ಭಾನುವಾರ, ಏಪ್ರಿಲ್ 18, 2021
30 °C

ಸಂಗ್ರಹಿಸುವುದು ಮನೆ ಕಸ, ಬದುಕು ವಿಧಿಯ ಕಾಲ ಕಸ.

ಕೆ.ಎನ್.ಚಂದ್ರಯ್ಯ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಪ್ರತಿನಿತ್ಯ ಕಸದೊಂದಿಗೆ ಬಿದ್ದು ಒದ್ದಾಡಿದರೂ ಇವರ ಬದುಕು ಹಸನಾಗಲಿಲ್ಲ. ಬಾಳಿನಲ್ಲಿ ಬೆಳಕು ಕಾಣಲಿಲ್ಲ...ಬೆಳಿಗ್ಗೆ ಎದ್ದು ಗಾಡಿಗೆ ಕಟ್ಟಿರುವ ಗಂಟೆಯನ್ನು ಬಾರಿಸುತ್ತಾ ಮನೆ, ಮನೆಗೆ ತೆರಳಿ ತಳ್ಳುಗಾಡಿಗಳೊಂದಿಗೆ ಕಸ ಸಂಗ್ರಹಿಸುವವರ ಬದುಕು ಮೂರಾಬಟ್ಟೆಯಾಗಿದೆ. ಬೆಳಿಗ್ಗೆ ಎದ್ದರೆ ತಳ್ಳುಗಾಡಿಯೊಂದಿಗೆ ನಗರದ ಪ್ರತಿ ಮನೆಗೆ ಕಾಲ್ನಡಿಗೆಯಲ್ಲಿ ತೆರಳಿ ಡಬ್ಬಗಳಲ್ಲಿ ಕಸ ಸಂಗ್ರಹಿಸಿ ವಿಲೇವಾರಿ ಮಾಡುವುದು ಇವರ ನಿತ್ಯದ ಕಾಯಕ.ಕಳೆದ 28 ವರ್ಷಗಳಿಂದ ಇದೇ ಕೆಲಸ ನಿರ್ವಹಿಸುತ್ತಿದ್ದರೂ ಇವರುಗಳಿಗೆ ಜೀವನ ಭದ್ರತೆ ಇಲ್ಲದಂತಾಗಿದೆ. ಯಾರು ಕಸ ವಿಲೇವಾರಿಗೆ ಟೆಂಡರ್ ಪಡೆಯುತ್ತಾರೋ ಅವರ ಕೈಕೆಳಗೆ ಕೆಲಸಮಾಡಿ ತಿಂಗಳಿಗೆ ಸಿಗುವ ಸ್ವಲ್ಪ ಹಣದಲ್ಲಿ ಸಂಸಾರವನ್ನು ಸಾಗಿಸಬೇಕಾದ ಪರಿಸ್ಥಿತಿ ಇವರದಾಗಿದೆ. ನಗರದ ಬಹತೇಕ ಜನರು ಮನೆಬಾಗಿಲಿಗೆ ತೆರಳಿ ಕಸ ಸಂಗ್ರಹಿಸುವವರಿಗೆ ಉತ್ತಮ ಸಹಕಾರ ನೀಡುತ್ತಾರೆ. ಕೆಲವರು ನಮ್ಮ ಮನೆಯಲ್ಲಿ ಕಸ ಹೆಚ್ಚು ಸಂಗ್ರಹವಾಗೋಲ್ಲ ಅಲ್ಪಸ್ವಲ್ಪ ಕಸವನ್ನು ಒಲೆಗೆ ಹಾಕುತ್ತೇವೆ ಎನ್ನುತ್ತಾರೆ.ಮತ್ತೆ ಕೆಲವರು ನಮ್ಮ ಮನೆಯಲ್ಲಿರುವ ಜನರೇ ಸಂಗ್ರಹವಾಗುವ ಕಸವನ್ನು ಕಸ ಸಂಗ್ರಹಿಸುವ ಪಾಯಿಂಟ್‌ಗೆ ಹಾಕಿ ಬರುತ್ತೇವೆ. ಹೀಗಿರುವಾಗ ಹಣವನ್ನೇಕೆ ಕೊಡಬೇಕೆಂದು ಕೊಂಕು ಮಾತು ಆಡುತ್ತಾರೆ.ನಗರದಲ್ಲಿ ಸ್ವಚ್ಛಟ್ರಸ್ಟ್ ಆರಂಭವಾದಾಗ ಸಮವಸ್ತ್ರದೊಂದಿಗೆ ಕಸ ಸಂಗ್ರಹಣೆ ಕೆಲಸ ಮಾಡುತ್ತಿದ್ದಾರೆ. ಸ್ವಚ್ಛ ಟ್ರಸ್ಟ್ ತನ್ನ ಈ ಕಾರ್ಯವನ್ನು ನಗರಸಭೆಗೆ ವರ್ಗಾಯಿಸಿದಾಗ ಇವರಿಗೆ ವೃತ್ತಿಯಲ್ಲಿ ಅಭದ್ರತೆ ಕಾಡಿತು. ಕೆಲಸ ನೀಡಲು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ನಗರಸಭೆ ಇವರಿಗೆ ಕೆಲಸ ಕೊಟ್ಟರೂ ಭವಿಷ್ಯದ ಜುಟ್ಟನ್ನು ಮಾತ್ರ ಗುತ್ತಿಗೆದಾರರಿಗೆ ಒಪ್ಪಿಸಿತು.ನಗರಸಭೆಯಲ್ಲಿರುವ 31 ವಾರ್ಡ್‌ಗಳಲ್ಲಿ ಒಟ್ಟು 35 ಮಂದಿ ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಕೆಲಸ ಬೆಳಿಗ್ಗೆ 5.30ಕ್ಕೆ ಪ್ರಾರಂಭ. ಮಧ್ಯಾಹ್ನವಾದರೂ ಕೆಲಸ ಮುಗಿಯುವುದಿಲ್ಲ. ಎಲ್ಲ ಕಾಲದಲ್ಲೂ ಇವರ ಸೇವೆ ಬೇಕೆಬೇಕು.‘ನೋಡಿ ಸ್ವಾಮಿ ನಾವು ಓದಿಲ್ಲ. ನಮ್ಮ ಮಕ್ಕಳು ನಮ್ಮಂತೆ ಆಗಬಾರದು ಅಂತ ಅವ್ರನ್ನು ಓದಿಸ್ತಿದ್ದೀವಿ. ಕಸವನ್ನೇ ನಂಬಿ ಬದುಕ್ತಿದ್ದೀವಿ. ಜನ ಯಾವ್ದ ಯಾವ್ದಕ್ಕೋ ಎಷ್ಟೆಷ್ಟೋ ಖರ್ಚು ಮಾಡ್ತಾರೆ. ನಮ್ಗೆ ತಿಂಗ್ಳಿಗೆ 15 ರೂಪಾಯಿ ಕೊಡ್ಲೀಕೆ ಹಿಂದೇಟು ಹಾಕ್ತಾರೆ. ಇದು ನ್ಯಾಯಾನಾ?’ ಎಂದು ಪ್ರಶ್ನಿಸುತ್ತಾರೆ ಮಲ್ಲಂದೂರು ರಸ್ತೆಯಲ್ಲಿ ಕಸ ಸಂಗ್ರಹಿಸುವ ಮಂಜಮ್ಮ.‘ತಿಂಗಳಿಗೆ ಬರೋದು 2500 ರೂಪಾಯಿ ಸಂಬಳ. ನಾನು 8 ವರ್ಷದಿಂದ ಇದೇ ಕೆಲ್ಸ ಮಾಡ್ತಿದ್ದೀನಿ. ಬಾಡಿಗೆ, ದಿನಸಿ ಖರ್ಚು ಏರ್ತಾನೇ ಇದೆ. ಆದ್ರೆ ಸಂಬ್ಳ ಮಾತ್ರ ಹಾಗೇ ನಿಂತಿದೆ’ ಎಂದು ಅವರು ಅಲವತ್ತುಕೊಂಡರು.ಮಂಗಳವಾರ ವಿಶ್ವ ಮಹಿಳಾ ದಿನಾಚರಣೆ. ಭಾಷಣಗಳಲ್ಲಿ ಮಹಿಳೆಯರನ್ನು ಹೊಗಳಿ ಹಾಡುವ ಮಂದಿ ತಮ್ಮ ಮನೆ ಬಾಗಿಲಿಗೆ ಬಂದು ಪ್ರತಿದಿನ ಕಸ ಸಂಗ್ರಹಿಸುವ ಹೆಂಗಸರನ್ನು ಗೌರವದಿಂದ ಕಾಣುವ, ಅವರ ಕಷ್ಟಸುಖಕ್ಕೆ ಸ್ಪಂದಿಸುವ ಮನೋಭಾವ ಬೆಳೆಸಿಕೊಂಡರೆ ಎಷ್ಟು ಚೆನ್ನ?

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.