ಸೋಮವಾರ, ಜನವರಿ 20, 2020
19 °C

ಸಂತಪುರ: ಕೊಳವೆಬಾವಿಯಲ್ಲಿ ಹೊಲಸು ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಔರಾದ್‌: ತಾಲ್ಲೂಕಿನ ಸಂತಪುರ ಹೋಬಳಿ ಕೇಂದ್ರದ ಸರ್ಕಾರಿ ಪ್ರೌಢ­ಶಾಲೆ ಬಳಿಯ ಕೊಳವೆ ಬಾವಿಯಲ್ಲಿ ಹೊಲಸು ನೀರು ಬರುತ್ತಿದೆ. ಗ್ರಾಮದ ಅರ್ಧದಷ್ಟು ಜನರು ಕುಡಿಯಲು ಇದೇ ಕೊಳವೆ ಬಾವಿ ನೀರು ಬಳಸುತ್ತಾರೆ. ಆದರೆ ಕೆಲ ದಿನಗಳಿಂದ ಇದರಲ್ಲಿ ಹೊಲಸು ನೀರು ಬರುತ್ತಿದ್ದು, ದುರ್ವಾಸನೆ­ಯಿಂದ ಕೂಡಿದೆ. ಇದರಿಂದಾಗಿ ನೀರು ಕುಡಿಯಲು ಆಗದೆ  ತೊಂದರೆಯಾಗಿದೆ ಎಂದು  ಮಹಿಳೆಯರು ದೂರಿದ್ದಾರೆ.ಕೊಳವೆ ಬಾವಿಯಿಂದ ನೀರನ್ನು ಯಥೇಚ್ಛ ಬಳಿಸಿದರೂ ಹೊಲಸು ನೀರು ಹಾಗೆಯೇ ಬರುತ್ತಿದೆ ಎಂದು ಶೈಲಾನಿ ಬೇಗಂ, ಸಂಗಮ್ಮ ಲಕ್ಷ್ಮಣ, ತೇಜಮ್ಮ ತುಕಾರಾಮ, ನಿರ್ಮಲಾ ಪಂಢರಿ ದೂರುತ್ತಾರೆ. ಕೊಳವೆ ಬಾವಿ ಪಕ್ಕದಲ್ಲಿ ಶಾಲೆಯ ಶೌಚಾಲಯ ಇದೆ. ಈ ಕಾರಣ ನೀರು ಹೀಗೆ ಬರುತ್ತಿರಬಹುದು.  ಈ ಬಗ್ಗೆ ಸಂಬಂಧಪಟ್ಟವರು ಪರಿಶೀಲನೆ ನಡೆಸಬೇಕು.ನಾಲ್ಕೈದು ಬಡಾವಣೆ ಜನರು ಕುಡಿಯುವ ನೀರಿಗಾಗಿ ಈ ಕೊಳವೆ ಬಾವಿಯನ್ನೇ ಆಶ್ರಯಿಸಿದ್ದಾರೆ. ಬಡಾವಣೆಯ ಜನರಿಗೆ ಕುಡಿಯುವ ನೀರಿನ ಏಕೈಕ ಮೂಲ ಇದು. ಕೂಡಲೇ ನೀರಿನ ಪರೀಕ್ಷೆ ನಡೆಸಬೇಕು. ಅಲ್ಲಿಯ ತನಕ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.ಮಹಿಳೆಯರ ಬೇಡಿಕೆಗೆ ಸ್ಪಂದಿಸಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಾಬಾಯಿ ಭಾಲ್ಕೆ, ಹೊಲಸು ನೀರು ಕುಡಿಯುವುದರಿಂದ ಸಮಸ್ಯೆ­ಯಾಗ­ಬಹುದು. ಸರಿಪಡಿಸು­ವಂತೆ ಪಿಡಿಒಗೆ ಸೂಚಿಸಲಾಗಿದೆ ಎಂದು ಹೇಳುತ್ತಾರೆ. ಕೊಳವೆ ಬಾವಿಯಲ್ಲಿ ಹೊಲಸು ನೀರು ಬರುತ್ತಿರುವ ಬಗ್ಗೆ ಮಾಹಿತಿ ಇದೆ. ಪಕ್ಕದಲ್ಲಿ ಶೌಚಾಲಯ ಟ್ಯಾಂಕ್‌ ಲಿಕೇಜ್‌ನಿಂದ ಹೀಗಾಗಿರುವ ಸಾಧ್ಯತೆ ಇದೆ. ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒ ಶಿವಕುಮಾರ ಘಾಟೆ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)