ಸಂಚಾಲಕರ ಕರಾಮತ್ತು!

7

ಸಂಚಾಲಕರ ಕರಾಮತ್ತು!

Published:
Updated:

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005ಕ್ಕೆ ಅನುಗುಣವಾಗಿ 5 ಮತ್ತು 8ನೇ ತರಗತಿ ಪಠ್ಯಪುಸ್ತಕಗಳ ರಚನೆಗೆ ಸರ್ಕಾರ ವಿಷಯವಾರು ಪ್ರತ್ಯೇಕ ಸಮಿತಿಗಳನ್ನು ರಚಿಸಿತ್ತು. ಆದರೆ ಈ ಸಮಿತಿಗಳಿಗೆ ಪೂರ್ಣ ಸ್ವಾತಂತ್ರ್ಯ ಇರಲಿಲ್ಲ. ಸಲಹಾ ಸಮಿತಿ ಸಂಚಾಲಕರ ನಿರ್ದೇಶನಕ್ಕೆ ಅನುಗುಣವಾಗಿ ಪಠ್ಯವಸ್ತುಗಳನ್ನು ಸಿದ್ಧಪಡಿಸುವುದು ಅನಿವಾರ್ಯವಾಗಿತ್ತು. 

-ಇದು ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ಕೆಲಸ ಮಾಡಿರುವ ತಜ್ಞರೊಬ್ಬರ ಸ್ಪಷ್ಟನುಡಿ.ವಾಸ್ತವವಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲೇ ಪರಿಷ್ಕೃತ ಪಠ್ಯವಸ್ತು ಸಿದ್ಧವಾಗಿತ್ತು. ಅದು ಮುದ್ರಣಕ್ಕೆ ಹೋಗುವ ಹಂತದಲಿ ಸರ್ಕಾರ ಬದಲಾಯಿತು. ಬಿಜೆಪಿ ಸರ್ಕಾರ ಬಂದ ನಂತರ ಪಠ್ಯವಸ್ತು ಬದಲಾವಣೆ ಮಾಡುವಂತೆ ಸೂಚನೆ ನೀಡಿತು.2005ರಿಂದ 10ರವರೆಗೆ ಪಠ್ಯಪುಸ್ತಕ ರಚನಾ ಸಮಿತಿಯ 35 ಸಭೆಗಳು ಆಗಿವೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ (ಡಿಎಸ್‌ಇಆರ್‌ಟಿ) ನಾಲ್ಕು ಮಂದಿ ನಿರ್ದೇಶಕರ ಬದಲಾವಣೆ ಆಯಿತು. ಹಿಂದೆಲ್ಲ ಪಠ್ಯಪುಸ್ತಕ ರಚನಾ ಸಮಿತಿಯ ತೀರ್ಮಾನವೇ ಅಂತಿಮವಾಗುತ್ತಿತ್ತು. ಸಮಿತಿಯ ಕೆಲಸ ಮುಗಿದ ನಂತರ ನಿರ್ದೇಶಕರಿಗೆ ಪಠ್ಯವಸ್ತು ನೀಡುತ್ತಿತ್ತು. ಆದರೆ ಈ ಬಾರಿ ಆ ರೀತಿ ಆಗಿಲ್ಲ. ಸಲಹಾ ಸಮಿತಿಯೊಂದನ್ನು ರಚಿಸಿ, ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬರನ್ನು ಅದರ ಸಂಚಾಲಕರನ್ನಾಗಿ ನೇಮಕ ಮಾಡಲಾಯಿತು. ಅವರ ನಿರ್ದೇಶನದಂತೆ ಕೆಲಸ ಮಾಡುವುದು ಅನಿವಾರ್ಯವಾಗಿತ್ತು.ಕೆಲ ವಿಷಯಗಳಲ್ಲಿ ಪಠ್ಯವಸ್ತು ಹೀಗಿಯೇ ಇರಬೇಕು ಎಂಬ ಸ್ಪಷ್ಟ ಸೂಚನೆ ನೀಡಿದ್ದರು. ಈ ರೀತಿ ಆಗಬಾರದಿತ್ತು ಎಂಬುದು ಸಮಿತಿಯಲ್ಲಿ ಕೆಲಸ ಮಾಡಿರುವ ತಜ್ಞರೊಬ್ಬರು ಬೇಸರದ ನುಡಿ.ರಚನಾ ಸಮಿತಿಗೆ ಪೂರ್ಣಪ್ರಮಾಣದ ಸ್ವಾತಂತ್ರ್ಯ ಇರಲಿಲ್ಲ. ಕೆಲವೊಂದು ಅಂಶಗಳನ್ನು ಸೇರಿಸುವ ಕುರಿತು ಲಿಖಿತ ಸೂಚನೆ ನೀಡಿದ್ದರು. ಸಲಹಾ ಸಮಿತಿಯ ನಿರ್ದೇಶನವನ್ನು ಪಾಲಿಸುವುದು ಅನಿವಾರ್ಯ ಆದ ಕಾರಣ ಮನಸ್ಸು ಒಪ್ಪದಿದ್ದರೂ ಸೇರಿಸಲಾಗಿದೆ.ಸರ್ಕಾರದ ನಿಯಂತ್ರಣದಲ್ಲಿ ಕೆಲಸ ಮಾಡುವಾಗ ರಾಜಿಯಾಗುವುದು ಅನಿವಾರ್ಯವಾಗುತ್ತದೆ. ಆದರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅವರು ನೋವು ತೋಡಿಕೊಂಡರು.ಪಠ್ಯಪುಸ್ತಕಗಳ ರಚನೆ ಹೀಗೇ ಆಗಬೇಕು ಎಂದು ಸರ್ಕಾರದ ಕಡೆಯಿಂದ ಮೌಖಿಕವಾಗಿ ಸೂಚನೆ ಇತ್ತು ಎಂದು ಅನಿಸುತ್ತದೆ. ಪಠ್ಯಪುಸ್ತಕಗಳನ್ನು ಎಲ್ಲ ಸಮುದಾಯದ ವಿದ್ಯಾರ್ಥಿಗಳು ಓದುವುದರಿಂದ, ಯಾವುದೇ ಸಮುದಾಯದವರಿಗೆ ಮುಜುಗರವಾಗುವ ಅಂಶಗಳು ಇರಬಾರದು ಎಂಬುದು ಸಮಿತಿಯ ಮತ್ತೊಬ್ಬ ಸದಸ್ಯರ ಅಭಿಪ್ರಾಯ.ಆಕ್ಷೇಪಕ್ಕೆ ಒಳಗಾಗಿರುವ ಅಂಶಗಳ ಬಗ್ಗೆ ಪುನರ್‌ಪರಿಶೀಲನೆ ನಡೆಸುವುದು ಒಳ್ಳೆಯದು. ಇದೆಲ್ಲವನ್ನೂ ಗಮನಿಸಿದರೆ ಎಲ್ಲೊ ಒಂದು ಕಡೆ ರಹಸ್ಯ ಕಾರ್ಯಸೂಚಿ ಕೆಲಸ ಮಾಡುತ್ತಿದೆ ಅನಿಸುತ್ತದೆ. ಸಮಿತಿ ಸದಸ್ಯರನ್ನು ಕರೆದು ಈ ಬಗ್ಗೆ ಮತ್ತೊಮ್ಮೆ ಸಮಾಲೋಚಿಸುವುದು ಸೂಕ್ತ. ತರಾತುರಿಯಲ್ಲಿ ಮುದ್ರಣಕ್ಕೆ ಕಳುಹಿಸುವುದು ಸರಿಯಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬುದು ಅವರ ಅಭಿಪ್ರಾಯ.`ಅಖಂಡ ಭಾರತದ ನಕ್ಷೆ ಹಾಕಿರುವುದು ತಪ್ಪಲ್ಲ. ಹಿಂದೂ ಕುಟುಂಬವನ್ನು ಮಾತ್ರ ಉಲ್ಲೇಖಿಸಿರುವುದರಲ್ಲಿ ತಪ್ಪು ಹುಡುಕುವುದು ಸರಿಯಲ್ಲ. ಬಹುಸಂಖ್ಯಾತ ಸಮುದಾಯದವರ ಕುಟುಂಬದ ಬಗ್ಗೆ ವಿವರಿಸದೆ ಅಲ್ಪಸಂಖ್ಯಾತ ಸಮುದಾಯದ ಕುಟುಂಬದ ಬಗ್ಗೆ ವಿವರಿಸಲು ಸಾಧ್ಯವೇ~ ಎಂಬುದು ಪಠ್ಯಪುಸ್ತಕ ಸಮಿತಿಯಲ್ಲಿ ಕೆಲಸ ಮಾಡಿರುವ ಮತ್ತೊಬ್ಬ ತಜ್ಞರ ಪ್ರಶ್ನೆ.`ಐದನೇ ತರಗತಿಯ ಸಮಾಜ ವಿಜ್ಞಾನದಲ್ಲಿ ನಾವು ಸೇರಿಸಿರುವ ಅಂಶಗಳು ಸರಿ ಇವೆ. ಆ ಬಗ್ಗೆ ಆಕ್ಷೇಪಣೆ ಇದ್ದರೆ ಇಲಾಖೆಯವರು ಉತ್ತರ ನೀಡಬೇಕಾಗುತ್ತದೆ. ಅದಕ್ಕೆ ನಾವು ಹೊಣೆಯಲ್ಲ. ಸಮಿತಿಯಲ್ಲಿ ಎಲ್ಲ ವಿಭಾಗಕ್ಕೆ ಸೇರಿದ ಸದಸ್ಯರು ಇದ್ದರು.ಎಲ್ಲರ ಅಭಿಪ್ರಾಯ, ಸಲಹೆಗಳನ್ನು ಆಲಿಸಲಾಗಿದೆ. ಯಾವ ಲೋಪ ಆಗಿಲ್ಲ~ ಎಂಬುದು ಅವರ ಸಮರ್ಥನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry