ಸಭೆಯೇ ನಡೆಯುತ್ತಿತ್ತು. ಯಾವ ಮಾತು ಕತೆಯಾಗಲೀ, ಚರ್ಚೆಗಳಾಗಲೀ ಸಂಗೀತದ ಹೊರತಾಗಿರುತ್ತಿರಲಿಲ್ಲ. ದೊಡ್ಡವರನ್ನು ಹಿಂಬಾಲಿಸಿದ ನಮ್ಮೆಲ್ಲರಿಗೂ ಅದೇ ಗೀಳು. ಹಾಗಾಗಿ ನಾವು ಸಂಗೀತ ಕಛೇರಿ ನಡೆಸಿಕೊಡುವ ಆಟವನ್ನೇ ಆಡುತ್ತಿದ್ದೆವು. ಆ ಆಟ ಪಾಠಗಳೆಲ್ಲ ಇದೀಗ ಪ್ರೌಢಿಮೆಯ ಹಂತ ತಲುಪಿ, ಸಂಗೀತ ನಮ್ಮ ಜೀವನಕ್ಕೊಂದು ಒಳ್ಳೆಯ ಸಂಸ್ಕಾರ ಹಾಗೂ ವಿಶೇಷಣವನ್ನು ಕಟ್ಟಿಕೊಟ್ಟಿದೆ.ನಾನು ಹುಟ್ಟಿದ್ದು ಅರಸೀಕೆರೆ ಬಳಿಯಿರುವ ಹೊಳಲ್ಕೆರೆಯಲ್ಲಿ. ಅಪ್ಪ ಕೃಷ್ಣ ಮೂರ್ತಿ. ಅಮ್ಮ ರಾಜಲಕ್ಷ್ಮೀ, ಅವರು ಸಂಗೀತಗಾರ್ತಿ. ಏಳನೇ ತರಗತಿಯವರೆಗೂ ಹೊಳಲ್ಕೆರೆಯಲ್ಲಿ ಓದಿದ ನಂತರ ನನ್ನ ಓದು ಹಾಗೂ ಸಂಗೀತಕ್ಕೆ ಅನುಕೂಲವಾಗಲೆಂದು ನಾವು ಹಾಸನಕ್ಕೆ ವರ್ಗವಾದೆವು. ನನ್ನ ಹೈಸ್ಕೂಲು ಶಿಕ್ಷಣ ಮುಗಿದ ಮೇಲೆ ಬೆಂಗಳೂರಿನಲ್ಲಿ ನಮ್ಮ ವಾಸ ಆರಂಭವಾಯಿತು. ಹಾಗಾಗಿ ನನಗೆ ಹಳ್ಳಿ ಹಾಗೂ ಪಟ್ಟಣ ವಾಸಗಳೆರಡದ್ದೂ ಅನುಭವವಿದೆ. ತಲೆಮಾರುಗಳಿಂದ ಸಂಗೀತ ನಮ್ಮ ಮನೆತನದ ಅವಿಭಾಜ್ಯ ಅಂಗವೇ ಆಗಿದೆ.ಅಮ್ಮ, ಅವರ ಅಕ್ಕ ತಂಗಿಯರು ಹಾಗೂ ಅವರ ಅಣ್ಣ ಎಲ್ಲರೂ ಸಂಗೀತಗಾರರೇ. ಹಾಗಾಗಿ ಸಂಗೀತ ಕಲಿಕೆಗೆ ಅಮ್ಮನೇ ಮೊದಲ ಗುರು. ನಂತರ ಅಜ್ಜಿ ಬಳಿಯೂ ಕಲಿಯುತ್ತಿದ್ದೆ. ಆದರೆ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿಯಲಾರಂಭಿಸಿದ್ದು ಚಿಕ್ಕಮ್ಮ ರಾಜೇಶ್ವರಿ ಭಟ್ ಅವರ ಬಳಿ. ಸುಮಾರು 10 ವರ್ಷಗಳ ಕಾಲ ಅವರಲ್ಲೆೀ ಕಲಿತೆ. ವಯಲಿನ್ ವಾದಕಿಯಾಗಿರುವ ಅಮ್ಮ ನನಗೆ ಸಂಗೀತ ಕಲಿಕೆಯಲ್ಲಿರಬೇಕಾದ ಶಿಸ್ತನ್ನು ಕಲಿಸಿದ್ದರು.

ನಾಲ್ಕನೇ ತರಗತಿಯಲ್ಲಿದ್ದಾಗಿನಿಂದಲೂ ಮುಂಜಾನೆ ಮೂರು ಗಂಟೆಗಳ ಕಾಲ ಶಿಸ್ತಿನಿಂದ ಅಭ್ಯಾಸ ಮಾಡುವುದನ್ನು ಅಮ್ಮ ರೂಢಿ ಮಾಡಿಸಿದ್ದರು. ಆಗೆಲ್ಲ ನನಗೆ ಗಾಯಕಿಯಾಗಬೇಕು, ಅದಕ್ಕಾಗಿ ಸಂಗೀತವನ್ನು ಸರಿಯಾಗಿ ಕಲಿಯಬೇಕು ಎಂಬ ಅರಿವು ಇದ್ದಿರಲಿಲ್ಲ. ಆದರೆ ಅಮ್ಮನ ಒತ್ತಾಸೆಗೆ ಕಲಿಯುತ್ತಿದ್ದ ನಾನು ಅರಿವಿನ ಪರಿಧಿಯನ್ನು ಮುಟ್ಟುವ ಮೊದಲೇ ಸಂಗೀತ ಸಾಗರದಲ್ಲಿ ಈಜಲಾರಂಭಿಸಿದ್ದೆ. ಅಪ್ಪ ಸಂಗೀತವನ್ನು ಕಲಿತಿಲ್ಲವಾದರೂ ನನ್ನ ಕಲಿಕೆಗೆ, ಬೆಳವಣಿಗೆಗೆ ಬೆನ್ನೆಲುಬಾಗಿ ನಿಂತವರು.

ಹೊಳಲ್ಕೆರೆಯಲ್ಲಿದ್ದಾಗಿನಿಂದಲೂ ಸಂಗೀತ ಸ್ಪರ್ಧೆಗಳಿಗೆ, ಕಾರ್ಯಕ್ರಮಗಳಿಗೆ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಬರುತ್ತಿದ್ದರು. ಹಾಗಾಗಿ ಯಾರಾದರೂ ಮುಂದೆ ನೀನೇನಾಗ್ತೀಯಾ ಅಂತ ಕೇಳಿದಾಗಲೆಲ್ಲ ನನಗೆ ಬಾಂಬೆ ಜಯಶ್ರೀಯವರಂತೆ ವೇದಿಕೆಯ ಮೇಲೆ ಕೂತು ಹಾಡುವ ಗಾಯಕಿಯಾಗಬೇಕು ಎನ್ನಿಸುತ್ತಿತ್ತೇ ಹೊರತು ವೈದ್ಯೆ ಅಥವಾ ಎಂಜಿನಿಯರ್ ಆಗಬೇಕು ಎಂಬ ಉತ್ತರ ತಲೆಯಲ್ಲಿ ಹೊಳೆದದ್ದೇ ಇಲ್ಲ. ನನ್ನ ಹಾಡನ್ನು ಕೇಳಿ ಮೆಚ್ಚಿಕೊಂಡವರು ‘ಚೆನ್ನಾಗಿ ಹಾಡ್ತಾಳೆ’ ಎನ್ನುತ್ತಿದ್ದ ಪ್ರಶಂಸನೀಯ ಮಾತುಗಳು ನನ್ನನ್ನು ಸಂಗೀತದಲ್ಲೆೀ ಮುಂದುವರೆಯಲು ಪ್ರೇರೇಪಿಸುತ್ತಿದ್ದವು.ಅಪ್ಪ ಅಮ್ಮ ಇಬ್ಬರಿಗೂ ನನ್ನ ಸಂಗೀತವೆಂದರೆ ಅಚ್ಚು ಮೆಚ್ಚು. ಹಾಗೆಂದು ಅತಿಯಾಗಿ ಹೊಗಳಿದ್ದಿಲ್ಲ. ಆದರೆ ನಿನ್ನ ಸಂಗೀತದ ಮೊದಲ ಅಭಿಮಾನಿಗಳು ನಾವೇ ಎಂದು ಹೇಳುವುದನ್ನು ಮಾತ್ರ ಮರೆಯುವುದಿಲ್ಲ. ನನ್ನ ಅಪ್ಪ ಅಮ್ಮನಿಗೆ ನಾನೊಬ್ಬಳೇ ಮಗಳಾದ್ದರಿಂದ ಅವರು ಹರಿಸುವ ಪ್ರೀತಿಯ ಹೊಳೆ ಹಿರಿದು. ನನಗಿದ್ದದ್ದು ಸಂಗೀತವನ್ನೇ ವೃತ್ತಿಯನ್ನಾಗಿ ತೆಗೆದುಕೊಳ್ಳಬೇಕೆಂಬ ಆಸೆ. ಅಪ್ಪ ಅಮ್ಮನಿಗೆ ಅದು ಒಪ್ಪಿಗೆಯಾಗಿದ್ದರೂ ಸಣ್ಣನೆ ಆತಂಕ.

ಭವಿಷ್ಯದಲ್ಲಿ ತೊಂದರೆಯಾದೀತು ಎಂದು, ಓದಿನಲ್ಲಿ ಚೂಟಿಯಾಗಿದ್ದ ನನ್ನನ್ನು ಎಂಜಿನಿಯರಿಂಗ್್ ನಲ್ಲಿಯೂ ಮುಂದುವರೆಯಲು ಸಲಹೆಯನ್ನಿತ್ತರು. ಎರಡನ್ನೂ ಸಂಭಾಳಿಸುವುದು ನಿನಗೆ ಕಷ್ಟದ ವಿಷಯವಲ್ಲ ಎಂದು ಹುರಿದುಂಬಿಸಿದ್ದರು. ಓದಿಗೆ ಸಂಗೀತವಾಗಲೀ ಸಂಗೀತ ಓದಿಗಾಗಲೀ ಎಂದೂ ತೊಂದರೆ ಮಾಡಿದ್ದಿಲ್ಲ. ಪರೀಕ್ಷಾ ಸಮಯದಲ್ಲಂತೂ ಹೆಚ್ಚು ಸಂಗೀತಾಭ್ಯಾಸ ಮಾಡಿದಾಗಲೇ ನನಗೆ ಓದಲು ಆರಾಮ ಎನಿಸುತ್ತಿತ್ತು. ಅದು ಶಾಲಾ ಪರೀಕ್ಷಾ ದಿನಗಳಿಂದಲೂ ರೂಢಿ ಮಾಡಿಕೊಂಡಿದ್ದೇನೆ. ಹೀಗೆ ಎಂಜಿನಿಯರಿಂಗ್ ಹಾಗೂ ಸಂಗೀತದ ಪಯಣ ಒಟ್ಟೊಟ್ಟಿಗೇ ನಡೆಯುತ್ತಿದೆ. ಸದ್ಯಕ್ಕೆ ಅಲ್ಕಾಟೆಲ್- ಲ್ಯೂಸೆಂಟ್ ಎಂಬ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ತಾಂತ್ರಿಕ ಕ್ಷೇತ್ರ ಹಾಗೂ ಸಂಗೀತದ ಸಂಯೋಗ ಅದ್ಭುತವಾದದ್ದು.ನಾನು ಹೊಳಲ್ಕೆರೆ ಬಿಟ್ಟು ಹಾಸನಕ್ಕೆ ಬಂದಾಗ ಕೈ ತುಂಬಾ ಅವಕಾಶಗಳು ಸಿಗಲಾರಂಭಿಸಿದ್ದವು. ಶಾಲೆಯಲ್ಲೂ ನನ್ನ ಸಂಗೀತವನ್ನು ಪೋಷಿಸುತ್ತಿದ್ದುದರಿಂದ ನಿರಾಳವಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಿ, ಬೇರೆಯವರಿಗೆ ಪೈಪೋಟಿ ನೀಡುವಷ್ಟು ಬೆಳೆದಿದ್ದೆ. ಸಂಗೀತ ಸ್ಪರ್ಧೆಗಳಿಗೆ, ಕಾರ್ಯಕ್ರಮಗಳಿಗೆ ತೆರಳುತ್ತಿದ್ದರಿಂದ ಶಾಲೆಗೆ ಗೈರುಹಾಜರಾಗುವುದು ಸಾಮಾನ್ಯವಾಗಿತ್ತು. ವಿದ್ಯಾಭ್ಯಾಸದಲ್ಲೂ ಉನ್ನತ ಶ್ರೇಣಿಯಲ್ಲಿದ್ದದ್ದರಿಂದ ಪ್ರಾಂಶುಪಾಲರು ನನಗೆ ಸಹಕಾರ ನೀಡುತ್ತಿದ್ದರು. ಮೊದಲ ಕಾರ್ಯಕ್ರಮ ನೀಡಿದ್ದು ಹಾಸನದಲ್ಲಿ, 7ನೇ ತರಗತಿಯಲ್ಲಿ ಓದುತ್ತಿದ್ದಾಗ. ಪ್ರತಿಭಾ ದರ್ಶನ ಎನ್ನುವ ಆ ಕಾರ್ಯಕ್ರಮದಲ್ಲಿ ಎರಡು ತಾಸುಗಳ ಕಾಲ, ಮೋಹನ ರಾಗದಲ್ಲಿ ‘ಎಂದುಕು ಭಾಗ’ ಎಂಬ ಕೃತಿಯನ್ನು ಹಾಡಿದ್ದೆ.

8ನೇ ತರಗತಿಯಲ್ಲಿದ್ದಾಗ  ಕೆ ಎಸ್ ಡಿ ಸಿ ಯವರು ಡಿಡಿ ವಾಹಿನಿಯಲ್ಲಿ ನಡೆಸುತ್ತಿದ್ದ ನಿತ್ಯೋತ್ಸವ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದಾಗ ನನ್ನ ಪ್ರತಿಭೆಯ ಬಗ್ಗೆ ನನ್ನೊಳಗೆ ಭರವಸೆ ಹೆಚ್ಚಿತು. ಏಳನೇ ತರಗತಿವರೆಗೂ ಅಮ್ಮನಿಗೋಸ್ಕರ ಅಭ್ಯಾಸ ಮಾಡುತ್ತಿದ್ದವಳು ಆನಂತರ ನಾನಾಗಲೇ ಇಷ್ಟಪಟ್ಟು ಅಭ್ಯಾಸದಲ್ಲಿ ತೊಡಗಿಕೊಳ್ಳಲಾರಂಭಿಸಿದೆ. ಅಷ್ಟೊತ್ತಿಗಾಗಲೇ ಬೇರೆ ಬೇರೆ ಊರುಗಳಲ್ಲಿ ಕಛೇರಿಗಳನ್ನು ನೀಡುತ್ತಿದ್ದ ನನಗೆ ಬೆಂಗಳೂರಿಗೆ ಬಂದ ಮೇಲಂತೂ ಕನಸುಗಳಿಗೆ ರೆಕ್ಕೆ ಮೂಡಿದವು.ಅಮ್ಮನ ಅಣ್ಣ ಖ್ಯಾತ ವಯಲಿನ್ ವಾದಕರಾದ ವಿದ್ವಾನ್ ವಿಠ್ಠಲ್ ರಾಮಮೂರ್ತಿ. ಅವರ ಬಳಿಯೂ ಹೆಚ್ಚುವರಿ ಸಂಗೀತವನ್ನು ಕಲಿತ ನನಗೆ ಮೂರು ವರ್ಷಗಳಿಂದ ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ವಿದ್ವಾನ್ ಟಿ.ಎನ್. ಕೃಷ್ಣ ಅವರ ಬಳಿ ಹೆಚ್ಚಿನ ಸಂಗೀತಾಭ್ಯಾಸ ಮಾಡುವ ಸದವಕಾಶವೂ ದೊರೆತಿದೆ. ಹಿಂದೆಲ್ಲ ಅವರ ಕಾರ್ಯಕ್ರಮಗಳನ್ನು ಕೇಳಿ ಪುಳಕಿತಳಾಗಿದ್ದ ನನಗೆ ಅವರನ್ನು ಹತ್ತಿರದಿಂದ ನೋಡುವ, ಅವರ ಸಂಗೀತವನ್ನು ಕೇಳುವ ಅವಕಾಶ ದೊರೆತಿದ್ದು ನನ್ನ ಅಜ್ಜಿ ಮನೆಯಲ್ಲಿ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಾಗಾರದಲ್ಲಿ.

ಅತಿಥಿಗಳಾಗಿ ಆಗಮಿಸಿದ್ದ ಅವರು ನನ್ನ ಹಾಡನ್ನು ಕೇಳಿದ್ದರು. ಅವರಲ್ಲಿ ಶಿಷ್ಯತ್ವ ಕೇಳಿಕೊಂಡಾಗ ‘ಚೆನ್ನಾಗಿ ಹಾಡ್ತಿ. ಪಾಠಕ್ಕೆ ಬಾ’ ಎಂದು ಕರೆದೇ ಬಿಟ್ಟಿದ್ದರು. ನನಗದು ಅಪ್ರತಿಮ ಗಳಿಗೆ. ಅಷ್ಟೊಂದು ಹೆಸರುವಾಸಿ ಹಾಗೂ ನಿಪುಣ ಕಲಾವಿದರ ಶಿಷ್ಯೆಯಾಗುವೆನೆಂಬ ಸಂಭ್ರಮ. ಗುರುಗಳದ್ದು ಚೆನೈನಲ್ಲಿ ವಾಸ. ವಾರವಿಡೀ ಕಚೇರಿಯಲ್ಲಿ ದುಡಿಯುವ ನಾನು ವಾರಾಂತ್ಯದಲ್ಲಿ ಚೆನೈಗೆ ಹೋಗಿ ಪಾಠ ಮಾಡಿಸಿಕೊಂಡು ಬರಲು ತುದಿಗಾಲಲ್ಲಿ ಕಾಯುತ್ತಿರುತ್ತೇನೆ. ಸಂಗೀತ ನನ್ನ ದಣಿವಾರಿಸುವ ಧಾತುವಾಗಿರುವುದರಿಂದ ವಿರಾಮ ಬೇಕೆನ್ನಿಸುವುದೇ ಇಲ್ಲ.ಇವತ್ತಿಗೂ ಅದನ್ನೊಮ್ಮೆ ಹಾಡಿ ತೋರಿಸು ಎನ್ನುವ ನನ್ನಜ್ಜಿ, ನನ್ನೆಲ್ಲಾ ಗುರುಗಳು ನನ್ನ ಸಂಗೀತ ಸಾಧನೆಗೆ ಸ್ಫೂರ್ತಿ. ನನಗೆ ಸಂಗೀತದ ಅಭಿರುಚಿಯನ್ನು ಶಾಸ್ತ್ರೀಯ ಹಾಗೂ ಸುಗಮ ಸಂಗೀತವೆಂದು ವಿಂಗಡಿಸಲು ಇಷ್ಟವಿಲ್ಲ. ಮೊದಲಿನಿಂದಲೂ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೇ ಹಾಡಿಕೊಂಡು ಬಂದಿರುವುದರಿಂದ ಇದರತ್ತ ಒಲವು ಹೆಚ್ಚು. ಆದರೆ ಭಾವಗೀತೆಗಳನ್ನು ಹಾಡುವುದರಲ್ಲೂ ನನಗೆ ಆಸಕ್ತಿ.

ನನ್ನ ಸಾಧನೆಗೆ ಎಂ ಎಸ್ ಸುಬ್ಬಲಕ್ಷ್ಮೀ ಪ್ರಶಸ್ತಿ, ಅನನ್ಯ ಪ್ರತಿಭೆ, ಆಲ್ ಇಂಡಿಯಾ ರೇಡಿಯೊ ಸ್ಪರ್ಧೆಯ ಪ್ರಶಸ್ತಿ, ಪ್ರತಿಭಾಕಾಂಕ್ಷಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ನೀಡುವ ಬಾಲ ಹಾಗೂ ಕಿಶೋರ ಪ್ರತಿಭಾ ಪುರಸ್ಕಾರಗಳು ಸಂದಿವೆ.

ದಿನ ನಿತ್ಯದ ನಿರಂತರ ಅಭ್ಯಾಸ ಆಕಾಶವಾಣಿಯ ಬಿ ಹೈ ಶ್ರೇಣಿಯ ಕಲಾವಿದೆಯಾಗಿ ಹೊರಹೊಮ್ಮಲು ಸಹಕಾರ ನೀಡಿತು. ಟಿ.ವಿ, ರೇಡಿಯೊ ಸೇರಿದಂತೆ ಕರ್ನಾಟಕದ ಎಲ್ಲಾ ಭಾಗಗಳಲ್ಲಿ, ಮುಂಬೈ, ಚೆನೈ ಹಾಗೂ ವಿಜಯವಾಡದಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದು, ಸಂಗೀತ ಪಯಣ ಮುಂದುವರೆಯುತ್ತಲೇ ಇದೆ. ನನಗಿರುವ ಆಸೆಯೆಂದರೆ ಇಷ್ಟು ಅದ್ಭುತವಾಗಿರುವ ನಮ್ಮ ಶಾಸ್ತ್ರೀಯ ಸಂಗೀತವನ್ನು ಎಲ್ಲೆಡೆ ಪಸರಿಸಬೇಕು. ವಿಶ್ವ ಮಟ್ಟದಲ್ಲಿ ಅದಕ್ಕೆ ಇನ್ನೂ ಒಳ್ಳೆಯ ಮಾನ್ಯತೆ ಸಿಗಬೇಕಾಗಿದೆ. ಅದರ ನಿಟ್ಟಿನತ್ತ ಕಾರ್ಯ ಕೈಗೊಳ್ಳುವ ಆಸೆಯಿದೆ.

-ನಿರೂಪಣೆ -ರೂಪಶ್ರೀ ಕಲ್ಲಿಗನೂರ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry