ಸಂಜೆಯೇ ನಡೆಯಲಿ: ಹಿರಿಯರ ಮನವಿ

7
ತಡರಾತ್ರಿ ಗಣೇಶ ವಿಸರ್ಜನಾ ಕಾರ್ಯಕ್ರಮ ಸಲ್ಲ

ಸಂಜೆಯೇ ನಡೆಯಲಿ: ಹಿರಿಯರ ಮನವಿ

Published:
Updated:
ಸಂಜೆಯೇ ನಡೆಯಲಿ: ಹಿರಿಯರ ಮನವಿ

ಹುಬ್ಬಳ್ಳಿ: ಗಣೇಶನ ವಿಸರ್ಜನಾ ಕಾರ್ಯಕ್ರಮವನ್ನು ತಡರಾತ್ರಿ ಹಮ್ಮಿಕೊಳ್ಳದೆ ಸಂಜೆಯೇ ನಡೆಸುವಂತೆ ಹುಬ್ಬಳ್ಳಿ–ಧಾರವಾಡ ಎಸ್.ಎಸ್‌.ಕೆ.ಹಿರಿಯ ನಾಗರಿಕರ ಸಂಘ ಒತ್ತಾಯಿಸಿದೆ.ಗಣೇಶನ ವಿಸರ್ಜನೆಯ ಸಂಭ್ರಮದಲ್ಲಿ ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ಪಾಲ್ಗೊಳ್ಳಲು ಉತ್ಸುಕರಾಗಿದ್ದು, ಸಂಜೆ ವೇಳೆ ನಡೆದಲ್ಲಿ ಹೆಚ್ಚಿನ ಉತ್ಸಾಹದಿಂದ ಪಾಲ್ಗೊಳ್ಳಬಹುದಾಗಿದೆ. ಆದರೆ ಗಣೇಶ ವಿಸರ್ಜನಾ ಕಾರ್ಯ ತಡರಾತ್ರಿ ನಡೆಯುತ್ತಿದೆ ಇದರಿಂದ ಎಲ್ಲರೂ ಅದರಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ ಎಂದು ಸಂಘದ ಅಧ್ಯಕ್ಷ ವಿಷ್ಣು ಸಾ ಕಾಟವಾ ಬೇಸರ ವ್ಯಕ್ತಪಡಿಸಿದ್ದಾರೆ.ಮುಂದಿನ ದಿನಗಳಲ್ಲಿ ತಡರಾತ್ರಿಯ ಬದಲು ಸಂಜೆಯೇ ವಿಸರ್ಜನಾ ಕಾರ್ಯ ಆರಂಭಿಸುವಂತೆ ಅವರು ಮನವಿ ಮಾಡಿದ್ದಾರೆ.ಗಣ್ಯರಿಗೆ ಸನ್ಮಾನ

ಹುಬ್ಬಳ್ಳಿ: ‘ಸ್ವಾತಂತ್ರ್ಯ ಹೋರಾಟದ ಕಾವು ಹೆಚ್ಚಿಸಲು ಬಾಲಗಂಗಾಧರ ತಿಲಕ ಅವರು ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವ ಉತ್ತಮ ಪ್ರಭಾವ ಬೀರಿತ್ತು. ಇಂದಿನ ಪರಿಸ್ಥಿತಿಯಲ್ಲಿ ಈ ಹಬ್ಬವನ್ನು ಸಾಮಾಜಿಕ ಸಂಘಟನೆಗಾಗಿ ಬಳಸಿಕೊಳ್ಳಬೇಕಾದ ಅಗತ್ಯವಿದ್ದು ಸಮಾಜದ ಆರೋಗ್ಯ ವೃದ್ಧಿಸಲು ನೆರವಾಗಬೇಕು’ ಎಂದು ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಹೇಳಿದರು.ನಗರದ ಶ್ರೀ ಗಜಾನನ ಮಹಾಮಂಡಳ ಟೌನ್‌ ಹಾಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಗಣ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು.‘ಸಮಾಜ ಇಂದು ಅನೇಕ ಸಮಸ್ಯೆಗಳಿಂದ ನಲುಗುತ್ತಿದೆ. ಇದರ ಪರಿಹಾರಕ್ಕೆ ಗಣೇಶೋತ್ಸವ ನೆರವಾಗಬೇಕು. ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಡೆಯದೆ ಒಳ್ಳೆಯ ಗುಣಗಳಿಂದ ಯುವ ಜನತೆ ವಿಮುಖವಾಗುತ್ತಿರುವುದರಿಂದ ಗಣೇಶ ಹಬ್ಬದಲ್ಲಿ ಅಸಭ್ಯ ವರ್ತನೆ ಕಂಡು ಬರುತ್ತಿದೆ. ಇಂಥ ಸ್ಥಿತಿ ಇಲ್ಲದಾಗಬೇಕು. ಮೋಜು ಮಸ್ತಿ ಮಾಡಿ ಎಂದು ಗಣಪತಿ ಕೇಳಲಿಲ್ಲ. ಭಕ್ತರು ಕುಡಿದು ನೃತ್ಯ ಮಾಡಲಿ ಎಂದೂ ಆತ ಬಯಸಲಿಲ್ಲ. ಆದ್ದರಿಂದ ಭಕ್ತಿಯಿಂದ ಪೂಜಿಸಿ, ಶಾಸ್ತ್ರೀಯವಾಗಿ ಉತ್ಸವ ಆಚರಿಸಲು ಮುಂದಾಗ­­ಬೇಕು’ ಎಂದು ಸಲಹೆ ನೀಡಿದರು.

ಸಾನಿಧ್ಯ ವಹಿಸಿದ್ದ ಕುಸುಗಲ್‌ ಸಿದ್ದಾರೂಢ ಮಠದ ಸಿದ್ದಯ್ಯಜ್ಜ ಸ್ವಾಮೀಜಿ, ಗಣೇಶ ಹಬ್ಬ ಐಕ್ಯತೆಗೆ ಕಾರಣವಾಗಬೇಕು ಎಂದು ಆಶಿಸಿದರು.ಗಣಪತಿಯ ಶ್ಲೋಕ, ಬಸವಣ್ಣನ ವಚನ, ಗುರುನಾನಕ್‌ ಕಥೆಗಳನ್ನು ಹೇಳಿದ ಬಾಷಾ ಅವರು ‘ಗಣಪತಿ ತಾಯಿಗೆ ಸುತ್ತು ಬಂದು ಇಡೀ ವಿಶ್ವವನ್ನು ಸುತ್ತಿದ್ದಾಗಿ ಹೇಳಿ ತಾಯಿಯ ಮಹತ್ವವನ್ನು ತಿಳಿಸಿದ್ದ. ತಾಯಿ ಪಾದದ ಕೆಳಗೆ ಸ್ವರ್ಗ ಇದೆ ಎಂದು ಇಸ್ಲಾಂ ಧರ್ಮ ಕೂಡ ಹೇಳುತ್ತದೆ. ಎಲ್ಲ ಧರ್ಮಗಳಲ್ಲೂ ಒಂದೇ ರೀತಿಯ ನೀತಿ ಇರುತ್ತದೆ ಎಂಬುದಕ್ಕೆ ಇಂಥ ಸಾಮ್ಯತೆ ಸಾಕ್ಷಿ’ ಎಂದು ಹೇಳಿದರು.ಸಮಾರಂಭದಲ್ಲಿ ಮಕ್ಕಳ ತಜ್ಞ ಡಾ.ಬದರಿ ನಾರಾಯಣ ಶೆಟ್ಟಿ, ಕವಯಿತ್ರಿ ಡಾ. ಸರೋಜಿನಿ ಚವಲಾರ ಹಾಗೂ ಆಯುರ್ವೇದ ವೈದ್ಯ ಡಾ.ಸುರೇಶ ಮೆಣಸಗಿ ಅವರನ್ನು ಸನ್ಮಾನಿಸಲಾ­ಯಿತು. ಶ್ರೀ ಗಜಾನನ ಮಹಾಮಂಡಳದ ಅಧ್ಯಕ್ಷ ಡಿ.ಗೋವಿಂದ ರಾವ್, ವೆಂಕಟೇಶ್ವರ ಬೋರ್‌­ವೆಲ್‌ ಕಂಪೆನಿಯ ಮೆಹಬೂಬ್‌ ಬಾಷಾ,  ಅಮೃತ ಇಜಾರಿ, ಸುಮತಿಶ್ರೀ ನವಲಿ ಹಿರೇಮಠ, ಜಾಧವ ಮಾಸ್ತರ, ಪಾಸ್ತೆ, ಹೋರಾಟಗಾ­ರರಾದ ಸಿ.ಬಿ.ಎಲ್‌. ಹೆಗಡೆ, ಅರವಿಂದ ಮೇಟಿ ಮತ್ತಿತರರು ಉಪಸ್ಥಿತರಿದ್ದರು. ಆಕಾಶವಾಣಿ ಕಲಾವಿದೆ ಸುಜಾತಾ ಗುರವ ಕಮ್ಮಾರ ಗಾಯನದ ಮೂಲಕ ಮುದ ನೀಡಿದರು.ವಿನೂತನ ವಿದಾಯ

ಹುಬ್ಬಳ್ಳಿ: ಗಣೇಶ ವಿಸರ್ಜನೆಗಾಗಿ ನೀರಿನ ಟ್ರೈಲರುಗಳನ್ನು ಹೊತ್ತ ‘ಪರಿಸರ ಸ್ನೇಹಿ ವಿಸರ್ಜನಾ ವಾಹನ’ ವನ್ನು ಸಿದ್ಧಗೊಳಿಸಿ, ಜಲಮಾಲಿನ್ಯ ತಡೆಗಟ್ಟಲು ಶ್ರಮಿಸಿದ ನಗರದ ಕೆಎಲ್‌ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಕಾಲೇಜಿನ ಎನ್‌.ಎಸ್‌.ಎಸ್‌. ವಿದ್ಯಾರ್ಥಿಗಳ ಕಾರ್ಯವನ್ನು ಅಕ್ಷಯ ಪಾರ್ಕ್‌ ಬಡಾವಣೆ ನಿವಾಸಿಗಳು ಶ್ಲಾಘಿಸಿದರು.ಪ್ರತಿವರ್ಷ ಗಣೇಶ ವಿಸರ್ಜನೆಗೆ ಬಾವಿಗಳಿಲ್ಲದೆ, ಸಮೀಪದ ಜಲಮೂಲಗಳಿಗಾಗಿ ನಿವಾಸಿಗಳು ಪರದಾಡುತ್ತಿದ್ದರು. ಈ ಬಾರಿ, ಜೆಜಿ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಮನೆ–ಮನೆಗಳಿಗೆ ಪಾದಯಾತ್ರೆ ಮೂಲಕ ತೆರಳಿ ‘ಕೆರೆ–ಬಾವಿಗಳನ್ನು ರಕ್ಷಿಸಿ’ ‘ನೀರು ಜೀವಾಮೃತ’, ‘ಜಲಸಂಪನ್ಮೂಲ ಅಮೂಲ್ಯ’ ಎಂಬ ಬರಹವುಳ್ಳ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಅರಿವು ಮೂಡಿಸಿ, ವಿಘ್ನ ವಿನಾಯಕನಿಗೆ ವಿನೂತನ ವಿದಾಯ ಹೇಳಿದರು. ಇನ್ನರ್‌ವೀಲ್‌ ಕ್ಲಬ್‌ ಸಂಸ್ಥೆಯ ಸಹಯೋಗದಲ್ಲಿ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಗಣೇಶ ವಿಸರ್ಜನೆ

ಧಾರವಾಡ: ತಾಲ್ಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಗಳನ್ನು ಭಾನುವಾರ ವಿಜೃಂಭಣೆಯಿಂದ ವಿಸರ್ಜನೆ ಮಾಡಲಾಯಿತು.ಗ್ರಾಮದ ಹೊಸಪೇಟಿಮಠದ ಸಿದ್ಧಿವಿನಾಯಕ ಯುವಕ ಮಂಡಳ ಪ್ರತಿಷ್ಠಾಪಿಸಿದ್ದ ಡಗಡುಶೇಟ್ ಗಣಪತಿ ಮೂರ್ತಿ, ಗ್ರಾಮದೇವಿ ಓಣಿಯವರು ಪ್ರತಿಷ್ಠಾಪಿಸಿದ್ದ ಬೆಟಗೇರಿ ಕಾ ರಾಜಾ ಗಣಪತಿ ಮೂರ್ತಿ, ಮಲ್ಲಿಕಾರ್ಜುನ ದೇವಸ್ಥಾನ ಓಣಿಯ ಗಣೇಶ ಮೂರ್ತಿ ಸೇರಿದಂತೆ ಗ್ರಾಮದ ಒಟ್ಟು 14 ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ಏಕಕಾಲಕ್ಕೆ ವಿಸರ್ಜನೆ ಮಾಡಲಾಯಿತು. ಆಯಾ ಓಣಿಯವರು ಟ್ರ್ಯಾಕ್ಟರ್‌ಗಳಲ್ಲಿ ಮೆರವಣಿಗೆ ಮೂಲಕ ತಂದ ಗಣೇಶನ ಮೂರ್ತಿಗಳನ್ ಹಿರೇ ಹಳ್ಳದಲ್ಲಿ ವಿಸರ್ಜಿಸಲಾಯಿತು.ಬಂದೋಬಸ್ತ್‌: ಸಾರ್ವಜನಿಕ ಗಣಪತಿಗಳ ವಿಸರ್ಜನೆ ಕಾಲಕ್ಕೆ ಗಲಾಟೆಗಳು ಸಂಭವಿಸದೇ ಇರಲು ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಏಳು ಸ್ಥಳಗಳಲ್ಲಿ ಪೊಲೀಸರು ಸಿ ಸಿ ಕ್ಯಾಮರಾಗಳನ್ನು ಅಳವಡಿಸಿದ್ದರು.ಅಲ್ಲದೇ, ಗರಗ ಠಾಣೆ ಸಿಪಿಐ ರಾಮನಗೌಡ ಹಟ್ಟಿ ನೇತೃತ್ವದಲ್ಲಿ ಸುಮಾರು 100 ಜನ ಪೊಲೀಸ್‌ ಸಿಬ್ಬಂದಿಯನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry