ಮಂಗಳವಾರ, ಮೇ 11, 2021
25 °C

ಸಂಚಾರಿ ಸಂತೆ!

ಚಿತ್ರ Updated:

ಅಕ್ಷರ ಗಾತ್ರ : | |

 ಮುಚ್ಚಿದರೆ ಬಸ್, ತೆರೆದರೆ ಬೃಹತ್ ಮಳಿಗೆ. ಸುತ್ತಾಡುತ್ತಾ ವ್ಯಾಪಾರ ಮಾಡಿದರೆ ಅದು `ಸಂಚಾರಿ ಸಂತೆ~. ಇದು ಕೆನರಾ ಬ್ಯಾಂಕ್‌ನ `ನಮ್ಮೂರ ಸಂತೆ~!ಕ್ಯಾಂಟರ್ ವ್ಯಾನ್‌ನ ಟ್ರೈಲರ್‌ನಲ್ಲಿ ಸಂತೆ ಮಳಿಗೆ. ಸಂತೆಯೊಳಗೆ ಮುನ್ನೂರಕ್ಕೂ ಅಧಿಕ ವೈವಿಧ್ಯಮಯ ಉತ್ಪನ್ನಗಳಿವೆ. ಬಿದಿರಿನ ಕಲಾಕೃತಿ, ಚನ್ನಪಟ್ಟಣದ ಬೊಂಬೆಗಳು, ತಿಂಡಿ-ತಿನಿಸು, ದೇಸಿ ಅಲಂಕಾರಿಕ ವಸ್ತುಗಳು..ಹೀಗೆ ಅಲ್ಲಿರುವುದೆಲ್ಲ ಹಳ್ಳಿಗಳ ಅಂಗಳದಲ್ಲಿ ಅರಳಿದ ವಸ್ತುಗಳು. ವಿಶೇಷ ಎಂದರೆ, ಈ ಮಳಿಗೆಯಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ತಯಾರಿಸಿದ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ ! 
ಪ್ಲಾಟಿನಂ ಜ್ಯೂಬಿಲಿ ಕೊಡುಗೆ

`ನಮ್ಮೂರ ಸಂತೆ~ - ಕೆನರಾಬ್ಯಾಂಕ್‌ನ ಗ್ರಾಮೀಣ ಅಭಿವೃದ್ಧಿ ವಿಭಾಗದ ಪರಿಕಲ್ಪನೆ. ಹತ್ತು ವರ್ಷಗಳ ಹಿಂದೆ ಬ್ಯಾಂಕ್‌ಗೆ 75 ವರ್ಷ ತುಂಬಿದ ಸಂದರ್ಭದಲ್ಲಿ `ನಮ್ಮೂರ ಸಂತೆ~ ಆರಂಭವಾಯಿತು. ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿಯ ವ್ಯಾಪ್ತಿಯಲ್ಲಿ ವಿವಿಧ ಸೇವಾ ಕ್ಷೇತ್ರಗಳಲ್ಲಿ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ಬ್ಯಾಂಕ್, ಗ್ರಾಮೀಣಾಭಿವೃದ್ಧಿಗಾಗಿ ಒತ್ತು ನೀಡಿದೆ. ಬ್ಯಾಂಕ್ ಕೇವಲ ಹಣಕಾಸಿನ ವಹಿವಾಟಿಗಷ್ಟೇ ಸೀಮಿತವಲ್ಲ, ಗ್ರಾಮೀಣ ಅಭಿವೃದ್ಧಿಗೂ ಆದ್ಯತೆ ನೀಡುತ್ತದೆ ಎನ್ನುವುದು ಈ ಸಂತೆ ಆಯೋಜನೆಯ ಉದ್ದೇಶ.

 

ಕನಕಪುರ ತಾಲ್ಲೂಕು ಹಾರೋಹಳ್ಳಿ ಸೇರಿದಂತೆ ರಾಜ್ಯದ ವಿವಿಧೆಡೆ ಕೆನರಾಬ್ಯಾಂಕ್ ಮಹಿಳೆಯರಿಗಾಗಿ ತರಬೇತಿ ಕೇಂದ್ರಗಳನ್ನು ತೆರೆದಿದೆ. ಜೊತೆಗೆ ಅನೇಕ ಮಹಿಳಾ ಸಂಘಗಳಿಗೆ ಸ್ವ ಉದ್ಯೋಗ ನಿರ್ಮಾಣಕ್ಕೆ ಸಾಲಸೌಲಭ್ಯ ನೀಡಿದೆ. ಈ ಸಂಘಗಳ ಸದಸ್ಯರ ಉತ್ಪನ್ನಗಳಿಗೆ ಮಾರುಕಟ್ಟೆ ನೀಡುವುದೇ ಈ ಸಂತೆಯ ಉದ್ದೇಶ.

 

ಹಾಗೆಂದು ಈ ಸಂತೆ ಕೆನರಾ ಬ್ಯಾಂಕ್ ಸಂಘಗಳ ಸದಸ್ಯರಿಗಷ್ಟೇ ಸೀಮಿತವಾಗಿಲ್ಲ. ಯಾವುದೇ ಬ್ಯಾಂಕ್, ಕೋ ಆಪರೇಟಿವ್ ಸೊಸೈಟಿ ಅಡಿ ನೋಂದಣಿಯಾಗಿರುವ ಮಹಿಳಾ ಸ್ವಸಹಾಯ ಸಂಘಗಳೂ ತಮ್ಮ ಉತ್ಪನ್ನಗಳನ್ನು ಸಂತೆಯಲ್ಲಿಟ್ಟು ಮಾರಾಟ ಮಾಡಬಹುದು ಎನ್ನುತ್ತಾರೆ ಕೆನರಾ ಬ್ಯಾಂಕ್‌ನ ಹಾರೋಹಳ್ಳಿ ಕೇಂದ್ರದ ನಿರ್ದೇಶಕ ಬಸಪ್ಪ.ವಹಿವಾಟು - ವ್ಯವಹಾರ : ಮಹಿಳಾ ಸಂಘಗಳ ಸದಸ್ಯರು ಅಥವಾ ಉತ್ಪಾದಕರು ನಿಗದಿಪಡಿಸಿದ ಬೆಲೆಯಲ್ಲೇ ಮಾರಾಟ. ಮಾರಾಟವಾಗದೇ ಉಳಿದ ವಸ್ತುಗಳನ್ನು ಎರಡು ತಿಂಗಳ ಅಂತರದಲ್ಲಿ ಸಂಬಂಧಪಟ್ಟವರಿಗೆ ವಾಪಸ್. ಪ್ರತಿ ತಿಂಗಳ 5 ನೇ ದಿನಾಂಕದಂದು ಉತ್ಪಾದಕರು ಹಾಗೂ ಸಂತೆ ಉಸ್ತುವಾರಿ ನೋಡಿಕೊಳ್ಳುವವರ ಸಭೆ ನಡೆಯುತ್ತದೆ.ಸಭೆಯಲ್ಲಿ ಮಾರುಕಟ್ಟೆ ವಹಿವಾಟು, ಬೆಲೆ ನಿಗದಿ ಮತ್ತಿತರ ವಿಚಾರಗಳ ಮಂಥನ.

`ನಮ್ಮೂರ ಸಂತೆಗೆ~- ಕೆನರಾ ಬ್ಯಾಂಕ್ ಹಾರೋಹಳ್ಳಿಯ ತರಬೇತಿ ಕೇಂದ್ರದಿಂದ ತರಬೇತಿ ಪಡೆದ ಮಹಿಳೆಯರೇ ಹೆಚ್ಚಾಗಿ ಉತ್ಪನ್ನಗಳನ್ನು ಕೊಡುತ್ತಾರೆ.ಎರಡು-ಮೂರು ವರ್ಷಗಳಿಂದ ಮಂಗಳೂರು, ಹಾವೇರಿ, ದಾವಣಗೆರೆ ಹಾಗೂ ಉತ್ತರ ಕರ್ನಾಟಕದ 1000ಕ್ಕೂ ಹೆಚ್ಚು ಮಹಿಳಾ ಸಂಘಗಳು ಉತ್ಪನ್ನಗಳನ್ನು ಸಂತೆಗೆ ಕಳುಹಿಸುತ್ತಿದ್ದಾರೆ. ಅವರಿಗೆಲ್ಲ ಇದೊಂದು ಪುಟ್ಟ ಔಟ್‌ಲೆಟ್.ವ್ಯಾಪಾರ ಪರವಾಗಿಲ್ಲ : ಒಂದು ದಿನಕ್ಕೆ 3000 ರೂಪಾಯಿವರೆಗೂ ವ್ಯಾಪಾರವಾಗುತ್ತದೆ. ಅದು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುತ್ತದೆ. ಅಪಾರ್ಟ್‌ಮೆಂಟ್, ಬಹುಮಹಡಿ ಕಟ್ಟಡ, ಸರ್ಕಾರಿ ಕಚೇರಿಗಳ ಆಸು-ಪಾಸಿನಲ್ಲಿ ವ್ಯಾಪಾರ ಪರವಾಗಿಲ್ಲ. ಗುಡಿಕೈಗಾರಿಕೆಗಳ ಹಿಂದಿನ ಪರಿಶ್ರಮ ಅರಿತಿದ್ದವರು ಹೆಚ್ಚಾಗಿ ವ್ಯಾಪಾರ ಮಾಡುತ್ತಾರೆ.ಮಹಿಳಾ ಸ್ವಾವಲಂಬನೆ ಬಗ್ಗೆ ತಿಳಿದವರು `ಚೌಕಾಶಿ~ ಮಾಡುವುದಿಲ್ಲ. `ಈ ಎರಡು ವಿಚಾರಗಳು ಜನರಲ್ಲಿ ಮನದಟ್ಟಾದರೆ ಸಂತೆ ಯಶಸ್ವಿಯಾಗುತ್ತದೆ. ಗ್ರಾಮೀಣ ಮಹಿಳೆಯರು ಸ್ವಾವಲಂಬಿಗಳಾಗಲು ಸಾಧ್ಯವಾಗುತ್ತದೆ~ ಎನ್ನುವುದು ಸಂಚಾರಿ ಸಂತೆ ಉಸ್ತುವಾರಿಗಳ ಅಭಿಪ್ರಾಯ.ತಿಂಗಳಿಗೊಮ್ಮೆ ಬಟವಾಡೆ : ಮಾರಾಟವಾದ ಉತ್ಪನ್ನಗಳ ಹಣವನ್ನು ಪ್ರತಿ ತಿಂಗಳು ಚೆಕ್ ಮೂಲಕ ಮಹಿಳಾ ಸಂಘಗಳಿಗೆ ತಲುಪಿಸಲಾಗುತ್ತದೆ. ಹಾಳಾಗದೇ ಉಳಿದ ಉಳಿಕೆ ಉತ್ಪನ್ನಗಳನ್ನು ಸಂತೆಯಲ್ಲಿ ಮುಂದುವರಿಸುತ್ತಾರೆ.ಉತ್ಪಾದಕರು ಕೇಳಿದರೆ ವಾಪಸ್ ಕಳುಹಿಸುತ್ತಾರೆ. ಉತ್ಪನ್ನಗಳ ಮಾರಾಟಕ್ಕೆ ಕಮಿಷನ್ ಪಡೆಯುವುದಿಲ್ಲ. ಬದಲಿಗೆ ವಾಹನದ ಖರ್ಚು, ಪೆಟ್ರೋಲ್, ಮಾರಾಟಗಾರರ ಸಂಬಳ, ಉಳಿದ ಎಲ್ಲ ನಿರ್ವಹಣೆಗಾಗಿ ಕೆನರಾ ಬ್ಯಾಂಕ್ ತಿಂಗಳಿಗೆ 60-70 ಸಾವಿರ ರೂಪಾಯಿ ಖರ್ಚು ಮಾಡುತ್ತದೆ. ಇದೆಲ್ಲಾ ಮಹಿಳಾ ಸಬಲೀಕರಣಕ್ಕಾಗಿ.ಕೊಡು-ಕೊಳ್ಳುವವರ ಪ್ರೀತಿ: ಕೆಲವು ಮಹಿಳೆಯರು ವೈಯಕ್ತಿವಾಗಿ ತಯಾರಿಸಿದ ಉತ್ಪನ್ನಗಳನ್ನು ಸಂತೆಯಲ್ಲಿಡುತ್ತಾರೆ. ಇನ್ನು ಕೆಲವು ಗುಂಪುಗಳ ಮೂಲಕ ಸಂತೆ ಜೊತೆ ಸಂಪರ್ಕದಲ್ಲಿರುತ್ತಾರೆ. ಒಟ್ಟಾರೆ ಕೊಡುವ ಹಾಗೂ ಕೊಳ್ಳುವ ಇಬ್ಬರಿಗೂ ಸಂತೆ ಬಗ್ಗೆ ಅಪಾರ ಪ್ರೀತಿ ಇದೆ.ಹುಬ್ಬಳಿ ಮೂಲದ ಲತಾ ಆರು ವರ್ಷಗಳಿಂದ ಗೃಹ ಉದ್ಯಮ ನಡೆಸುತ್ತಿದ್ದಾರೆ. 2009ರಿಂದ ಉತ್ತರ ಕರ್ನಾಟಕದ ತಿನಿಸುಗಳನ್ನು ಸಂತೆಗೆ ಕಳುಹಿಸುತ್ತಿದ್ದಾರೆ. `10-12 ತಿನಿಸುಗಳು ಸಂತೆಯಲ್ಲಿ ಮಾರಾಟವಾಗುತ್ತಿವೆ. ತಿಂಗಳಿಗೆ 4-5 ಸಾರಿ ಉತ್ಪನ್ನಗಳನ್ನು ಪೂರೈಸುತ್ತೇನೆ~ ಎನ್ನುತ್ತಾರೆ. ತಿಂಗಳಿಗೆ ನಾಲ್ಕರಿಂದ ಐದು ಸಾವಿರ ರೂಪಾಯಿಷ್ಟು ವಹಿವಾಟು ನಡೆಸುತ್ತಿದ್ದಾರೆ.`ಬ್ಯಾಂಕ್‌ನಿಂದ ಬೇಕರಿ ಉತ್ಪನ್ನ ತಯಾರಿಕೆ ತರಬೇತಿ ಪಡೆದೆ. ಉದ್ಯಮಕ್ಕೆ ತುಂಬಾ ನೆರವಾಯ್ತು. ಅದಕ್ಕಾಗಿಯೇ ನಮ್ಮ ಉತ್ಪನ್ನಗಳನ್ನು ತುಸು ಕಡಿಮೆ ಬೆಲೆಗೆ ಸಂತೆಗೆ ಕೊಡುತ್ತೇನೆ. ನನ್ನಂತೆ 40ಕ್ಕೂ ಹೆಚ್ಚು ಮಹಿಳೆಯರು ಈ ಸಂತೆಗೆ ವೈವಿಧ್ಯಮಯ ಉತ್ಪನ್ನಗಳನ್ನು ಪೂರೈಸುತ್ತಾರೆ.ಸಮಸ್ಯೆ ಎಂದರೆ `ಸಂಚಾರಿ ಸಂತೆ~ ನಿಂತು ವ್ಯಾಪಾರ ಮಾಡಲು ಸೂಕ್ತ ಸ್ಥಳವಿಲ್ಲ. ಜನನಿಬಿಡ ಪ್ರದೇಶಗಳಲ್ಲಿ ಮಾರಾಟಕ್ಕೆ ಅವಕಾಶ ಸಿಕ್ಕಿದರೆ ವ್ಯಾಪಾರ ವೃದ್ಧಿಯಾಗುತ್ತದೆ. ಬ್ಯಾಂಕ್‌ನ ಉದ್ದೇಶ ಈಡೇರುತ್ತದೆ~ ಎನುವುದು ಲತಾ ಅವರ ಅಭಿಪ್ರಾಯ.ಎಲ್ಲೆಲ್ಲಿ ಸಂತೆ ಸಂಚಾರ

ಬೆಂಗಳೂರಿನಲ್ಲೇ ಹೆಚ್ಚಾಗಿ `ಸಂತೆ~ ಸಂಚರಿಸುತ್ತದೆ. ಮಲ್ಲೇಶ್ವರ, ಶ್ರೇಷಾದ್ರಿಪುರ, ಎಂ.ಎಸ್.ಬಿಲ್ಡಿಂಗ್, ಜಯನಗರ, ಗಿರಿನಗರ.. ಹೀಗೆ ಸುಮಾರು 120 ಜನವಸತಿ ಪ್ರದೇಶಗಳಲ್ಲಿ `ನಮ್ಮೂರ ಸಂತೆ~ ಬೀಡು ಬಿಡುತ್ತದೆ.  ವಾರದ ಒಂದು ದಿನ ಒಂದೊಂದು ಪ್ರದೇಶಕ್ಕೆ ಮೀಸಲು. ನಿಗದಿತ ಸ್ಥಳಗಳಲ್ಲೇ ವಾಹನವನ್ನು ನಿಲ್ಲಿಸಲಾಗುತ್ತದೆ.ಬೇಡಿಕೆ ಆಧಾರದ ಮೇಲೆ ಸಂತೆ ದಿನ ಪುನರಾವರ್ತನೆಯಾಗುತ್ತದೆ. ಈ ವ್ಯಾಪಾರದ ಜೊತೆಗೆ ಕೃಷಿ ಮೇಳಗಳ, ಗ್ರಾಮೀಣ ಉತ್ಸವಗಳಲ್ಲೂ ಸಂತೆ ಆಯೋಜಿಸುತ್ತಾರೆ. `ನಮ್ಮೂರು ಸಂತೆಗೆ ಬಹಳಷ್ಟು ಕಾಯಂ ಗ್ರಾಹಕರಿದ್ದಾರೆ. ಕೆಲವೊಂದು ಉತ್ಪನ್ನಗಳನ್ನು ಕಾಯ್ದಿರಿಸಿ ಖರೀದಿಸುತ್ತಾರೆ.ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ~- ವಿವರಿಸುತ್ತಾರೆ ಸಂತೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಜ್ಞಾನದೇವ. `ಸಂತೆ~ ಕುರಿತ ಹೆಚ್ಚಿನ ಮಾಹಿತಿಗಾಗಿ ಬಸಪ್ಪ, ನಿರ್ದೇಶಕರು, ಕೆನರಾಬ್ಯಾಂಕ್ ತರಬೇತಿ ಕೇಂದ್ರ, ಹಾರೋಹಳ್ಳಿ- ಮೊ.988016509 ಸಂಖ್ಯೆ ಸಂಪರ್ಕಿಸಬಹುದು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.