`ಸಂಚಾರ ನಿರ್ವಹಣೆ ದೊಡ್ಡ ಸವಾಲು'

7
ಮಿತಿ ಮೀರಿದ ವಾಹನ ಸಂಖ್ಯೆ- ವಿಸ್ತರಣೆಗೊಳ್ಳದ ರಸ್ತೆಗಳು

`ಸಂಚಾರ ನಿರ್ವಹಣೆ ದೊಡ್ಡ ಸವಾಲು'

Published:
Updated:
`ಸಂಚಾರ ನಿರ್ವಹಣೆ ದೊಡ್ಡ ಸವಾಲು'

 


ಬೆಂಗಳೂರು: `ಕಳೆದ ಐದು ವರ್ಷಗಳಲ್ಲಿ ಬೆಂಗಳೂರು ನಗರದ ಸಂಚಾರ ಸಮಸ್ಯೆ ಹಂತ ಹಂತವಾಗಿ ಕಡಿಮೆಯಾಗಿದೆ' ಎಂದು ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ.ಎಂ.ಎ.ಸಲೀಂ ಹೇಳಿದರು.

 

ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ನಗರದಲ್ಲಿ ಗುರುವಾರ ಆಯೋಜಿಸಿದ್ದ `ಸಂಚಾರ ವ್ಯವಸ್ಥೆಯ ನಿಯಮ, ನಿರ್ವಹಣೆ ಮತ್ತು ಆಡಳಿತದಲ್ಲಿ ಹೊಸ ಪ್ರಯತ್ನ' ವಿಷಯದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 

`ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಸದ್ಯ ನಗರದಲ್ಲಿ 40 ಲಕ್ಷಕ್ಕೂ ಹೆಚ್ಚು ವಾಹನಗಳಿವೆ. ಇವುಗಳಲ್ಲಿ ಶೇ 15ರಷ್ಟು ಕಾರುಗಳಿವೆ. 29 ಲಕ್ಷ ಬೈಕ್‌ಗಳು, ಆರು ಸಾವಿರ ಬಸ್‌ಗಳಿವೆ. ಆದರೆ, ನಗರದ ರಸ್ತೆಗಳ ವಿಸ್ತೀರ್ಣ ಕೇವಲ 11 ಸಾವಿರ ಕಿಲೋ ಮೀಟರ್ ಮಾತ್ರ. ಹೀಗಾಗಿ ನಗರದ ಸಂಚಾರ ನಿರ್ವಹಣೆ ನಮಗೆ ಸವಾಲಾಗಿದೆ' ಎಂದರು.

 

`2007ರ ನಂತರ ನಗರದಲ್ಲಿ ವಾಹನಗಳ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ, ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯಿಂದ ಅಪಘಾತಗಳ ಸಂಖ್ಯೆ ಇಳಿಮುಖವಾಗಿದೆ. ಈ ವರ್ಷ 47,83,835 ಪ್ರಕರಣಗಳನ್ನು ದಾಖಲಿಸಿಕೊಂಡು 49.10 ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ' ಎಂದು ಅವರು ಹೇಳಿದರು.

 

`ಬಿ-ಟ್ರಾಕ್ ಯೋಜನೆಯಡಿ ನಗರದಲ್ಲಿ 330 ಆಧುನಿಕ ಸಿಗ್ನಲ್‌ಗಳು, 179 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಲಾಗಿದೆ. ಇನ್ನೊಂದು ತಿಂಗಳೊಳಗೆ ಇನ್ನೂ ನೂರು ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಬ್ಲಾಕ್‌ಬೆರಿ ವ್ಯವಸ್ಥೆ ಹಾಗೂ ಸಂಚಾರ ಪೊಲೀಸರಿಗೆ ಕ್ಯಾಮೆರಾಗಳನ್ನು ನೀಡಿರುವುದರಿಂದ ಸಂಚಾರ ನಿಯಮ ಉಲ್ಲಂಘನೆ ಕಡಿಮೆಯಾಗಿದೆ. ಸಂಚಾರ ವ್ಯವಸ್ಥೆಯ ಉನ್ನತೀಕರಣದ ಉದ್ದೇಶದ ಸಂಚಾರ ನಿರ್ವಹಣಾ ಕೇಂದ್ರವು ಇನ್ನೊಂದು ತಿಂಗಳಲ್ಲಿ ಹೆಗಡೆ ನಗರದಲ್ಲಿ ಆರಂಭವಾಗಲಿದೆ' ಎಂದರು.

 

`ತಮ್ಮ ಕಣ್ಣೆದುರೇ ಸಂಚಾರ ನಿಯಮ ಉಲ್ಲಂಘನೆಯಾಗುವುದು ಕಂಡುಬಂದರೆ, ಅದರ ಫೋಟೊ ಅಥವಾ ವಿಡಿಯೊವನ್ನು ನಮ್ಮ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬಹುದು.www. bangalore­trafficpolice. gov. in ವೆಬ್‌ಸೈಟ್‌ಗೆ ಭೇಟಿ ನೀಡಿ publiceye ಕ್ಲಿಕ್ ಮಾಡಿ, ಅಲ್ಲಿ ಫೋಟೊ ಮತ್ತು ಮಾಹಿತಿಯನ್ನು ಅಪ್‌ಲೋಡ್ ಮಾಡಬಹುದು. ಈ ಮಾಹಿತಿ ಆಧರಿಸಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದರು.

 

ಕೇಂದ್ರ ವಿಚಕ್ಷಣ ಆಯುಕ್ತ ಆರ್.ಶ್ರೀಕುಮಾರ್ ಮಾತನಾಡಿ, `ಸಂಚಾರ ನಿಯಮ ಉಲ್ಲಂಘಿಸುವವರಿಗೆ ಕಟ್ಟುನಿಟ್ಟಾಗಿ ದಂಡ ವಿಧಿಸಬೇಕು. ದೇಶದಲ್ಲಿ ಪೊಲೀಸ್ ಸೇವೆಯನ್ನು ಬಲಪಡಿಸಬೇಕು. `100' ಪೊಲೀಸ್ ಸಹಾಯವಾಣಿ ಸೇವೆಯನ್ನು ಉನ್ನತೀಕರಿಸಿ, ಮನೆ ಬಾಗಿಲಿಗೇ ಪೊಲೀಸ್ ಸೇವೆ ದೊರೆಯುವಂತೆ ಮಾಡಬೇಕು' ಎಂದರು.ಸುಗಮ ಸಂಚಾರಕ್ಕೆ ಸಾರಿಗೆ ತಜ್ಞರ ಸಲಹೆಗಳು

ಪಥಶಿಸ್ತು ಕಡ್ಡಾಯಗೊಳಿಸಬೇಕು


`ಯಾವುದೇ ನಗರದಲ್ಲಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಪಥಶಿಸ್ತು (ಲೇನ್ ಡಿಸಿಪ್ಲಿನ್) ಅತಿ ಅವಶ್ಯಕ. ಆದರೆ, ಬೆಂಗಳೂರಿನಲ್ಲಿ ಅದು ಕಾಣುತ್ತಿಲ್ಲ. ವಾಹನಗಳ ವೇಗಕ್ಕೆ ಅನುಗುಣವಾಗಿ ಪಥಗಳನ್ನು ಪಾಲಿಸಬೇಕು. ಇದರಿಂದ ಅಪಘಾತ ಮತ್ತು ವಾಹನ ದಟ್ಟಣೆಯ್ನು ತಗ್ಗಿಸಬಹುದು. ಸಿಂಗಪುರದಲ್ಲಿ ಸುಮಾರು ಹತ್ತು ಲಕ್ಷ ವಾಹನಗಳಿವೆ. ಇವುಗಳ ಪೈಕಿ ಐದು ಲಕ್ಷ ಕಾರುಗಳೇ ಇವೆ. ಆದರೂ, ಅಲ್ಲಿ ಸಂಚಾರ ನಿರ್ವಹಣೆ ಕಷ್ಟವಾಗುತ್ತಿಲ್ಲ. ಇದಕ್ಕೆ ಕಾರಣ ಪಥಶಿಸ್ತು ಹಾಗೂ ಉತ್ತಮ ಗುಣಮಟ್ಟದ ರಸ್ತೆಗಳು'


-ಶಾನ್ ತಾನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನೆಕ್ಸ್‌ಟಾನ್ ಲಿಮಿಟೆಡ್, ಸಿಂಗಪುರ

 


ತಂತ್ರಜ್ಞಾನದ ಜತೆಗೆ ಜಾಗೃತಿಯೂ ಅಗತ್ಯ


`ಕೇವಲ ಸಂಚಾರ ನಿಯಮಗಳು ಮತ್ತು ಆಧುನಿಕ ತಂತ್ರಜ್ಞಾನದ ಉಪಕರಣಗಳಿಂದ ಮಾತ್ರ ಸಂಚಾರ ಸಮಸ್ಯೆ ಕಡಿಮೆಯಾಗುವುದಿಲ್ಲ. ಸಂಚಾರ ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಹೆಚ್ಚಾಗಬೇಕು. ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ ಮತ್ತು ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡುವ ಪ್ರವೃತ್ತಿಯನ್ನು ಜನರು ಬಿಡಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದರೆ ಅಪಾಯ ಖಚಿತ ಎಂಬುದನ್ನು ಅರಿಯಬೇಕು'


-ಎಂ.ಎಸ್.ರಾಮಪ್ರಸಾದ್, ಹಿರಿಯ ವ್ಯವಸ್ಥಾಪಕ, ಎಫ್ರಿಕೋನಿಕ್ಸ್ ಪ್ರೈವೇಟ್ ಲಿಮಿಟೆಡ್, ಹೈದರಾಬಾದ್ದಂಡ ಹೆಚ್ಚಳ ಅನಿವಾರ್ಯ 


`ನಗರದ ಸಂಚಾರ ಸಮಸ್ಯೆಗೆ ಮುಖ್ಯ ಕಾರಣ ಸಂಚಾರ ನಿಯಮಗಳ ಉಲ್ಲಂಘನೆ. ಇದನ್ನು ತಪ್ಪಿಸಲು ದಂಡ ಹೆಚ್ಚಳ ಅನಿವಾರ್ಯ. ಯಾವುದೇ ಸಂಚಾರ ನಿಯಮ ಉಲ್ಲಂಘನೆಗೆ ಐದು ಸಾವಿರ ರೂಪಾಯಿಗಿಂತ ಹೆಚ್ಚು ದಂಡ ವಿಧಿಸಬೇಕು. ಇದರಿಂದ ಜನರು ತಾವಾಗಿಯೇ ನಿಯಮಗಳನ್ನು ಪಾಲಿಸುತ್ತಾರೆ. ಸಂಚಾರ ಪೊಲೀಸರು ಜನರ ನಂಬಿಕೆಯನ್ನು ಉಳಿಸಿಕೊಳ್ಳುವುದರ ಜತೆಗೆ ದಕ್ಷತೆಯಿಂದ ಕೆಲಸ ಮಾಡಬೇಕು. ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆರವುಗೊಳಿಸಿ, ವೈಜ್ಞಾನಿಕವಾಗಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕು'


-ಅರ್ಜುನ್ ವಿಕ್ರಮ್ ಸಿಂಗ್,


ವ್ಯವಸ್ಥಾಪಕ ನಿರ್ದೇಶಕ,


ಕ್ವಾಂಟಮ್ ಬ್ಯುಸಿನೆಸ್ ಸಲೂಷನ್ಸ್,ಬೆಂಗಳೂರು


 


ರಸ್ತೆ ತೆರಿಗೆ ಕಡ್ಡಾಯಗೊಳಿಸಿ


`ವಾಹನಗಳಿಗೆ ಅನುಗುಣವಾಗಿ ರಸ್ತೆ ತೆರಿಗೆಯನ್ನು ಕಡ್ಡಾಯಗೊಳಿಸುವ ಮೂಲಕ ಸಂಚಾರ ಸಮಸ್ಯೆಗಳನ್ನು ತಗ್ಗಿಸಬಹುದು. ರಸ್ತೆ ತೆರಿಗೆ ವಿಧಿಸುವುದರಿಂದ ಜನರು ಸ್ವಂತ ವಾಹನಗಳ ಬಳಕೆ ಕಡಿಮೆ ಮಾಡಿ, ಬಸ್, ಮೆಟ್ರೊ ರೈಲುಗಳಂಥ ಸಮೂಹ ಸಾರಿಗೆಗಳನ್ನು ಬಳಸುತ್ತಾರೆ. ಹೀಗಿದ್ದೂ ಸ್ವಂತ ವಾಹನಗಳನ್ನು ಬಳಸುವವರು ರಸ್ತೆ ತೆರಿಗೆ ಭರಿಸುವುದರಿಂದ ರಸ್ತೆಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಆ ಹಣವನ್ನು ಬಳಸಬಹುದು'


-ಪ್ರೊ.ವಿವೇಕ್ ಮೂರ್ತಿ,


ಪ್ರಾಧ್ಯಾಪಕ, ಅರ್ಥಶಾಸ್ತ್ರ ವಿಭಾಗ,


ಭಾರತೀಯ ನಿರ್ವಹಣಾ ಸಂಸ್ಥೆ (ಐಐಎಂ), ಬೆಂಗಳೂರು


 


ಸಮೂಹ ಸಾರಿಗೆಯ ಅಭಿವೃದ್ಧಿ


`ಸಮೂಹ ಸಾರಿಗೆಯ ಅಭಿವೃದ್ಧಿಯಿಂದ ಜನರು ಸ್ವಂತ ವಾಹನಗಳ ಬಳಕೆ ಕಡಿಮೆ ಮಾಡುತ್ತಾರೆ. ಬಸ್, ಮೆಟ್ರೊ, ಸ್ಥಳೀಯ ರೈಲು ಸೇವೆಯನ್ನು ಅಭಿವೃದ್ಧಿ ಪಡಿಸುವುದರ ಮೂಲಕ ಸಂಚಾರ ಸಮಸ್ಯೆಗಳನ್ನು ತಗ್ಗಿಸಬಹುದು. ಸಮೂಹ ಸಾರಿಗೆ ಸೇವೆಯಲ್ಲಿ ಪಾರದರ್ಶಕತೆ ಮತ್ತು ಸಮಯ ಪಾಲನೆಯನ್ನು ಅಳವಡಿಸಿಕೊಂಡರೆ ಹಂತ ಹಂತವಾಗಿ ಸಂಚಾರ ಸಮಸ್ಯೆ ಕಡಿಮೆಯಾಗಲಿದೆ'


-ಡಾ.ಭೂಷಣ್ ಜಗ್ಯಾಸಿ,


ವಿಜ್ಞಾನಿ, ಸಂಶೋಧನಾ ಪ್ರಯೋಗಾಲಯ,


ಟಾಟಾ ಕನ್ಸಲ್ಟನ್ಸಿ ಸರ್ವಿಸಸ್, ಮುಂಬೈ


 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry