ಗುರುವಾರ , ಆಗಸ್ಟ್ 5, 2021
23 °C

ಸಂಘಟನೆಯಿಂದ ಮಾತ್ರ ಹಕ್ಕು ಪಡೆಯಲು ಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ಕಾರ್ಮಿಕರು ಸಂಘಟಿತರಾಗುವುದರಿಂದ ಮಾತ್ರ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದು ಸಿವಿಲ್‌ ನ್ಯಾಯಾಧೀಶ ಮಲ್ಲಿಕಾರ್ಜುನ ಅಂಬ್ಲಿ ಅಭಿಪ್ರಾಯಪಟ್ಟರು.ಆದಿದ್ರಾವಿಡ ಕಾಲೋನಿಯಲ್ಲಿ ಭಾನುವಾರ ಕಾರ್ಮಿಕ ದಿನಾಚರಣೆಯ ಅಂಗವಾಗಿ ನಡೆದ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ದೇಶದಲ್ಲಿ ಶೇ. 90ರಷ್ಟು ಅಸಂಘಟಿತ ಕಾರ್ಮಿಕರಿದ್ದಾರೆ. ಸಂಘಟಿತರಾಗದೆ ಯಾವ ಸೌಲಭ್ಯಗಳೂ ಸಿಗುವುದಿಲ್ಲ. ಇಂದಿನ ವ್ಯವಸ್ಥೆಯಲ್ಲಿ ಸೌಲಭ್ಯಗಳಿಗಾಗಿ ಹೋರಾಟ ಅನಿವಾರ್ಯವಾಗಿದ್ದು, ಕಾರ್ಮಿಕರು ಸಂಘಟಿತರಾಗುವ ಅಗತ್ಯ ಇದೆ.

 

ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರಾಗಿದ್ದು, ಅವುಗಳ ಬಗ್ಗೆ ಅರಿವು ಇರಬೇಕು. ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯಗಳಿದ್ದರೂ, ಕಾನೂನು ತಿಳಿವಳಿಕೆ ಇಲ್ಲದೆ ಅವುಗಳಿಂದ ವಂಚಿತರಾಗುತ್ತಿದ್ದಾರೆ. ಅಜ್ಞಾನ, ಬಡತನಗಳಿಂದ ಇನ್ನೂ ಬಾಲಕಾರ್ಮಿಕ ಪದ್ಧತಿ ಜೀವಂತವಾಗಿದೆ. ಶಿಕ್ಷಣ ಪಡೆಯುವುದರಿಂದ ಮಾತ್ರ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದರು.ಕಾರ್ಮಿಕ ನಿರೀಕ್ಷಕಿ ಎಚ್‌.ಕೆ. ಗಿರಿಜಾ ಮಾತನಾಡಿ, ಇಂಗ್ಲೆಂಡ್‌ನಲ್ಲಿ ಆದ ಕೈಗಾರಿಕಾ ಕ್ರಾಂತಿಯ ಫಲವಾಗಿ ಕಾರ್ಮಿಕರ ವರ್ಗ ಹುಟ್ಟಿಕೊಂಡಿತು. ಅಲ್ಲಿ ಕಾರ್ಮಿಕರಿಗೆ ನೀಡುತ್ತಿದ್ದ ಒತ್ತಡ, ಕಿರುಕುಳಗಳಿಂದ ಹೋರಾಟಗಳು ಪ್ರಾರಂಭವಾದವು. ಸಂಘಟಿತ ವಲಯಕ್ಕೆ ಎಲ್ಲಾ ಸೌಲಭ್ಯಗಳಿದ್ದು, ಅಸಂಘಟಿತರು ಇನ್ನೂ ಹಿಂದಿದ್ದಾರೆ.ಸರ್ಕಾರ ಈಗ ಆರು ಅಸಂಘಟಿತ ವಲಯಗಳಿಗೆ ಪಿಂಚಣಿ ಯೋಜನೆ ರೂಪಿಸಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಕಟ್ಟಡ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯಗಳಿದ್ದು, ಸಂಘಟನೆಯಲ್ಲಿ ಸದಸ್ಯತ್ವ ಪಡೆಯಬೇಕು ಎಂದು ಸಲಹೆ ನೀಡಿದರು.`ದುಡಿಯುವ ಮಹಿಳೆ ಮತ್ತು ಬಾಲಕಾರ್ಮಿಕರು~ ವಿಷಯ ಕುರಿತು ವಕೀಲ ಎಸ್‌. ವೇದಮೂರ್ತಿ ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಎಂ. ಶಿವಶಂಕರ್‌ ಅಧ್ಯಕ್ಷತೆ ವಹಿಸಿದ್ದರು.ಪ.ಪಂ. ಸದಸ್ಯ ಕೆ.ಸಿ. ರಮೇಶ್‌, ಸಹಾಯಕ ಸರ್ಕಾರಿ ಅಭಿಯೋಜಕ ಶಂಶೀರ್‌ ಅಲಿಖಾನ್‌, ವಕೀಲರ ಸಂಘದ ಉಪಾಧ್ಯಕ್ಷ ಎಂ.ಬಿ. ಅರುಣ್‌ಕುಮಾರ್‌, ಕಾರ್ಯದರ್ಶಿ ಬಿ.ಎನ್‌. ಪ್ರಶಾಂತ್‌ ಮತ್ತಿತರರು ಉಪಸ್ಥಿತರಿದ್ದರು.ಶೋಷಣೆಯಿಂದ ಮುಕ್ತವಾಗಿಸಿ

ಹೊಸದುರ್ಗ ವರದಿ:
  ಆಳುವ ಸರ್ಕಾರಗಳು ದುಡಿಯುವ ವರ್ಗಗಳನ್ನು ಶೋಷಣೆಯಿಂದ ಮುಕ್ತವಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ತಾಲ್ಲೂಕು ಭಾರತ್‌ ಕಮ್ಯೂನಿಸ್ಟ್‌ ಪಕ್ಷದ ಕಾರ್ಯದರ್ಶಿ ಕೆ.ಎನ್‌. ರಮೇಶ್‌ ಹೇಳಿದರು.ಇಲ್ಲಿನ ಪಾಂಡುರಂಗ ವಿಠಲ ಕಲ್ಯಾಣ ಮಂಟಪದ ಆವರಣದಲ್ಲಿ ತಾಲ್ಲೂಕು ಭಾರತ್‌ ಕಮ್ಯೂನಿಸ್ಟ್‌ ಪಕ್ಷ, ಎಐಟಿಯುಸಿ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳು ಭಾನುವಾರ ಏರ್ಪಡಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಶ್ರಮಜೀವಿಗಳಾದ ರೈತ ಕಾರ್ಮಿಕರು, ಕೂಲಿಕಾರರು, ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರು ಕೆಲಸಕ್ಕೆ ತಕ್ಕ ಕೂಲಿ ಇಲ್ಲದೆ ಸಂಕಷ್ಛಟ್ಟಿ ಎದುರಿಸುತ್ತಿದ್ದಾರೆ. ದೈನಂದಿನ ಅಗತ್ಯ ವಸ್ತುಗಳ ಬೆಲೆ ದಿನ ದಿನಕ್ಕೂ ಹೆಚ್ಚಾಗುತ್ತಿದ್ದು ಬಡ ಕಾರ್ಮಿಕರು ಅಲ್ಪ ದುಡಿಮೆಯಲ್ಲಿ ಒಂದೊತ್ತು ಊಟ ಮಾಡುವುದೂ ಕಷ್ಟವಾಗಿದೆ. ಇಷ್ಟೆಲ್ಲಾ ತೊಂದರೆ ಇದ್ದರೂ ಆಳುವ ಸರ್ಕಾರಗಳು ಮೌನವಹಿಸಿರುವುದು ಖಂಡನೀಯ ಎಂದರು.ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಸುಶೀಲಮ್ಮ ತಮಟೆ ಬಾರಿಸುವ ಮೂಲಕ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಂಗನವಾಡಿ ಫೆಡರೇಷನ್‌ ಕಾರ್ಯರ್ಶಿ ಮಂಜುಳಾ, ಗೌರವ ಅಧ್ಯಕ್ಷ ರಾಧಾಮಣಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಅಂಗನವಾಡಿ  ಕಾರ್ಯಕರ್ತೆ ಗಿರಿಜಮ್ಮ ಮಾತನಾಡಿದರು.ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ತಾಲ್ಲೂಕು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎನ್‌.ಸಿ. ಕುಮಾರಸ್ವಾಮಿ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀದೇವಮ್ಮ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್‌, ಗ್ರಾ.ಪಂ. ನೀರಗಂಟಿ, ಜವಾನ ಜಾಡಮಾಲಿ ಸಂಘಟನೆ, ಸಿನಿಮಾ ಕಾರ್ಮಿಕರ ಸಂಘಟನೆ, ಡಿ.ಎಂ. ಸಿಮೆಂಟ್ಸ್‌ ಕಾರ್ಮಿಕ ಸಂಘಟನೆ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಮಂಡಳಿ ರಚನೆಗೆ ಆಗ್ರಹ

ಹಿರಿಯೂರು ವರದಿ:
ಸಾರ್ವಜನಿಕ ಉದ್ಯಮದ ವಲಯದಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ಅಸಂಘಟಿತ ಕಾರ್ಮಿಕರು ದಿನನಿತ್ಯ ಶೋಷಣೆಗೆ ಒಳಗಾಗುತ್ತಿದ್ದು, ಅವರ ಕಲ್ಯಾಣಕ್ಕಾಗಿ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿ ಅಸ್ಥಿತ್ವಕ್ಕೆ ತರಬೇಕು ಎಂದು ಭಾರತ ಕಮ್ಯುನಿಸ್ಟ್‌ ಪಕ್ಷದ ಕಾರ್ಯದರ್ಶಿ ಎಸ್‌.ಸಿ. ಕುಮಾರ್‌ ಒತ್ತಾಯ ಮಾಡಿದರು.ಪಕ್ಷದ ವತಿಯಿಂದ ಮಹಾತ್ಮಗಾಂಧಿ ವೃತ್ತದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮೇ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.ಹಿರಿಯೂರಿನ ವಾಣಿವಿಲಾಸ ಸಕ್ಕರೆ ಕಾರ್ಖಾನೆಯನ್ನು ಪುನರ್‌ ಆರಂಭಿಸುವ ಬಗ್ಗೆ ಸರ್ಕಾರ ಗಮನಹರಿಸಬೇಕು. ಕಾರ್ಮಿಕರಿಗೆ ಬರಬೇಕಿರುವ ಬಾಕಿ ಹಣವನ್ನು ತಕ್ಷಣ ಪಾವತಿ ಮಾಡಬೇಕು ಎಂದು ಅವರು ಆಗ್ರಹಿಸಿದರು.ಕಾರ್ಮಿಕರು ಎಷ್ಟೇ ಸಂಘಟಿತರಾದರೂ ಶೋಷಣೆ ನಡೆಯುವುದು ನಿಂತಿಲ್ಲ. ಸರ್ಕಾರ ಈ ಬಗ್ಗೆ ಬಿಗಿಯಾದ ಕಾನೂನು ರೂಪಿಸಬೇಕು. ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾರತ ಕಮ್ಯುನಿಸ್ಟ್‌ ಪಕ್ಷದ ಸದಸ್ಯತ್ವ ಪಡೆದು ಪಕ್ಷವನ್ನು ಬಲಗೊಳಿಸಬೇಕು ಎಂದು ಜಿಲ್ಲಾ ಉಪಾಧ್ಯಕ್ಷ ಎನ್‌. ಶ್ರೀನಿವಾಸ್‌ ಮನವಿ ಮಾಡಿದರು.

ಜಯರಾಮ ರೆಡ್ಡಿ, ಮಹಾಲಕ್ಷ್ಮಮ್ಮ, ಸುಜಾತಾ ಮಾತನಾಡಿದರು. ಸೌಭಾಗ್ಯಮ್ಮ ಸ್ವಾಗತಿಸಿದರು. ಸುಜಾತಾ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.