ಸಂಜೆ ಬದುಕಿನವರಿಗೆ ಸೂರು

7

ಸಂಜೆ ಬದುಕಿನವರಿಗೆ ಸೂರು

Published:
Updated:
ಸಂಜೆ ಬದುಕಿನವರಿಗೆ ಸೂರು

ಶಾಂತಮ್ಮನ ಪತಿ ತೀರಿಕೊಂಡು ಹಲವು ವರ್ಷಗಳೇ ಕಳೆದಿವೆ. ಇದ್ದ ಒಬ್ಬ ಮಗ ವಿದೇಶದಲ್ಲಿ ನೆಲೆಸಿದ್ದಾನೆ. ಇಲ್ಲಿ ಶಾಂತಮ್ಮನಿಗೆ ಒಬ್ಬಂಟಿಯಾಗಿ ಜೀವನ ನಡೆಸುವುದು ಕಷ್ಟ. ನೀರವ ರಾತ್ರಿಯಲ್ಲಿ ಮನೆಯ ಕಾಂಪೌಂಡ್‌ಒಳಗಿರುವ ಮರ-ಗಿಡಗಳು ಅಲುಗಾಡಿದರೂ ಆಕೆಯ ಎದೆ ಝಲ್ ಎನ್ನುತ್ತದೆ.ಅಲ್ಲದೇ ನಗರದಲ್ಲಿ ಇತ್ತೀಚೆಗೆ ಒಂಟಿಯಾಗಿರುವ ಮನೆಗಳ ಮೇಲೆ ದಾಳಿ ಇಡುವ ಡಕಾಯಿತರು ಹೆಚ್ಚಾಗಿದ್ದಾರೆ. ಹಾಗಾಗಿ ಸದಾ ಭಯದ ನೆರಳಿನಲ್ಲೇ ದಿನದೂಡುವ ಅನಿವಾರ್ಯತೆ ಈಕೆಗೆ. ಮಗ ತಿಂಗಳಿಗೆ ಇಂತಿಷ್ಟು ಹಣ ಕಳುಹಿಸುತ್ತಾನೆ. ಹಾಗಾಗಿ ಖರ್ಚಿಗೆ ಯೋಚನೆಯಿಲ್ಲ.ವೃದ್ಧಾಶ್ರಮಕ್ಕೆ ಹೋದರೆ ಹೇಗೆ ಎಂಬ ಆಲೋಚನೆ ಶಾಂತಮ್ಮನವರಿಗೆ ಒಮ್ಮಮ್ಮೆ ಬಂದಿದ್ದುಂಟು. ಆದರೆ, ನೆಂಟರಿಷ್ಟರಿಂದ ಎದುರಾಗಬಹುದಾದ ಅವಹೇಳನ ನೆನೆದು ಈಕೆ ಮನಸ್ಸು ಕಲ್ಲು ಮಾಡಿಕೊಂಡು ಈಗಲೂ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ.

    

                          ***

ಮುದ್ದಿನಿಂದ ಸಾಕಿದ ಮಕ್ಕಳಿಬ್ಬರಿಗೂ ಈಗ ತಂದೆ ತಾಯಿಯನ್ನು ನೋಡಿಕೊಳ್ಳುವ ಮನಸ್ಸಿಲ್ಲ. ವೃದ್ಧಾಪ್ಯದ ಹೊಸ್ತಿಲಲ್ಲಿರುವ ಅಪ್ಪ ಅಮ್ಮ ಅವರಿಗೆ ಈಗೀಗ ಹೊರೆ ಎನಿಸುತ್ತಿದ್ದಾರೆ. ನಿತ್ಯದ ಜಂಜಾಟದ ನಡುವೆ ವಯಸ್ಸಾದವರ ಬೇಕು-ಬೇಡಗಳನ್ನು ಕೇಳುವಷ್ಟು ಪುರುಸೊತ್ತಿಲ್ಲ.ಅವರಿಗೊಂದಿಷ್ಟು ಹಿಡಿ ಪ್ರೀತಿ ಕೊಡುವ ತಾಳ್ಮೆ ಇರಲಿ, ಅವರ ಪ್ರತಿ ಕೆಲಸವೂ ಈಗ ಮಕ್ಕಳಲ್ಲಿ ಅಸಹನೆ ಹುಟ್ಟಿಸುತ್ತಿದೆ. ಅಪ್ಪ ಅಮ್ಮನಿಗೂ ತುಂಬಾ ಸ್ವಾಭಿಮಾನ, ಕೈತುಂಬ ಹಣವಿದೆ, ಆಸ್ತಿಯಿದೆ. ಆದರೆ ಈ ವಯಸ್ಸಿನಲ್ಲಿ ಬೇರೆ ಮನೆ ಮಾಡಿದರೆ ಸಮಾಜ ಏನನ್ನುತ್ತದೋ ಎಂಬ ಆತಂಕದಲ್ಲಿ ದಿನದೂಡುತ್ತಿದ್ದಾರೆ. 

                            ***

ಪ್ರೀತಿಸಿ ಮದುವೆಯಾಗಿದ್ದ ದಂಪತಿಗೆ ಯಾವುದೋ ಕಾರಣಕ್ಕೆ ಮಕ್ಕಳಾಗಲಿಲ್ಲ. ಹಾಗೆಂದು ಪತಿ ಇನ್ನೊಂದು ಮದುವೆಯಾಗಲೂ ಇಷ್ಟ ಪಡಲಿಲ್ಲ. ಪ್ರೀತಿಸಿ ಸಪ್ತಪದಿ ತುಳಿದ ಈ ದಂಪತಿ ನನಗೆ ನೀನು-ನಿನಗೆ ನಾನು ಮಗು ಎಂದು ಬದುಕುವುದನ್ನು ಅಭ್ಯಾಸ ಮಾಡಿಕೊಂಡರು.

 

ಆದರೆ ಆಗೆಲ್ಲಾ ಕಾಡದಿದ್ದ ಏಕತಾನತೆ ಈಗ ಹೆಚ್ಚು ಕಾಡುತ್ತಿದೆ. ಇದರ ಜತೆಗೆ ವಯಸ್ಸಾದಂತೆ ಈ ದಂಪತಿಗಳ ಮಾನಸಿಕ ಸ್ಥಿರತೆಯೂ ಕುಂದಿದೆ. ವಯಸ್ಸಾದ್ದರಿಂದ ಮನಸ್ಸು ಅರಳು-ಮರಳು. ಬೆಳಗ್ಗೆ ನಡೆದ ಘಟನೆಯನ್ನು ಸಂಜೆಗೆ ಮರೆತು ಬಿಡುತ್ತಾರೆ.ಅವರಿಗೆ ಈಗೀಗ ತಮಗೂ ಮಕ್ಕಳಿದ್ದಿದ್ದರೆ ಚೆಂದವಿರುತ್ತಿತ್ತು ಅನಿಸುತ್ತಿದೆ. ವೃದ್ಧಾಪ್ಯದಲ್ಲಿ ಮಕ್ಕಳು ಊರುಗೋಲಾಗುತ್ತಿದ್ದರು ಎಂಬ ನೋವು ಅವರ ಜೀವ ಹಿಂಡುತ್ತಿದೆ. ಇದರಿಂದ ಹೊರಬರಲು, ಬದಲಾವಣೆಗೆ ಮನಸ್ಸು ಹಪಹಪಿಸುತ್ತಿದೆ. ಅದಕ್ಕೆ ತಕ್ಕಂತಹ ವಾತಾವರಣ ಇಲ್ಲಿಲ್ಲ ಎಂದು ಕೈಚೆಲ್ಲಿ ಕುಳಿತಿದ್ದಾರೆ...

     

                          ***

ಜೀವನದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ಮುಗಿಸಿ ಬಾಳಿನ ಮುಸ್ಸಂಜೆಗೆ ಕಾಲಿಡುವ ಹಿರಿಜೀವಗಳ ಕತೆಗಳಿವು. ಪತಿ ಕಳೆದುಕೊಂಡ, ಮಕ್ಕಳಿಂದ ದೂರವಾದ ಹಿರಿಯರ ಮನಸ್ಸಿನಲ್ಲಿ ಮೂಡುವ ತೊಳಲಾಟಗಳು ಅಷ್ಟಿಷ್ಟಲ್ಲ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಸಮಸ್ಯೆ.ವಯಸ್ಸಾಗುತ್ತಿದ್ದಂತೆ ದೈಹಿಕ-ಮಾನಸಿಕ ಸ್ಥಿತಿಗಳಲ್ಲಿ ಏರುಪೇರು ಸಹಜ. ಬದುಕಿನ ಇಳಿ ಸಂಜೆಯಲ್ಲಿ ತಮಗೆ ಕಾಲ ನೀಡಿದ್ದನ್ನು, ತಾವು ಕಳೆದುಕೊಂಡಿದ್ದನ್ನು ಮೆಲುಕುಹಾಕುತ್ತಾ ನೆಮ್ಮದಿಯಾಗಿ ಕಳೆಯಬೇಕು ಎಂದು ಹಿರಿಯರು ಬಯಸುತ್ತಾರೆ.

 

ತಮ್ಮ ಅನುಭವಕ್ಕೆ ನಿಲುಕಿದ ರಾಗ ದ್ವೇಷಗಳನ್ನು ಕೇಳುವ, ನಮಗೊಂದಿಷ್ಟು ಹಿಡಿ ಪ್ರೀತಿ ನೀಡುವ ಮನಸ್ಸುಗಳು ನಮ್ಮ ಸುತ್ತ ಇರಬೇಕೆಂದು ಬಯಸುತ್ತಾರೆ.

ಆದರೆ, ಈ ಅದೃಷ್ಟ ಎಲ್ಲರಿಗೂ ಇರುವುದಿಲ್ಲ. ದುಡ್ಡಿದ್ದರೂ ಮಾನಸಿಕ ನೆಮ್ಮದಿ ಇಲ್ಲದಾದಾಗ ಮನಸ್ಸು ಒಂಟಿತನದ ಕಪಿಮುಷ್ಟಿಗೆ ಸಿಕ್ಕು ನಲುಗುತ್ತದೆ. ಇಂತಹ ನೂರೆಂಟು ಅಸಹನೆಯಿಂದ ತೊಳಲಾಡುತ್ತಿರುವ ಹಿರಿಯರು ಈಗ ಕೈತುಂಬಾ ದುಡ್ಡು ಕೊಟ್ಟು ಬೇಕೆನಿಸಿದ ಅವಶ್ಯಕತೆಗಳನ್ನು ಪಡೆದುಕೊಳ್ಳಬಹುದು. ಅದಕ್ಕೆಂದೇ ಈಗ ನಗರದಲ್ಲಿ `ಹಿರಿಯ ನಾಗರಿಕರ ವಸತಿ ಗೃಹ~ಗಳು ತಲೆ ಎತ್ತುತ್ತಿವೆ.ಹಿರಿಯರ ವೃದ್ಧಾಪ್ಯವನ್ನು ಸಹ್ಯವಾಗಿಸುವ ದೃಷ್ಟಿಯಿಂದ ಹುಟ್ಟಿಕೊಂಡಂತಹವು ವೃದ್ಧಾಶ್ರಮಗಳು. ವಯಸ್ಸಾಗುತ್ತಿದ್ದಂತೆ ಸಂಬಂಧಿಗಳಿಂದ ನಿರ್ಲಕ್ಷ್ಯಕ್ಕೆ ಒಳಗಾದ ಹಿರಿಯರಿಗೆ ಅಥವಾ ವೈಯಕ್ತಿಕ ಕಾರಣದಿಂದ ಒಂಟಿಯಾದ ವಯೋವೃದ್ಧರಿಗೆ ಸೂರು ನೀಡಲೆಂದು ಅಲ್ಲಲ್ಲಿ ವೃದ್ಧಾಶ್ರಮಗಳು ತಲೆಯೆತ್ತಿದವು. ದಾನಿಗಳ ನೆರವು ಪಡೆದು ಇಲ್ಲಿ ಹಿರಿಯರಿಗೆ ವಸತಿ, ಆಹಾರ, ಮೂಲ ಸೌಕರ್ಯಗಳನ್ನು ಉಚಿತವಾಗಿ ಒದಗಿಸಲಾಗುತ್ತಿತ್ತು.ಆಧುನಿಕತೆ ಬೆಳೆದಂತೆ ವೃದ್ಧಾಶ್ರಮದ ಕಲ್ಪನೆಯೂ ತೆಳುವಾಯಿತು. ವೃದ್ಧಾಶ್ರಮ ಎಂಬ ಹೆಸರು ಈಗ `ಹಿರಿಯ ನಾಗರಿಕರ ವಸತಿ ಗೃಹ~ ಎಂಬುದಾಗಿ ಮಾರ್ಪಾಟುಗೊಂಡಿದೆ. ವ್ಯವಹಾರದೊಟ್ಟಿಗೆ ಹಿರಿಯರಿಗೆ ಸುವ್ಯವಸ್ಥಿತ ಮನೆ ನೀಡುವ ಕೆಲವು ಖಾಸಗಿ ಸಂಸ್ಥೆಗಳೂ ನಗರದಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಮುಂದಾಗಿವೆ.ಹಿರಿಯರಿಗೆಂದೇ ಅಪಾರ್ಟ್‌ಮೆಂಟ್ ನಿರ್ಮಿಸುವ ಯೋಜನೆ ಜಾರಿಗೆ ಬಂದಿದ್ದು ಇದೇ ಮೊದಲು. ಅವರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಮನೆ ವಿನ್ಯಾಸ, ಸೌಕರ್ಯ ಒದಗಿಸಲಾಗುವುದು ಎಂಬುದು ಪಂಚವಟಿ ನಿರ್ಮಾಣಕಾರರ ಮಾತು.ಸುಮಾರು 400 ಮಂದಿ ಇರುವ `ಧಾರ್ಮಿಕ ಸಮಾಜ~ದ ಸದಸ್ಯರಿಗಾಗಿ ರೂಪಿತಗೊಂಡಿರುವ ಅಪಾರ್ಟ್‌ಮೆಂಟ್ ಒಂದನ್ನು ವಕೀಲ್ ಹೌಸಿಂಗ್ ಕಾರ್ಪೊರೇಷನ್ ನಿರ್ಮಿಸಿದೆ.ಎಲೆಕ್ಟ್ರಾನಿಕ್ ಸಿಟಿಯಿಂದ 12 ಕಿ.ಮೀ ಅಂತರದಲ್ಲಿ  `ಪಂಚವಟಿ~ ಅಪಾರ್ಟ್‌ಮೆಂಟ್ ಇದ್ದು, ಹಿರಿಯ ನಾಗರಿಕರ ಕಾಳಜಿಗೆ ಹಿರಿಯರೇ ಮುಂದಾಗಿ ಎನ್ನುವ ಸಂದೇಶದೊಂದಿಗೆ ಚಾಲನೆಗೊಂಡಿದೆ. ಆದರೆ ವೃದ್ಧಾಶ್ರಮಗಳಂತೆ ಇದು ಸೇವಾ ಸಂಸ್ಥೆಯಲ್ಲ. ಇಲ್ಲಿ ಎಲ್ಲಕ್ಕೂ ಹಣವೇ ಮೂಲ. ಎಷ್ಟು ಹಣ ತುಂಬುತ್ತೀರೋ ಅಷ್ಟು ಸವಲತ್ತುಗಳನ್ನು ಇಲ್ಲಿ ಪಡೆದುಕೊಳ್ಳಬಹುದು.ಭದ್ರತೆಗೆ ಆದ್ಯತೆ

ಈ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲಾಟ್‌ಗಳು ಹಿರಿಯರ ಅವಶ್ಯಕತೆಗೆ ತಕ್ಕಂತೆ ರೂಪುಗೊಂಡಿವೆ.  ಒಂದು, ಎರಡು, ಮೂರು ರೂಮುಗಳ ಅಪಾರ್ಟ್‌ಮೆಂಟ್‌ಗಳು ಇಲ್ಲಿ ಲಭ್ಯ. ಹಿರಿಯರ ಭದ್ರತೆಗೆ ಮೊದಲ ಆದ್ಯತೆ. ಅಪಾರ್ಟ್‌ಮೆಂಟ್‌ನಲ್ಲಿ ಉದ್ಯಾನ, ವ್ಯಾಯಾಮಕ್ಕೆಂದು ಪ್ರತ್ಯೇಕ ಕೊಠಡಿ, ಪಾರ್ಕಿಂಗ್ ವ್ಯವಸ್ಥೆ, ನೀರು, ವಿದ್ಯುತ್, ಔಷಧೋಪಚಾರ, ಧ್ಯಾನ ಕೇಂದ್ರ ಎಲ್ಲವೂ ಇದೆ.ಜತೆಗೆ ಹಿರಿಯರಿಗೆಂದು ಮೆಸ್, ವೀಲಿಂಗ್ ಚೇರ್, ಗ್ರಂಥಾಲಯ, ಈಜುಕೊಳ, ಮನರಂಜನೆ, ಸಾರಿಗೆ ಸೌಲಭ್ಯ, ಹೊರಗಿನಿಂದ ನೋಡಲು ಬಂದವರಿಗೆ ತಂಗುವ ವ್ಯವಸ್ಥೆಯನ್ನೂ ಕಲ್ಪಿಸಿದೆ. ಅಂದಹಾಗೆ, ಈ ಎಲ್ಲಾ ಸೇವೆಗಳಿಗೂ ಹಣ ತೆರಬೇಕು.`ಹಿರಿಯರಿಗೆ ಪ್ರೀತಿ, ಕಾಳಜಿಯ ಅವಶ್ಯಕತೆಯಿದೆ. ಗೌರವಯುತವಾಗಿ ತಮ್ಮ ಕೊನೆಯ ದಿನಗಳನ್ನು ಎಣಿಸಬೇಕೆಂದು ಬಯಸುತ್ತಾರೆ. ಹಣವಿದ್ದರೂ ನೆಮ್ಮದಿಯಿಲ್ಲದಾಗ ಬದುಕು ದುಸ್ತರವೆನಿಸುತ್ತದೆ. ಅಂತಹವರಿಗೆ ನೆಲೆಯಾಗಲೆಂದೇ ಈ ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಿಸಲಾಗಿದೆ.ಹಿರಿಯ ಜೀವಗಳೆಲ್ಲ ಒಟ್ಟಿಗೆ ಸೇರುವ ಅವಕಾಶ ಇಲ್ಲಿರುವುದರಿಂದ ಅವರು ತಮ್ಮ ನಿವೃತ್ತಿ ಜೀವನವನ್ನು ಇಲ್ಲಿ ನೆಮ್ಮದಿಯಾಗಿ ಕಳೆಯಬಹುದು. ಅನಿವಾರ್ಯವಾಗಿ ಅಪಾರ್ಟ್‌ಮೆಂಟ್ ಬಿಟ್ಟುಹೋಗಬೇಕಾದ ಸಂದರ್ಭ ಬಂದರೆ ಅಂತಹವರಿಗೆ ಕಟ್ಟಿದ ಠೇವಣಿ ಹಣ ಹಿಂದಿರುಗಿಸುವುದು ಇಲ್ಲಿನ ಮತ್ತೊಂದು ವಿಶೇಷ~ ಎನ್ನುತ್ತಾರೆ ಪಂಚವಟಿ ಟ್ರಸ್ಟ್‌ನ ಸದಸ್ಯ ರಾಮಕೃಷ್ಣನ್.ಇದೇ ಸೌಲಭ್ಯ ನೀಡುವ ಹತ್ತಾರು ವೃದ್ಧಾಶ್ರಮಗಳು ನಗರದಲ್ಲಿದ್ದರೂ ಅಪಾರ್ಟ್‌ಮೆಂಟ್ ನಿರ್ಮಾಣದ ಯೋಜನೆ ಹೊಳೆದಿರುವುದು ಇದೇ ಮೊದಲು. ಸಂಬಂಧಗಳು ಹಳಸುತ್ತಿರುವ ಈ ಕಾಲಘಟ್ಟದಲ್ಲಿ ಹಿರಿಯರೆಲ್ಲಾ ಒಂದೆಡೆ ಬದುಕಲು ಅವಕಾಶ ಮಾಡಿಕೊಡುವ ಮೂಲಕ ಸಾಮಾಜಿಕ ಬದಲಾವಣೆಯೂ ಸಾಧ್ಯ ಎಂಬುದನ್ನು ಒಪ್ಪಿಕೊಳ್ಳಲೇಬೇಕು.ಎಲ್‌ಐಸಿಯಿಂದ ಹಿರಿಯ ನಾಗರಿಕರಿಗೆ ವಸತಿ ಸೌಲಭ್ಯ

ಎಲ್‌ಐಸಿಯು ಹಿರಿಯ ನಾಗರಿಕರಿಗೆಂದು ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ 108 ಮನೆಗಳುಳ್ಳ ಅಪಾರ್ಟ್‌ಮೆಂಟ್ ನಿರ್ಮಿಸಿದೆ. `ಕೇರ್ ಹೋಮ್ಸ~ ಹೆಸರಿನಲ್ಲಿ ಈ ಯೋಜನೆ ಆರಂಭಿಸಿದ್ದು, ಹಿರಿಯ ನಾಗರಿಕರಿಗೆ ಕಡಿಮೆ ಬೆಲೆಯಲ್ಲಿ ಮನೆಗಳನ್ನು ನೀಡುವುದು ಇಲ್ಲಿನ ವಿಶೇಷ.

 

50 ವರ್ಷ ಮೇಲ್ಪಟ್ಟಿರುವವರಿಗೆ ಈ ಮನೆಯನ್ನು ನೀಡಲಾಗುತ್ತಿದೆ. ಮೆಸ್, 24/7ಆ್ಯಂಬುಲೆನ್ಸ್, ಗ್ರಂಥಾಲಯ, ಉದ್ಯಾನ, ಸಮುದಾಯ ಭವನ, ಧ್ಯಾನ ಕೇಂದ್ರ, ಈಜುಕೊಳ, ವ್ಯಾಯಾಮ ಕೇಂದ್ರ ಎಲ್ಲವನ್ನೂ ಇದು ಒಳಗೊಂಡಿರುತ್ತದೆ. 20 ಲಕ್ಷದಿಂದ ಸರಾಸರಿ 40 ಲಕ್ಷದವರೆಗೂ ಲಭ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry