ಶುಕ್ರವಾರ, ನವೆಂಬರ್ 22, 2019
19 °C
2008ರಲ್ಲಿ ನಡೆದ ಮುಂಬೈ ದಾಳಿ ಪ್ರಕರಣದ ವಿಚಾರಣೆ

ಸಂಚುಕೋರರನ್ನು ಗುರುತಿಸಿದ ಸಾಕ್ಷಿದಾರರು

Published:
Updated:

ಇಸ್ಲಾಮಾಬಾದ್ (ಪಿಟಿಐ): ಮುಂಬೈ ಮೇಲೆ 2008ರಲ್ಲಿ ನಡೆದ ದಾಳಿಯಲ್ಲಿ ಭಾಗಿಯಾಗಿದ್ದವರಲ್ಲಿ ಒಬ್ಬಾತ ದೋಣಿ ಖರೀದಿಸಿದ್ದನ್ನು ತಾನು ನೋಡಿದ್ದಾಗಿ ಸಾಕ್ಷಿದಾರನೊಬ್ಬ ಶನಿವಾರ ಹೇಳಿದ್ದಾನೆ.ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಲ್ಲಿ ಆಪಾದಿತರ ಚಿತ್ರಗಳನ್ನು ತೋರಿಸಿದಾಗ ಸಾಕ್ಷಿದಾರ ಆರೋಪಿಯ ಗುರುತು ಹಿಡಿದು ಹೀಗೆ ಹೇಳಿದ. ಈ ದಾಳಿಯಲ್ಲಿ ಭಾಗಿಯಾದವರ ಉಗ್ರರಲ್ಲಿ ಕಸಾಬ್ ಹೊರತುಪಡಿಸಿ ಉಳಿದವರೆಲ್ಲಾ ಭಾರತೀಯ ಭದ್ರತಾ ಪಡೆಯವರ ಗುಂಡಿಗೆ ಬಲಿಯಾಗಿದ್ದರು.ಇವರೆಲ್ಲಾ ಈ ದೋಣಿಗಳಲ್ಲೇ ಕರಾಚಿಯಿಂದ ಮುಂಬೈಗೆ ತೆರಳಿ ನಂತರ ದಾಳಿ ಎಸಗಿದ್ದರು.ದಾಳಿಗೆ ಬಳಸಿದ್ದ ರಬ್ಬರ್ ದೋಣಿಯನ್ನು ಖರೀದಿ ಮಾಡಿದ್ದ ಭಯೋತ್ಪಾದಕನನ್ನು ಗುರುತಿಸಿರುವ ಸಾಕ್ಷಿದಾರನ ಹೆಸರನ್ನು ಭದ್ರತೆಯ ಕಾರಣದಿಂದಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ.ರಾವಲ್ಪಿಂಡಿಯ ಆದಿಯಾಲಾ ಜೈಲಿನ ನ್ಯಾಯಾಲಯದಲ್ಲಿ ನಡೆದ ಗೋಪ್ಯ ವಿಚಾರಣೆ ಸಂದರ್ಭದಲ್ಲಿ ಸಾಕ್ಷಿದಾರ ಭಯೋತ್ಪಾದಕ ಶಾಹಿದ್ ಜಮಿಲ್ ರಿಜ್ ಎಂಬಾತನನ್ನು ಗುರುತಿಸಿದ್ದು, ರಬ್ಬರ್ ದೋಣಿಯನ್ನು ಈತನೇ ಖರೀದಿಸಿದ್ದ ಎಂದು ತಿಳಿಸಿದ.ರಿಜ್ ಮತ್ತು ಇತರ ಹತ್ತು ಮಂದಿ ಬಂದು ಮೀನು ಹಿಡಿಯಲು ಅಗತ್ಯವಾಗಿದೆ ಎಂದು 11 ರಬ್ಬರ್ ದೋಣಿ ಖರೀದಿಸಿದರು. ನಂತರ ಇವರು ಮೀನು ಹಿಡಿದುಕೊಂಡು ಹಿಂದಿರುಗಿದ್ದನ್ನು ನೋಡಿಲ್ಲ ಎಂದು ಸಾಕ್ಷಿದಾರ ಹೇಳಿದನು.ಶನಿವಾರ ನಡೆದ ವಿಚಾರಣೆ ಸಂದರ್ಭದಲ್ಲಿ ಒಟ್ಟು ನಾಲ್ವರು ಖಾಸಗಿ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಯಿತು. ಒಬ್ಬ ಸಾಕ್ಷಿದಾರ ತಾನು ಆಪಾದಿತನಿಗೆ 1.6 ಲಕ್ಷಕ್ಕೆ ದೋಣಿ ಎಂಜಿನನ್ನು ಮಾರಿದ್ದಾಗಿ ತಿಳಿಸಿದರೆ, ಇನ್ನೊಬ್ಬ ಸಾಕ್ಷಿದಾರ ತಾನು ಆರು ಪಂಪ್‌ಗಳನ್ನು ಮಾರಿದ್ದಾಗಿ ತಿಳಿಸಿದನು.`ತಲೆ ಮರೆಸಿಕೊಂಡ ಅಪರಾಧಿಗಳು' ಎಂದು ಘೋಷಿತವಾದ ಅಮ್ಜದ್ ಖಾನ್ ಮತ್ತು ಅತಿಕರ್ ರೆಹಮಾನ್ ಸೇರಿದಂತೆ 10 ಸಂಚುಕೋರರನ್ನು ಸಾಕ್ಷಿದಾರರು ಗುರುತಿಸಿದರು.ನಂತರ ನ್ಯಾಯಾಧೀಶರು ವಿಚಾರಣೆಯನ್ನು ಏ.27ಕ್ಕೆ ಮುಂದೂಡಿದರು. ನ್ಯಾಯಾಲಯಕ್ಕೆ ಪುನಃ ಹಾಜರಾಗಬೇಕು ಎಂದು ಸಾಕ್ಷಿದಾರರಿಗೆ ತಿಳಿಸಿದಾಗ ಅವರು ವಿರೋಧ ವ್ಯಕ್ತಪಡಿಸಿದರು. ಪದೇಪದೇ ನ್ಯಾಯಾಲಯಕ್ಕೆ ಬರುವುದಕ್ಕೆ ಬಹಳ ಹಣ ಖರ್ಚಾಗುತ್ತದೆ; ಆದ್ದರಿಂದ ಪ್ರವಾಸ ಮತ್ತು ಇತರ ಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)