ಮಂಗಳವಾರ, ನವೆಂಬರ್ 19, 2019
28 °C

ಸಂಚಾರಿ ಮತಗಟ್ಟೆಗಳು ಜಾರಿಗೆ ಬರಲಿ

Published:
Updated:

ಪ್ರತಿ ಚುನಾವಣೆಯಲ್ಲೂ ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಶೇ. 45 ರಷ್ಟು ಜನ ಮತ ನೀಡುತ್ತಾರೆ. ಇತ್ತೀಚಿನ ಕೆಲವು ವರ್ಷಗಳಲ್ಲಿ, ಕೆಲವು ಕಡೆಗಳಲ್ಲಿ ಮಾತ್ರ ಸ್ವಲ್ಪ ಹೆಚ್ಚು ಜನರು ಮತ ಚಲಾಯಿಸಿದ್ದಾರೆ. ಉಳಿದ ಶೇ. 55 ರಷ್ಟು ಮಂದಿ ಮತ ಹಾಕುವ ಗೋಜಿಗೇ ಹೋಗಿಲ್ಲ.ಅಂದರೆ ನಮ್ಮ ದೇಶದ ಪ್ರಭುತ್ವ ನಡೆಯುತ್ತಿರುವುದೇ ಈ 45 ಜನಗಳಿಂದ ! ಆದರೂ ಏನಿಲ್ಲವೆಂದರೂ ಅಂದಾಜು 35 ಮಂದಿ ಹಣಕ್ಕೊ, ಹೆಂಡಕ್ಕೊ, ಸೀರೆಗೊ, ಪಂಚೆಯ (ಮೇ 2013ರ ಚುನಾವಣೆಯಲ್ಲಿ ಸೆಟ್‌ಟಾಪ್ ಬಾಕ್ಸ್‌ನ ಆಮಿಷವೂ ಸೇರಿದೆ.) ಆಮಿಷಕ್ಕೊ ಸೋತು, ಕೊಟ್ಟ ಭಾಷೆಗೆ ತಪ್ಪದಂತೆ  ಹೇಳಿ ಕೊಟ್ಟ ಪ್ರಕಾರ ಸೀಲು ಅಥವಾ ಗುಂಡಿ ಒತ್ತುತ್ತಿದ್ದಾರೆ.ವಾಸ್ತವದಲ್ಲಿ ಮತದ ಅರ್ಥವೂ ಅವರಿಗೆ ಗೊತ್ತಿಲ್ಲ. ಪ್ರಜಾತಂತ್ರ ವ್ಯವಸ್ಥೆ ಎಂದರೇನು ಎಂತಲೂ ಅರ್ಥವಾಗಿಲ್ಲ. ಕಟು ವಾಸ್ತವವೆಂದರೆ ಇನ್ನುಳಿದ ಹತ್ತು ಜನರು ನೀಡುವ ಸ್ವ ವಿವೇಚನೆಯ ಮತಗಳು ನಮಗೆ ಬೇಕಾದ ಅರ್ಹ ಹಾಗೂ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಸೋಲುತ್ತವೆ.ಆದ್ದರಿಂದಲೇ ದೇಶದಲ್ಲಿ ನಡೆಯುವ ಈ ಸಲದ ಮುಂಬರುವ ಚುನಾವಣೆಗಳಲ್ಲಿ ಮೊದಲು ಎಲ್ಲ ಅರ್ಹ ಪ್ರಜೆಗಳೂ ಮತ ಹಾಕುವುದು ಅತ್ಯಂತ ಅಗತ್ಯ ಎಂಬುದನ್ನು ಮನಗಾಣಿಸಲು ಹಲವು ಬಗೆಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ದೇಶದ ಚುನಾವಣಾ ಇತಿಹಾಸದಲ್ಲಿಯೇ ಪ್ರಾಯಶಃ ಇಷ್ಟು ದೊಡ್ಡ ಪ್ರಮಾಣದಲ್ಲಿ ಎಲ್ಲ ಅರ್ಹರೂ ಮತ ಹಾಕುವಂತೆ ಅರಿವು ಮೂಡಿಸಲು ವಿವಿಧ ಬಗೆಯ ಪ್ರಚಾರಗಳನ್ನು ಕೈಗೊಳ್ಳುತ್ತಿರುವುದು ಇದೇ ಮೊದಲು!ಈ ಮೇಲಿನ  ಅಂಶಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಹಾಗೂ ಪ್ರಾಜ್ಞ ನಾಗರಿಕರ ಅವಗಾಹನೆಗೆ ಒಂದು ನಮ್ರ ಸಲಹೆ. ಈಗಿರುವ ಸ್ಥಾವರ ಮತಗಟ್ಟೆಗಳ ಬದಲು ಅಥವಾ ಅವುಗಳಿಗೆ ಪರ್ಯಾವಾಗಿ ಸಂಚಾರಿ ಮತಗಟ್ಟೆಗಳನ್ನು ಸೃಷ್ಟಿಸಿ ಕಾರ್ಯಾಚರಣೆಗೆ ತರುವುದು. ಇದು ಈಗಿನ  `ಮತಶಕ್ತಿ' ಯ ಕೊರತೆಯನ್ನು ಬಹು ಪರಿಣಾಮಕಾರಿಯಾಗಿ ನೀಗಬಲ್ಲದು ಹಾಗೂ ಉತ್ತಮ ಫಲಿತಾಂಶವನ್ನು ಕೂಡ ನೀಡಬಲ್ಲದು.ಒಂದು ಸ್ಥಾವರ ಮತಗಟ್ಟೆಯ ವ್ಯಾಪ್ತಿಯಲ್ಲಿ ಬರುವ ಪ್ರದೇಶದಲ್ಲಿನ ಎಲ್ಲ ಮನೆಗಳಿಗೂ ಈ ಸಂಚಾರಿ ಮತಗಟ್ಟೆಯು ಮನೆ ಸಂಖ್ಯೆಗೆ ಅನುಸಾರವಾಗಿ ಚಲಿಸುತ್ತದೆ. ಮನೆಯ ಪ್ರತಿಯೊಬ್ಬ ಅರ್ಹ ಮತದಾರರ ಪರಿಷ್ಕೃತ ಪಟ್ಟಿ ಈ ಸಂಚಾರಿ ಮತಗಟ್ಟೆಯಲ್ಲಿರುವ ಅಧಿಕಾರಿಗಳ ಬಳಿ ಇರುತ್ತದೆ. ಚುನಾವಣಾ ಗುರುತಿನ ಚೀಟಿ ಹಾಗೂ ಬಾರ್‌ಕೋಡ್ ಇರುವ ಆಧಾರ್ ಪತ್ರವು ಮತದಾರರ ಅಧಿಕೃತ ಗುರುತಿನೊಂದಿಗೆ ಅವರು ಅದೇ ಮನೆಯ ವಿಳಾಸದ ವ್ಯಕ್ತಿ ಎಂದು ಗುರುತಿಸುವುದು ಸಹ ಸುಲಭವಾಗುತ್ತದೆ.ವಿವಿಧ ಪಕ್ಷಗಳ ಹಸ್ತಕರು ಈ ಮತಗಟ್ಟೆಯ್ಲ್ಲಲಿರುತ್ತಾರಾದರೂ ಮತ ನೀಡುವ ವೇಳೆ ಒತ್ತಡ ಹೇರುವ ಪ್ರಚಾರಕರ ಹಾವಳಿಯು ಇಲ್ಲಿರಲಾರದು. ಕಾನೂನು ಸುವ್ಯವಸ್ಥೆಯನ್ನು ಕಾಯಲು ಪೊಲೀಸ್ ಸಿಬ್ಬಂದಿಯೂ ಇದರ ಜೊತೆಯಲ್ಲಿರುತ್ತಾರೆ. ಈ ಸಂಚಾರಿ ಮತಗಟ್ಟೆಯು ಒಂದು ಕಟ್ಟೆಯಲ್ಲ, ಬದಲಾಗಿ ಅತ್ಯಾಧುನಿಕ ವಿದ್ಯುನ್ಮಾನ ಪರಿಕರಗಳಿಂದ ಕೂಡಿದ ಒಂದು ಸುಸಜ್ಜಿತ ವಾಹನ.

ಯಾವುದೇ ಕಾರಣಕ್ಕೂ ಇಲ್ಲಿ ಮತಪತ್ರ ಬಳಸುವುದಿಲ್ಲ. ಮತದಾನ ಮುಗಿದ ನಂತರ ಮತಗಟ್ಟೆಗಳಿಂದ ಇಲ್ಲವೆ ಸಾಗಿಸುತ್ತಿದ್ದ ವಾಹನಗಳಿಂದ ಮತಪೆಟ್ಟಿಗೆಗಳನ್ನು ಅಥವಾ ವಿದ್ಯುನ್ಮಾನ ಮತಯಂತ್ರಗಳನ್ನು ಅಪಹರಿಸಿದ ನಿದರ್ಶನಗಳು ನಮ್ಮ ದೇಶದಲ್ಲಿವೆ.

ಆದ್ದರಿಂದ ಈ ಸಂಚಾರಿ ಮತಗಟ್ಟೆಯು ಇನ್ನೂ ಒಂದು ಸುರಕ್ಷಾ ಕ್ರಮವನ್ನು ಹೊಂದಿರುತ್ತದೆ. ಮತದಾರರು ಒತ್ತಿದ ಗುಂಡಿಯಿಂದ ಯಂತ್ರದಲ್ಲಿ ಮತವು ದಾಖಲಾಗುವುದರ ಜೊತೆಯಲ್ಲಿ ಉಪಗ್ರಹ ಸಂಪರ್ಕದ ಮೂಲಕ ಕೇಂದ್ರ/ ರಾಜ್ಯ ಚುನಾವಣಾ  ಕಚೇರಿಯಲ್ಲಿರುವ ಯಂತ್ರದಲ್ಲಿಯೂ ನಿರ್ದಿಷ್ಟ ಅಭ್ಯರ್ಥಿಯ ಹೆಸರಿನಲ್ಲಿ ದಾಖಲಾಗುತ್ತದೆ. (ಅಪಹರಣಕಾರರು ಕ್ಷಮಿಸಬೇಕು!)ಈ ಸಂದರ್ಭದಲ್ಲಿ, ಸಂಚಾರಿ ಮತಗಟ್ಟೆಯು ತಮ್ಮ ಮನೆಯ ಬಾಗಿಲಿಗೆ ಬರುವ ಹೊತ್ತನ್ನು ಅನುಕ್ರಮಣಿಕೆಯಲ್ಲಿರುವ ಅಥವಾ ಸರದಿಯಲ್ಲಿರುವ ತಮ್ಮ ಮನೆಯ ಅಂದಾಜು ವೇಳೆಗೆ ಮನೆಯ ಎಲ್ಲ ಅರ್ಹ ಮತದಾರರು ಉಪಸ್ಥಿತರಿದ್ದು (ಅಥವಾ ಉಪಸ್ಥಿತರಿರುವಂತೆ ನೋಡಿಕೊಂಡು) ಪ್ರತಿಯೊಬ್ಬರೂ ನಿರಾಯಾಸವಾಗಿ, ಒತ್ತಡ ಮುಕ್ತರಾಗಿ ಮತ ಹಾಕುತ್ತಾರೆ.ಚುನಾವಣಾ ನಿಮಿತ್ತ ಅಂದು ಸರ್ಕಾರಿ ವಿಶೇಷ ರಜಾದಿನವಾಗಿರುತ್ತದೆ. ಆದಾಗ್ಯೂ ಅನಿವಾರ್ಯ ಕಾರ್ಯನಿಮಿತ್ತ ಮನೆಯಿಂದ ಹೊರಗೆ ಹೋದವರು ತಾವಿರುವ ಸ್ಥಳದಲ್ಲಿಯೇ ಮತ ನೀಡಲು ಬೇಕಾದ ಅಗತ್ಯ ವ್ಯವಸ್ಥೆಯನ್ನು ಆಯೋಗ ಮಾಡುತ್ತದೆ. ಹಾಗೆಯೇ ತಡವಾಗಿ ಮನೆಗೆ ಹಿಂತಿರುಗಿದವರ ಅನುಕೂಲಕ್ಕಾಗಿ ಈ ಮತಗಟ್ಟೆಯು ಮಾಮೂಲಿಗಿಂತ ಹೆಚ್ಚಿನ ನಿರ್ದಿಷ್ಟ ಅವಧಿಯವರಿಗೆ ಆಯಾಯ ಮತಗಟ್ಟೆಯ ವ್ಯಾಪ್ತಿ ಪ್ರದೇಶದ ನಿಶ್ಚಿತ ಸ್ಥಳದಲ್ಲಿಯೇ ಇರುತ್ತದೆ. ಈ ಅವಧಿಯು ಮುಗಿಯುತ್ತಿದ್ದಂತೆ ಗಣಕವು ಸ್ವಯಂಚಾಲಿತವಾಗಿ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸುತ್ತದೆ. ಸೇರ್ಪಡೆ ಮಾಡಲು ಅವಕಾಶವಿದ್ದಲ್ಲಿ ಇನ್ನೂ ಕೆಲವು ಸೌಲಭ್ಯಗಳನ್ನು ಈ ಸಂಚಾರಿ ಮತಗಟ್ಟೆಯು ಒದಗಿಸುತ್ತದೆ.* ಮತದಾನ ನಡೆಯುವ ಸಮಯದಲ್ಲಿ ಆ ಮನೆಯ ಅರ್ಹ ಮತದಾರರ ಹೆಸರುಗಳು ವಾಹನದ ಹೊರಭಾಗದ ವಿದ್ಯುತ್ ಫಲಕದಲ್ಲಿ ಪ್ರಕಟವಾಗುತ್ತವೆ.*ಮುಂದಿನ ಮನೆಯ ಹಿರಿಯ ವ್ಯಕ್ತಿಯ ಮೊಬೈಲ್ ವಾಣಿಗೆ ಮುಂದಿನ ಸರದಿಯ ಸೂಚನೆ ದೊರೆಯುತ್ತದೆ.*. ಮತದಾನವಾಗುತ್ತಿದ್ದಂತೆಯೇ ವಾಹನದ ಹೊರಬದಿಯಲ್ಲಿನ ವಿದ್ಯುತ್ ಫಲಕದಲ್ಲಿ ಆ ಪ್ರದೇಶದ ಮತ್ತು

ಮತಕ್ಷೇತ್ರದ ಒಟ್ಟು ಮತಗಳೆಷ್ಟು, ಹಾಕಿರುವ ಮತಗಳೆಷ್ಟು ಹಾಗೂ ಬಾಕಿ ಉಳಿದಿರುವ ಮತಗಳೆಷ್ಟು ಎಂಬ

ಮಾಹಿತಿ ಪ್ರಕಟವಾಗುತ್ತಿರುತ್ತದೆ.ಕೊನೆಯದಾಗಿ, ಮತ ನೀಡಲು ನಿರಾಕರಿಸುವವರಿದ್ದರೆ ಇತ್ತೀಚೆಗೆ ಆ ಬಗ್ಗೆ ನಿರ್ದಿಷ್ಟ ಕ್ರಮವನ್ನು ಜಾರಿ ಮಾಡಲಾಗಿದೆ. ಆ ಕ್ರಮವನ್ನು ಈ ಸಂಚಾರಿ ಮತಗಟ್ಟೆಯೇ ನೆರವೇರಿಸುತ್ತದೆ. ಮತ ನೀಡದೇ ತಪ್ಪಿಸಿಕೊಳ್ಳುವಂತಿಲ್ಲ, ನಿರಾಕರಿಸುವವರಿಗೆ ನಿರ್ದಿಷ್ಟ ಕ್ರಮವನ್ನನುಸರಿಸಲು ಸ್ವಾತಂತ್ರ್ಯವಿದೆ.ಈ ವ್ಯವಸ್ಥೆಯನ್ನು ಅಕ್ರಮಶೂರರ ಹೊರತು ಯಾರೂ ನಿರಾಕರಿಸಲಿಕ್ಕಿಲ್ಲ. ಬಾಧಕಗಳಿದ್ದರೆ ಅಥವಾ ಇನ್ನೂ ಹೆಚ್ಚಿನ ಸಲಹೆಗಳಿದ್ದಲ್ಲಿ ಪ್ರಾಜ್ಞರು ದಯಮಾಡಿ ಸೂಚಿಸಲಿ.(ಲೇಖಕರು ಪ್ರೊಫೆಸರ್, ಸಮಾಜಶಾಸ್ತ್ರ ಅಧ್ಯಯನ ವಿಭಾಗ, ಮಾನಸ ಗಂಗೋತ್ರಿ,

ಮೈಸೂರು ವಿಶ್ವವಿದ್ಯಾಲಯ)

ಪ್ರತಿಕ್ರಿಯಿಸಿ (+)