ಮಂಗಳವಾರ, ಜೂನ್ 22, 2021
29 °C

ಸಂಡೂರು ಯುದ್ಧ ಮುಗಿದ ಮೇಲೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಿಡಮರಬಳ್ಳಿಗಳಿಂದ ಹಸಿರು ತುಂಬಿದ ಬೆಟ್ಟಗಳ ಕಾಡೊಂದು ಬೆಂಕಿಯ ಉರಿಗೆ ತಗುಲಿ ಕಮರಿದ ಮೇಲೆ, ಪುನಃ ಉಸಿರಾಡಲು ನಿಂತ ಆ ಕಾಡನ್ನು ನೋಡಿದರೆ ಹೇಗಿರುತ್ತದೋ ಹಾಗಿದೆ ಈಗ ಸಂಡೂರಿನ ಪರಿಸರ. ತಿಂಗಳಾನುತಿಂಗಳ ರೋಗವಿಡಿದು ಬಳಲಿದ ಮೇಲೆ, ಮತ್ತೆ ಚೇತರಿಸಿಕೊಳ್ಳುವ ರೋಗಿಯನ್ನು ನೋಡಿದರೆ ಹೇಗೆ ಕಾಣಿಸುತ್ತಾನೋ ಹಾಗೆ ಕಾಣಿಸುತ್ತಾರೆ ಸಂಡೂರಿನ ಪರಿಸರದಲ್ಲಿ ಜೀವಿಸುವ ಜನರು. ಕೆಂಪು ದೂಳಿಡಿದು ಗಾಳಿ ಬೆಳಕು ನೀರು ಕಾಣದೆ ಪ್ರೇತಕಳೆಯಿಂದ ಕೂಡಿದ್ದ ನಿಸರ್ಗ ಈಗ ಅದನ್ನೆಲ್ಲ ಝಾಡಿಸಿಕೊಂಡು ಬೀಸುವ ಗಾಳಿಗೆ ಮೈಯೊಡ್ಡಿ ಹಾಯಾಗಿ ಉಸಿರಾಡುವಂತೆ, ಮೈಮುರಿದು ಏಳುವಂತೆ ಗುಡ್ಡ ಬೆಟ್ಟ ಕಾಡು, ಊರುಗಳು, ಜನಸಮುದಾಯಗಳು ನಳನಳಿಸುವಂತೆ ಕಾಣತೊಡಗಿವೆ. ಮೈನ್ಸ್ ಲಾರಿಗಳ ಅಬ್ಬರದ ಹರಿದಾಟವಿಲ್ಲ, ಸಿಡಿಯುವ ಸದ್ದುಗಳಿಲ್ಲ, ಕೆಂಪು ದೂಳಿನಿಂದ ಕೂಡಿದ ರಸ್ತೆಗಳಿಲ್ಲ,ಊರುಗಳಿಲ್ಲ, ಜನರಿಲ್ಲ.

ಕೆಂಪು ಮಣ್ಣಿನ ಹೊಲಗಳಲ್ಲಿ ಬೆಳೆಗಳು, ಬೆಳೆಗಳ ನಡುವೆ ಕೆಲಸಕ್ಕೆ ನಿಂತ ಮನೆ ಮಂದಿ, ದುಡಿಮೆಗಾರರು, ದನಕರುಗಳ ಓಡಾಟ, ಗಿಡಮರಗಳಲ್ಲಿ ಹಕ್ಕಿ ಪಕ್ಷಿಗಳ ಕೂಗು, ದೂರದ ಗುಡ್ಡ ಬೆಟ್ಟಗಳಲ್ಲಿ ಹಸಿರು, ದೂಳಿಲ್ಲದ ಗಾಳಿ, ಉರಿಯಿಲ್ಲದ ಬಿಸಿಲು, ಓಡಾಡುವ ಜನರ ಮುಖದಲ್ಲಿ ನಿರಾಳದ ಕಳೆ, ಶಾಲೆಗೆ ಹೋಗುವ ಮಕ್ಕಳಲ್ಲಿ ಚೈತನ್ಯ ಎಲ್ಲವೂ ಮುದ ನೀಡುವಂತೆ ಕಂಡುಬಂದವು. ದೀರ್ಘ ಕರಾಳ ದಿನಗಳಿಂದ ಹೊರಬಂದು, ನಿರುಮ್ಮಳವಾಗಿ ಉಸಿರಾಡುವ ಭರವಸೆ ತಾಳಿದಂತೆ ಸಂಡೂರಿನ ನಿಸರ್ಗ-ಪರಿಸರ ಕಾಣಿಸುತ್ತಿತ್ತು.

ಕಳೆದ ಇಪ್ಪತ್ತು ವರ್ಷಗಳಿಂದ ಹೊಸಪೇಟೆ, ಸಂಡೂರು, ಬಳ್ಳಾರಿ ಊರುಗಳ ಸುತ್ತಮುತ್ತಲಿನ ಪರಿಸರದಲ್ಲಿ ಓಡಾಡಿದ್ದ ನನ್ನಂಥವರಿಗೆ, ಗಣಿಗಾರಿಕೆಯಿಂದ ಅದರಲ್ಲೂ ಅಕ್ರಮ ಗಣಿಗಾರಿಕೆಯಿಂದ ಈ ಪರಿಸರಗಳಲ್ಲಿ ಉದ್ಭವಿಸಿದ್ದ ಸಮಸ್ಯೆಗಳನ್ನು ಅಕ್ಷರಗಳ ಮೂಲಕ ಅಭಿವ್ಯಕ್ತಿಸಲು ಸಾಧ್ಯವಿಲ್ಲ ಅನ್ನಿಸಿತ್ತು. ಯುದ್ಧಗಳು ನಡೆದ ಪರಿಸರದಲ್ಲಿ ಮಾತ್ರ ಇಂಥ ಭೀಕರ ವಾತಾವರಣ ಇರಲು ಸಾಧ್ಯವೆಂದು ಅನ್ನಿಸುತ್ತಿತ್ತು. ಅಕ್ರಮ ಗಣಿಗಾರಿಕೆಯ ಚಟುವಟಿಕೆಗಳಿಂದ ಮನುಷ್ಯ ಸಮುದಾಯವು ಹೇಗೆ ಪರಿವರ್ತನವಾಗುತ್ತದೆ? ಯಾವ ರೂಪ ತಾಳುತ್ತದೆ? ಎಂಥ ವರ್ತನೆಗಳನ್ನು ರೂಢಿಸಿಕೊಳ್ಳುತ್ತದೆ ಎಂಬುದನ್ನು ಕಾಣಲು ಈ ಪರಿಸರಕ್ಕೆ ಬಂದು ಅನುಭವಿಸಲಾಯಿತು. ಯಾರಿಗೆ ಯಾರು ಸಂಬಂಧವೇ ಇಲ್ಲವೆಂಬ, ಎಲ್ಲರಲ್ಲಿ ಎಲ್ಲವೂ ವ್ಯಾವಹಾರಿಕ ಸಂಬಂಧಗಳನ್ನು ಮಾತ್ರ ಹೊಂದಬೇಕೆಂಬ, ಮನುಷ್ಯ ಸಂಬಂಧಗಳು ವ್ಯವಹಾರದ ಸಂಬಂಧಗಳೆಂಬ ಮನೋಭಾವ ಬೆಳೆದಿತ್ತು. ತರಕಾರಿ ಮಾರುವವರು, ಆಟೋ ಓಡಿಸುವವರು, ಮನೆ ಕೆಲಸದವರು, ಬಾಡಿಗೆ ಮನೆ ಒಡೆಯರು, ವ್ಯಾಪಾರಸ್ಥರು ಇಂಥವರ ಜತೆಗಿನ ಸಂಬಂಧಗಳಲ್ಲಿ ಹಣ ಬಿಟ್ಟರೆ ಮನುಷ್ಯತ್ವದ ಸಂಬಂಧಗಳು ಮಾಯವಾಗಿ ಹೋಗಿದ್ದವು. ಚುನಾವಣೆಗಳ ಕಾಲದಲ್ಲಿ ಈ ವ್ಯಾವಹಾರಿಕ ಸಂಬಂಧಗಳು ನೀತಿ-ನಿಯಮಗಳ ಕಟ್ಟಿಲ್ಲದೆ ಕರಾಳತನದ ಪರಮ ಸೀಮೆ ತಲುಪುತ್ತಿದ್ದವು. ಬಳ್ಳಾರಿ ಜಿಲ್ಲೆಯ, ತಾಲೂಕುಗಳಲ್ಲಿ ನಡೆದ ಚುನಾವಣೆಗಳಲ್ಲಿ ನಾಗರಿಕನನ್ನು ಅನಾಗರಿಕನನ್ನಾಗಿ ಪರಿವರ್ತಿಸಲಾಯಿತು. ನೈತಿಕತೆಯನ್ನು ಮಾಯ ಮಾಡಲಾಯಿತು. ಓಟುಗಾರ ಕಳ್ಳ ವ್ಯಾಪಾರಿಯಾಗಿ ನಿಂತನು. ಇದಕ್ಕೆಲ್ಲ ಅಕ್ರಮ ಗಣಿಗಾರಿಕೆಯ ಹಣವೇ ಕಾರಣವಾಯಿತು. ಈ ಪರಿಸರದಲ್ಲಿ ಕಿಮ್ಮತ್ತು ಅವನತಿಯ ಹಾದಿ ಹಿಡಿದಿತ್ತು. ಆದರೂ ಈ ನೆಲಕ್ಕೆ, ಪರಿಸರಕ್ಕೆ, ಮನುಷ್ಯ ಸಮುದಾಯಕ್ಕೆ, ಜೀವ ಸಂಕುಲಕ್ಕೆ ಧಾರಣಶಕ್ತಿ ಎಂಬುದು ಇರುತ್ತದೆಂಬ ನಂಬಿಕೆಯೊಂದು ಮನದಲ್ಲಿತ್ತು. ಆ ನಂಬುಗೆಯಂತೆ ಇಂದು ಬಳ್ಳಾರಿ, ಹೊಸಪೇಟೆ, ಸಂಡೂರು ಪರಿಸರಗಳಲ್ಲಿ ಅಕ್ರಮ ಗಣಿಗಾರಿಕೆಯಂಥ ಕರಾಳ ವರ್ಷಗಳಿಂದ ಹೊರಬಂದು, ಹೊಸ ಮಳೆಗೆ ತೋಯ್ದು ನಿಚ್ಚಳವಾಗಿ ತಮ್ಮತನ ತೋರಿಸುವ ವಾತಾವರಣ ನಿರ್ಮಾಣವಾಗುತ್ತಿರುವುದನ್ನು ಕಂಡು ಮನಸ್ಸು ಆಶಾವಾದಿಯಾಗುತ್ತಿದೆ.

1993ರಲ್ಲಿ ಕೆಲವರ ಜತೆ ನಾನು ಹೊಸಪೇಟೆಯಿಂದ ಕಲ್ಲಳ್ಳಿ, ವೆಂಕಟಗಿರಿ, ಜೈಸಿಂಗಪುರ, ಸಿದ್ಧಾಪುರ, ಬಾವಳ್ಳಿ ಮಾರ್ಗವಾಗಿ ಸಂಡೂರಿಗೆ ಹೋಗಿದ್ದೆ. ಕೇವಲ ಇಪ್ಪತ್ತೆಂಟು ಕಿಲೋಮಿಟರ್ ದಾರಿ. ಸಂಡೂರು, ನಂದಿಹಳ್ಳಿ, ಯಶವಂತನಗರ ಸರಹದ್ದುಗಳಲ್ಲಿ ಓಡಾಡಿ ನಿಬ್ಬೆರಗಾಗಿದ್ದೆ. ರಾಯಚೂರಿನಂತ ಬಟಾಬಯಲು ಪ್ರದೇಶದಿಂದ ಬಂದ ನನಗೆ ಸಂಡೂರು ಮಲೆನಾಡಿನಂತೆ ಕಂಡಿತು. ಸಾಲು ಸಾಲು ಗುಡ್ಡ ಬೆಟ್ಟ ಕಣಿವೆ ಕಾಡುಗಳು. ಪುಟ್ಟ ಪುಟ್ಟ ಊರುಗಳು. ಬಳ್ಳಾರಿ ಜಿಲ್ಲೆಯನ್ನು ಬೆಂಗಾಡು, ರಣಬಿಸಿಲು, ಬಡತನ, ಅತೀ ಹಿಂದುಳಿದ ಜಿಲ್ಲೆ ಹೀಗೆ ಏನೆನೋ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಓದಿದ ನನಗೆ ಸಂಡೂರು `ನಂದನ ವನ~ವಾಗಿ ಕಂಡಿತು. ಸಂಡೂರಿನ ಸುತ್ತಲೂ ಹಸಿರಿನ ಶಾಂತ ವಾತಾವರಣವಿತ್ತು. 2000ರ ಹೊತ್ತಿಗೆ ಸಂಡೂರಿನ ಅನೇಕ ಹಳ್ಳಿಗಳನ್ನು ಸುತ್ತಾಡಿದ್ದೆ. ಎನ್‌ಎಂಡಿಸಿ ಕಂಪನಿಯ ಗಣಿಗಾರಿಕೆಯನ್ನು ನೋಡಿದ್ದೆ. ದೋಣಿಮಲೈಗೆ ಹೋಗಿದ್ದೂ ಇದೆ. ನಾರಿಹಳ್ಳದ ಚೆಲುವು, ಹಸಿರಿನಿಂದ ತುಳುಕುವ ಪರಿಸರವು ನಮಗೆ ಸುಂದರವಾಗಿ ಕಾಣುತ್ತಿದ್ದರೂ ಸ್ಥಳೀಯರು ಸಂಡೂರಿನ ಪರಿಸರ ಈಗೆಲ್ಲ ಮುಕ್ಕಾಗಿದೆ ಎಂದೇ ಹೇಳುತ್ತಿದ್ದರು. ಕಣಿವೆಗಳಂಥ ಸಂದುಗಳಲ್ಲಿರುವ ಊರಿಗೆ ಸಂಡೂರು ಎಂದು ಕರೆದದ್ದು ಸರಿಯಾಗಿದೆ ಅನ್ನಿಸಿತ್ತು.

ಎಲ್ಲಿ ಗಾಳಿ, ಮಳೆ, ಮಲೆಗಳಿಂದ ತಂಪಾದ, ಹಸಿರಾದ ಪ್ರಾಂತವಿರುತ್ತದೋ ಅಲ್ಲಿಯೇ ಪ್ರಭುತ್ವ ನೆಲೆಗೊಳ್ಳುವುದು ಕಂಡುಬರುತ್ತದೆ. ಮಹಾರಾಜರು ಸಂಡೂರಿನಲ್ಲಿ ನೆಲೆಸಿದ್ದು ನಿಸರ್ಗದ ಕಾರಣದಿಂದ. ಕರ್ನಾಟಕದ ಉತ್ತರ ಭಾಗದಲ್ಲಿ ಜಮಖಂಡಿ, ಬೀದರ್ ಮುಂತಾದೆಡೆಗಳಲ್ಲಿ ಉತ್ತಮ ಹವಾಗುಣ, ಪರಿಸರ ಇರುವುದರಿಂದಲೇ ರಾಜಮನೆತನಗಳು ಬೇರೂರಿದ್ದವು. ಸಂಡೂರಿನ ಸರಹದ್ದಿನಲ್ಲಿರುವ ರಾಮಗೊಳ್ಳ, ಹತ್ತಿಮರಗೊಳ್ಳ ಅರಣ್ಯ ಪ್ರದೇಶಗಳು ಕಾಡು ಪ್ರಾಣಿಗಳಿಂದ ಕೂಡಿದ್ದವು. ಮಹಾರಾಜರು ಬೇಟೆಯಾಡುವುದಕ್ಕೆ ಈ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡಿದ್ದರೆಂಬ ಮಾತಿದೆ.

ಸಂಡೂರಿನ ಪರಿಸರದಲ್ಲಿ ಗುಡ್ಡ ಬೆಟ್ಟಗಳು ಕಣಿವೆಗಳಲ್ಲಿ ನೀರಿನ ಝರಿಗಳು ಹತ್ತಾರು ಕಡೆ ಸಿಗುತ್ತವೆ. ಈ ನೀರಿನ ಝರಿಗಳನ್ನು ಪುಣ್ಯದ ಸ್ಥಳಗಳನ್ನಾಗಿ ಹೆಸರಿಸಿ ಜನರು ಕರೆಯುತ್ತಾರೆ. ಕೊಳ್ಳ, ಹೊಂಡಗಳೆಂದು ಸ್ಥಳೀಯರು ಕರೆದರೆ, ಭೀಮತೀರ್ಥ, ಭೈರವತೀರ್ಥ, ಮನ್ಮಥತೀರ್ಥ, ನಾರಾಯಣತೀರ್ಥ, ಕೋಟಿತೀರ್ಥ, ಅಗಸ್ತ್ಯತೀರ್ಥ, ಹರಿಶಂಕರ ತೀರ್ಥ, ಜೋಗಿಕೊಳ್ಳ ಮುಂತಾದ ಹೆಸರುಗಳಿಂದ ಪುರೋಹಿತರು ಗುರುತಿಸುತ್ತಾರೆ. ಸಂಡೂರು ತಾಲೂಕಿನಲ್ಲಿ ಸುಮಾರು ಎಪ್ಪತ್ತೈದು ಗ್ರಾಮಗಳಿವೆ. ಅರ್ಧದಷ್ಟು ಹಳ್ಳಿಗಳು ಅರಣ್ಯ, ಕಣಿವೆ ಪ್ರದೇಶಗಳಲ್ಲಿವೆ. ಈ ಹಳ್ಳಿಗಳ ಜೀವನಾಡಿಯೇ ಈ ಝರಿಗಳು. ಕಾಡಿನ ಸಂಪತ್ತನ್ನು ಹೊಟ್ಟೆಪಾಡಿಗೆ ಬಳಸುತ್ತಾರೆ, ಬಯಲು ಪರಿಸರದಲ್ಲಿ ವ್ಯವಸಾಯ ನಡೆಯುತ್ತದೆ. ವ್ಯವಸಾಯವೇ ಮುಖ್ಯ ಕಸುಬು. ದನಕರು, ಕುರಿ, ಕೋಳಿ ಸಾಕಾಣಿಕೆ, ಕುಲಕಸುಬುಗಳು ಜೀವನಾಧಾರ. ಲಮಾಣಿಗಳ ಸಂಖ್ಯೆ ಹೆಚ್ಚಾಗಿದೆ. ಕರಕುಶಲ ವಸ್ತುಗಳ ತಯಾರಿಕೆಯಿಂದಲೂ ಬದುಕುತ್ತಾರೆ. ಸಜ್ಜೆ, ರಾಗಿ, ನವಣೆ, ಹುರುಳಿ, ಹೆಸರು ಕಾಳುಕಡಿ ಬೆಳೆಯುತ್ತಾ ಬಂದಿದ್ದಾರೆ. ಈಗ ಹೈಬ್ರೀಡ್ ಜೋಳ, ಮೆಕ್ಕೆಜೋಳ ಬೆಳೆಯುವುದೇ ಜಾಸ್ತಿ. ಸರ್ಕಾರಿ ಹಿಡಿತದ ಗಣಿಗಾರಿಕೆ, ಅರೆ ಸರ್ಕಾರಿ ಗಣಿಗಾರಿಕೆ ಆರಂಭವಾದಾಗ ಸಂಡೂರಿನ ಜನ ಅನೇಕ ವರ್ಷಗಳ ಕಾಲ ಗಣಿಗಾರಿಕೆ ಕೆಲಸಕ್ಕೆ ಹೋಗುತ್ತಿರಲಿಲ್ಲವೆಂದೇ ಜನರು ಹೇಳುತ್ತಾರೆ. ವ್ಯವಸಾಯ, ಕುಲಕಸುಬುಗಳನ್ನೇ ನೆಚ್ಚಿಕೊಂಡು ಬದುಕುತ್ತಿದ್ದರಂತೆ. ಮಳೆ ಕಡಿಮೆಯಾದಾಗ, ಬೆಳೆಗಳು ಕುಂಠಿತವಾದಾಗ, ಕೆಲಸವಿಲ್ಲದೇ ಇದ್ದಾಗ ಮೆಲ್ಲನೆ ಸಂಡೂರಿನ ಪರಿಸರದ ಕಾರ್ಮಿಕರು ಗಣಿಕಾರಿಕೆಯ ಕೆಲಸಕ್ಕೆ ಹೋಗಲು ತೊಡಗಿದರಂತೆ.

ಸಂಡೂರಿನ ನಿಸರ್ಗ, ಪರಿಸರದ ಚಂದಕ್ಕೆ ಅನೇಕ ಬೆಟ್ಟಗಳೇ ಕಾರಣ. ಸ್ಥಳೀಯರು ಈ ಬೆಟ್ಟಗಳಿಗೆ ಚಿದರಗುಡ್ಡ, ತಿಮ್ಮಪ್ಪನಗುಡ್ಡ, ಕುಮಾರಸ್ವಾಮಿ ಬೆಟ್ಟ, ಬ್ಯಾದಾರ ಗುಡ್ಡ, ಕುಡುಮಲ್ ಗುಡ್ಡ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಅನೇಕ ಗುಡ್ಡ ಬೆಟ್ಟಗಳ ಒಡಲಲ್ಲಿ ನಿಕ್ಷೇಪಗಳಿರುವುದೇ ಈ ಪರಿಸರಕ್ಕೆ ಶಾಪವಾಯಿತು. ಸಂಡೂರು, ಬಳ್ಳಾರಿ, ಹೊಸಪೇಟೆಯ ಗುಡ್ಡ ಬೆಟ್ಟಗಳಲ್ಲಿ ಸಿಗುವ ನಿಕ್ಷೇಪಗಳು ಕಬ್ಬಿಣ-ಉಕ್ಕಿನ ಅದಿರು, ಮ್ಯಾಂಗನೀಸ್ ಅತ್ಯುತ್ತಮವಾದದ್ದು. ಶೇ.65ರಷ್ಟು ಕಬ್ಬಿಣ-ಉಕ್ಕು, ಮ್ಯಾಂಗನೀಸ್ ಗುಣವಿದೆ. ಮುಂದುವರಿದ ರಾಷ್ಟ್ರಗಳ ಕಣ್ಣು ನಮ್ಮ ದೇಶದ ಇಂಥ ಅದಿರಿನ ಮೇಲೆ ಬಿದ್ದು ನಮ್ಮ ಸರ್ಕಾರಗಳಿಂದಲೇ ಅಗೆಸಿ ಕೊಂಡುಕೊಳ್ಳುವ ಹುನ್ನಾರ ನಡೆಸಿದ ಫಲವಾಗಿ ಈ ಹೊತ್ತಿನ ಅಕ್ರಮ ಗಣಿಗಾರಿಕೆಗೆ ಕಾರಣವಾಯ್ತು. ಹಿಂದೆಯೇ ಬಳ್ಳಾರಿ, ಸಂಡೂರು, ಹೊಸಪೇಟೆ, ತೋರಣಗಲ್ಲು ಪರಿಸರದಲ್ಲಿ ಕೇಂದ್ರ ಸರ್ಕಾರದ ಹಿಡಿತದಲ್ಲಿ ಗಣಿಗಾರಿಕೆ ಆರಂಭವಾಯಿತು. ನಂತರ ಅರೆ ಖಾಸಗಿ ಕಂಪನಿಗಳು ಈ ಪರಿಸರದಲ್ಲಿ ಗಣಿಗಾರಿಕೆಯನ್ನು ಮೂರು ನಾಲ್ಕು ದಶಕಗಳಿಂದ ನಡೆಸಿಕೊಂಡು ಬರಲಾರಂಭಿಸಿದವು.

2000-01ರ ಸುಮಾರಿಗೆ ಸಂಡೂರು ಹೊಸಪೇಟೆ, ಬಳ್ಳಾರಿ ಸುತ್ತಮುತ್ತ ಸುಮಾರು 50 ರಿಂದ 60 ಕಂಪನಿಗಳು ಗಣಿಗಾರಿಕೆ ನಡೆಸುತ್ತಿದ್ದವು. ಸರ್ಕಾರಿ, ಅರೆ ಸರ್ಕಾರಿ ಮತ್ತು ಪರವಾನಗಿ ಪಡೆದ ಖಾಸಗಿ ಕಂಪನಿಗಳು ಗಣಿಗಾರಿಕೆಯಲ್ಲಿ ತೊಡಗಿದ್ದವು. ಗಣಿಗಾರಿಕೆ ನಡೆಸುವ ಕುರಿತು ನೀತಿ ನಿಯಮಗಳು ಉಲ್ಲಂಘನೆಯಾದವು.  ವಿದೇಶದಿಂದ ಅದಿರಿಗೆ ಬೇಡಿಕೆ ಹೆಚ್ಚಾದಂತೆ ಗಣಿಗಾರಿಕೆ ತೀವ್ರಗೊಂಡಿತು. ಬೃಹತ್ ಯಂತ್ರಗಳು ಸಾವಿರಾರು ಲಾರಿಗಳು ಗುಡ್ಡಗಳನ್ನು ಅಗೆಯಲು ಪ್ರಾರಂಭಿಸಿದವು. ಅಕ್ರಮ ಗಣಿಗಾರಿಕೆ ಆರಂಭಗೊಂಡ ಮೇಲೆ ಅರಣ್ಯ ಭೂಮಿ ಮತ್ತು ವ್ಯವಸಾಯದ ಭೂಮಿ ಗಣಿಗಾರಿಕೆಗೆ ಒಳಗಾಯಿತು. ಇಡೀ ಸಂಡೂರು, ಬಳ್ಳಾರಿ, ಹೊಸಪೇಟೆ ಪರಿಸರದಲ್ಲಿ ಎಲ್ಲಿ ನೋಡಿದರಲ್ಲಿ ಗಣಿಗಾರಿಕೆಯ ಚಟುವಟಿಕೆಗಳು ಕಾಣಲಾರಂಭಿದವು. ನೆಲ ತೋಡುವ ಯಂತ್ರಗಳು ಅದನ್ನು ಸಾಗಿಸುವ ಟ್ರಾಕ್ಟರ್, ಲಾರಿಗಳು ಓಡಾಟ ಆರಂಭಿಸಿ ರಸ್ತೆಗಳು ಹೇಳ ಹೆಸರಿಲ್ಲದಂತಾದವು. ಸ್ಫೋಟಗಳು ಹೆಚ್ಚಾಗಿ, ಪಶುಪಕ್ಷಿ ಪ್ರಾಣಿಗಳು ಅರಣ್ಯಗಳನ್ನು ತೊರೆಯತೊಡಗಿದವು.

ತಾರಾನಗರದಿಂದ ಸಂಡೂರು ಪ್ರವೇಶಿಸುವ ದಾರಿಗುಂಟದ ನಾರೀಹಳ್ಳ ತನ್ನ ಸಕಲ ಚೆಲುವನ್ನು, ಹಾಡನ್ನು ಕಳೆದುಕೊಂಡು ಕೊಳಕು ನೀರು ಹರಿಯುವ ಗಟಾರದಂತಾಯ್ತು. ಗಣಿ ತ್ಯಾಜ್ಯಗಳು ಹಳ್ಳಕ್ಕೆ ಸೇರಿಕೊಂಡವು. ಪ್ರಕೃತಿ ಕೆಂಪು ದೂಳಿನಿಂದ ವಿಕಾರವಾಯ್ತು. ಗಣಿಗಾರಿಕೆಯಲ್ಲಿ ದುಡಿಯುವ ಸಾಮಾನ್ಯ ಕೂಲಿಕಾರರು ಮನುಷ್ಯನ ಲಕ್ಷಣಗಳನ್ನು ಕಳೆದುಕೊಂಡು ರೋಗಗ್ರಸ್ತರಾದರು. ಸಂಡೂರು ಪರಿಸರದ ಸುಂದರವಾದ ಪುಟ್ಟ ಪುಟ್ಟ ಹಳ್ಳಿಗಳು ಮೈನ್ಸ್ ಲಾರಿಗಳು ಹರಿದಾಡಿ ವಿಕಾರಗೊಂಡವು. ರಸ್ತೆಯ ಮೇಲೆ ದೂಳು ಇರಬಾರದೆಂದು ನೀರನ್ನು ಚೆಲ್ಲಲಾಯಿತು. ದಾರಿಯುದ್ದಕ್ಕೂ ನೀರು ಹರಿದು ಮನುಷ್ಯರು ತಿರುಗಾಡಲು ಸಾಧ್ಯವಿಲ್ಲದಂತಾಯ್ತು. ನೀರು ಚೆಲ್ಲಿದ ರಸ್ತೆಯಲ್ಲಿ ಲಾರಿಗಳು ಹರಿದಾಡಿ ಅಕ್ಕ ಪಕ್ಕದ ಮನೆಗಳಿಗೆ ರೊಚ್ಚೆ ಸಿಡಿದು ಮನೆಗಳೆಲ್ಲಾ ವಿಕಾರಗೊಂಡವು. ಆದರೆ ಇದನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯ ಇರಲಿಲ್ಲ ಹಳ್ಳಿಗಳ ಜನರು ಈ ಗಣಿಗಾರಿಕೆಯಲ್ಲಿ ಸೇರಿಕೊಳ್ಳುವುದು ಅನಿವಾರ್ಯವಾಯಿತು. ರೈತರು ವ್ಯವಸಾಯವನ್ನು ಕೈಬಿಟ್ಟು ತಮ್ಮ ಅಲ್ಪಸ್ವಲ್ಪ ಭೂಮಿಯನ್ನು ಗಣಿಗಾರಿಕೆಗೆ ಒಳಗು ಮಾಡಿದರು. ಗಣಿಗಾರಿಕೆಯು ಹೆಚ್ಚಾದಂತೆ ರೈತರು ಬೆಳೆಯುತ್ತಿದ್ದ ಎಲ್ಲ ಬಗೆಯ ಬೆಳೆಗಳ ಮೇಲೆ ದೂಳು ಕುಳಿತು ಗಾಳಿ, ಬೆಳಕು ಇಲ್ಲದೆ ಪೈರುಗಳು ಬೆಳೆಯದೇ ಇಳುವರಿ ಕಡಿಮೆಯಾದಾಗ ರೈತರು ಪ್ರತಿಭಟಿಸಿದರು. ಆಗ ಗಣಿ ಮಾಲೀಕರು ರಸ್ತೆ ಬದಿಯ ಹೊಲಗಳ ರೈತರಿಗೆ ಪರಿಹಾರ ನೀಡಲಾರಂಭಿಸಿದರು. ಈ ರುಚಿಯನ್ನು ಕಂಡ ರೈತರು ಎಲ್ಲರೂ ಪರಿಹಾರಕ್ಕಾಗಿ ಕಾಯ್ದು ಕುಳಿತರು. ಅಕ್ರಮ ಗಣಿಗಾರಿಕೆ ಹೆಚ್ಚಾದಾಗ ರೈತರು ತಮ್ಮ ವ್ಯವಸಾಯದ ಭೂಮಿಯನ್ನು ಗಣಿಗಾರಿಕೆಗೆ ಲೀಜ್ ಕೊಡಲಾರಂಭಿಸಿದರು. ಲೀಜಿನಿಂದ ತಮ್ಮ ಜೀವಿತಾವಧಿಯಲ್ಲಿ ಕಾಣದಷ್ಟು ದುಡ್ಡನ್ನು ಕಂಡರು. ಈ ದಂಧೆ ಆರಂಭವಾದ ಮೇಲೆ ಕೂಲಿಕಾರರು ತಮ್ಮ ಮಕ್ಕಳು, ಮನೆಮಂದಿಯೊಂದಿಗೆ ಪುಟ್ಟಿ, ಸಲಿಕೆ, ಗುದ್ದಲಿಯನ್ನು ಹಿಡಿದೇ ಮನೆಯಿಂದ ಹೊರಬೀಳುತ್ತಿದ್ದರು. ಇಂಥವರಿಗೆ ನೆಲ ತೊಡಲು ಇಂಥದ್ದೇ ಸ್ಥಳ ಎಂದು ಬೇಕಿರಲಿಲ್ಲ ಮಾರಗಲ ಜಾಗ ಕಂಡರೆ ಸಾಕು ತೋಡಲು ನಿಲ್ಲುತ್ತಿದ್ದರು. ಹತ್ತಾರು ಪುಟ್ಟಿಗಳಷ್ಟು ಕಲ್ಲುಗಳನ್ನು ಹೆಕ್ಕಿ, ರಾಶಿ ಮಾಡಿಕೊಂಡು ಹೊಗುತ್ತಿದ್ದರು. ಇಂಥ ರಾಶಿಗಳನ್ನು ಒಯ್ಯುವವರು ಸ್ಥಳಕ್ಕೆ ಬರುತ್ತಿದ್ದರು. ಟ್ರಾಕ್ಟರ್‌ಗಳ ಮೂಲಕ ಸಾಗಿಸಿಕೊಡು ಹೋಗುತ್ತಿದ್ದರು. ಇಂಥ ಗಣಿಗಾರಿಕೆಯಿಂದ ಎಲ್ಲೆಂದರಲ್ಲಿ ತಗ್ಗುಗಳು, ಗುಂಡಿಗಳು ಕಾಣಿಸಿಕೊಂಡವು. ಎಲ್ಲಿ ನೋಡಿದರಲ್ಲಿ ಅದಿರಿನ ರಾಶಿಗಳು, ಅದರಿಂದ ದೂಳು. ಈ ಚಟುವಟಿಕೆಗಳು ಹಳ್ಳಿಹಳ್ಳಿಗಳಲ್ಲಿ ಓಣಿಓಣಿಗಳಲ್ಲಿ ನಡೆದವು. ಮಕ್ಕಳು, ಮುದುಕರು ಇದರಲ್ಲಿ ತೊಡಗಿರುತ್ತಿದ್ದರು. ಹೊಸಪೇಟೆಯಲ್ಲಿ ನನ್ನ ಸೈಟನ್ನು ತೋಡಿ, ಅದಿರನ್ನು ಸಂಗ್ರಹಿಸುವವರನ್ನು ನಿಯಂತ್ರಿಸುವುದೇ ಅಸಾಧ್ಯವಾಯಿತು.

ಹೊಸಪೇಟೆಯಲ್ಲಿ ನನ್ನ ಮನೆ ಎಂ.ಪಿ.ಪ್ರಕಾಶ ನಗರದಲ್ಲಿದೆ. ಜಂಬುನಾಥ ಗುಡ್ಡವು ಎರಡು ಕಿಲೋಮೀಟರ್ ದೂರದಲ್ಲಿದೆ. ಈ ಗುಡ್ಡವು ಗಣಿಗಾರಿಕೆಗೆ ಒಳಗಾಗಿ ನಾವು ನೋಡುತ್ತಿದಂತೆ ಹಸಿರನ್ನು ಕಳೆದುಕೊಂಡು, ಗುಡ್ಡದ ತುಂಬಾ ಲಾರಿಗಳ ಓಡಾಟದ ದಾರಿಗಳು ಮೂಡಿ ಹಾಗೆ ಕುಸಿಯಿತು. ಆ ಗುಡ್ಡದಲ್ಲಿ ಅದಿರು ತೆಗೆಯಲು ಸ್ಫೋಟಗಳು ಆಗುತ್ತಿದ್ದರೆ ನಮ್ಮ ಮನೆ ಕಂಪಿಸುತ್ತಿತ್ತು. ಕಿಡಕಿಯ ಗ್ಲಾಸ್‌ಗಳು ಚೆಟ್ ಎಂದು ಶಬ್ದ ಮಾಡುತ್ತಿದ್ದವು. ನಡುಹಗಲು ಸ್ಫೋಟಗಳಾದರೆ ಅತಿಥಿಗಳು ಬೆಚ್ಚಿಬೀಳುತ್ತಿದ್ದರು. ಜಂಬುನಾಥಗುಡ್ಡದ ಮೇಲೆ ಸಿಡಿದ ದೂಳಿನ ರಾಶಿ ದೆವ್ವದಂತೆ ನಿಂತಿರುತ್ತಿತ್ತು. ಇನ್ನು ಸಂಡೂರಿನ ಗುಡ್ಡ ಬೆಟ್ಟಗಳ ಗತಿ? ಓಬಳಾಪುರಂ ಪ್ರದೇಶದಲ್ಲಿ ಒಂದು ಊರು. ಚುನಾವಣೆ ಕೆಲಸಕ್ಕೆ ಹೋದಾಗ ನೋಡಿದೆ. ಎರಡನೆಯ ಮಹಾಯುದ್ಧ ಈ ಪ್ರದೇಶದಲ್ಲಿಯೇ ನಡೆದಿರಬೇಕು ಅನ್ನಿಸಿತು. ಇಲ್ಲಿ ಗಣಿಗಾರಿಕೆ ನಡೆಸಿ ಈ ಬಗೆಯ ವಿಕೃತಿಗೆ ಕಾರಣರಾದವರಿಗೆ ನಾಡು, ನಾಡಿನ ಚೆಲುವು, ಸಂಸ್ಕೃತಿಯ ಗಂಧಗಾಳಿ ಏನಾದರೂ ಇದೆಯೇ ಅನ್ನಿಸಿತು.

ಕಳೆದ ಹತ್ತು ವರ್ಷಗಳಿಂದ ನಡೆದ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿ ಹಣ ಗಳಿಸಿದವರನ್ನು ನೋಡಬೇಕು. ಗಣಿಮಾಲೀಕರು ಮಾತ್ರವಲ್ಲ ಯಾರೂ ನೆಲದ ಮೇಲೆ ಇರಲಿಲ್ಲ. ದಿನಗೂಲಿ ಕೆಲಸಗಾರರು, ಮೇಸ್ತ್ರಿಗಳು, ಮೇಸ್ತ್ರಿಗಳ ಮೇಸ್ತ್ರಿಗಳೆಲ್ಲರೂ ಕೆಳ ಹಂತದವರೇ. ಅವರೆಲ್ಲರೂ ಕಾರು, ಜೀಪು, ಬೈಕುಗಳಲ್ಲಿ ಓಡಾಡಿದವರೇ. ದಿನಾಲು ನಾವು ಬೆಳಿಗ್ಗೆ ವಾಕಿಂಗ್ ಹೋಗುವ ಕಾಲುವೆ ಬಳಿ, ಗಣಿಗಾರಿಕೆಯಲ್ಲಿ ರಾತ್ರಿಯೆಲ್ಲಾ ಕೆಲಸಮಾಡಿ ಬೈಕ್ ಮೇಲೆ ಬಂದು ಮಲ ವಿಸರ್ಜನೆ ಮಾಡಿ, ಕಾಲುವೆಯಲ್ಲೇ ಬಹಿರಂಗವಾಗಿ ತೊಳೆದುಕೊಂಡು ಪುನಃ ಬೈಕ್ ಮೇಲೆ ಹೋಗುವವರು ನೂರಾರು ಯುವಕರೇ ಆಗಿರುತ್ತಿದ್ದರು. ಅಕ್ರಮ ಗಣಿಗಾರಿಕೆ ಆರಂಭವಾದ ಮೇಲೆ, ಹೊಸಪೇಟೆ, ಬಳ್ಳಾರಿ, ಕುಡತಿನಿ, ತೋರಣಗಲ್ಲು, ಕೊಪ್ಪಳ ಎಲ್ಲ ಊರುಗಳಲ್ಲಿ ಮನೆಗಳ ಮುಂದೆ ಮೈನ್ಸ್ ಲಾರಿಗಳು, ಕ್ರೇನ್‌ಗಳು, ಜೀಪುಗಳು. ನಮ್ಮ ಮನೆಯ ಬಳಿ ಸೈಟ್ ಖಾಲಿಯಿದ್ದರೆ ಸಾಕು ಅಲ್ಲಿ ಮೈನ್ಸ್ ಲಾರಿಗಳು ಬಂದು ತಂಗುತ್ತಿದ್ದವು. ಯಾರ ಬಳಿಯಲ್ಲಿ ನೋಡಿದರೂ ಹಣ. ಐದು ನೂರು, ಸಾವಿರ ರೂಪಾಯಿ ನೋಟುಗಳು ಕೂಲಿಕಾರರ ಕೈಯಲ್ಲಿ. ಇನ್ನು ಗುತ್ತಿಗೆದಾರರ ಬಳಿ ಎಷ್ಟು? 2000-01ರಲ್ಲಿ 30/40 ಸೈಟುಗಳ ಬೆಲೆ ಅರವತ್ತು-ಎಪ್ಪತ್ತು ಸಾವಿರ ಮಾತ್ರ. 2005-06ರ ಹೊತ್ತಿಗೆ ಏಳು-ಏಂಟು ಲಕ್ಷ. ಬರುಬರುತ್ತ 12 ಲಕ್ಷಗಳಾದವು. ಗಣಿಗಾರಿಕೆ ನಡೆಯುತ್ತಿದ್ದ ಕಾಲದಲ್ಲಿ ಸಾಮಾನ್ಯರು ಬ್ಯಾಂಕುಗಳಿಗೆ ಹೋಗುವಂತಿರಲಿಲ್ಲ ಬೆಳಿಗ್ಗೆಯೇ ನೂರಾರು ಜನ ಸಾಲಿನಲ್ಲಿ ನಿಂತಿರುತ್ತಿದ್ದರು. ಡ್ರಾ ಮಾಡುವ ಹಣ ಕನಿಷ್ಠ ಐದು ಲಕ್ಷ ರೂಗಳು. ಗರಿಷ್ಠ ಎಷ್ಟೋ ದೇವರೇ ಬಲ್ಲ!

ನನ್ನ ಕೈಯಲ್ಲಿ ಎಂ.ಫಿಲ್, ಪಿಎಚ್.ಡಿ. ಪದವಿಗಾಗಿ ಅಧ್ಯಯನ ಮಾಡುತ್ತಿದ್ದ ಸಂಡೂರಿನ ಪರಿಸರದ ವಿದ್ಯಾರ್ಥಿಗಳು, ಅಕ್ರಮ ಗಣಿಗಾರಿಕೆಯ ಅಬ್ಬರಕ್ಕೆ ಮನ ಸೋತರು. ಮೂರು ತಿಂಗಳಿನಲ್ಲಿ ಬೈಕಿನ ಮೇಲೆ ಬಂದು `ನಮಸ್ತೆ~ ಅಂದರು. ಆರು ತಿಂಗಳಿನಲ್ಲಿ ಕಾರಿನಲ್ಲಿ ಬಂದು ಕಂಡು ಹೋದರು. ಇವರೆಲ್ಲ ಎರಡೋ ನಾಲ್ಕೋ ಎಕರೆ ಭೂಮಿಯುಳ್ಳ ರೈತರ ಮಕ್ಕಳಾಗಿದ್ದರು. ಸಂಡೂರಿನ ಗುಡ್ಡ ಬೆಟ್ಟ ಕಾಡು ಕಣಿವೆಗಳಿಂದ ಕೂಡಿದ್ದರಿಂದ ವ್ಯವಸಾಯದ ಭೂಮಿಯೇ ಕಡಿಮೆ. ಇರುವ ವ್ಯವಸಾಯದ ಭೂಮಿಯಲ್ಲಿ ಡಿಗ್ಗಿಂಗ್ ಗಣಿಗಾರಿಕೆ ಆರಂಭಿಸಲಾಯಿತು. ಒತ್ತುವರಿಗಂತೂ ಎರಡುನೂರು ಹೆಕ್ಟೇರ್ ಅರಣ್ಯ ಪ್ರದೇಶ ಒತ್ತುವರಿಗೆ ಒಳಗಾಯಿತು. ಅಕ್ರಮ ಗಣಿಗಾರಿಕೆಯಿಂದ ತೆಗೆದ ಅದಿರನ್ನು ರಾಶಿ ಹಾಕಲು ಅರಣ್ಯ ಪ್ರದೇಶವನ್ನು ಬಳಸಲಾಯಿತು. ಈ ಪ್ರದೇಶವೇ ಎರಡುನೂರು ಹೆಕ್ಟೇರ್‌ನಷ್ಟು ಎಂದು ಹೇಳುತ್ತಾರೆ. ಕುರಚಲು ಕಾಡಿನಲ್ಲಿ ಅಕ್ರಮ ಗಣಿಗಾರಿಕೆಯಂತೂ ರಾಜಾರೋಷವಾಗಿ ನಡೆಯಿತೆಂದು ಬೇರೆ ಹೇಳಬೇಕಾಗಿಲ್ಲ. ಒಟ್ಟು ಹಾನಿ ಲೆಕ್ಕಕ್ಕೇ ಸಿಗಬೇಕಾದರೆ ದೊಡ್ಡ ಅಧ್ಯಯನಗಳೇ ನಡೆಯಬೇಕು.

2007-08ರಲ್ಲಿ ಕೆಲಸದ ನಿಮಿತ್ತ ಸಂಡೂರು-ನಂದಿಹಳ್ಳಿಗೆ ಹೋಗಬೇಕಾಯಿತು. ಸಂಡೂರಿನ ರಸ್ತೆಯಲ್ಲಿ ಐದು ಹತ್ತು ನಿಮಿಷ ನಿಲ್ಲುವುದಾಯಿತು. ಲಾರಿಗಳು ಇರುವೆ ಸಾಲಿನಂತೆ ಹರಿಯುತ್ತಲೇ ಇವೆ. ರಸ್ತೆಯ ಎಡ ಬಲ ಸಾಲು ಅಂಗಡಿಗಳು ಕಾಣದಷ್ಟು ದೂಳು. ನನಗೆ ಉಸಿರೇ ಬಂದ್ ಆಯ್ತು. `ಏನ್ರೀ ಇದು ದೂಳು~ ಎಂದು ಗೊಣಗಿದೆ. ನನ್ನ ಜತೆಗಿದ್ದ ಉಪನ್ಯಾಸಕರು `ಸಹಜ ವಾತಾವರಣದಲ್ಲಿ ದೂಳಿನ ಪ್ರಮಾಣ 30-40 ನ್ಯಾನೋ ಗ್ರಾಮಿನಷ್ಟು. ನಮ್ಮ ಈ ವಾತಾವರಣದಲ್ಲಿ 200 ನ್ಯಾನೋ ಗ್ರಾಂನಷ್ಟು ದೂಳಿದೆ~ ಎಂದರು. `ಒಂದು ಕ್ಯೂಬಿಕ್ ಚ.ಕಿ.ಮೀಗೆ 200 ನ್ಯಾನೋ ಗ್ರಾಂನಷ್ಟು ದೂಳು ಇರಬೇಕು. ಇಲ್ಲಿ 1200ಕ್ಕಿಂತಲೂ ಜಾಸ್ತಿಯಿದೆ~ ಎಂದರು ಮತ್ತೊಬ್ಬರು. ಈ ಪರಿಭಾಷೆ ನನಗೆ ತಿಳಿಯಲಿಲ್ಲ. ಆದರೆ ಸಂಡೂರು, ರಸ್ತೆ ಬದಿಯ ಊರುಗಳು ಹಿಡಿದ ದೂಳನ್ನು ನೋಡಿದರೆ ಅದನ್ನು ತೊಳೆಯಲು ಸತತ ಆರು ತಿಂಗಳು ಮಳೆಯೇ ಸುರಿಯಬೇಕು ಅನ್ನಿಸಿತ್ತು.

ಸಂಡೂರಿನ ಹಳ್ಳಿಗಳಲ್ಲಿ ವ್ಯವಸಾಯ ಆರಂಭವಾಗಿದೆ. ರೈತರು ತಾವೇ ತಮ್ಮ ಹೊಲಗಳಲ್ಲಿ ತೋಡಿಕೊಂಡಿದ್ದ ಗುಂಡಿಗಳನ್ನು, ತಗ್ಗುಗಳನ್ನು ಸಮಮಾಡಿಕೊಂಡು ಬೇಸಾಯಕ್ಕೆ ನಿಂತಿದ್ದಾರೆ. ಇಪ್ಪತ್ತು ಮೂವತ್ತು ವರ್ಷಗಳಿಂದ ಪರಿಸರದ ಮೇಲೆ ನಡೆದ ಅತ್ಯಾಚಾರದಿಂದ ಮಳೆಯ ಪ್ರಮಾಣ ತೀರಾ ಕುಸಿದಿದೆ. ಅಂತರ್ಜಲವಿಲ್ಲ, ಮಳೆಯಾಧಾರಿತ ಬೇಸಾಯ ಮಾತ್ರ ರೈತರ ಪಾಲಿಗೆ. ಆದರೂ ರೈತರು ಬಿತ್ತನೆಗೆ ಸಿದ್ಧರಾಗಿದ್ದಾರೆ. ಮೊದಲೇ ರೈತರಿಗೆ ಬಿಕ್ಕಟ್ಟುಗಳು ಜಾಸ್ತಿ. ಪದವೀಧರ ಜಗದೀಶರನ್ನು ಕಂಡಾಗ, `ಅಕ್ರಮವೋ, ಸಕ್ರಮವೋ ಗಣಿಗಾರಿಕೆ ನಡೆಯುತ್ತಿದ್ದಾಗ ಅನಿವಾರ್ಯವಾಗಿ ರೈತರಾದ ನಾವು ತೊಡಗಿಕೊಂಡು ಹಣಮಾಡಿ ಕೊಂಡದ್ದು ನಿಜ. ಈಗ ಅಷ್ಟು ಇಷ್ಟು ಹಣ ಉಳಿಸಿಕೊಂಡದ್ದನ್ನೇ ಮತ್ತೆ ವ್ಯವಸಾಯಕ್ಕೆ ಬಳಸ್ತಿದ್ದೀವಿ. ಆದ್ರೆ ಬೆಳೆದ ಯಾವ ಬೆಳೆಯಿಂದಲೂ ಹಾಕಿದ ಹಣ ವಾಪಾಸ್ ಬರುವುದಿಲ್ಲ. ವರ್ಷವಿಡೀ ಬದುಕಬೇಕು ಹೇಗೆ? ಸಂಡೂರಿನ ಈರುಳ್ಳಿ ಗುಣಮಟ್ಟ ಉತ್ತಮವಾಗಿದೆ. ನಮಗೆ ಕ್ವಿಂಟಾಲ್‌ಗೆ 300 ರಿಂದ 400 ರೂಪಾಯಿಗಳೂ ಸಿಗುವುದಿಲ್ಲ. ಯಾರ ಮುಂದೆ ತೋಡಿಕೊಳ್ಳಬೇಕು ನಮ್ಮ ಕಷ್ಟಗಳನ್ನು. ಹಾಗೆಂದು ನಾನು ಮತ್ತೆ ಗಣಿಗಾರಿಕೆ ನಡೆಯಲಿ ಎಂದು ಹೇಳಲಾರೆ~ ಎಂದರು. ಉಪನ್ಯಾಸಕಿ ಕಲಾವತಿ, `ದೂಳಿಗೆ ಪರಿಹಾರವಾಗಿ ಹಣ ಸಿಗುವಾಗ ರೈತರು ಯಾಕೆ ಬೇಡವೆಂದರು. ವರ್ಷವೆಲ್ಲ ಕಷ್ಟ ಪಟ್ಟರೂ ಕೃಷಿಯಲ್ಲಿ ಎಕರೆಗೆ 25 ಸಾವಿರದಷ್ಟು ಲಾಭವಿಲ್ಲ. ಪರಿಹಾರವೇ 25 ಲಕ್ಷದಷ್ಟು ಹಣ ಸಿಗುತ್ತಿದ್ದಾಗ ಕೃಷಿಯನ್ನೇ ಮರೆತು ನಿಂತರು~ ಎಂದು ನೊಂದುಕೊಂಡರು.

ಪುನಃ ವ್ಯವಸಾಯಕ್ಕೆ ತೊಡಗಿದ ರೈತರಿಗೆ ಕಷ್ಟಗಳಿವೆ ಎಂಬುದು ನಿಜ. ಹಾಗೇ ಇನ್ನಿತರರದೂ ಇರಬಹುದು. ಗಣಿಗಾರಿಕೆ ಅರ್ಥಾತ್ ಅಕ್ರಮ ಗಣಿಗಾರಿಕೆ ನಿಂತ ಮೇಲೆ ಅನೇಕರ ಉಪಜೀವನಕ್ಕೆ ತೊಂದರೆಯಾಗಿದೆ ಎಂಬ ಅಭಿಪ್ರಾಯ ಬಲವಾಗಿದೆ. ಈ ಅಭಿಪ್ರಾಯವನ್ನು `ಸಮಾಜ ಪರಿವರ್ತನ ಸಮುದಾಯ~ದ ಮುಖ್ಯಸ್ಥರಾದ ಎಸ್.ಆರ್.ಹಿರೇಮಠ ಒಪ್ಪುವುದಿಲ್ಲ. `ಹತ್ತು ಜನ ಇದರಿಂದ ಅಲ್ಪಸ್ವಲ್ಪ ಉದ್ಯೋಗ ಪಡೆದಿರಬಹುದು. ಶೇ 90 ಭಾಗ ಜನರಿಗೆ ತೊಂದರೆಗಳೇ ಹೆಚ್ಚು~ ಅನ್ನುತ್ತಾರೆ. ಬಳ್ಳಾರಿ, ಸಂಡೂರು, ಹೊಸಪೇಟೆ, ಚಿತ್ರದುರ್ಗ, ತುಮಕೂರು ಮುಂತಾದ ಕಡೆ ಗಣಿಗಾರಿಕೆ ನಡೆದು ಅರಣ್ಯಭೂಮಿ, ಖನಿಜ ಸಂಪತ್ತಿನ ಗುಡ್ಡ ಬೆಟ್ಟಗಳು, ಪರಿಸರ, ಜೀವ ಸಂಕುಲ, ಮನುಷ್ಯನ ನೆಮ್ಮದಿ, ನಾಡಿನ ಪ್ರಾಕೃತಿಕ ಸಂಪತ್ತು ಎಲ್ಲವೂ ಅಧೋಗತಿಗೆ ಹೋಗುತ್ತಿರುವುದನ್ನು ಅಧ್ಯಯನ ಮಾಡಿದ ಅವರು `ಗಣಿಗಾರಿಕೆ ಸದ್ಯ ನಿಂತು ಹೋಯಿತು. ಲೋಕಾಯುಕ್ತ ವರದಿಯನ್ನು ನ್ಯಾ.ಸಂತೋಷ ಹೆಗಡೆ ಅವರು ಸಿದ್ಧಪಡಿಸಿದ್ದು ಮಹತ್ವದ ಹೆಜ್ಜೆಯಾಯಿತು. ಕರ್ನಾಟಕದಲ್ಲಿ ಗಣಿಗಾರಿಕೆ ನಿಲ್ಲಲು ಈ ಮಹನೀಯರು ಕಾರಣರಾಗಿದ್ದಾರೆ. ನಾಡಿನ ಜನ ಇವರಿಗೆ ಋಣಿಯಾಗಿರಬೇಕು~ ಎಂದು ಮೆಚ್ಚುಗೆ ಸೂಚಿಸಿದರು.

ದುಃಖದ ಸಂಗತಿ ಎಂದರೆ, ಸಂಡೂರು, ಬಳ್ಳಾರಿ, ಹೊಸಪೇಟೆ ಮತ್ತು ಇತರ ಕಡೆ ಗಣಿಗಾರಿಕೆ ನಡೆದು ಮನುಷ್ಯನ ಆರೋಗ್ಯ, ಪರಿಸರ, ಕಾಡು, ಭೂಮಿ, ರಸ್ತೆ, ಹಳ್ಳಿಗಳು, ಸಮಾಜ ಎಲ್ಲವೂ ಸರಿಪಡಿಸದಷ್ಟು ಹಾನಿಗೊಳಗಾಗಿವೆ. ಯಾರಿಗೆ ಗೊತ್ತಿಲ್ಲ ಇದು? ಆದರೆ ಇಲ್ಲಿ ನೆಮ್ಮದಿಯನ್ನು ತರಲು ಸರ್ಕಾರ ಯಾವ ಯೋಜನೆಗಳನ್ನೂ ರೂಪಿಸದೇ ಇರುವುದು ವಿಪರ್ಯಾಸ. ಕುಡುತಿನಿ, ತೋರಣಗಲ್ಲು ಸಂಡೂರು, ಹೊಸಪೇಟೆ, ಮರಿಯಮ್ಮನಹಳ್ಳಿ ಮುಂತಾದ ರಸ್ತೆಗುಂಟ ಇರುವ ಊರುಗಳಲ್ಲಿ ಒಂದು ದಿನ ಬದುಕಲಾಗುವುದಿಲ್ಲ. ಆದರೂ ರೋಗಗ್ರಸ್ತರಾಗಿ ಜನ ಜೀವ ಹಿಡಿದು ಕಾಲ ನೂಕುತ್ತಿದ್ದಾರೆ. ಇವರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆಯೇ? ಯುದ್ಧ ನಡೆದ ಸ್ಥಳದಂತೆ ಈ ಊರುಗಳಿವೆ. ಜನರಿದ್ದಾರೆ. ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಇಲ್ಲಿ ತುರ್ತಾಗಿ ಬೇಕಾಗಿದೆ.

(ಊರು ಸುತ್ತುವಲ್ಲಿ ಜೊತೆಗಿದ್ದವರು : ಡಾ.ಜಗದೀಶ ಕೆರೆನಳ್ಳಿ, ಎಂ.ವೇದಾಂತ ಮತ್ತು ಎನ್. ಗುರುರಾಜ್)

ಚಿತ್ರಗಳು: ಟಿ.ರಾಜನ್, ಶಿವರಾಂ                               

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.