ಸಂಚಾರ ನಿಷೇಧ ಲೆಕ್ಕಕ್ಕಿಲ್ಲ; ಹಣದ ಮಾತೇ ಎಲ್ಲ
ಮಂಗಳೂರು: ಕಾರಿಗೆ ರೂ. 100, ಪ್ರವಾಸಿ ವಾಹನ, ಗೂಡ್ಸ್ ಟೆಂಪೊಗೆ ರೂ. 200, ಕೆಂಪು ಕಲ್ಲು ಸಾಗಣೆ ಲಾರಿಗೆ ರೂ. 1,000!....
ಇದು ಸರ್ಕಾರ ನಿಗದಿಗೊಳಿಸಿದ ರಸ್ತೆ ಸುಂಕ ಅಲ್ಲ. ಅಭಿವೃದ್ಧಿ ಕಾರಣದಿಂದ ನಾಲ್ಕು ತಿಂಗಳ ಕಾಲ ಸಂಚಾರ ನಿಷೇಧ ಇರುವ ಸುಳ್ಯ-ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ‘ಮುಕ್ತ’ವಾಗಿ ಸಂಚರಿಸಲು ವಾಹನಗಳಿಗೆ ಚೆಕ್ಪೋಸ್ಟ್ ಅಧಿಕಾರಿಗಳು ನಿಗದಿಪಡಿರುವ ಅಕ್ರಮ ಶುಲ್ಕ. ಇದು ನಿತ್ಯ ರೂ. ಒಂದು ಲಕ್ಷದಷ್ಟು ‘ಆದಾಯ’ವನ್ನು ಸಂಪಾಜೆ ಗೇಟ್ ಬಳಿ ಇರುವ ಅಧಿಕಾರಿ ಮತ್ತು ಸಿಬ್ಬಂದಿಯ ಜೇಬು ತುಂಬುತ್ತಿದೆ!
ಮೈಸೂರು ಭಾಗದಿಂದ ಕರಾವಳಿ ನಗರಗಳಿಗೆ ಸಂಪರ್ಕ ಕಲ್ಪಿಸುವ ಮಡಿಕೇರಿ-ಮಾಣಿ ರಾಜ್ಯ ಹೆದ್ದಾರಿಯಲ್ಲಿ ದ್ವಿಪಥ ವಿಸ್ತರಣೆ ಕಾಮಗಾರಿ ಆರಂಭಗೊಂಡ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲಾಡಳಿತ ಕಳೆದ ಡಿ. 20ರಿಂದ ಬರುವ ಏಪ್ರಿಲ್ 30ರವರೆಗೆ ಜಿಲ್ಲೆಯ ಗಡಿಭಾಗ ಸಂಪಾಜೆಯಿಂದ ಮಡಿಕೇರಿಗೆ 28 ಕಿ.ಮೀ ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಷೇಧ ಆದೇಶ ಹೊರಡಿಸಿದೆ.
ವಾಹನಗಳಿಗೆ ಈ ರಸ್ತೆಗೆ ಪರ್ಯಾಯವಾಗಿ ಸುಳ್ಯ-ಕರಿಕೆ-ಭಾಗಮಂಡಲ ಮೂಲಕ ಮಡಿಕೇರಿಗೆ ತೆರಳಲು ಸೂಚಿಸಲಾಗಿದ್ದು, ತುರ್ತು ಸೇವೆಯ ಹಾಲು, ಪತ್ರಿಕೆ, ಅಂಬುಲೆನ್ಸ್ ಹಾಗೂ ಆ ರಸ್ತೆ ವ್ಯಾಪ್ತಿಯಲ್ಲಿ ವಾಸವಿರುವವರಿಗೆ ಕೊಡಗು ಜಿಲ್ಲಾಡಳಿತದಿಂದ 700 ಪಾಸ್ ವಿತರಿಸಿದೆ. ಮಡಿಕೇರಿ-ಸಂಪಾಜೆಗೆ ಹಾಗೂ ಸುಳ್ಯ-ಸಂಪಾಜೆ ನಡುವೆ ತಲಾ ನಾಲ್ಕು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಸಂಚಾರಕ್ಕೆ ಅವಕಾಶ ನೀಡಿದೆ.
ಆದರೆ, ವಾಸ್ತವವಾಗಿ ಇಲ್ಲಿ ಜಿಲ್ಲಾಡಳಿತದ ಸಂಚಾರ ನಿಷೇಧ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲವಾಗಿದೆ. ಚೆಕ್ಪೋಸ್ಟ್ನಲ್ಲಿ ಹಣ ನೀಡಿ ವಾಹನಗಳು ಎಂದಿನಂತೆಯೇ ಸಂಚರಿಸುತ್ತಿವೆ. ರಸ್ತೆ ಮುಚ್ಚಿರುವ ಮಾಹಿತಿ ಇಲ್ಲದೇ ಮಡಿಕೇರಿಗೆ ತೆರಳಲು ಸಂಪಾಜೆಗೆ ಬರುವ ಪ್ರವಾಸಿ ವಾಹನಗಳನ್ನು ತಡೆಯುವ ಚೆಕ್ಪೋಸ್ಟ್ ಸಿಬ್ಬಂದಿ, ಹಣ ನೀಡಿದಲ್ಲಿ ಮಾತ್ರ ಮುಂದೆ ತೆರಳಲು ಅವಕಾಶ ನೀಡುತ್ತಿದ್ದಾರೆ. ಈ ಭಾಗದಲ್ಲಿ ನಿತ್ಯ ಸಂಚರಿಸುವ ವಾಹನ ಚಾಲಕರು, ಪರ್ಯಾಯ ರಸ್ತೆಯಲ್ಲಿ 50 ಕಿ.ಮೀ ಬಳಸಿಕೊಂಡು ಹೋಗಲು ಸಿದ್ಧರಿಲ್ಲದೆ ಅಕ್ರಮ ಶುಲ್ಕ ಪಾವತಿಸಿಯೇ ಈ ಮಾರ್ಗದಲ್ಲಿ ಸಾಗುತ್ತಿದ್ದಾರೆ.
ಸುಳ್ಯ ಕಡೆಯಿಂದ ಬರುವ ವಾಹನಗಳನ್ನು ಸಂಪಾಜೆ ಚೆಕ್ಪೋಸ್ಟ್ನಲ್ಲಿ ಹಾಗೂ ಮಡಿಕೇರಿಯಿಂದ ಬರುವ ವಾಹನಗಳನ್ನು ಕಾಟಿಗೇರಿ ಕ್ರಾಸ್ ಚೆಕ್ಪೋಸ್ಟ್ನಲ್ಲಿ ತಡೆದು ಹಣ ವಸೂಲಿ ಮಾಡಲಾಗುತ್ತಿದೆ.
ಎರಡೂ ಜಿಲ್ಲಾಡಳಿತ 4 ತಿಂಗಳು ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿರುವುದು ಪೊಲೀಸರು, ಅರಣ್ಯ ಇಲಾಖೆ ಹಾಗೂ ಎಪಿಎಂಸಿ ಅಧಿಕಾರಿಗಳಿಗೆ ನಿತ್ಯ ಏನಿಲ್ಲವೆಂದರೂ ಲಕ್ಷ ರೂಪಾಯಿ ‘ಸಂಪಾದಿಸಿ’ಕೊಳ್ಳಲು ಅವಕಾಶ ಮಾಡಿಕೊಟ್ಟಿದೆ ಎಂದು ಸುಳ್ಯ ಪಟ್ಟಣದ ವರ್ತಕರ ಸಂಘದ ಪದಾಧಿಕಾರಿಯೊಬ್ಬರು ಆರೋಪಿಸುತ್ತಾರೆ. ‘ಇದು ಒಂದು ಬಗೆಯಲ್ಲಿ ಕುರಿ ಕೊಬ್ಬಿದಷ್ಟೂ ಲಾಭ ಎಂಬಂತೆ ಕಾಮಗಾರಿ ವಿಳಂಬವಾದಷ್ಟೂ ವಸೂಲಿ ವೀರರಿಗೆ ಲಾಭ’ ಎಂದು ಅವರು ವಿಷಾದಿಸಿದರು.
ಜಿಲ್ಲಾಡಳಿತ ಆದೇಶವೇ ಶ್ರೀರಕ್ಷೆ: ಈ ಅಕ್ರಮ ಶುಲ್ಕ ಸಂಗ್ರಹಣೆ ಬಗ್ಗೆ ಮಾಹಿತಿ ಪಡೆದಿದ್ದ ‘ಪ್ರಜಾವಾಣಿ’ ಬುಧವಾರ ಸಂಪಾಜೆಗೆ ಕಾರಿನಲ್ಲಿ ತೆರಳಿದಾಗ ಚೆಕ್ಪೋಸ್ಟ್ ಸಿಬ್ಬಂದಿ ಯಾವುದೇ ಎಗ್ಗಿಲ್ಲದೆ ಬಹಿರಂಗವಾಗಿಯೇ ಹಣ ಪಡೆದು ವಾಹನಗಳ ಸಂಚಾರಕ್ಕೆ ಅವಕಾಶ ನೀಡುತ್ತಿರುವುದು ಕಂಡು ಬಂದಿತು. ಚೆಕ್ಪೋಸ್ಟ್ನ ಎಪಿಎಂಸಿ ಶೆಡ್ ಎದುರು ಗೇಟ್ ಹಾಕಿ ವಾಹನ ತಡೆಯುತ್ತಿದ್ದ ಸಿಬ್ಬಂದಿ ಜಿಲ್ಲಾಡಳಿತದಿಂದ ಸಂಚಾರ ನಿಷೇಧವಿದ್ದು, ವಾಪಸ್ ತೆರಳಲು ಸೂಚಿಸುತ್ತಿದ್ದರು. ವಾಹನ ಹಿಂದಕ್ಕೆ ತಿರುಗಿಸುತ್ತಿದ್ದಂತೆಯೇ ಚಾಲಕನ ಬಳಿ ಬರುತ್ತಿದ್ದ ಗೇಟ್ ಸಿಬ್ಬಂದಿ, ನೀವು ಸುಳ್ಯಕ್ಕೆ ಮರಳಿ ಅಲ್ಲಿಂದ ಮಡಿಕೇರಿಗೆ ಹೋಗಲು ಕನಿಷ್ಠ 60 ಕಿ.ಮೀ. ಬಳಸಿಕೊಂಡು ಹೋಗಬೇಕು. ಬದಲಿಗೆ ಇಲ್ಲಿಯೇ ‘ಹಣ ಕೊಟ್ಟು ತೆರಳಿ’ ಎಂದು ‘ಉಚಿತ’ ಸಲಹೆ ನೀಡುತ್ತಿದ್ದರು.
‘ಪ್ರಜಾವಾಣಿ’ ವರದಿಗಾರ ಮತ್ತು ಛಾಯಾಗ್ರಾಹಕರಿದ್ದ ಇಂಡಿಕಾ ಕಾರನ್ನೂ (ಕೆ.ಎ 90- ಸಿ 6649) ಸಂಪಾಜೆ ಚೆಕ್ಪೋಸ್ಟ್ ಬಳಿ ತಡೆಯಲಾಯಿತು. ಠಾಣೆಯಿಂದ ಸಂಕೇತ ಬರುತ್ತಿದ್ದಂತೆಯೇ ಚಾಲಕ ಮತ್ತು ವರದಿಗಾರನನ್ನು ಪಕ್ಕದಲ್ಲಿದ್ದ ಶೆಡ್ನೊಳಕ್ಕೆ ಕರೆದೊಯ್ದು, ರೂ. 100 ಪಡೆಯಲಾಯಿತು. ನಂತರ ರಸ್ತೆಗೆ ಅಡ್ಡಲಾಗಿದ್ದ ಬ್ಯಾರಿಕೇಡ್ ಪಕ್ಕಕ್ಕೆ ಸರಿದು ನಮ್ಮ ಕಾರಿಗೆ ದಾರಿ ಮಾಡಿಕೊಟ್ಟಿತು.
ಹಣ ಪಡೆಯಲು ಭಿನ್ನ ವಿಧಾನ: ಶೆಡ್ ಒಳಕ್ಕೆ ಬಂದ ವಾಹನ ಚಾಲಕ ನೀಡಿದ ಹಣವನ್ನು ಕೈಯಲ್ಲಿ ಮುಟ್ಟದ ಗೇಟ್ ಸಿಬ್ಬಂದಿ ಅಲ್ಲಿಯೇ ಇದ್ದ ದಾಖಲಾತಿ ಪುಸ್ತಕದೊಳಗಿಡುವಂತೆ ಸೂಚಿಸಿ ‘ಜಾಣ್ಮೆ’ ತೋರುತ್ತಿದ್ದರು. ಹಣ ಪಾವತಿಯಾದ ಬಗ್ಗೆ ಎದುರಿನ ಉಪ ಠಾಣೆಯಲ್ಲಿ ಕುಳಿತ ಪೊಲೀಸ್ ಅಧಿಕಾರಿಗೆ ಗೇಟ್ ಸಿಬ್ಬಂದಿ ಸಂಜ್ಞೆ ಮಾಡಿ ಗೇಟ್ ತೆರೆಯಲು ಅನುಮತಿ ಪಡೆಯುತ್ತಿದ್ದುದೂ ಕಂಡು ಬಂದಿತು.
ಚೆಕ್ಪೋಸ್ಟ್ನಲ್ಲಿ ಅಕ್ರಮವಾಗಿ ಹಣ ಸಂಗ್ರಹಿಸುತ್ತಿರುವ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಗುಲ್ಬರ್ಗದ ಪ್ರವಾಸಿ ರಾಜಶೇಖರಗೌಡ ಪಾಟೀಲ, ‘ನಾವು ಧರ್ಮಸ್ಥಳ, ಸುಬ್ರಹ್ಮಣ್ಯ ನೋಡಿಕೊಂಡು ಮೈಸೂರಿಗೆ ಹೊರಟಿದ್ದೇವೆ. ರಸ್ತೆ ಮುಚ್ಚಿದೆ ಎಂದು ಸುಳ್ಯದಲ್ಲಿಯೇ ಹೇಳಿದ್ದರೆ, 20 ಕಿ.ಮೀ. ಮುಂದಕ್ಕೆ ಬರುವ ಅಗತ್ಯವೇ ಇರಲಿಲ್ಲ. ಇದು ಹಗಲು ದರೋಡೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕಾಮಗಾರಿಗೆ ತೊಂದರೆ’
ಈ ಮಾರ್ಗದಲ್ಲಿ ಜಿಲ್ಲಾಡಳಿತವೇ ನಿಷೇಧ ವಿಧಿಸಿದ್ದರೂ ವಾಹನ ಸಂಚರಕ್ಕೆ ಅವಕಾಶ ಮಾಡಿಕೊಡುತ್ತಿರುವುದರಿಂದ ಸಂಪಾಜೆ-ಮಡಿಕೇರಿ ರಸ್ತೆ ಕಾಮಗಾರಿಗೆ ಬಹಳ ತೊಂದರೆಯಾಗಿದೆ. ಏ. 30ರೊಳಗೆ 28 ಕಿ.ಮೀ. ಕಾಮಗಾರಿ ಪೂರ್ಣಗೊಳಿಸುವುದು ಅಸಾಧ್ಯ. 16 ಕಿ.ಮೀ ಮಾತ್ರ ಪೂರ್ಣಗೊಳ್ಳಲಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹುಬ್ಬಳ್ಳಿಯ ಎನ್.ಆರ್.ಎನ್ ಕನ್ಸ್ಟ್ರಕ್ಷನ್ ಎಂಜಿನಿಯರ್ ಶಿವಪ್ರಕಾಶ್ ಅಸಮಾಧಾನ ವ್ಯಕ್ತಪಡಿಸಿದರು.
‘ರಾತ್ರಿ ವೇಳೆ ಚೆಕ್ಪೋಸ್ಟ್ನಲ್ಲಿ ವಾಹನ ತಡೆಯಲು ಪೊಲೀಸರ ಸಹಾಯಕ್ಕೆಂದು ನಮ್ಮ ಸಂಸ್ಥೆಯ ಇಬ್ಬರು ಹುಡುಗರನ್ನು ಕಳುಹಿಸುತ್ತಿದ್ದೆವು. ಪೊಲೀಸರು ಅವರನ್ನೇ ಹಣ ಸಂಗ್ರಹಿಸಲು ಬಳಸಿಕೊಳ್ಳತೊಡಗಿದರು. ಪರಿಣಾಮ, ನಿಮ್ಮ ಸಿಬ್ಬಂದಿ ಹಣ ಪಡೆಯುತ್ತಿದ್ದಾರೆಂದು ವಾಹನ ಚಾಲಕರು ನಮ್ಮಲ್ಲಿಗೆ ಬಂದು ದೂರಲಾರಂಭಿಸಿದರು’ ಎಂದು ಹೆಸರು ಹೇಳಲಿಚ್ಛಿಸದ ಕಂಪೆನಿಯ ಸಿಬ್ಬಂದಿಯೊಬ್ಬರು ಅನುಭವ ಹಂಚಿಕೊಂಡರು.
ಕೆಂಪು ಕಲ್ಲಿನ (ಲ್ಯಾಟರೇಟ್ ಇಟ್ಟಿಗೆ) ಲಾರಿಗಳು ಬರುವುದರಿಂದ ಸಂಚಾರ ದಟ್ಟಣೆಯಾಗಿ ರಾತ್ರಿ ವೇಳೆ ಪೂರ್ತಿ ಕೆಲಸ ನಿಲ್ಲಿಸಿದ ನಿದರ್ಶನಗಳೂ ಇವೆ ಎಂದು ಅವರು ಬೇಸರ ಹೊರಹಾಕಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.