ಶನಿವಾರ, ಮಾರ್ಚ್ 6, 2021
18 °C

ಸಂಜೋತಾ ಸ್ಪೆಷಲ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಜೋತಾ ಸ್ಪೆಷಲ್!

ಮೂರೂ ಬೇರೆ ಬೇರೆ, ಆದರೆ ಒಮ್ಮೆಲೇ ಆ ಮೂರನ್ನು ಸೇವಿಸಿದಾಗ ರುಚಿ ಪರಿಪೂರ್ಣ. ಉತ್ತರ ಕರ್ನಾಟಕದ ಜನಪ್ರಿಯ ತಿನಿಸುಗಳ ಸ್ವಾದವನ್ನು ತಂಡದ ಸಾಧನೆಗೆ ಜೋಡಿಸುವ ಇರಾದೆ ನನ್ನದು’ ಎಂದ ನಿರ್ದೇಶಕಿ ಸಂಜೋತಾ ಅವರು ಹೊಸ ಸಿದ್ಧಾಂತವೊಂದನ್ನು ಮಂಡಿಸುವ ಹುಮ್ಮಸ್ಸಿನಲ್ಲಿದ್ದರು.ಮಿರ್ಚಿಯೊಂದಿಗೆ ಮಂಡಕ್ಕಿ ಸೇವನೆ. ಆಮೇಲೆ ಕಡಕ್ ಚಾಯ್ ಗುಟುಕರಿಸುವುದು. ಈ ಮೂರೂ ಸ್ವಾದಗಳನ್ನು ಸಂಕೇತಿಸುವ ಸ್ವಭಾವವುಳ್ಳ ಇಬ್ಬರು ಯುವಕರು ಹಾಗೂ ಒಬ್ಬ ಯುವತಿ ಸುತ್ತ ಹೆಣೆದ ಕಥೆ ‘ಮಿರ್ಚಿ ಮಂಡಕ್ಕಿ ಕಡಕ್ ಚಾಯ್’. ಕಳೆದ ವರ್ಷದ ಅಕ್ಟೋಬರ್‌ನಲ್ಲೇ ಶುರುವಾದ ಚಿತ್ರೀಕರಣ ಈಗ ಮುಕ್ತಾಯಗೊಂಡಿದ್ದು, ಈ ಖುಷಿಯಲ್ಲಿ ಸುದ್ದಿಮಿತ್ರರ ಜತೆ ಚಿತ್ರತಂಡ ಅನುಭವ ಹಂಚಿಕೊಂಡಿತು.ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ ವರ್ಷಗಟ್ಟಲೇ ದುಡಿದ ಬಳಿಕ, ಚಿತ್ರವೊಂದನ್ನು ನಿರ್ದೇಶಿಸುವ ಹಂಬಲ ಹೊತ್ತು ಬಂದವರು ಸಂಜೋತಾ. ಮೊದಲಿನಿಂದಲೂ ಅವರಿಗೆ ಚಿತ್ರೋದ್ಯಮದತ್ತ ಸೆಳೆತ. ಆದರೆ ಗಾಡ್‌ಫಾದರ್ ಇಲ್ಲದೇ ಇಲ್ಲಿ ಕಾಲಿಡುವುದು ಅಸಾಧ್ಯ ಎಂಬ ಭಾವನೆ ಅವರದಾಗಿತ್ತು. ‘ಅಂತೂ ಲೈಫ್ ಸೆಟಲ್ ಆಯಿತು’ ಎನ್ನುವಷ್ಟರಲ್ಲಿ ಮತ್ತೆ ಬಣ್ಣದ ಲೋಕ ಕರೆಯಿತು. ಅದರಂತೆ ಬಂಡವಾಳ ಹಾಕಿ, ‘ಮಿರ್ಚಿ ಮಂಡಕ್ಕಿ...’ ರೆಡಿ ಮಾಡಿದ್ದಾರೆ.‘ಮುರಳಿ ಮೀಟ್ಸ್ ಮೀರಾ’, ‘ಭದ್ರ’, ‘ಜರಾಸಂಧ’, ‘ಆಕ್ರಮಣ’ ಸೇರಿದಂತೆ ಕೆಲವು ಸಿನಿಮಾಗಳಿಗೆ ಸಹ ನಿರ್ದೇಶಕಿಯಾಗಿ ದುಡಿದ ಅನುಭವ ಅವರದು. ‘ಒಬ್ಬನಲ್ಲಿ ಕಾಣುವ ದೌರ್ಬಲ್ಯ ಮರೆಯಾಗುವುದು ಆತ ತಂಡಕ್ಕೆ ಸೇರ್ಪಡೆಯಾದಾಗ. ಆತನಲ್ಲಿರುವ ಇನ್ನಾವುದೇ ಸಾಮರ್ಥ್ಯ ಇನ್ನೊಬ್ಬನಲ್ಲಿ ಇರದೇ ಹೋಗಬಹುದು. ಹೀಗಾಗಿ ತಂಡವೊಂದು ಮುನ್ನಡೆಯಲು ಟೀಮ್ ವರ್ಕ್ ಬೇಕು ಎಂಬ ಸಂದೇಶವನ್ನು ಭಾವನಾತ್ಮಕ ನೆಲೆಯಲ್ಲಿ ತೋರಿಸಿದ್ದೇನೆ’ ಎಂದು ಸಂಜೋತಾ ಮಾಹಿತಿ ನೀಡಿದರು.ಮಿರ್ಚಿಯಂತೆ ಸ್ಪೈಸಿ ಸ್ವಭಾವದ ಹುಡುಗನಾಗಿ ಪ್ರದೀಪ್, ಮಂಡಕ್ಕಿಯಂಥ ಸೌಮ್ಯ ಗುಣದ ಯುವಕನಾಗಿ ಸಚಿನ್ ನಟಿಸಿದ್ದಾರೆ. ಸಂಜೋತಾ ಅವರೊಂದಿಗೆ ಫೇಸ್‌ಬುಕ್‌ ಮೂಲಕ ನಂಟು ಬೆಳೆಸಿಕೊಂಡ ನಮ್ರತಾಗೆ ಕಡಕ್ ಚಾಯ್ ಥರ ಚುರುಕಾದ ಯುವತಿ ಪಾತ್ರ ಸಿಕ್ಕಿದೆ. ಫ್ಯಾಶನ್ ಡಿಸೈನಿಂಗ್ ಓದುತ್ತಿರುವ ಮಲೆಯಾಳಿ ಬೆಡಗಿ ನಿಮಿಷಾ ಅವರಿಗೂ ಗಮನ ಸೆಳೆಯುವ ಪಾತ್ರವಿದೆ.ಮೈಸೂರಿನಲ್ಲಿ ಸಂಗೀತ ಶಿಕ್ಷಕರಾಗಿರುವ ಹರಿಕಾವ್ಯ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ‘ಒಂದೊಂದು ಹಾಡಿನ ಟ್ಯೂನ್‌ಗೆ ಸಂಜೋತಾ ಒಪ್ಪಿದಾಗ, ಒಂದೊಂದು ಪದವಿ ಪಡೆದಷ್ಟು ಖುಷಿಯಾಯಿತು’ ಎಂದು ನಿರ್ದೇಶಕಿಯ ಬದ್ಧತೆಯನ್ನು ಅವರು ಮೆಚ್ಚಿಕೊಂಡರು. ಸಂಕಲನ, ಡಬ್ಬಿಂಗ್ ಇತ್ಯಾದಿ ಕೆಲಸದ ಬಳಿಕ ಆಗಸ್ಟ್‌ನಲ್ಲಿ ಚಿತ್ರ ತೆರೆಗೆ ಬರುವ ನಿರೀಕ್ಷೆಯಿದೆ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.