ಗುರುವಾರ , ಮೇ 6, 2021
27 °C

ಸಂಚಾರ ದಟ್ಟಣೆ: ತಪ್ಪದ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಕಲೇಶಪುರ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸದೆ ಎಲ್ಲೆಂದರಲ್ಲಿ ನಿಲ್ಲಿಸುತ್ತಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ.ಕಿಷ್ಕಿಂಧೆಯಾಗಿರುವ ಪಟ್ಟಣದ ಹೃದಯ ಭಾಗದಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಈ ರಸ್ತೆಯಲ್ಲಿ ನಿತ್ಯ ಸಹಸ್ರಾರು ವಾಹನಗಳು ಸಂಚರಿಸುತ್ತವೆ. ಕಿರಿದಾದ ಈ ರಸ್ತೆಯ ಒಂದು ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಟ್ಯಾಂಕರ್‌ಗಳು, ಭಾರಿ ಭಾರ ಹೊತ್ತು ಸಾಗುವ ವಾಹನಗಳು, ಬಸ್ಸುಗಳ ಸಂಚಾರದ ನಡುವೆ ಸಂಚಾರ ದಟ್ಟಣೆ ನಿತ್ಯದ ಸಮಸ್ಯೆಯಾಗಿದೆ.ವಾಸವಿ ದೇವಸ್ಥಾನ ರಸ್ತೆ: ಹಳೆ ಬಸ್ಸು ನಿಲ್ದಾಣದಿಂದ ತರಕಾರಿ ಮಾರುಕಟ್ಟೆವರೆಗಿನ ರಸ್ತೆ ಕಿರಿದಾಗಿದೆ. ಪ್ರಮುಖ ವ್ಯಾಪಾರ ವಹಿವಾಟುಗಳು ಈ ರಸ್ತೆಯಲ್ಲಿ ನಡೆಯುವುದಲ್ಲದೆ, ವಾರದ ಸಂತೆಗೂ ಕೂಡ ಇದೇ ರಸ್ತೆಯಲ್ಲಿ ಹೋಗಬೇಕು. ಈ ರಸ್ತೆಯ ಎರಡೂ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದರಿಂದ ಇಲ್ಲಿ ವಾಹನ ಸಂಚಾರ ಬಹಳ ಕಷ್ಟವಾಗುತ್ತಿದೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಡಬೇಕಾದ ಸ್ಥಿತಿ ಇದೆ. ಅಜಾದ್ ರಸ್ತೆಯಲ್ಲಿಯೂ ಸಹ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.ಪುರಸಭೆ ನಿರ್ಲಕ್ಷತೆ: ಅಂಗಡಿಯವರು ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದರೂ, ರಸ್ತೆ ಬದಿಗೆ ಪೆಟ್ಟಿಗೆ ಅಂಗಡಿ ಇಟ್ಟುಕೊಂಡಿದ್ದರೂ ಪುರಸಭೆಯಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಹಳೆ ಬಸ್ಸು ನಿಲ್ದಾಣದ ಹಿಂಭಾಗ ಚರಂಡಿ ಮೇಲೆ ಪೆಟ್ಟಿಗೆ ಅಂಗಡಿ ಇಟ್ಟುಕೊಂಡಿರುವುದನ್ನು ತೆರವುಗೊಳಿಸುವಂತೆ ದಶಕದ ಹಿಂದೆಯೇ ಹೈಕೋರ್ಟ್ ಆದೇಶ ನೀಡಿದ್ದರೂ, ಈವರೆಗೆ ಆದೇಶ ಪಾಲನೆಯಾಗಿಲ್ಲ ಎಂದು ಆರೋಪಿಸಿ ಪುರಸಭೆ ನಿರ್ಲಕ್ಷ್ಯದ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಲು ಕೆಲವು ನಾಗರಿಕರು ಮುಂದಾಗಿದ್ದಾರೆ.ಟೌನ್ ಪ್ಲಾನಿಂಗ್ ನಕ್ಷೆ ಪ್ರಕಾರವೇ ಮಲ್ಲಿಕಾರ್ಜುನ ಬಡಾವಣೆ ಹಾಗೂ ಕೆಲ ಬಡಾವಣೆಯಲ್ಲಿ 30 ಅಡಿ, 24 ಅಡಿ ಅಗಲದ ರಸ್ತೆಗಳನ್ನು ಬಿಟ್ಟು ನಿವೇಶನ ಮಾರಲಾಗಿದೆ. ಪುರಸಭೆ ಅಧಿಕಾರಿಗಳ ನಿರ್ಲಕ್ಷೆಯಿಂದ 30 ಅಡಿ ಅಗಲದ ರಸ್ತೆಗೆ  ಕೇವಲ 13 ಅಡಿ ಅಗಲಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ನೆಲ ಮಟ್ಟದಿಂದ ಒಂದು ಅಡಿ ಎತ್ತರ ರಸ್ತೆ ಇದ್ದು, ಉಳಿದ 17 ಅಡಿ ವಿಸ್ತೀರ್ಣ ಹಾಗೆಯೇ ಬಿಟ್ಟಿರುವುದರಿಂದ ರಸ್ತೆ ಬದಿ ಮನೆಯವರು ಹಂತಹಂತವಾಗಿ ರಸ್ತೆಯನ್ನು ಒತ್ತುವರಿ ಮಾಡಿಕೊಳ್ಳುತ್ತಾರೆ. ಕೆಲ ಮನೆಗಳ ಮಾಲಿಕರು ರಸ್ತೆ ಪಕ್ಕದಲ್ಲಿ ಗಿಡಗಳನ್ನು ನೆಟ್ಟು ಅದಕ್ಕೆ ಬೇಲಿ ಕೂಡ ಹಾಕಿದ್ದಾರೆ. 30 ಅಡಿ ಅಗಲದ ರಸ್ತೆಯಲ್ಲಿ ಚರಂಡಿಗೆ ಬಿಟ್ಟು ಕನಿಷ್ಠ 20 ಅಡಿ ಅಗಲಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಲು ಪುರಸಭೆ ಗಮನ ಹರಿಸಿಲ್ಲ ಎಂದು ಪುರಸಭೆಯ ಮಾಜಿ ಅಧ್ಯಕ್ಷ ಸದಾಶಿವ ಬಂಡಾರಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಒಟ್ಟಿನಲ್ಲಿ ಪುರಸಭೆ ಅಧಿಕಾರಿಗಳ ನಿರ್ಲಕ್ಷತನ ದಿಂದಾಗಿ ಪಟ್ಟಣದ ರಸ್ತೆಗಳೆಲ್ಲವೂ ಕಿಷ್ಕಿಂಧೆಯಾಗಿದ್ದು, ವಾಹನಗಳನ್ನು ಚಾಲನೆ ಮಾಡುವುದೇ  ಸಾಹಸವಾಗಿದೆ. ಪುರಸಭಾ ಅಧ್ಯಕ್ಷರು ಇತ್ತ ಗಮನ ಸಂಚಾರ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು   ನಾಗರಿಕರು ಒತ್ತಾಯಿಸುತ್ತಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.