`ಸಂಘ ಪರಿವಾರ ಬಿಟ್ಟು ಕೆಜೆಪಿ ಇಲ್ಲ'

7

`ಸಂಘ ಪರಿವಾರ ಬಿಟ್ಟು ಕೆಜೆಪಿ ಇಲ್ಲ'

Published:
Updated:

ಹಾವೇರಿ: `ಸಂಘ ಪರಿವಾರದ ಸಿದ್ಧಾಂತ ಬಿಡುವ ಪ್ರಶ್ನೆಯೇ ಇಲ್ಲ. ಅದರ ತತ್ವ ಸಿದ್ಧಾಂತಗಳ ಆಧಾರದ ಮೇಲೆಯೇ ನೂತನ ಪಕ್ಷ ಸಂಘಟಿಸಲಾಗುತ್ತದೆ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಸೋಮವಾರ ಇಲ್ಲಿ ಹೇಳಿದರು.

ನಗರದ ಜಿ.ಎಚ್.ಕಾಲೇಜು ಮೈದಾನಲ್ಲಿ ಇದೇ 9ರಂದು ನಡೆಯಲಿರುವ ಕೆಜೆಪಿ ಸಮಾವೇಶದ ಸಿದ್ಧತೆಗಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

`ಯಡಿಯೂರಪ್ಪ ಹಾಗೂ ನಾನು ಸಂಘ ಪರಿವಾರದಿಂದಲೇ ಬೆಳೆದು ಬಂದವರು. ದೀನ, ದಲಿತರ ಜತೆ ಸಮನ್ವಯದಿಂದ ಬಾಳುವ ಹಾಗೂ ಅವರ ಶ್ರೇಯೋಭಿವೃದ್ಧಿಗೆ ಕೆಲಸ ಮಾಡುವುದನ್ನು ಸಂಘ ಪರಿವಾರ ನಮಗೆ ಕಲಿಸಿಕೊಟ್ಟಿದೆ. ಅಲ್ಲಿನ ತತ್ವ ಸಿದ್ದಾಂತಗಳನ್ನು ರೂಢಿಸಿಕೊಂಡು ಸಾರ್ವಜನಿಕ ಜೀವನಕ್ಕೆ ಬಂದಿದ್ದೇವೆ. ಈಗ ಅದೇ ತತ್ವದ ಆಧಾರದಲ್ಲಿ ನೂತನ ಪಕ್ಷವನ್ನು ಸಂಘಟಿಸುತ್ತೇವೆ' ಎಂದರು.

`ಸಂಘ ಪರಿವಾರ ಎಂದರೆ ಬಹಳಷ್ಟು ಜನರಿಗೆ ಅದು ಒಂದು ಸಮುದಾಯದ ವಿರೋಧಿ ಎಂಬ ಭಾವನೆಯಿದೆ. ಆದರೆ, ಅಲ್ಲಿ ಯಾವುದೇ ಸಮುದಾಯವನ್ನು ವಿರೋಧಿಸದೇ ಎಲ್ಲರೂ ಭಾರತಾಂಬೆಯ ಮಕ್ಕಳು ಎಂಬ ವಿಶಾಲತೆ ತಿಳಿಸಿಕೊಡಲಾಗುತ್ತದೆ. ಹೀಗಾಗಿ ಆ ಸಂಘ ಪರಿವಾರದ ಸಿದ್ಧಾಂತ ಇಟ್ಟುಕೊಂಡು ಜನಮುಖಿಯಾದ ಪಕ್ಷ ಕಟ್ಟಲಿದ್ದೇವೆ” ಎಂದು ರಾಘವೇಂದ್ರ ಹೇಳಿದರು.

`ಕೆಜೆಪಿ ಯಾವತ್ತೂ ಅಪ್ಪ ಮಕ್ಕಳ ಪಕ್ಷ ಆಗುವುದಿಲ್ಲ. ಅದೊಂದು ಕಾರ್ಯಕರ್ತರ ಪಕ್ಷವಾಗಲಿದೆ. ಈ ಸತ್ಯ ಟೀಕಾಕಾರರಿಗೆ ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದರು.

ಸಮಾವೇಶದಲ್ಲಿ ಎಷ್ಟು ಜನ ಬಿಜೆಪಿ ಶಾಸಕರು, ಸಂಸದರು ಪಾಲ್ಗೊಳ್ಳಬೇಕೆಂಬುದು ಇನ್ನೂ ನಿರ್ಧಾರವಾಗಿಲ್ಲ.  ಸಮಾವೇಶದಲ್ಲಿ ಪಾಲ್ಗೊಳ್ಳುವುದರಿಂದ ಆಗುವ ತಾಂತ್ರಿಕ ತೊಂದರೆ ಹಾಗೂ ಅವುಗಳ ನಿವಾರಣೆ ಬಗ್ಗೆ ಚರ್ಚಿಸಿದ ನಂತರ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದರು.ಸರ್ಕಾರ ಸುಭದ್ರ: ಅಶೋಕ ಅಭಯ

ಬೆಂಗಳೂರು: `ರಾಜ್ಯ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ನಾಲ್ಕು ವರ್ಷದಲ್ಲಿ 40 ಬಾರಿ ಸರ್ಕಾರ ಉರುಳಿಸುವ ಪ್ರಯತ್ನ ನಡೆದಿದ್ದು, ಅಂತಹ ಯಾವ ಬೆದರಿಕೆಗಳಿಗೂ ಹೆದರುವುದಿಲ್ಲ' ಎಂದು ಉಪ ಮುಖ್ಯಮಂತ್ರಿ ಆರ್. ಅಶೋಕ ಸೋಮವಾರ ಇಲ್ಲಿ ಪರೋಕ್ಷವಾಗಿ ಕೆಜೆಪಿ ಮುಖಂಡರಿಗೆ ತಿರುಗೇಟು ನೀಡಿದರು.

ಹಲವು ಕಾರಣಗಳಿಂದ ಬಿಜೆಪಿ ಬಿಟ್ಟು ಹೋಗಿದ್ದ ಉಮಾಭಾರತಿ ಮತ್ತಿತರ ಮುಖಂಡರು ಪುನಃ ಪಕ್ಷಕ್ಕೆ ವಾಪಸಾಗಿದ್ದಾರೆ. ಯಡಿಯೂರಪ್ಪ ಅವರೂ ಮುಂದಿನ ದಿನಗಳಲ್ಲಿ ಬಿಜೆಪಿಗೆ ವಾಪಸಾಗುವುದು ಖಚಿತ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

`ಬಿಜೆಪಿಗೆ, ಕೆಜೆಪಿಯಿಂದ ಯಾವ ಭಯವೂ ಇಲ್ಲ. ನಮ್ಮದು ಕಾರ್ಯಕರ್ತರ ಪಕ್ಷ. ಎಷ್ಟೇ ಮಂದಿ ಬಂದು ಹೋದರೂ ಪಕ್ಷದ ಬುಡ ಅಲುಗಾಡುವುದಿಲ್ಲ' ಎಂದರು.ಬಿಜೆಪಿಯ ಹಲವರು ಕೆಜೆಪಿ ಜತೆ ಗುರುತಿಸಿಕೊಂಡಿದ್ದು, ಅಂತಹವರ ವಿರುದ್ಧ ಪಕ್ಷ ಕ್ರಮ ತೆಗೆದುಕೊಳ್ಳಲಿದೆ. ಆದರೆ ಅದಕ್ಕಾಗಿ ಸ್ವಲ್ಪ ದಿನ ಕಾದು ನೋಡಲಿದೆ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry