ಬುಧವಾರ, ನವೆಂಬರ್ 13, 2019
28 °C

ಸಂಜಯ್ ದತ್ ವಿರುದ್ಧ ಜಾಮೀನು ರಹಿತ ವಾರೆಂಟ್

Published:
Updated:

ಮುಂಬೈ (ಪಿಟಿಐ): ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಈಗಾಗಲೇ ಜೈಲು ಶಿಕ್ಷೆಗೆ ಗುರಿಯಾಗಿರುವ ನಟ ಸಂಜಯ್ ದತ್‌ಗೆ ಹಳೆಯ ಪ್ರಕರಣವೊಂದು ಸಂಕಷ್ಟಕ್ಕೆ ಗುರಿ ಮಾಡಿದೆ.ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಎರಡು ಬಾರಿ ಕೋರ್ಟ್ ಸಮನ್ಸ್‌ಗೆ ಉತ್ತರಿಸಲು ವಿಫಲರಾದ ದತ್ ವಿರುದ್ಧ ಮುಂಬೈ ಮೆಟ್ರೋಪಾಲಿಟನ್ ಕೋರ್ಟ್ ಸೋಮವಾರ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.ದತ್ ಕಡೆಯಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆರೋಪಿಸಿ ಚಿತ್ರ ನಿರ್ಮಾಪಕ ಶಕೀಲ್ ನೂರಾನಿ ಎನ್ನುವವರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧ ಅಂಧೇರಿ ಮೆಟ್ರೋಪಾಲಿಟನ್  ಕೋರ್ಟ್ ದತ್ ಅವರಿಗೆ ಎರಡು ಬಾರಿ ಸಮನ್ಸ್ ಜಾರಿ ಮಾಡಿತ್ತು. ಎರಡು ಬಾರಿಯೂ ಕೋರ್ಟ್ ಮುಂದೆ ಹಾಜರಾಗುವಲ್ಲಿ ದತ್ ವಿಫಲರಾದ ಕಾರಣ, ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ ಎಂದು ನೂರಾನಿ ಪರ ವಕೀಲ ನೀರಜ್ ಗುಪ್ತ ತಿಳಿಸಿದ್ದಾರೆ.ದತ್ ಕಡೆಯಿಂದ ನೂರಾನಿ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿವೆ ಎಂಬುದನ್ನು ದತ್ ಪರ ವಕೀಲ ರಿಜ್ವಾನ್ ಮರ್ಚಂಟ್ ಅಲ್ಲಗಳೆದಿದ್ದು, ಪ್ರಕರಣವನ್ನು ಕೋರ್ಟ್‌ನಲ್ಲಿ ಎದುರಿಸುವುದಾಗಿ ಹೇಳಿದ್ದಾರೆ.ಘಟನೆ ಹಿನ್ನೆಲೆ: 2002ರಲ್ಲಿ ನೂರಾನಿ  ಅವರ `ಜಾನ್ ಕಿ ಬಾಝಿ' ಚಿತ್ರದ ಅಭಿನಯಕ್ಕಾಗಿ ದತ್  ರೂ. 50 ಲಕ್ಷ ಸಂಭಾವನೆ ಪಡೆದಿದ್ದರು. ಅರ್ಧ ಚಿತ್ರೀಕರಣ ಮುಗಿಯುತ್ತಲೇ ಮುಂದಿನ ಚಿತ್ರಕರಣದಲ್ಲಿ ದತ್ ಪಾಲ್ಗೊಳ್ಳಲು ನಿರಾಕರಿಸಿದ್ದರು. ಹಾಗಾಗಿ ಚಿತ್ರ ಅರ್ಧದಲ್ಲೇ ನಿಂತಿತು. ಅಲ್ಲದೆ, ತಮಗೆ ನೀಡಲಾಗಿದ್ದ ಸಂಭಾವನೆಯನ್ನು ಹಿಂದಿರುಗಿಸಲು ದತ್ ನಿರಾಕರಿಸಿದ್ದರು. ಘಟನೆ `ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ'ದ (ಐಎಂಪಿಪಿಎ) ಮೆಟ್ಟಿಲು ಹತ್ತಿತ್ತು. ದೂರು ಪರಿಶೀಲಿಸಿದ್ದ ಐಎಂಪಿಪಿಎ, ಚಿತ್ರೀಕರಣದ ಸ್ಥಗಿತದಿಂದ ನಷ್ಟ ಅನುಭವಿಸಿದ್ದ ನೂರಾನಿ ಅವರಿಗೆ ರೂ. 2 ಕೋಟಿ ಪಾವತಿಸುವಂತೆ ದತ್ ಅವರಿಗೆ ನಿರ್ದೇಶನ ನೀಡಿತ್ತು.ದತ್ ಇದಕ್ಕೂ ಕಿವಿಗೊಡದಿದ್ದಾಗ, ಅಂತಿಮವಾಗಿ ನೂರಾನಿ ಐಎಂಪಿಪಿಎ ನೀಡಿರುವ ನಿರ್ದೇಶನವನ್ನು ಕಾರ್ಯರೂಪಗೊಳಿಸುವಂತೆ ಬಾಂಬೆ ಹೈಕೋರ್ಟ್‌ನ ಮೋರೆ ಹೋಗಿದ್ದರು.ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತಲೇ ದತ್ ಕಡೆಯಿಂದ ದುಬೈ ಮತ್ತು ಕರಾಚಿಯಿಂದ ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ  ಎಂದು  ದತ್ ವಿರುದ್ಧ ನೂರಾನಿ ದೂರು ದಾಖಲಿಸಿದ್ದರು.

ಪ್ರತಿಕ್ರಿಯಿಸಿ (+)