ಗುರುವಾರ , ಏಪ್ರಿಲ್ 15, 2021
31 °C

ಸಂಘಟಿತ ಹೋರಾಟಕ್ಕೆ ಬೆಳೆಗಾರರು ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪ: ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ಮಾಡಿ ಗುಟ್ಕಾದಲ್ಲಿ ಪ್ಲಾಸ್ಟಿಕ್ ಬಳಕೆ ಕುರಿತು ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಬೆಳೆಗಾರರ ಹೋರಾಟ ಒಂದೇ ಮಾರ್ಗ ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ್ ಹೇಳಿದರು.ರೈತಸಂಘ, ಅಡಿಕೆ ಬೆಳೆಗಾರರ ಸಂಘಟನೆಗಳು ಹಾಗೂ ಸರ್ವ ಪಕ್ಷಗಳು ಸೋಮವಾರ ಏರ್ಪಡಿಸಿದ್ದ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶದಲ್ಲಿ  ಅವರು ಮಾತನಾಡಿದರು.ಪರಿಸರ ಕಾಳಜಿಯಿಂದ ಪ್ಲಾಸ್ಟಿಕ್ ನಿಷೇಧಿಸಲಾಗುತ್ತಿದೆ. ಜನ ಕುಡಿಯುವ ನೀರು ಕಲುಷಿತವಾಗುತಿದ್ದರೂ ಕ್ರಮಕೈಗೊಳ್ಳದ ಸರ್ಕಾರಗಳು ಗುಟ್ಕಾ ಬಗ್ಗೆ ಏಕೆ ಆಸಕ್ತಿ ತೋರಿಸುತ್ತವೆ ಎಂದು ಪ್ರಶ್ನಿಸಿದರು.ಪ್ರತಿವರ್ಷ ರೈತರ ಅಡಿಕೆ ಮಾರುಕಟ್ಟೆಗೆ ಬರುತಿದ್ದಂತೆ ಗುಟ್ಕಾ ನಿಷೇಧ ಹಾಗೂ ನ್ಯಾಯಾಲಯಗಳ ಅದೇಶದ ನೆಪ ಒಡ್ಡಿ ಧಾರಣೆ ಇಳಿಸುವ ಸ್ಥಾಪಿತ ಹಿತಾಸಕ್ತಿಗಳ ಷಡ್ಯಂತ್ರದ ವಿರುದ್ಧ ಬೆಳೆಗಾರರು ಬೀದಿಗಿಳಿದು ಹೋರಾಟ ಮಾಡ ಬೇಕಾಗಿದೆ ಎಂದರು.ಕಲ್ಕುಳಿ ವಿಠಲ ಹೆಗಡೆ ಮಾತನಾಡಿ, ಅಡಿಕೆ ಅಗತ್ಯ ಪದಾರ್ಥಗಳ ಪಟ್ಟಿಯಿಂದ ಕೈಬಿಟ್ಟಿರುವುದು ಅಡಿಕೆ ಬೆಳೆಗೆ ಮಾರಕವಾಗಿದೆ. ಹಾಗಾಗಿ ತೋಟಗಾರಿಕಾ ಬೆಳೆಯಾಗಿ ಅಡಿಕೆಗೆ ಪ್ರೋತ್ಸಾಹ ದೊರೆಯುತಿಲ್ಲ ಎಂದರು.ಮ್ಯಾಮ್‌ಕೋಸ್ ಉಪಾಧ್ಯಕ್ಷ ನರಸಿಂಹ ನಾಯಕ್ ಮಾತನಾಡಿ, ಕೇಂದ್ರ ಸರ್ಕಾರದ ಗಮನ ಸೆಳೆಯಲು ಶಾಸಕರು ಸಂಸದರೊಂದಿಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಿಯೋಗ ಕೊಂಡೊಯ್ಯಲು ಮ್ಯಾಮ್‌ಕೋಸ್ ಶ್ರಮಿಸುತ್ತಿದೆ ಎಂದರು. ಮಾಜಿ ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ಬೆಲೆ ಏರಿದಾಗೆಲ್ಲ ಅತಂಕ ಸೃಷ್ಟಿಸುವ ಲಾಬಿ ವಿರುದ್ಧ ಹೋರಾಟ ರೂಪಿಸಬೇಕಾಗಿದೆ ಎಂದರು.  ಕಾಂಗ್ರೆಸ್‌ನ ಎಚ್.ಜಿ.ವೆಂಕಟೇಶ್, ಕೆ.ಜಿ.ಶೋಭಿಂತ್, ಅಂಶುಮಾನ್, ಟಿ.ಡಿ.ರಾಜೇಗೌಡ, ಬಿಎಸ್‌ಪಿಯ ಕೆ.ಎಂ. ಗೋಪಾಲ್, ಸಿಪಿಐನ ಕೆಲವಳ್ಳಿ ಕಳಸಪ್ಪ, ಬಿಜೆಪಿಯ ಮಹಾಬಲರಾವ್, ಮಳಿಗೆ ಚಂದ್ರಶೇಖರ್, ಎಸ್.ಎನ್. ರಾಮಸ್ವಾಮಿ, ಜಿ.ಪಂ.ಉಪಾಧ್ಯಕ್ಷ ರಂಗನಾಥ್, ರೈತ ಸಂಘದ ವರ್ಮ, ಮಾರನಕೊಡಿಗೆ ನಟರಾಜ್, ಡಿ.ಬಿ. ರಾಜೇಂದ್ರ ಮಾತನಾಡಿದರು. ಅಡಿಕೆ ಬೆಳೆಗಾರರ ಸಂಘದ ಎನ್.ಜಿ.ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಬೆಳೆಗಾರರ ಸಂಘದ ಶ್ರೀಕಂಠ ಜೋಯಿಷ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ.ರಾಜೇಂದ್ರ, ರೈತಸಂಘದ  ಕೆಳಕೊಪ್ಪ ಸತೀಶ್, ಕರವಾನೆ ನವೀನ್, ಸುಧೀರ್‌ಕುಮಾರ್ ಮುರೊಳ್ಳಿ, ಬಂಡ್ಲಾಪುರ ಶ್ರೀಧರರಾವ್ .ಜಿ.ಪಂ.ಸದಸ್ಯೆ ಸುಚಿತ್ರ ನರೇಂದ್ರ ಮೊದಲಾದವರಿದ್ದರು. ಸಮಾವೇಶಕ್ಕೆ ಮುನ್ನ ಪರಸಭಾ ಭವನದಿಂದ  ಬಸ್‌ನಿಲ್ದಾಣದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.