ಸಂಘಟನೆಗೆ ಒತ್ತು ಕೊಡಿ: ಕೆ.ಎಸ್.ಈಶ್ವರಪ್ಪ

ಶುಕ್ರವಾರ, ಜೂಲೈ 19, 2019
28 °C

ಸಂಘಟನೆಗೆ ಒತ್ತು ಕೊಡಿ: ಕೆ.ಎಸ್.ಈಶ್ವರಪ್ಪ

Published:
Updated:

ಕಡೂರು:  ಆಂತರಿಕ ಪ್ರಜಾಪ್ರಭುತ್ವದ ಮೂಲಕ ಕಾರ್ಯಕರ್ತರಿಗೆ ಅಧಿಕಾರ ನೀಡುವ ಭಾರತೀಯ ಜನತಾ ಪಕ್ಷದ ನೀತಿಯಿಂದ ಕಾರ್ಯಕರ್ತರ ಕೊರತೆ ಪಕ್ಷಕ್ಕೆ ಎದುರಾಗಿಲ್ಲ. ಸದ್ಯದಲ್ಲಿಯೇ ಎದುರಾಗಲಿರುವ ಲೋಕಸಭಾ ಚುನಾವಣೆಗೆ ಸಂಘಟನೆ ಬಲಪಡಿಸುವಲ್ಲಿ ಕಾರ್ಯಕರ್ತರು ತೊಡಗಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕರೆ ನೀಡಿದರು.ಕಡೂರು ತಾಲ್ಲೂಕು ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಹಜರತ್ ಜರೀನಾ ಬೀಬಿ ದರ್ಗಾದ ಶಾದಿಮಹಲ್‌ನಲ್ಲಿ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.`ಬೂತ್‌ಮಟ್ಟದಲ್ಲಿ ಕಾರ್ಯಕರ್ತರನ್ನು ಆಯ್ಕೆ ಮಾಡಿ, ಸಂಘಟನೆಗೆ ಒತ್ತು ನೀಡಿದ ಬಳಿಕ ಅವರನ್ನು ಪದಾಧಿಕಾರಿಯಾಗಿ ಮಾಡುವ ನೀತಿ ವಿಶಿಷ್ಟ ಪದ್ಧತಿಯ ದ್ಯೋತಕವಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸದ್ಯ ನೂತನ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ನಮ್ಮ ದೋಷಗಳನ್ನು ಸರಿಪಡಿಸಿಕೊಂಡು ಮುಂದಿನ ಹೋರಾಟಕ್ಕೆ ಸನ್ನದ್ಧರಾಗುತ್ತೇವೆ. ನಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡಾಗಲೇ ಪರಿಪೂರ್ಣ ವ್ಯಕ್ತಿತ್ವ ಸಾಧ್ಯ. ಲೋಕಸಭಾ ಚುನಾವಣೆ ವೇಳೆ ಪಕ್ಷ ತೊರೆದಿರುವ ಎಲ್ಲರೂ ಮರಳಿ ಬರುವ ಆಶಾಭಾವನೆ ಇದೆ' ಎಂದು ನುಡಿದರು.ಲೋಕಸಭಾ ಚುನಾವಣೆಗೆ ನರೇಂದ್ರಮೋದಿಯವರ ನೇತೃತ್ವದಲ್ಲಿ ಸ್ಪರ್ಧೆಗಳಿಗೆ ಇಳಿಯಲು ದೇಶದೆಲ್ಲೆಡೆ ಇರುವ ನರೇಂದ್ರಮೋದಿಯವರ ಮೇಲಿನ ಜನಪ್ರೀತಿ ಮತ್ತು ಅಭಿಮಾನವೇ ಕಾರಣ. ಗುಜರಾತ್‌ಗೆ ಪ್ರಗತಿಯ ಶಿಖರ ತೋರಿದ ಮೋದಿಯವರ ನೇತೃತ್ವ ಇಂದು ಅಗತ್ಯ.

 

ಅಟಲ್‌ಅವರು  ಪ್ರಪಂಚದಾದ್ಯಂತ ಗಳಿಸಿದ ಅಭಿಮಾನ ಮತ್ತು ಅವರ ಅಧಿಕಾರದ ಅವಧಿಯಲ್ಲಿ ದೇಶದ ಅಭಿವೃದ್ಧಿ ಎಲ್ಲರಿಗೂ ತಿಳಿದಿದೆ. ದೇಶ ಎನ್‌ಡಿಎ ಅಧಿಕಾರದ ಅವಧಿಯಲ್ಲಿ ಯಾರ ಮುಂದೂ ಕೈಚಾಚಲಿಲ್ಲ. ಆದರೆ ದಶಕದ ಕಾಲ ನಡೆದ ಯುಪಿಎ ಸರ್ಕಾರದ ಅವಧಿ ಬರೀ ಹಗರಣ ಮತ್ತು ಆರ್ಥಿಕ ಕುಸಿತದ ನಡುವೆ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಟೀಕಿಸಿದರು.ಉತ್ತರದ 5 ರಾಜ್ಯಗಳಲ್ಲಿ ಸದ್ಯದಲ್ಲಿಯೇ ಎದುರಾಗಲಿರುವ ವಿಧಾನಸಭಾ ಚುನಾವಣೆಗಳು ನಿರ್ಣಾಯಕವಾಗಲಿದ್ದು ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ. ಲೋಕಸಭಾ ಚುನಾವಣೆಯ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಗುಂಪುಗಾರಿಕೆಯಿಂದ ಪತನವಾಗಲಿದೆ ಎಂದು ಭವಿಷ್ಯ ನುಡಿದರು.ಬಿಜೆಪಿ ಮುಖಂಡ ಬೀರೂರು ದೇವರಾಜ್ ಮಾತನಾಡಿ,ಪಕ್ಷದ ಸಂಘಟನೆ ಭದ್ರವಾಗಿದ್ದು ಲೋಕಸಭಾ ಚುನಾವಣೆಯನ್ನು ಕಾರ್ಯಕರ್ತರ ಬಲದಿಂದಲೇ ಎದುರಿಸೋಣ ಎಂದು ಕರೆ ನೀಡಿದರೆ, ನೂತನ ಅಧ್ಯಕ್ಷ ಕೆ.ಎಚ್.ಶಂಕರ್ ಮಾತನಾಡಿ ಎಲ್ಲರ ಸಹಕಾರದಿಂದ ಪಕ್ಷ ಬಲಗೊಳಿಸಲು ಯತ್ನ ನಡೆಸುವುದಾಗಿ ತಿಳಿಸಿದರು.ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್.ಸಿ.ಕಲ್ಮರುಡಪ್ಪ, ಪದ್ಮಾಚಂದ್ರಪ್ಪ, ಶಶಿರೇಖಾ ಸುರೇಶ್, ಮಾಲಿನಿ ಬಾಯಿ ರಾಜಾನಾಯ್ಕ, ಮುಖಂಡರಾದ ಬಿ.ಎಲ್.ಶ್ರೀನಿವಾಸ್, ಎಪಿಎಂಸಿ ಅಧ್ಯಕ್ಷ ಲಕ್ಷ್ಮಣನಾಯ್ಕ, ಪುರಸಭೆ ಸದಸ್ಯರಾದ ಎಸ್.ಎಸ್.ದೇವರಾಜ್, ಎನ್.ಎಂ.ನಾಗರಾಜ್, ರಾಜೇಶ್, ಸವಿತಾ ರಮೇಶ್, ತಾ.ಪಂ. ಸದಸ್ಯರಾದ ಶಿವಕುಮಾರ್, ಎ.ಇ.ರತ್ನಾ, ಸುನಿತಾ ಜಗದೀಶ್ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry