ಶನಿವಾರ, ಅಕ್ಟೋಬರ್ 19, 2019
27 °C

ಸಂತಸ ಅರಳುವ ಸಮಯ

Published:
Updated:

ಮನೆಯಲ್ಲಿ ಬಡತನ. ಓದು ಸಹ ದೂರ. ಆ ಹುಡುಗನಲ್ಲಿ ಹೇಳಿಕೊಳ್ಳುವಂತಹ ಕನಸುಗಳಿರಲಿಲ್ಲ. ವಿದ್ಯಾರ್ಥಿದೆಸೆಯ ಹೆಚ್ಚಿನ ದಿನಗಳನ್ನು ಕಳೆದದ್ದು ಸಿನಿಮಾ ಸೆಟ್‌ಗಳಲ್ಲಿ.

 

ತುಂಬಾ ಹತ್ತಿರದಿಂದ ನೋಡಿದ್ದು ಸಿನಿಮಾ ಪೋಸ್ಟರ್‌ಗಳಲ್ಲಿ ಬರೆಯುವ ಕಲೆಯನ್ನು. ಕೈಗೆ ಸಿಕ್ಕಿದ ಬ್ರಶ್ ಹಿಡಿದ ಕೈಗಳಲ್ಲಿ ಕಲೆ ಬೆಳೆಯತೊಡಗಿತು. ಪಿಯುಸಿಯಲ್ಲಿ ಅರ್ಧಕ್ಕೇ ಓದಿಗೆ ಶರಣು ಹೊಡೆದ ಬಳಿಕ ಬದುಕು ಕಟ್ಟಿಕೊಟ್ಟಿದ್ದು ಅದೇ ಚಿತ್ರರಂಗ. ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ, ಸಹಾಯಕ ನಿರ್ದೇಶಕನಾಗಿ, ಬರಹಗಾರನಾಗಿ ತನ್ನನ್ನು ತಾನು ರೂಪಿಸಿಕೊಂಡ ಈ ಹುಡುಗ ಈಗ ನಿರ್ದೇಶಕ.ಬಾಲ್ಯದಲ್ಲೇ ಹೊತ್ತಿಸಿಕೊಂಡ ಸಿನಿಮಾ ನಂಟಿಗೆ ಅಂಟಿಕೊಂಡು ಅದರಲ್ಲೇ ಸಾಧನೆ ಮಾಡುವ ಬಯಕೆಯನ್ನು `ಅಲೆಮಾರಿ~ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಈಡೇರಿಸಿಕೊಂಡವರು ಸಂತು.ಮೂಲತಃ ಚಿಕ್ಕಮಗಳೂರಿನ ಕೊಪ್ಪ ತಾಲ್ಲೂಕಿನವರಾದ ಸಂತು ಬೆಳೆದದ್ದು ಬೆಂಗಳೂರಿನಲ್ಲಿ. ಅಕ್ಕಸಾಲಿಗರಾಗಿದ್ದ ತಂದೆ ಕೊಪ್ಪದಿಂದ ಬದುಕನ್ನರಸಿ ಬಂದಿದ್ದು ಬೆಂಗಳೂರಿಗೆ. ಕಲಾ ನಿರ್ದೇಶಕ ಬಾಬು ಖಾನ್ ಬಳಿ ಸಹಾಯಕರಾಗಿ ಸೇರಿಕೊಂಡ ಅವರು ಸೆಟ್‌ಗೆ ಹೋಗುವಾಗ ಚಿಕ್ಕ ವಯಸ್ಸಿನ ಸಂತುವನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು."

 

ಕಷ್ಟದ ನಡುವೆಯೂ ಸಿನಿಮಾ ನೋಡಲು ತಂದೆ ದುಡ್ಡು ಕೊಡುತ್ತಿದ್ದರು. `270 ದಿನ ಶಾಲೆಯಿದ್ದರೆ ನಾನು ಹೋಗುತ್ತಿದ್ದುದು 70 ದಿನ ಮಾತ್ರ~ ಎಂದು ಸಂತು ನಗೆ ಅರಳಿಸುತ್ತಾರೆ.ತಂದೆಯ ಜೊತೆ ಸೆಟ್‌ಗೆ ಹೋದಾಗ ಚಿತ್ರಗಳ ಟೈಟಲ್, ಪೋಸ್ಟರ್‌ಗಳ ವಿನ್ಯಾಸದ ಗೀಳು ಹೊತ್ತಿಕೊಂಡಿತು. ನಿರ್ದೇಶಕ ಪ್ರೇಮ್‌ರ `ಎಕ್ಸ್‌ಕ್ಯೂಸ್ ಮಿ~ ಚಿತ್ರದ ಆಹ್ವಾನ ಪತ್ರಿಕೆ ವಿನ್ಯಾಸಕ್ಕೆ ತಂದೆ ಬದಲು ಸಂತು ಹೋಗಬೇಕಾಯಿತು. ಅವರು ರೂಪಿಸಿದ ವಿನ್ಯಾಸ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಬಳಿಕ ಸಂತು ಪ್ರೇಮ್ ಬಳಗದಲ್ಲಿ ಕಾಯಂ ಸದಸ್ಯರಾದರು. ಸಹಾಯಕ ನಿರ್ದೇಶಕರಾಗಿ, ಚಿತ್ರಕಥೆ ರೂಪಿಸುವ ಕೆಲಸಗಳಲ್ಲಿ ತೊಡಗಿಕೊಂಡಾಗ ನಿರ್ದೇಶನದ ಒಳನೋಟದ ಪರಿಚಯವಾಯಿತು.ಕಲೆಯಲ್ಲಿ ನನ್ನನ್ನು ಹೆಚ್ಚು ಪ್ರೇರೇಪಿಸಿದ್ದು ಉಪೇಂದ್ರ `ಎ~ ಚಿತ್ರಕ್ಕೆ ಮಾಡಿಸಿದ್ದ ಪೋಸ್ಟರ್ ಎನ್ನುತ್ತಾರೆ ಸಂತು.`ಪ್ರೀತಿ ಏಕೆ ಭೂಮಿ ಮೇಲಿದೆ~ ಚಿತ್ರದ ಬಳಿಕ ಸಂತು ಪ್ರೇಮ್ ಬಳಗದಿಂದ ಹೊರಬಂದಾಗ ಅವರ ಬಳಿ ತಮ್ಮ ಅನುಭವಗಳನ್ನಾಧರಿಸಿಯೇ ಹೊಸ ಕಥೆಯೊಂದಿತ್ತು. ಹಲವು ನಿರ್ದೇಶಕರ ಬಳಿಯಲ್ಲಿ, ಹಲವು ಚಿತ್ರಗಳಿಗೆ ಸಹಾಯಕರಾಗಿ ತೊಡಗಿಕೊಂಡರು.ಜೊತೆಜೊತೆಯಲ್ಲೇ ನಿರ್ಮಾಪಕರಿಗಾಗಿ ನಡೆಸಿದ ಹುಡುಕಾಟಕ್ಕೆ ಐದು ವರ್ಷವಾದರೂ ಮುಕ್ತಿ ಸಿಗಲಿಲ್ಲ. ಕೊನೆಗೆ ಕೈ ಹಿಡಿದಿದ್ದು ನಿರ್ಮಾಪಕ ಬಿ.ಕೆ.ಶ್ರೀನಿವಾಸ್. ಅಶ್ವಿನಿ ಆಡಿಯೋದ ಕೃಷ್ಣಪ್ರಸಾದ್‌ರ ಪ್ರೋತ್ಸಾಹವೂ ಸಿಕ್ಕಿತು. `ಅಲೆಮಾರಿ~ಗೆ ಅದೃಷ್ಟದ ಬಾಗಿಲು ತೆರೆಯಿತು. ಸ್ನೇಹಿತ ಯೋಗೀಶ್‌ರನ್ನೇ ನಾಯಕರನ್ನಾಗಿ ಆರಿಸಿಕೊಂಡರು.ಬೇರೆಯವರ ಬದುಕಿನಲ್ಲಿ ಕೆಲವು ಘಟನೆಗಳು ನಡೆದಂತೆ ತನಗೆ ಬೀಳುತ್ತಿದ್ದ ಕನಸುಗಳನ್ನು ಅವರಿಗೆ ಹೇಳಲೂ ಆಗದೇ ಬಿಡಲೂ ಆಗದೇ ಚಡಪಡಿಸುವುದು ಸಂತುಗೆ ಆದ ಅನುಭವ. ಅದನ್ನು ಆಧಾರವಾಗಿ ಇಟ್ಟುಕೊಂಡು ಹೆಣೆದಿದ್ದು ಅಲೆಮಾರಿಯ ಕಥೆಯನ್ನು.

 

ಈ ಚಿತ್ರದ `ಮರೀಬೇಕು ನಿನ್ನಾ ಮರೀಬೇಕು...~ ಎಂಬ ಹಾಡನ್ನು ಒಂದೇ ಶಾಟ್‌ನಲ್ಲಿ ಸೆರೆಹಿಡಿದಿದ್ದು ಚಿತ್ರದಲ್ಲಿ ಮಾಡಿರುವ ಪ್ರಯೋಗಗಳಲ್ಲಿ ಒಂದು. ಈ ಹಾಡಿಗೆ ಮತ್ತೊಂದು ವಿಶೇಷತೆಯೂ ಇದೆ. ಸಂತು ತನ್ನಿಂದ ದೂರವಾದ ಪ್ರೇಯಸಿಗೆ ಬರೆದು ಕೊಟ್ಟ ಕೊನೆಯ ಸಾಲುಗಳಿವು. ಅದನ್ನೇ ದೂರವಾಗುವ ಪ್ರೇಮಿಗಳ ಗೀತೆಯಾಗಿ ಸಂತು ಇಲ್ಲಿ ಬಳಸಿಕೊಂಡಿದ್ದಾರೆ.ಸಿನಿಮಾಕ್ಕೆ ಬರಬೇಕೆಂಬ ಕನಸು ನನಗೆ ಇರಲಿಲ್ಲ. ನಿರ್ದೇಶಕನಾಗುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ. ಆದರೆ ಈಗ ಆಸೆಗಳಿವೆ. ಕನ್ನಡ ಚಿತ್ರರಂಗದ ಟ್ರೆಂಡ್ ಬದಲಿಸಬೇಕೆಂದು. ವರ್ಷಕ್ಕೆ 120-130 ಚಿತ್ರಗಳು ಬರುತ್ತವೆ. ಆದರೆ 15 ಚಿತ್ರಗಳು ಮಾತ್ರ ಗೆಲ್ಲುತ್ತಿವೆ. ಈ ಗೆಲುವಿನ ಸಂಖ್ಯೆಯನ್ನು 50ಕ್ಕೆ ಮುಟ್ಟಿಸಬೇಕು. ಟ್ರೆಂಡ್ ಬದಲಿಸುವುದೆಂದರೆ ಸಿನಿಮಾ ಅಂತರಂಗವನ್ನು ಬದಲಿಸುವುದು. ಕಥೆ, ನಿರೂಪಣಾ ಶೈಲಿ, ಹೀಗೆ ಎಲ್ಲಾ ಚಿತ್ರಗಳಲ್ಲೂ ಕಾಣುವ ಏಕರೂಪತೆಯನ್ನು ಕಿತ್ತು ಹಾಕಬೇಕು. ಆದರೆ ಅದು ಅಷ್ಟು ಸುಲಭವಲ್ಲ ಎಂಬುದು ಸಂತು ಅನುಭವದ ಮಾತು. ಅಲೆಮಾರಿ     ಚಿತ್ರ ಚೆನ್ನಾಗಿ ಬಂದಿದೆ ಎಂಬ ಅಭಿಪ್ರಾಯ ಚಿತ್ರತಂಡದ ಇತರರದ್ದು. ನನಗೆ ಆತ್ಮವಿಶ್ವಾಸವೂ ಇದೆ. ಅಳುಕೂ ಇದೆ ಎನ್ನುತ್ತಾರೆ ಅವರು. ಹಾಗೆ ನೋಡಿದರೆ ನಾನು ಅದೃಷ್ಟವಂತ ಎಂಬುದು ಸಂತು ಅಭಿಪ್ರಾಯ. ಮೊದಲ ಚಿತ್ರಕ್ಕಾಗಿ ವರ್ಷಗಟ್ಟಲೆ ಹೆಣಗಾಡಿದ ಸಂತು ಅದು ಬಿಡುಗಡೆಯಾಗುವ ಮುನ್ನವೇ ಎರಡನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಸಿದ್ಧರಾಗಿದ್ದಾರೆ. ಅವರ `ಅಡ್ಡ~ ಚಿತ್ರಕ್ಕೂ ಬಿ.ಕೆ.ಶ್ರೀನಿವಾಸ್ ಅವರದ್ದೇ ಹೂಡಿಕೆ.

 -

Post Comments (+)