ಗುರುವಾರ , ಮೇ 6, 2021
32 °C

ಸಂಘರ್ಷಕ್ಕೆ ಕೊನೆ ಇಲ್ಲವೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನುಷ್ಯನ ದುರಾಸೆಗೆ ಕಾಡು ಕ್ಷೀಣಿಸುತ್ತಿದೆ. ಒತ್ತುವರಿಗೆ ಒಳಗಾಗಿ ಹೊಲ, ಗದ್ದೆಗಳಾಗಿ ಪರಿವರ್ತನೆ ಆಗಿದೆ. ದಟ್ಟಾರಣ್ಯದಲ್ಲಿ ದಷ್ಟಪುಷ್ಟವಾಗಿ ಇರಬೇಕಾಗಿದ್ದ ವನ್ಯಜೀವಿಗಳು ನೀರು ಮತ್ತು ಆಹಾರ ಅರಸಿ ನಾಡಿಗೆ ನುಗ್ಗತೊಡಗಿವೆ.ಕಾಡು ಬಿಟ್ಟು ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಬಯಲು ಪ್ರದೇಶಕ್ಕೆ ಬಂದ ಆನೆಗಳ ದಾಳಿಗೆ ಐವರು ಬಲಿಯಾಗಿರುವುದು ವನ್ಯಜೀವಿ ಮತ್ತು ಮಾನವನ ನಡುವಣ ಸಂಘರ್ಷಕ್ಕೆ ಮತ್ತೊಂದು ನಿದರ್ಶನ ಒದಗಿಸಿದೆ.ತಮಿಳುನಾಡಿನ ಕೃಷ್ಣಗಿರಿ ಕಡೆಯಿಂದ ಬಂಗಾರಪೇಟೆ ಗಡಿಗೆ ಬಂದ ಆನೆಗಳಿಗೆ ಅಡೆತಡೆ ಇಲ್ಲದೆ ಕಾಡಿಗೆ ವಾಪಸಾಗಲು ಅವಕಾಶವಾಗದಿರುವುದೇ ಈ ದುರಂತಕ್ಕೆ ಮುಖ್ಯ ಕಾರಣ. ದಾರಿ ತಪ್ಪಿ ಜನವಸತಿ ಪ್ರದೇಶಗಳತ್ತ ಬರುವ ಆನೆಗಳ ತಂಟೆಗೆ ಹೋಗದಿದ್ದರೆ, ಅವುಗಳನ್ನು ಕೆರಳಿಸದಿದ್ದರೆ ಜೀವಹಾನಿ ಕಡಿಮೆಯಾಗುತ್ತದೆ. ಆನೆಗಳು ಜಿದ್ದಿನಿಂದ ಜನರ ಮೇಲೆ ಬೀಳುವುದು ಕಡಿಮೆ. ಆದರೆ ನೋಡಲು ಜಮಾಯಿಸುವ ಜನರು ಕೀಟಲೆ ಮಾಡಿದರೆ ತಿರುಗಿಬಿದ್ದು, ಹೊಸಕಿ ಹಾಕುತ್ತವೆ.ಆನೆಗಳ ದಾಳಿಯಿಂದ ಪದೇ ಪದೇ ಜೀವಹಾನಿ ಆಗುತ್ತಿದ್ದರೂ ಜನರು ಎಚ್ಚೆತ್ತುಕೊಳ್ಳದಿರುವುದು ವಿಷಾದದ ಸಂಗತಿ. ಸನಿಹದಿಂದ ಫೋಟೊ ಕ್ಲಿಕ್ಕಿಸುವ ಸಾಹಸ ಒಬ್ಬರ ಜೀವಕ್ಕೆ ಎರವಾಗಿದೆ. ಆನೆಗಳು ಸಾಗುವ ಮಾರ್ಗದಲ್ಲಿ ಬೆಳೆ ಹಾನಿ ನಿರೀಕ್ಷಿತ. ಅದರಿಂದ ಆಕ್ರೋಶಗೊಂಡು ಗಲಾಟೆ ಎಬ್ಬಿಸಿದರೆ ಆನೆಗಳು ಕೆರಳುವುದರಲ್ಲಿ ಸಂದೇಹವೇ ಇಲ್ಲ. ಆನೆಗಳ ಸಂತತಿ ಹೆಚ್ಚುತ್ತಿದೆ ಎಂದು ಸರ್ಕಾರವೇ ಹೇಳುತ್ತಿದೆ. ಆದರೆ, ಅವುಗಳಿಗೆ ಮೀಸಲಿರುವ ವಾಸಸ್ಥಳ ವ್ಯಾಪ್ತಿ ಕುಗ್ಗುತ್ತಿದೆ. ಆನೆಗಳು ಕಾಡು ಬಿಟ್ಟು ಹೊರಗೆ ಬರಲು ಇದೂ ಒಂದು ಕಾರಣ.ಆನೆ- ಮನುಷ್ಯನ ಸಂಘರ್ಷ ತಪ್ಪಿಸಲು ಹಾಗೂ ಆನೆಗಳಿಗೆ ಸುರಕ್ಷಿತ ನೆಲೆ ಕಲ್ಪಿಸಲು ರಾಜ್ಯ ಹೈಕೋರ್ಟ್ ನೇಮಕ ಮಾಡಿದ್ದ ಆನೆ ಕಾರ್ಯಪಡೆ ವರದಿ ನೀಡಿ ಹತ್ತು ತಿಂಗಳು ಕಳೆದಿದೆ. ಆನೆ ಸಂರಕ್ಷಣಾ ವಲಯ, ಆನೆ ಮತ್ತು ಮನುಷ್ಯ ಸಹಜೀವನ ನಡೆಸಬಹುದಾದ ವಲಯಗಳನ್ನು ರೂಪಿಸಬೇಕು. ಕೆಲವು ಪ್ರದೇಶಗಳಿಂದ ಆನೆಗಳನ್ನು ಸ್ಥಳಾಂತರ ಮಾಡಬೇಕು. ಆನೆಗಳು ಕೃಷಿ ಜಮೀನಿಗೆ ನುಗ್ಗುವುದನ್ನು ತಡೆಯಲು ಬೃಹತ್ ಕಂದಕ ಕೊರೆಯಬೇಕು.ಆನೆಗಳ ದಾಳಿಗೆ ತುತ್ತಾದವರಿಗೆ ತುರ್ತು ವೈದ್ಯಕೀಯ ನೆರವು ಒದಗಿಸಲು ಉಚಿತ ಸಹಾಯವಾಣಿ ಆರಂಭಿಸಬೇಕು. ಆನೆ ಕಾರಿಡಾರ್‌ಗಳ ಸಮೀಪ ವಾಣಿಜ್ಯ ಉದ್ದೇಶದ ಮೂಲ ಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು ಎಂಬುದೂ ಸೇರಿದಂತೆ ವಿವಿಧ ಶಿಫಾರಸುಗಳನ್ನು ವರದಿ ಒಳಗೊಂಡಿದೆ.ಆದರೆ, ಈ ವರದಿಯ ಶಿಫಾರಸುಗಳ ಬಗ್ಗೆ ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಹೈಕೋರ್ಟ್ ಅಸಮಾಧಾನಕ್ಕೂ ಕಾರಣವಾಗಿದೆ. ವಸತಿ ಪ್ರದೇಶಗಳ ಸನಿಹಕ್ಕೆ ಆನೆಗಳ ಹಿಂಡು ಧಾವಿಸಿದ ಕೂಡಲೇ ಮಾಧ್ಯಮಗಳಲ್ಲಿ ಅದು ದೊಡ್ಡ ಸುದ್ದಿಯಾಗುತ್ತದೆ. ಆನೆಗಳನ್ನು ಪುನಃ ಕಾಡಿಗೆ ಅಟ್ಟುತ್ತಲೇ ಅದರ ಕಾವು ಕಡಿಮೆ ಆಗುತ್ತದೆ. ಪರಿಹಾರದ ಶಾಶ್ವತ ಕ್ರಮಗಳು ನೇಪಥ್ಯಕ್ಕೆ ಸರಿಯುತ್ತವೆ. ಇಂತಹ ಕ್ಷಣಿಕ ತೃಪ್ತಿ ಸರ್ಕಾರದ ಆದ್ಯತೆ ಆಗಬಾರದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.