`ಸಂಘಟಿತ ಹೋರಾಟಕ್ಕೆ ಸಿಕ್ಕ ಫಲ'

7
ನಮ್ಮದು ಚಾಂಪಿಯನ್ ಆಟಗಾರರ ತಂಡ: ಸಚಿನ್ ತೆಂಡೂಲ್ಕರ್

`ಸಂಘಟಿತ ಹೋರಾಟಕ್ಕೆ ಸಿಕ್ಕ ಫಲ'

Published:
Updated:
`ಸಂಘಟಿತ ಹೋರಾಟಕ್ಕೆ ಸಿಕ್ಕ ಫಲ'

ಮುಂಬೈ (ಪಿಟಿಐ): `ಪ್ರತಿಭಾವಂತ ಆಟಗಾರರನ್ನು ಒಳಗೊಂಡಿರುವ ಚಾಂಪಿಯನ್ ತಂಡವಿದು. ಪ್ರತಿಯೊಬ್ಬರೂ ಈ ಸಾಧನೆಯ ಪಾಲುದಾರರು. ಹಾಗಾಗಿಯೇ ಮುಂಬೈ ಮತ್ತೊಮ್ಮೆ ರಣಜಿ ಟ್ರೋಫಿ ಗೆಲ್ಲಲು ಸಾಧ್ಯವಾಯಿತು' ಎಂದು ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಸಹ ಆಟಗಾರರನ್ನು ಕೊಂಡಾಡಿದ್ದಾರೆ.`ನಾವು 40ನೇ ಬಾರಿ ಚಾಂಪಿಯನ್ ಆಗಿದ್ದೇವೆ. ನಾವೇಕೆ ಚಾಂಪಿಯನ್ ಎಂಬುದನ್ನು ಈ ಮೂಲಕ ಸಾಬೀತುಪಡಿಸಿದ್ದೇವೆ. ಇದೊಂದು ಅದ್ಭುತ ತಂಡ. ಯುವ ಹಾಗೂ ಹಿರಿಯ ಆಟಗಾರರ ಸಮ್ಮಿಶ್ರಣದಿಂದ ಕೂಡಿದೆ' ಎಂದು ಅವರು ಹೇಳಿದ್ದಾರೆ.ಈ ಸಾಧನೆಗೆ ಕಾರಣರಾದ ನಾಯಕ ಅಜಿತ್ ಅಗರ್ಕರ್ ಅವರನ್ನೂ ತೆಂಡೂಲ್ಕರ್ ಶ್ಲಾಘಿಸಿದ್ದಾರೆ. `ಹೋದ ವರ್ಷ ಅಗರ್ಕರ್ ಹಲವು ಸಂಕಷ್ಟಗಳನ್ನು ಎದುರಿಸಿದರು. ಆದರೆ ಈ ಬಾರಿ ಯಶಸ್ವಿಯಾಗಿ ತಂಡ ಮುನ್ನಡೆಸಿದ್ದಾರೆ. ವೈಯಕ್ತಿಕ ಪ್ರದರ್ಶನವೂ ಅತ್ಯುತ್ತಮವಾಗಿತ್ತು' ಎಂದಿದ್ದಾರೆ.`ಮುಂಬೈ ಕ್ರಿಕೆಟ್ ಪಾಲಿಗೆ ಇದೊಂದು ಸ್ಮರಣೀಯ ಕ್ಷಣ. ಕೇವಲ ಆಟಗಾರರಿಗೆ ಮಾತ್ರವಲ್ಲ; ಆಡಳಿತಗಾರರಿಗೂ ಈ ಯಶಸ್ಸಿನ ಶ್ರೇಯ ಸಲ್ಲುತ್ತದೆ. ಈ ಸುಸಂದರ್ಭದಲ್ಲಿ ಎಲ್ಲರನ್ನೂ ಅಭಿನಂದಿಸಲು ನಾನು ಇಷ್ಟಪಡುತ್ತೇನೆ' ಎಂದು ಸಚಿನ್ ತಿಳಿಸಿದ್ದಾರೆ.39 ವರ್ಷ ವಯಸ್ಸಿನ ತೆಂಡೂಲ್ಕರ್ ಪಾಲಿಗೆ ಇದು ಐದನೇ ರಣಜಿ ಟ್ರೋಫಿ ಗೆದ್ದ ಸಂಭ್ರಮ. ಒಟ್ಟು ಆರು ರಣಜಿ ಟ್ರೋಫಿ ಫೈನಲ್‌ಗಳಲ್ಲಿ ಆಡಿದ್ದಾರೆ. 1990-91ರಲ್ಲಿ ಮುಂಬೈ ತಂಡ ಫೈನಲ್‌ನಲ್ಲಿ ಎಡವಿದಾಗ ಸಚಿನ್ ಇದ್ದರು. ಕೇವಲ 2 ರನ್‌ಗಳಿಂದ ಹರಿಯಾಣಕ್ಕೆ ಶರಣಾಗಿತ್ತು.ಈ ಸಾಧನೆಗೆ ತಂಡದ ಸಂಘಟಿತ ಹೋರಾಟ ಕಾರಣ ಎಂದು ನಾಯಕ ಅಜಿತ್ ಅಗರ್ಕರ್ ಹೇಳಿದ್ದಾರೆ. `ಈ ರಣಜಿ ಋತುವಿನಲ್ಲಿ ತಂಡಕ್ಕೆ ಎಲ್ಲರೂ ನೆರವಾಗಿದ್ದಾರೆ. ಹಾಗಾಗಿ ಮತ್ತೊಮ್ಮೆ ಚಾಂಪಿಯನ್ ಆಗಲು ಸಾಧ್ಯವಾಯಿತು.ಪ್ರಮುಖವಾಗಿ ಧವಳ್ ಕುಲಕರ್ಣಿಗೆ ವೆುಚ್ಚುಗೆ ಸೂಚಿಸಬೇಕು. ನಾಲ್ಕೈದು ಋತುಗಳಿಂದ ಅವರು ತಂಡದ ಆಧಾರಸ್ತಂಭವೆನಿಸಿದ್ದಾರೆ. ವಿಕೆಟ್ ಕೀಪರ್ ಆದಿತ್ಯ ತಾರೆ ಈ ಋತುವಿನಲ್ಲಿ ಉತ್ತಮ ಆಟ ತೋರಿದರು. ಪ್ರಮುಖ ಘಟ್ಟಗಳಲ್ಲಿ ತೆಂಡೂಲ್ಕರ್ ತೋರಿದ ಆಟವನ್ನು ಮರೆಯುವಂತಿಲ್ಲ. ಹಾಗೇ, ಜಾಫರ್, ಹಿಕೆನ್ ಷಾ ಹಾಗೂ ಅಂಕೀತ್ ಚವಾಣ್ ಕೂಡ ಉತ್ತಮ ಪ್ರದರ್ಶನ ತೋರಿದರು' ಎಂದು ಅವರು ವಿವರಿಸಿದರು.`ನನಗಂತೂ ಈ ಸಾಧನೆ ತುಂಬಾ ಹೆಮ್ಮೆಗೆ ಕಾರಣವಾಗಿದೆ. ಹಿಂದೆ ಚಾಂಪಿಯನ್ ಆದಾಗ ನಾನು ಆಟಗಾರನಾಗಿದ್ದೆ. ಈ ಬಾರಿ ತಂಡವನ್ನು ಮುನ್ನಡೆಸಿದೆ. ಹಾಗಾಗಿ ನನ್ನ ಪಾಲಿಗೆ ಇದು ವಿಶೇಷ ಕ್ಷಣ' ಎಂದರು.

32ನೇ ಶತಕ ಗಳಿಸಿ ದಾಖಲೆಗೆ ಕಾರಣರಾದ ಆರಂಭಿಕ ಬ್ಯಾಟ್ಸ್‌ಮನ್ ಜಾಫರ್ ಕೂಡ ಖುಷಿ ವ್ಯಕ್ತಪಡಿಸಿದ್ದಾರೆ.`ನಾಕ್‌ಔಟ್‌ನಲ್ಲಿ ನಮ್ಮ ಸಾಧನೆ ಲೀಗ್‌ಗಿಂತ ಅತ್ಯುತ್ತಮವಾಗಿತ್ತು. ಫೈನಲ್‌ನಲ್ಲಿ ಶತಕ ಗಳಿಸಿದ್ದು ಮತ್ತಷ್ಟು ಖುಷಿಗೆ ಕಾರಣವಾಗಿದೆ' ಎಂದು ಹೇಳಿದರು.ಜಾಫರ್ ದೆಹಲಿಯ ಅಜಯ್ ಶರ್ಮ (31 ಶತಕ) ಅವರ ದಾಖಲೆ ಅಳಿಸಿ ಹಾಕಿ ರಣಜಿಯಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರ ಎನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry