ಭಾನುವಾರ, ಮೇ 16, 2021
29 °C

ಸಂಚಾರಕ್ಕೆ ಸಜ್ಜಾದ ಸಿಕ್ಕೇರಿ ಕ್ರಾಸ್ ಮೇಲ್ಸೇತುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಚಾರಕ್ಕೆ ಸಜ್ಜಾದ ಸಿಕ್ಕೇರಿ ಕ್ರಾಸ್ ಮೇಲ್ಸೇತುವೆ

ಬಾಗಲಕೋಟೆ: ಮೂರು ವರ್ಷದಿಂದ ಕುಂಟುತ್ತಾ ಸಾಗಿದ್ದ  ಸಿಕ್ಕೇರಿ ಕ್ರಾಸ್ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಅಂತೂ ಕೊನೆಗೊಂಡಿದ್ದು, ಇದೇ 19ರಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸಂಚಾರಕ್ಕೆ ಮುಕ್ತಗೊಳಿಸಲಿದ್ದಾರೆ.ರೂ.12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಮೇಲ್ಸೇತುವೆಯಿಂದ ಈ ವೃತ್ತದಲ್ಲಿ ಪದೇಪದೇ ತಲೆದೋರುತ್ತಿದ್ದ ವಾಹನ ದಟ್ಟಣೆಗೆ ಮುಕ್ತಿ ಸಿಗಲಿದೆ.ಸಿಕ್ಕೇರಿ ಕ್ರಾಸ್ ಬಳಿ ಗದಗ-ಸೊಲ್ಲಾಪುರ ರೈಲ್ವೆ ಮಾರ್ಗ ಹಾದುಹೋಗುವುದರಿಂದ ವಾಹನ ಸಂಚಾರಕ್ಕೆ ಇಲ್ಲಿ ಪದೇಪದೇ ಅಡಚಣೆಯಾಗುತ್ತಿತ್ತು. ರೈಲು ಹಾದು ಹೋಗುವವರೆಗೂ ಬಹಳಹೊತ್ತು ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಲ್ಲಬೇಕಾಗಿತ್ತು. ಇದರಿಂದ ನಿಗದಿತ ಸಮಯಕ್ಕೆ ಪ್ರಯಾಣಿಕರು ಹೋಗಲು ಅಡಚಣೆಯಾಗುತ್ತಿತ್ತು.ಸಾರ್ವಜನಿಕರ ಬಹುದಿನದ ಬೇಡಿಕೆಗೆ  ಸ್ಪಂದಿಸಿದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಯಿತು. ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡ ಮೊದಲ ಗುತ್ತಿಗೆದಾರರು ಮಧ್ಯಂತರದಲ್ಲಿ ಬಿಟ್ಟುಹೋದ ಕಾರಣ ಸ್ಥಳೀಯ ಶಾಸಕ ವೀರಣ್ಣ ಚರಂತಿಮಠ ಅವರ ಮುತುವರ್ಜಿಯಿಂದ ಎರಡನೇ ಗುತ್ತಿಗೆದಾರರು ಗುಣಮಟ್ಟದ ಮೇಲ್ಸೇತುವೆಯನ್ನು ಇದೀಗ ನಿರ್ಮಿಸಿದ್ದಾರೆ.ಎಂಟು ತಿಂಗಳ ಹಿಂದೇ ಸಂಚಾರಕ್ಕೆ ಮುಕ್ತವಾಗಬೇಕಿದ್ದ ಮೇಲ್ಸೇತುವೆ ಸ್ವಲ್ಟ ತಡವಾಗಿ ಸಂಚಾರಕ್ಕೆ ಯೋಗ್ಯವಾಗಿದೆ.ಹದಗೆಟ್ಟ ರಸ್ತೆ: ನಗರದಿಂದ ಬಾದಾಮಿ, ಹುನಗುಂದ, ಕೂಡಲಸಂಗಮಕ್ಕೆ ತೆರಳುವ ಮೇಲ್ಸೇತುವೆ ಕೆಳಭಾಗದ ರಸ್ತೆ ಸಂಪೂರ್ಣ ಹದಗೆಟ್ಟಿದೆ.  ಮೇಲ್ಸೇತುವೆ ಕಾಮಗಾರಿಯಿಂದ ಮೂರು ವರ್ಷಗಳಿಂದ ಇಲ್ಲಿ ವಾಹನ ಮತ್ತು ಸಾರ್ವಜನಿಕ ಸಂಚಾರ ಯಮಯಾತನೆಯಾಗಿ ಮಾರ್ಪಟ್ಟಿದೆ.ಭಾರಿ ವಾಹನಗಳ ಸಂಚಾರದಿಂದ ಬೃಹದಾಕಾರದ ಹೊಂಡಗಳು ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ನೀರು ನಿಲ್ಲುವುದರಿಂದ ರಸ್ತೆ ಸಂಪೂರ್ಣ ಕೆಸರಾಗಿ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಸಿಕ್ಕೇರಿ ಕ್ರಾಸ್ ನಿವಾಸಿಗಳಾದ ಎಂ.ಎಂ. ಬಾಗಲವಾಡಿ ಮತ್ತು ಆನಂದ ಎನ್. ಯಡಹಳ್ಳಿ ಅವರು ಸಿಕ್ಕೇರಿ ಕೆಳ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಹೊಂಡ-ಗುಂಡಿಗಳಲ್ಲಿ ವಾಹನಗಳು ಸಂಚರಿಸುತ್ತಿವೆ. ಇದು ನಿತ್ಯ ಅಪಾಯಕ್ಕೆ ಆಹ್ವಾನ ನೀಡುತ್ತದೆ. ಇಲ್ಲಿನ ಧೂಳು ಮತ್ತು ಕೆಸರು ಅಕ್ಕಪಕ್ಕದ ಅಂಗಡಿ, ಮನೆಗಳಿಗೆ ಬರುತ್ತಿದೆ. ಪಾದಾಚಾರಿಗಳು ನೆಮ್ಮದಿಯಿಂದ ಸಂಚರಿಸದಂತ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಿಸಿದವರು ಗಮನ ಹರಿಸುವಂತೆ ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.