ಶುಕ್ರವಾರ, ಜುಲೈ 30, 2021
28 °C

`ಸಂಗ್ರಹ ಇದೆ; ಸಂತ್ರಸ್ತರಿಗೆ ತಲುಪಿಸುವುದೇ ಕಷ್ಟ'

ಪ್ರಕಾಶ ಕುಗ್ವೆ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ:  `ಆಹಾರ, ನೀರು, ಔಷಧ ಎಲ್ಲವೂ ಇದೆ. ಆದರೆ, ಅದನ್ನು ಪ್ರವಾಹ ಸಂತ್ರಸ್ತರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ರಸ್ತೆ ಮೇಲೆ ಕಲ್ಲು-ಬಂಡೆ, ಮಣ್ಣಿನ ರಾಶಿ ಎದ್ದು ನಿಂತಿದೆ. 18 ಸಂಪರ್ಕ ಸೇತುವೆಗಳು ಕುಸಿದಿವೆ. ಹೆಲಿಕಾಪ್ಟರ್ ನಿಂತಲ್ಲೇ ನಿಂತಿದೆ. ಕಡಿದಾದ ಕಣಿವೆ, ಎತ್ತರದ ಶಿಖರಗಳ ಮಧ್ಯೆ ಕಾಲಿಡುವುದು ಕಷ್ಟವಾಗುತ್ತಿದೆ....'- ಇದು ಉತ್ತರಾಖಂಡದ ಅತ್ಯಂತ ಎತ್ತರದ ಜಿಲ್ಲೆ ಪಿತೋರ್‌ಗಡ್‌ನ ಡರ್ಚುಲ ಪ್ರದೇಶದಲ್ಲಿ ಪ್ರಳಯರೂಪಿ ಪ್ರವಾಹದಿಂದ ಸಂತ್ರಸ್ತರಾದವರನ್ನು ಸಂತೈಸಲು ತೆರಳಿದ್ದ ರಾಷ್ಟ್ರೀಯ ರೆಡ್‌ಕ್ರಾಸ್ ತಂಡದ ಸದಸ್ಯ ಡಾ.ವಿ.ಎಲ್.ಎಸ್.ಕುಮಾರ್ ಅವರ ನೋವಿನ ನುಡಿ.ಡರ್ಚುಲ, ನೇಪಾಳ-ಚೀನಾ ಗಡಿಯಂಚಿನಲ್ಲಿರುವ ಗಿರಿಶಿಖರಗಳ ಪ್ರದೇಶ. ಹಿಮಾಲಯದ ದಕ್ಷಿಣಭಾಗದಲ್ಲಿರುವ ಈ ಕಣಿವೆ ಪ್ರದೇಶದಲ್ಲಿ 10-12 ಹಳ್ಳಿಗಳ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನ ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. ಇವರಿಗೆ ಆಹಾರ, ನೀರು, ಔಷಧಗಳನ್ನು ಸಕಾಲಕ್ಕೆ ತಲುಪಿಸಲು ರೆಡ್‌ಕ್ರಾಸ್ ಸಂಸ್ಥೆ ಸದಸ್ಯರು ಸ್ಥಳೀಯ ಆಡಳಿತದೊಂದಿಗೆ ಹರಸಾಹಸ ಪಡುತ್ತಿದ್ದಾರೆ.`ಸೋಮವಾರ ಇಲ್ಲಿ ಮಳೆ ಕಡಿಮೆಯಾಗಿತ್ತು. ಐದು ಜನರ ನಮ್ಮ ತಂಡ ಆಹಾರ, ನೀರು, ಔಷಧದ ಜತೆ ಹೊದೆಯುವ ರಗ್ಗು, ಅಡುಗೆ ಪಾತ್ರೆಗಳೊಂದಿಗೆ 10 ಕಿ.ಮೀ. ದೂರ ನಡೆದು ಕಣಿವೆ ಪ್ರದೇಶದ ಐದಾರು ಹಳ್ಳಿಗಳಿಗೆ ಹೋಗಿ ಅವುಗಳನ್ನೆಲ್ಲ ನೀಡಿದೆವು. ಈ ಪ್ರಯಾಣ ನಿಜಕ್ಕೂ  ಭಯಾನಕ.ಎಲ್ಲ ದಾರಿಗಳು ಬಂದ್ ಆಗಿದ್ದರಿಂದ ಶಿಖರದಲ್ಲಿ ದಾರಿ ಮಾಡಿಕೊಂಡು ನಡೆದವು. ಹಾದಿಯುದ್ದಕ್ಕೂ ಬಂಡೆಕಲ್ಲುಗಳು ಪ್ರಪಾತಕ್ಕೆ ಉರುಳುತ್ತಿದ್ದವು. ಸ್ವಲ್ಪ ಆಯತಪ್ಪಿದರೂ ಕಲ್ಲುಗಳೊಂದಿಗೆ ನಾವೂ ಪ್ರಪಾತಕ್ಕೆ ಬೀಳುವ ಸಾಧ್ಯತೆ ಇತ್ತು' ಎಂದು `ಪ್ರಜಾವಾಣಿ' ಜತೆ ಅನುಭವ ಬಿಚ್ಚಿಟ್ಟರು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸದಸ್ಯರೂ ಆಗಿರುವ ಡಾ.ಕುಮಾರ್.`ರೆಡ್‌ಕ್ರಾಸ್‌ನ ಮೂರು ತಂಡ ಇಲ್ಲಿಗೆ ಆಗಮಿಸಿದ್ದು, ಒಂದು ಉತ್ತರಕಾಶಿ, ಇನ್ನೊಂದು ರುದ್ರಪ್ರಯಾಗ್, ಮತ್ತೊಂದು ಪಿತೋರ್‌ಗಡ್‌ನಲ್ಲಿ ಕಾರ್ಯಾಚರಣೆ ನಡೆಸಿದೆ. ನಮ್ಮ ತಂಡದಲ್ಲಿ ಐವರು ಸದಸ್ಯರಿದ್ದು, ಕರ್ನಾಟಕದಿಂದ ನಾನು ಇದ್ದೇನೆ. ಪ್ರವಾಹ ಪೀಡಿತರಿಗೆ ಆಹಾರ, ನೀರು, ತಾತ್ಕಾಲಿಕ ವಸತಿ, ಆರೋಗ್ಯ, ಪ್ರಥಮ ಚಿಕಿತ್ಸೆ ಒದಗಿಸುವುದರ ಜತೆಗೆ ಒಟ್ಟು ನಷ್ಟ ಅಂದಾಜಿಸುವುದು ನಮ್ಮ ತಂಡದ ಉದ್ದೇಶವಾಗಿದೆ' ಎನ್ನುತ್ತಾರೆ ಈ ಹಿಂದೆ ವಿಪತ್ತು ನಿರ್ವಹಣೆಯಲ್ಲಿ ಅಸ್ಸಾಂ, ಓಡಿಶಾ, ಉತ್ತರಪ್ರದೇಶ ರಾಜ್ಯಗಳಲ್ಲಿ ಪರಿಹಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ಡಾ.ಕುಮಾರ್.ಪ್ರವಾಹ ಸಂತ್ರಸ್ತ ಡರ್ಚುಲ ಪ್ರದೇಶ ಕಾಳಿ ನದಿ ದಡದಲ್ಲಿದೆ. ಇಲ್ಲಿಂದ ನೇಪಾಳಕ್ಕೆ ಕೇವಲ ಮೂರು ಕಿ.ಮೀ. ದೂರ. ಕೈಲಾಸ-ಮಾನಸಕ್ಕೆ ಇಲ್ಲಿಂದ 60 ಕಿ.ಮೀ. ಸಾಗಬೇಕು. ಇಲ್ಲಿ ಕಾಳಿ ನದಿ ತನ್ನ ನದಿಪಾತ್ರವನ್ನು ಮೀರಿ ಸುಮಾರು 10 ಕಿ.ಮೀ. ಅಗಲವಾಗಿ ಹರಿದಿದೆ.ಇಲ್ಲಿ ತೊಂದರೆಗೆ ಒಳಗಾದವರು ಸ್ಥಳೀಯರೇ ಹೊರತು ಪ್ರವಾಸಿಗರಲ್ಲ. ಜೂನ್ 17ರಂದು ಇಲ್ಲಿ ಒಂದೇ ದಿವಸ 50 ಸೆಂ.ಮೀ. ಮಳೆಯಾಗಿದೆ. ಹಿಂದೆಂದೂ ಈ ರೀತಿ ಮಳೆಯಾಗಿಲ್ಲ ಎಂದು ಇಲ್ಲಿನ ಜನ ಹೇಳುತ್ತಾರೆ. ಮಂಗಳವಾರದಿಂದ ಇಲ್ಲಿ ಮತ್ತೆ ಮಳೆ ಜಾಸ್ತಿಯಾಗಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಅವರು.ಹೆಲಿಕಾಪ್ಟರ್, ನಿಲ್ದಾಣದಲ್ಲಿ ಬಂದು ನಿಂತಿದ್ದರೂ ಪ್ರತಿಕೂಲ ಹವಾಮಾನದಿಂದಾಗಿ ಹಾರುತ್ತಿಲ್ಲ. ಗಿರಿಶಿಖರಗಳೇ ಹೆಚ್ಚಿರುವುದರಿಂದ ಪ್ರವಾಹ ಪೀಡಿತರನ್ನು ಸಂತೈಸುವ ಕಾರ್ಯಾಚರಣೆ ಸ್ಥಳೀಯ ಆಡಳಿತಕ್ಕೆ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.