ಸಂಜೆ ಮಳೆಯಲಿ,ಶ್ರೇಯಾ ಜೊತೆಯಲಿ...

7

ಸಂಜೆ ಮಳೆಯಲಿ,ಶ್ರೇಯಾ ಜೊತೆಯಲಿ...

Published:
Updated:
ಸಂಜೆ ಮಳೆಯಲಿ,ಶ್ರೇಯಾ ಜೊತೆಯಲಿ...

ಹಾಡೆಂದರೆ ಮಳೆಯಿದ್ದಂತೆ, ಅದು ಹೆಚ್ಚಿದಷ್ಟೂ ಖುಷಿ ನೀಡುತ್ತದೆ, ಎಲ್ಲಾ ಭಾವಗಳನ್ನು ಹರಿಬಿಡುವ ಶಕ್ತಿ ಹಾಡು, ಮಳೆ ಎರಡಕ್ಕೂ ಇದೆ ಎಂದು ಮಳೆಯೊಂದಿಗೆ ಭಾವದ ಮಾತು ಬೆರೆಸಿದ ಶ್ರೇಯಾ ಪರಿಗೆ ಅಲ್ಲಿದ್ದವರೆಲ್ಲರೂ ಒಂದು ಕ್ಷಣ ಮೂಕರಾಗಿದ್ದರು.ಧರೆಗಿಳಿದ ವರುಣನೊಂದಿಗೆ ಶ್ರೇಯಾ ಘೋಷಾಲ್ ದನಿ ಬೆರೆಸಿ ಹಾಡುತ್ತಿದ್ದುದು ಒಲವಿನ ಜುಗಲ್‌ಬಂದಿಯಾಗಿತ್ತು.ಇಳಿಸಂಜೆ ಕಳೆಯುತ್ತಿದ್ದಂತೆ ಧೋ ಎಂದು ಸುರಿದ ಮಳೆಗೆ ಇಡೀ ಬೆಂಗಳೂರಿಗೆ ಬೆಂಗಳೂರೇ ತೊಯ್ದಿತ್ತು. ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿದ್ದರೂ ಅರಮನೆ ಮೈದಾನ ಮಾತ್ರ ಜನ ಜಂಗುಳಿಯಿಂದ ಝಗಮಗಿಸುತ್ತಿತ್ತು.ತಮ್ಮ ನೆಚ್ಚಿನ ಗಾಯಕಿಯನ್ನು ನೋಡಲು ಸಾವಿರಾರು ಕಣ್ಣುಗಳಲ್ಲಿ ಕಾತರ ತುಂಬಿತ್ತು.

ಮಳೆಯಲ್ಲಿ ಮಿಂದು ತೋಯ್ದಿದ್ದರೂ ಶ್ರೇಯಾ ಹಾಡು ಸವಿಯುವ ತವಕ ಮಾತ್ರ ಜನರಲ್ಲಿ ಒಂದಿನಿತೂ ಕುಂದಿರಲಿಲ್ಲ. ಶ್ರೇಯಾ ಶ್ರೇಯಾ.....ಎಂದು ಕೂಗುತ್ತಿದ್ದ ಸದ್ದು ಮೈದಾನವನ್ನೂ ದಾಟಿತ್ತು. ಅಲ್ಲಿದ್ದವರ ಆತುರ ತಣಿಸಲು ಚೆಂದದ ಹುಡುಗಿಯರ ರ‌್ಯಾಂಪ್‌ವಾಕ್ ಕೂಡ ಇತ್ತು. ಆದರೂ ಶ್ರೇಯಾ ಆಗಮನವನ್ನೇ ಕಣ್ಣುಗಳು ಹುಡುಕುತ್ತಿದ್ದವು.ಅಷ್ಟೂ ಹೊತ್ತಿನಿಂದ ಕಾಯುತ್ತಿದ್ದವರಿಗೆ ಶ್ರೇಯಾ ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಿದ್ದಂತೆ ಅಭಿಮಾನದ ಹೊನಲು ತುಂಬಿಬಂದಿತ್ತು. `ಹಾಯ್ ಬ್ಯಾಂಗಲೋರ್~ ಎಂಬ ದನಿಗೆ ಎಲ್ಲರೂ ಉತ್ಸುಕರಾಗಿ ಕುಣಿದು ಕುಪ್ಪಳಿಸಿದರು.ಚಳಿ, ಮಳೆಯಲ್ಲಿ ನಡುಗುತ್ತಾ ನಿಂತಿದ್ದವರು `ತೇರೀ ಮೇರೀ ಮೇರೀ ತೇರೀ ಪ್ರೇಮ್ ಕಹಾನಿ ಹೇ ಮುಷ್‌ಕಿಲ್......~ಹಾಡು ಶ್ರೇಯಾ ಕಂಠದಿಂದ ತೇಲಿ ಬರುತ್ತಿದ್ದಂತೆ ಎಲ್ಲವನ್ನೂ ಮರೆತು ಅದರ ಗುಂಗಿನಲ್ಲೇ ತೇಲಿದರು. ಅಷ್ಟು ಹೊತ್ತೂ ಸುಮ್ಮನೆ ಬಿಗಿದಿದ್ದ ತುಟಿಗಳೂ ಜೋರಾಗಿ ಝೇಂಕಾರ ಹಾಕಲು ಆರಂಭಿಸಿದ್ದವು. ಮಕ್ಕಳಿಂದ ಹಿಡಿದು ವೃದ್ಧರಾದಿಯಾಗಿ ಆಕೆಯ ಹಾಡಿನ ಮೋಡಿಗೆ ಮನಸೋತಿದ್ದರು.ತಮಗರಿವಿಲ್ಲದಂತೆಯೇ ಎಲ್ಲರ ಮನಗಳೂ ಆಕೆಯ ಹಾಡಿಗೆ ತಾಳಹಾಕಲು ಆರಂಭಿಸಿತ್ತು. ಶ್ರೇಯಾ ಹಾಡಿನ ಮೋಡಿಗೆ ಬಿರುಮಳೆಯೂ ಹೂ ಮಳೆಯಾಗಿತ್ತು.ಶ್ರೇಯಾ ಬರುವಿಕೆಯನ್ನೇ ಎದುರು ನೋಡುತ್ತಿದ್ದ ವರುಣ ಖುದ್ದು ತಾನೇ ಆಕೆಯನ್ನು ಸ್ವಾಗತಿಸಲು ಬಂದಿದ್ದನೇನೋ ಎಂಬಂತೆ ಬಂದು ಒಂದೆರಡು ಹಾಡು ಮುಗಿಯುತ್ತಿದ್ದಂತೆ ತೃಪ್ತಿಗೊಂಡಿದ್ದ.ಹನಿ ಹನಿ ಮಳೆಯೊಂದಿಗೆ ಶ್ರೇಯಾಳ ಸಂಗೀತದ ಪ್ರೇಮ್ ಕಹಾನಿಯೂ ಮುಂದುವರೆದಿತ್ತು. ದೇಶೀ ಸಂಗೀತ ಲೋಕದಲ್ಲಿ ತನ್ನದೇ ವಿಭಿನ್ನ ಗುರುತು ಮೂಡಿಸಿರುವ ಶ್ರೇಯಾ ಈಗ ಬಾಲಿವುಡ್‌ನಲ್ಲಿ ಬಹು ಬೇಡಿಕೆಯ ಗಾಯಕಿ. ಮಾತ್ರವಲ್ಲ, ಕನ್ನಡ, ಬಂಗಾಳಿ, ಅಸ್ಸಾಂ, ಮಲೆಯಾಳಂ, ಮರಾಠಿ, ಒರಿಯಾ, ಗುಜರಾತಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ತನ್ನ ಹಾಡಿನ ಚಮತ್ಕಾರ ತೋರಿಸಿದವಳು.ಕನ್ನಡದಲ್ಲಿ ಶ್ರೇಯಾ ಹಾಡಿದ ಹಾಡುಗಳು ಎಲ್ಲರ ಬಾಯಿಯಲ್ಲೂ ಸದಾ ಅನುರಣಿಸುವಂತಿವೆ. `ಅರಳುತಿರು ಜೀವದ ಗೆಳೆಯ...~ `ಮಧುರ ಪಿಸುಮಾತಿಗೆ...~ `ಉಲ್ಲಾಸದ ಹೂಮಳೆ....~ `ಗಗನವೇ ಬಾಗಿ...~ `ಎರಡೂ ಜಡೆಯನ್ನು....~ ಇಂತಹ ನೂರಾರು ಸಾಲುಗಳಿಗೆ ಜೀವತುಂಬಿದ ಈಕೆಯ ಕಂಠಕ್ಕೆ ಮನಸೋಲದವರಿಲ್ಲ. ಭಾಷೆ ಅರಿಯದಿದ್ದರೂ ಹಾಡಿನಲ್ಲಿ ಭಾವಗಳ ಅಭಿವ್ಯಕ್ತಿಯೊಂದಿಗೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ ಎಂಬುದು ಈಕೆಯ ಎಲ್ಲಾ ಹಾಡುಗಳಲ್ಲೂ ಎತ್ತಿ ತೋರುತ್ತದೆ.ಉದ್ಯಾನನಗರಿಗೆ ಶ್ರೇಯಾ ಬರುವುದು ಹೊಸತೇನಲ್ಲ. ಆದರೆ ಈ ಸಲ ಒಂದು ವಿಶೇಷ ಉದ್ದೇಶವನ್ನಿಟ್ಟುಕೊಂಡು ಬೆಂಗಳೂರಿಗರಿಗೆ ಹಾಡುಗಳ ರಸದೌತಣ ನೀಡಲು ಬಂದಿದ್ದರು.ವೃದ್ಧರಿಗೆ ಸೂರು ಕಲ್ಪಿಸುವ ಸಲುವಾಗಿ ಹಿತೈಷಿ ಮಹಿಳಾ ಮನೆಯಂಗಳ ಟ್ರಸ್ಟ್‌ನೊಂದಿಗೆ ಕೈ ಜೋಡಿಸಿ ಈ ಸಂಗೀತ ಸಂಜೆಯ ರೂವಾರಿಯಾಗಿದ್ದರು. ವಿಶೇಷ ಕಾರಣಕ್ಕೆ ಹಾಡುತ್ತಿರುವುದು ಸಂತಸವಾಗಿದೆ. ನನ್ನಿಂದ ಒಂದಿಷ್ಟು ಹಿರಿಯರಿಗೆ ಸಹಾಯವಾದರೆ ಸಾಕು ಎಂದು ಹಿಂದಿಯಲ್ಲಿ ಮನಬಿಚ್ಚಿ ಮಾತನಾಡಿದರು.ಪ್ರಾಸ್ತಾವಿಕ ಮಾತು ಮುಗಿಯುತ್ತಿದ್ದಂತೆ ಮತ್ತೆ ಹಾಡಿನ ಬಂಡಿ ಶ್ರೇಯಾ ಜೊತೆ ಸಾಗಿತ್ತು. `ಅಗರ್ ತುಮ್ ಮಿಲ್‌ಜಾವೊ ಝಮಾನಾ ಚೋಡ್ ದೇಂಗೆ ಹಮ್~...~ `ತೇರಿಯೋ ತೇರಿಯೋ..~, `ಮಸ್ತ್ ಮಸ್~್ತ, `ಹೇ ಇಷ್ಕ್ ಆಯೆ~ ಇನ್ನೂ ಹತ್ತು ಹಲವು ಹಾಡುಗಳನ್ನು ಹಾಡಿದರು. ಹಾಡಿನೊಂದಿಗೆ ಎಲ್ಲರನ್ನೂ ಮನಸ್ಸೋ ಇಚ್ಛೆ ಕುಣಿಸಿದರು. ಜೊತೆಗೆೆ ಸೊಂಟ ಬಳುಕಿಸಿ ಲಘು ನೃತ್ಯಕ್ಕೆ ಹೆಜ್ಜೆ ಹಾಕಿದಾಗ ಸೊಂಟದಲ್ಲಿದ್ದ ಹರಳಿನ ಡಾಬೂ ಸಾಥ್ ನೀಡಿತ್ತು. ಶ್ವೇತವರ್ಣದ ಸೀರೆ, ನೇರಳೆ ಬಣ್ಣದ ರವಿಕೆ ತೊಟ್ಟು ಸ್ನಿಗ್ಧ ಸುಂದರಿ ತಾಳಕ್ಕೆ ಜನರು ಕೈವಶರಾಗಿದ್ದರು.ಶ್ರೇಯಾ ಹಾಡಿನ ಮಾಂತ್ರಿಕತೆಯಿಂದ ಅಲ್ಲಿದ್ದವರ ಮನಸ್ಸನ್ನೂ ಹಿಡಿದಿಟ್ಟುಕೊಂಡಿದ್ದು, ತಲೆದೂಗುತ್ತಿದ್ದ ಸಾವಿರಾರು ಜನರನ್ನು ನೋಡಿದರೆ ಅರಿವಾಗುತ್ತಿತ್ತು. `ಜಾದೂ ಹೆ ನಶಾ~ ಹಾಡಂತೂ ಎಲ್ಲರನ್ನೂ ಒಂದು ಕ್ಷಣ ಜಾದೂಗೊಳಿಸಿತ್ತು.ಶಿವಪ್ರಸಾದ್ ಮಲ್ಯ ಜೊತೆಗೂಡಿ ಒಂದೆರಡು ಡ್ಯುಯೆಟ್ ಹಾಡುಗಳಿಗೂ ದನಿಗೂಡಿಸಿದರು.ಮಳೆಬಂದು ಪೂರ್ಣ ಕೆಸರಾಗಿದ್ದ ನೆಲದಲ್ಲಿ ಕಾಲು ಚಾಚಿ ಕುಳಿತವರು ಅಲ್ಲಿದ್ದ ಬಿಸಿ ಬಿಸಿ ಪಾಪ್‌ಕಾರ್ನ್, ಪಾವ್‌ಬಾಜಿಯೊಂದಿಗೆ ಶ್ರೇಯಾ ಹಾಡನ್ನು ಮನಸಾರೆ ಎಂಜಾಯ್ ಮಾಡುತ್ತಿದ್ದರು. ಮಳೆಗೆ ಒಂದಿಷ್ಟು ಜನ ಶಾಪ ಹಾಕಿದರೆ, ಇನ್ನೊಂದಿಷ್ಟು ಜನ ಮಳೆ ಬಂದಿದ್ದೂ ಒಳ್ಳೆಯದೇ ಆಯಿತು ಎನ್ನುವಂತೆ ಅನುಭವಿಸುತ್ತಿದ್ದರು.ಅಷ್ಟು ಹಿಂದಿ ಹಾಡುಗಳ ನಂತರ ಇದ್ದಕ್ಕಿದ್ದಂತೆ ಕೇಳಿಬಂದ ಕನ್ನಡದ ಗಗನವೇ ಬಾಗಿ ಭುವಿಯನು.... ಹಾಡಿಗಂತೂ ಚಪ್ಪಾಳೆಯ ಉಡುಗೊರೆ ಹರಿದುಬಂದಿತ್ತು. ಬೆಂಗಳೂರಿಗರಿಗೆಂದೇ ಇದು ವಿಶೇಷ ಹಾಡು ಎಂದು ಕನ್ನಡದ ಬಗ್ಗೆ ಅಭಿಮಾನದ ಮಾತುಗಳನ್ನು ಆಡಲು ಶ್ರೇಯಾ ಮರೆಯಲಿಲ್ಲ.ಹೊತ್ತು ಸರಿಯುತ್ತಿದ್ದರೂ ಯಾರಿಗೂ ಶ್ರೇಯಾ ಬಿಟ್ಟು ಹೋಗುವ ಮನಸ್ಸಿರಲಿಲ್ಲ. ಸಮಯ ಕಳೆಯುತ್ತಿದ್ದರೂ ಜನ ಬರುವುದೂ ನಿಂತಿರಲಿಲ್ಲ. ಎಲ್ಲಾ ಮುಗಿದು ಶ್ರೇಯಾ ಹೊರಡಲು ಅನುವಾದಾಗ ಆಕೆಯನ್ನು ಹತ್ತಿರದಿಂದ ನೋಡಲು ಆಗಲಿಲ್ಲವೆನ್ನುವ ಒಂದು ಸಣ್ಣ ಹತಾಶೆಯೊಂದಿಗೆ ಹಿಂಬದಿಯಲ್ಲಿ ಕುಳಿತಿದ್ದ ಜನ ಹಿಂದಿರುಗಿದ್ದರು. ಒಟ್ಟಿನಲ್ಲಿ ಚಳಿಯಲ್ಲೂ ಮನಕ್ಕೆ ಮುದ ನೀಡುವ ಶ್ರೇಯಾ ಸಂಗೀತ ಬೆಚ್ಚನೆಯ ಅನುಭವ ನೀಡಿತ್ತು.

 

 ಚಿತ್ರ: ಬಿ.ಕೆ.ಜನಾರ್ದನ್

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry