ಶುಕ್ರವಾರ, ಜೂನ್ 18, 2021
28 °C

ಸಂಘರ್ಷದಿಂದ ಲಾಭವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಸಿಟಿ ಕೋರ್ಟ್ ಆವರಣದಲ್ಲಿ ನಡೆದ ಹಲ್ಲೆ ಪ್ರಕರಣ ತೆಗೆದುಕೊಳ್ಳುತ್ತಿರುವ ತಿರುವು ಪ್ರಜಾಸತ್ತೆಯ ವ್ಯವಸ್ಥೆಗೆ ಅಪಾಯಕಾರಿ ಸಂದೇಶವನ್ನು ರವಾನಿಸುತ್ತಿದೆ. ಪ್ರಜಾಪ್ರಭುತ್ವವನ್ನು ಬಲಗೊಳಿಸುವ ಕ್ರಿಯೆಯಲ್ಲಿ ನ್ಯಾಯವಾದಿಗಳು ಮತ್ತು ಮಾಧ್ಯಮಗಳು ಸಕ್ರಿಯವಾಗಿ ತೊಡಗಿಕೊಳ್ಳುವುದು ಆರೋಗ್ಯಕರ ಸಂಯೋಜನೆ.ಆದರೆ ಇಲ್ಲಿ ಈ ಎರಡೂ ವೃತ್ತಿ ಸಮುದಾಯಗಳು ಸಂಘರ್ಷಕ್ಕೆ ಇಳಿದಿರುವಂತೆ ವರ್ತಿಸುತ್ತಿವೆ. ವಿದ್ಯುನ್ಮಾನ ಮಾಧ್ಯಮದವರ ಮೇಲೆ ಕೋರ್ಟ್ ಆವರಣದಲ್ಲಿ ನಡೆದ ಹಲ್ಲೆ ಮತ್ತು ಅದಕ್ಕೆ ಪ್ರತಿಕ್ರಿಯೆಯಾಗಿ ಪೊಲೀಸರು ನಡೆಸಿದ ಲಾಠಿ ಪ್ರಹಾರದ ಘಟನೆಗಳಿಗೆ ರಾಜ್ಯದಾದ್ಯಂತ ಪರ ವಿರೋಧಿ ಪ್ರತಿಭಟನೆಗಳು ನಡೆಯುತ್ತಿವೆ.ವಕೀಲ ವೃಂದ ನ್ಯಾಯಾಲಯ ಕಲಾಪಗಳನ್ನು ಬಹಿಷ್ಕರಿಸಿ ತನ್ನ ಪ್ರತಿಭಟನೆಯನ್ನು ದಾಖಲಿಸಿದೆ; ಜೊತೆಗೆ ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಕರ್ತರ ಪ್ರಕರಣಗಳಲ್ಲಿ ವಾದ ಮಾಡದಿರುವ ನಿರ್ಧಾರವನ್ನು ಪ್ರಕಟಿಸಿದೆ. ನ್ಯಾಯವಾದಿಗಳಾಗಿ ತಮ್ಮಲ್ಲಿ ಬರುವ ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಡುವ ಕರ್ತವ್ಯ ನಿರ್ವಹಣೆಯಲ್ಲಿ ಹೀಗೆ ತಾರತಮ್ಯ ಮಾಡುವುದಕ್ಕೆ ಕಾನೂನಿನಲ್ಲಿಯೇ ಅವಕಾಶ ಇಲ್ಲದಿದ್ದರೂ, ಸಂಘಟನೆಯಲ್ಲಿನ ಉಗ್ರವಾದಿ ಧೋರಣೆಯ ಸದಸ್ಯರಿಂದ ಇಂಥ ವೃತ್ತಿಪರವಲ್ಲದ ನಿರ್ಧಾರಗಳನ್ನು ವಕೀಲರ ಸಂಘ ಕೈಗೊಂಡಿದೆ.

 

ವಿದ್ಯುನ್ಮಾನ ಮಾಧ್ಯಮಗಳಿರಲಿ, ಪೊಲೀಸರಿರಲಿ, ಹಾದಿ ತಪ್ಪಿದಾಗ ಕಾನೂನು ಮಾರ್ಗದಿಂದ ಸರಿದಾರಿಗೆ ತರಬಲ್ಲ ತಮ್ಮ ಸಾಮರ್ಥ್ಯವನ್ನು ಬಳಸದೆ, ದೈಹಿಕ ಹಲ್ಲೆಯಿಂದ ಇತ್ಯರ್ಥಪಡಿಸಿಕೊಳ್ಳುವ ಹಿಂಸಾ ಮಾರ್ಗಕ್ಕೆ ಪ್ರಜಾಸತ್ತೆಯಲ್ಲಿ ಅವಕಾಶ ಇಲ್ಲ ಎಂಬುದು ಈ ವೃತ್ತಿಸಮುದಾಯಕ್ಕೆ ಅರ್ಥವಾಗದಿರುವುದು ಆಶ್ಚರ್ಯಕರ. ಈ ಬೆಳವಣಿಗೆ ವಿಷಾದಕರ. 

ಹಿಂದಿನ ಯಾವ ಸರ್ಕಾರದಲ್ಲಿಯೂ ಬಯಲಿಗೆ ಬಾರದಷ್ಟು ಭ್ರಷ್ಟಾಚಾರ ಹಗರಣಗಳು ನಡೆದು ಅವೆಲ್ಲ ಜಾಗೃತ ಮಾಧ್ಯಮ ಮತ್ತು ನ್ಯಾಯವಾದಿಗಳ ವೃತ್ತಿಪರ ಹೋರಾಟದ ಕಾರಣ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಂದಿವೆ.ನಿಷ್ಠುರವಾದ ನ್ಯಾಯಾಂಗ ವ್ಯವಸ್ಥೆ ಮತ್ತು ಎಚ್ಚೆತ್ತ ಮಾಧ್ಯಮಗಳು ಮೂಡಿಸುತ್ತಿರುವ ಜಾಗೃತಿಯ ಕಾರಣ ಹಲವು ಸಚಿವರು ಅಧಿಕಾರಚ್ಯುತರಾಗಿದ್ದಾರೆ. ಕೆಲವರು ಜೈಲು ಸೇರಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವ ಸಂಸ್ಥೆಗಳನ್ನು ದುರ್ಬಲಗೊಳಿಸುವ ಹುನ್ನಾರದಲ್ಲಿ ರಾಜ್ಯದ ಸರ್ಕಾರ ನಿರತವಾಗಿದ್ದರೆ ಅದನ್ನು ಕಾನೂನು ಚೌಕಟ್ಟಿನಲ್ಲಿ ಎದುರಿಸುವ ವಾತಾವರಣವನ್ನು ನ್ಯಾಯವಾದಿಗಳು ಮತ್ತು ಮಾಧ್ಯಮ ರಂಗ ನಿರ್ಮಿಸಬೇಕಿದೆ.ಇಂಥ ಸನ್ನಿವೇಶದಲ್ಲಿ ಈ ಎರಡು ವೃತ್ತಿ ಸಮುದಾಯಗಳ ಮಧ್ಯೆ ಸಂಘರ್ಷ ನಡೆಯುವುದು ಭ್ರಷ್ಟ ರಾಜಕೀಯ ವ್ಯವಸ್ಥೆಯ ಮುಂದುವರಿಕೆಗೆ ಪರೋಕ್ಷವಾಗಿ ನೆರವಾದಂತೆ. ಈ ಅಪಾಯವನ್ನು ಎರಡೂ ಸಮುದಾಯಗಳು ಮನಗಾಣಬೇಕು. ರಾಜ್ಯದ ವಕೀಲ ಸಮುದಾಯದಲ್ಲಿ ನ್ಯಾಯವಾದಿಗಳ ವೃತ್ತಿಯ ಉನ್ನತ ಧ್ಯೇಯದ ಅರಿವಿದ್ದವರು ಮತ್ತು ಪ್ರಜಾಸತ್ತೆಯಲ್ಲಿ ತಮ್ಮ ಮತ್ತು ಮಾಧ್ಯಮಗಳ ಪಾತ್ರದ ಪ್ರಾಮುಖ್ಯವನ್ನು ಎತ್ತಿಹಿಡಿಯುವವರ ಸಂಖ್ಯೆ ಹೆಚ್ಚಿದೆ ಎಂಬುದು ಸಮಾಧಾನಪಡುವ ಅಂಶವಾದರೂ ಅವರು ತಮ್ಮ ಸಂಘಟನೆಯಲ್ಲಿನ ಉಗ್ರವಾದಿಗಳ ಆಕ್ರೋಶದ ಎದುರು ಅಸಹಾಯಕರಾಗಬಾರದು.

 

ಹಲ್ಲೆಯ ಪ್ರಕರಣ ಕಾನೂನು ಉಲ್ಲಂಘನೆಯ ಸ್ಪಷ್ಟ ನಿದರ್ಶನ. ಅದಕ್ಕೆ ಕಾರಣರಾದವರು, ಪ್ರಚೋದನೆ ನೀಡಿದವರು ಯಾರು ಎಂಬುದನ್ನು ಪತ್ತೆ ಹಚ್ಚಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯ. ಈ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕವೇ ರಾಜ್ಯ ಸರ್ಕಾರ ಈ ಎರಡೂ ಸಮುದಾಯಗಳ ನಡುವಣ ವಿರಸವನ್ನು ನಿವಾರಿಸಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.