ಶನಿವಾರ, ಮೇ 15, 2021
25 °C
ಕೇಂದ್ರ ಸಂಪುಟದ ಮಹತ್ವದ ನಿರ್ಧಾರ

ಸಂಚಾರಿ ಪೀಠ ಕಾಯಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರದ ಯುಪಿಎ ಸರ್ಕಾರ ರಾಜ್ಯದ ಜನರಿಗೆ `ಡಬಲ್ ಬಂಪರ್ ಕೊಡುಗೆ' ನೀಡಿದೆ. ಧಾರವಾಡ ಹಾಗೂ ಗುಲ್ಬರ್ಗದಲ್ಲಿ ಐದು ವರ್ಷದ ಹಿಂದೆ ಆರಂಭವಾದ ಹೈಕೋರ್ಟ್ `ಸಂಚಾರಿ ಪೀಠ'ಗಳನ್ನು `ಕಾಯಂ ಪೀಠ'ಗಳಾಗಿ ಪರಿವರ್ತಿಸುವ ಮಹತ್ವದ ನಿರ್ಧಾರವನ್ನು ಮಂಗಳವಾರ ರಾತ್ರಿ ಕೈಗೊಂಡಿದೆ. ಅಲ್ಲದೆ, ಬೆಂಗಳೂರು ವಿಮಾನ ನಿಲ್ದಾಣದ ಸಮೀಪ `ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯ' (ಐಟಿಐಆರ್) ಸ್ಥಾಪಿಸಲು ಒಪ್ಪಿಗೆ ನೀಡಿದೆ.ಪ್ರಧಾನಿ ಮನಮೋಹನ್‌ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಧಾರವಾಡ ಮತ್ತು ಗುಲ್ಬರ್ಗದ ಹೈಕೋರ್ಟ್ ಸಂಚಾರಿ ಪೀಠಗಳನ್ನು ಕಾಯಂಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಕೇಂದ್ರ ಕಾರ್ಮಿಕ ಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ `ಪ್ರಜಾವಾಣಿ'ಗೆ ತಿಳಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ. 2014ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಸರ್ಕಾರ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.ಹೈದರಾಬಾದ್- ಕರ್ನಾಟಕ ಜನರಿಗೆ ಸಂವಿಧಾನದ ಕಲಂ 371(ಜೆ) ಕ್ಕೆ ತಿದ್ದುಪಡಿ ಮಾಡುವ ಮೂಲಕ ವಿಶೇಷ ಸ್ಥಾನಮಾನ ನೀಡಿದ್ದ ಯುಪಿಎ ಸರ್ಕಾರ ಈಗ ಸದ್ದುಗದ್ದಲವಿಲ್ಲದೆ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಧಾರವಾಡ ಮತ್ತು ಗುಲ್ಬರ್ಗ ಸಂಚಾರಿ ಹೈಕೋರ್ಟ್ ಪೀಠಗಳನ್ನು ಕಾಯಂಗೊಳಿಸಿದೆ. ಧಾರವಾಡ ಹೈಕೋರ್ಟ್ ಪೀಠವು ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉತ್ತರ ಕರ್ನಾಟಕ ಹಾಗೂ ಕೊಪ್ಪಳ ಜಿಲ್ಲೆಗಳ ವ್ಯಾಪ್ತಿಯ ಪ್ರಕರಣಗಳ ವಿಚಾರಣೆ ನಡೆಸಲಿದೆ. ಗುಲ್ಬರ್ಗ ಪೀಠವು ಬೀದರ್, ವಿಜಾಪುರ, ಗುಲ್ಬರ್ಗ ಮತ್ತು ರಾಯಚೂರು ಜಿಲ್ಲೆ ವ್ಯಾಪ್ತಿಯ ಪ್ರಕರಣಗಳ ವಿಚಾರಣೆ ನಡೆಸಲಿದೆ.ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ಎರಡು ಹೈಕೋರ್ಟ್ ಪೀಠಗಳಿಗೂ ಕಾಲಕಾಲಕ್ಕೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವರು.  ತಮ್ಮ ವಿವೇಚನಾ ಅಧಿಕಾರ ಬಳಸಿ ಯಾವುದೇ ಜಿಲ್ಲೆಯ ಯಾವುದೇ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳು ಬೆಂಗಳೂರು ಪ್ರಧಾನ ಪೀಠದಲ್ಲಿ ವಿಚಾರಣೆ ನಡೆಸಬಹುದಾಗಿದೆ. ಹಲವು ವರ್ಷಗಳ ಹೋರಾಟದ ಬಳಿಕ ಧಾರವಾಡ, ಗುಲ್ಬರ್ಗದಲ್ಲಿ 2008ರ ಜುಲೈ 4ರಂದು ಹೈಕೋರ್ಟ್ ಸಂಚಾರಿ ಪೀಠಗಳನ್ನು ಸ್ಥಾಪಿಸಲಾಯಿತು. ಮೂರು ದಿನದ ನಂತರ ಈ ಪೀಠಗಳು ಕಾರ್ಯಾರಂಭ ಮಾಡಿದವು. 1999, 2000 ಹಾಗೂ 2002ರಲ್ಲಿ ಧಾರವಾಡ ಒಳಗೊಂಡಂತೆ ಉತ್ತರ ಕರ್ನಾಟಕದ ಹಲವು ಕಡೆ ಇದಕ್ಕಾಗಿ ಚಳವಳಿ ನಡೆದಿತ್ತು.ನ್ಯಾ. ಅಶೋಕ್‌ಭಾನ್ ನೇತೃತ್ವದಲ್ಲಿ 1999ರಲ್ಲಿ ಹೈಕೋರ್ಟ್ ಪೀಠದ ಬೇಡಿಕೆ ಪರಿಶೀಲಿಸಲು ನೇಮಕಗೊಂಡಿದ್ದ ಐವರು ನ್ಯಾಯಾಧೀಶರ ಸಮಿತಿ `ಉತ್ತರ ಕರ್ನಾಟಕದಲ್ಲಿ ಪೀಠದ ಅಗತ್ಯವಿಲ್ಲ' ಎಂದು ವರದಿ ನೀಡಿತು. ಇದರಿಂದಾಗಿ ಹೋರಾಟ ತೀವ್ರ ಸ್ವರೂಪ ಪಡೆಯಿತು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಿದ್ದ ಎನ್.ಕೆ. ಜೈನ್ 2002ರಲ್ಲಿ ಏಳು ನ್ಯಾಯಮೂರ್ತಿಗಳ ಸಮಿತಿ ಮಾಡಿದ್ದರು. ಐವರು ನ್ಯಾಯಮೂರ್ತಿಗಳು ಬೇಡಿಕೆಗೆ ಸ್ಪಂದಿಸಿ ಸಂಚಾರಿ ಪೀಠ ಸ್ಥಾಪಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು.ಮಾಹಿತಿ ತಂತ್ರಜ್ಞಾನ ವಲಯ: ಇದಲ್ಲದೆ, ಬೆಂಗಳೂರು ವಿಮಾನ ನಿಲ್ದಾಣ ಸಮೀಪ 42.51 ಚದರ ಕಿ.ಮೀ. ಪ್ರದೇಶದಲ್ಲಿ `ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯ' ಸ್ಥಾಪನೆಗೂ ಕೇಂದ್ರ ಸಂಪುಟ ಅನುಮತಿ ನೀಡಿದೆ. ರಾಜ್ಯ ಸರ್ಕಾರದ ಪ್ರಸ್ತಾವದಂತೆ 20 ವರ್ಷಗಳ ಅವಧಿಯಲ್ಲಿ (2012-2032) ಯೋಜನೆಗೆ ಎರಡು ಹಂತಗಳಲ್ಲಿ ರೂ. 1.06 ಲಕ್ಷ ಕೋಟಿ ಬಂಡವಾಳ ಆಕರ್ಷಿಸಲು ಉದ್ದೇಶಿಸಲಾಗಿದೆ.ಇದರಿಂದಾಗಿ 2032ರ ವೇಳೆಗೆ ವಾರ್ಷಿಕ ರೂ. 2.01 ಲಕ್ಷ ಕೋಟಿ ವಹಿವಾಟು ನಡೆಯಲಿದೆ. ಇದರಲ್ಲಿ ಶೇ 70 ಭಾಗ ಐಟಿ ಮತ್ತು ಐಟಿಇಎಸ್ ಕೊಡುಗೆ. ಐಟಿಐಆರ್ ಯೋಜನೆಯಿಂದ 1.2 ದಶಲಕ್ಷ ಪ್ರತ್ಯಕ್ಷ ಹಾಗೂ 2.8 ದಶಲಕ್ಷ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಯೋಜನೆ ಗಮನದಲ್ಲಿ ಇಟ್ಟುಕೊಂಡು ಮೆಟ್ರೊ ರೈಲು ವಿಸ್ತರಣೆಗೆ ಹಾಗೂ ರಸ್ತೆ ಅಭಿವೃದ್ಧಿಗೆ ಕೇಂದ್ರದಿಂದ ರೂ. 7,010 ಕೋಟಿ ನೆರವು ಕೇಳಲಾಗಿದೆ.ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯಕ್ಕಾಗಿ ರಾಜ್ಯ ಸರ್ಕಾರ ಬೆಂಗಳೂರು ವಿಮಾನ ನಿಲ್ದಾಣದ ಸಮೀಪ 10,500 ಎಕರೆ ಭೂಮಿ ಗುರುತಿಸಿದೆ. ವಿಮಾನ ನಿಲ್ದಾಣದಿಂದ 14 ಕಿ.ಮೀ ಉತ್ತರಕ್ಕಿರುವ ಈ ಪ್ರದೇಶ ನಗರದಿಂದ 44 ಕಿ.ಮೀ. ದೂರದಲ್ಲಿದೆ. ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲ್ಲೂಕುಗಳ 45 ಕಂದಾಯ ಗ್ರಾಮಗಳನ್ನು ಇದು ಒಳಗೊಳ್ಳಲಿದೆ.ಕೋರಮಂಗಲ- ಛಲಗಟ್ಟ ಕಣಿವೆ, ರಾಜ ಕಾಲುವೆ ಅಥವಾ ಮೈಸೂರು ರಸ್ತೆಯ ವೃಷಭಾವತಿ ಕಣಿವೆಯಿಂದ ಮರು ಸಂಸ್ಕರಣೆ ಮಾಡಿದ ನೀರು ಪೂರೈಕೆಗೆ 60 ಕಿ.ಮೀ ಪೈಪ್‌ಲೈನ್ ಅಳವಡಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ವಿದ್ಯುತ್ ಪೂರೈಕೆಗಾಗರೂ.ಿ 340 ಕೋಟಿ ವೆಚ್ಚದಲ್ಲಿ ಆರು ಉಪ ಕೇಂದ್ರಗಳು, 65 ಕಿ.ಮೀ ವಿದ್ಯುತ್ ಪ್ರಸರಣ ಲೈನ್‌ಗಳನ್ನು ಹಾಕುವ ಆಲೋಚನೆ ಇದೆ.ರಾಷ್ಟ್ರೀಯ ಹೆದ್ದಾರಿ 207 ಅಗಲೀಕರಣಕ್ಕಾಗಿ ಪ್ರತಿ ಕಿ.ಮೀ.ಗೆ 36 ಕೋಟಿಯಂತೆ 18 ಕಿ.ಮೀ ಅಗಲೀಕರಣಕ್ಕೆ ರೂ. 1,650 ಕೋಟಿ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಐಟಿಐಆರ್‌ವರೆಗೆ 30 ಕಿ.ಮೀ. ಮೆಟ್ರೊ ರೈಲು ಯೋಜನೆ ವಿಸ್ತರಣೆ ಪ್ರತಿ ಕಿ.ಮೀ.ಗೆ ರೂ. 212 ಕೋಟಿಯಂತೆ ರೂ. 6360 ಕೋಟಿ ನೆರವನ್ನು ಕೇಂದ್ರದಿಂದ ಕೇಳಲಾಗಿದೆ. ರಸ್ತೆ ಅಗಲೀಕರಣ 2015ಕ್ಕೆ ಮತ್ತು ಮೆಟ್ರೊ ಯೋಜನೆ ವಿಸ್ತರಣೆ 2019ಕ್ಕೆ ಪೂರ್ಣಗೊಳಿಸಲು ಉದ್ದೇಶಿಸಿಲಾಗಿದೆ.`ಧನ್ಯವಾದಗಳು'

ನ್ಯಾಯವನ್ನು ಉತ್ತರ ಕರ್ನಾಟಕದ ಜನತೆಯ ಮನೆ ಬಾಗಿಲಿಗೆ ಮುಟ್ಟಿಸುವ ಉದ್ದೇಶದಿಂದ ಹೈಕೋರ್ಟ್ ಸಂಚಾರಿ ಪೀಠ ಧಾರವಾಡದಲ್ಲಿ ಸ್ಥಾಪನೆಯಾಗಿತ್ತಾದರೂ ಕಾಯಂ ಪೀಠದ ಬೇಡಿಕೆ ಹಾಗೇ ಉಳಿದಿತ್ತು. ಇದೀಗ ಅದೂ ಈಡೇರಿದೆ. ಇದಕ್ಕೆ ಕಾರಣರಾದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು.

-ಬಿ.ಡಿ.ಹಿರೇಮಠ, ಅಧ್ಯಕ್ಷರು, ಹೈಕೋರ್ಟ್ ವಕೀಲರ ಸಂಘ, ಧಾರವಾಡ`ಹೈ.ಕ'ಕ್ಕೆ ಮನ್ನಣೆ


ಗುಲ್ಬರ್ಗದ ಹೈಕೋರ್ಟ್ ಸಂಚಾರಿ ಪೀಠ ರದ್ದುಗೊಳ್ಳುತ್ತದೆ ಎಂಬ ಸುಳ್ಳು ಪ್ರಚಾರ ನಡೆಸಲಾಗುತ್ತಿತ್ತು. ಆದರೆ ಈ ನಡುವೆ ಹೈ-ಕ ಜನತೆಯ ಬೇಡಿಕೆಯನ್ನು ಪರಿಗಣಿಸಿ ಸಂಚಾರಿ  ಪೀಠವನ್ನು ಕಾಯಂ ಮಾಡಿರುವ ಸುಪ್ರೀಂ ಮತ್ತು ಹೈಕೋರ್ಟ್‌ನ ಮುಖ್ಯ ಹಾಗೂ ಎಲ್ಲ ನ್ಯಾಯಮೂರ್ತಿಗಳು ಮತ್ತು ಕೇಂದ್ರ ಸರ್ಕಾರ, ಅಲ್ಲದೇ ಇದಕ್ಕಾಗಿ ಶ್ರಮಿಸಿದ ಸ್ಥಳೀಯ ಜನಪ್ರತಿನಿಧಿಗಳಿಗೆ ವಕೀಲರು ಹಾಗೂ ಸಮಸ್ತ ಜನರ ಪರವಾಗಿ ಧನ್ಯವಾದಗಳು.

-ಗೌರೀಶ್ ಎಎಸ್. ಕಾಶಂಪುರ, ಗುಲ್ಬರ್ಗ ವಕೀಲರ ಸಂಘ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.