ಶುಕ್ರವಾರ, ಫೆಬ್ರವರಿ 26, 2021
27 °C

ಸಂತೆಕಟ್ಟೆಯಿಂದ ಸ್ಪಾರ್ ಮಾರುಕಟ್ಟೆವರೆಗೆ...

ಮಾನಸ Updated:

ಅಕ್ಷರ ಗಾತ್ರ : | |

ಸಂತೆಕಟ್ಟೆಯಿಂದ ಸ್ಪಾರ್ ಮಾರುಕಟ್ಟೆವರೆಗೆ...

ಮಾಲೂರಿನ ಹೊರವಲಯದಲ್ಲೊಂದು ತೋಟ. ಕೆಂಪು-ಕೆಂಪನೆಯ ಟೊಮೆಟೊಗಳ ನಡುವೆ ಒಬ್ಬ ನಿಂತಿದ್ದಾನೆ. ಇದ್ದಕ್ಕಿದ್ದಂತೆ ಮೊಬೈಲ್ ಫೋನ್ ಟ್ರಿಣಗುಟ್ಟುತ್ತದೆ. ಮುಂದಿನ ಕೆಲ ಕ್ಷಣಗಳಲ್ಲಿ ಒಂದಷ್ಟು ಟೊಮೆಟೊ ಕೀಳಲು ಆರಂಭಿಸುತ್ತಾರೆ. ಸಮೀಪದ ಖರೀದಿ ಕೇಂದ್ರಕ್ಕೆ ಪೂರೈಸಿ ಹಣ ಎಣಿಸಿ ಜೇಬಿನಲ್ಲಿರಿಸಿಕೊಳ್ಳುತ್ತಾರೆ.ಇಂಥವೇ ದೃಶ್ಯಗಳು ಚಿಕ್ಕಬಳ್ಳಾಪುರ, ಹೊಸಕೋಟೆಯಲ್ಲಿಯೂ ಕಾಣಬಹುದು. ಅಲ್ಲಿ ಹಸಿಮೆಣಸು, ಹೂಕೋಸು, ಎಲೆ ಕೋಸುಗಳ ಮಾರಾಟವೂ ಹೀಗೆಯೇ ಆಗುತ್ತದೆ. ಈಗ ರೈತರು ಬಿಸಿಲಲ್ಲಿ ನಿಂತು, ಬಸವಳಿದು, ಮಾರಾಟ ಮಾಡಿ, ಹಣ ಎಣಿಸುವ ದೃಶ್ಯಗಳೇ ಇಲ್ಲಿಲ್ಲ. ಹಾಗೆ ಕೊಂಡೊಯ್ದ ತರಕಾರಿ ಎಲ್ಲಿಗೆ ಹೋಗುತ್ತದೆ? ಸ್ಪಾರ್ ಹೈಪರ್ ಸೂಪರ್ ಮಾರ್ಕೆಟ್‌ಗೆ.ರೈತರನ್ನು ತಮ್ಮ ಖರೀದಿ ಕೇಂದ್ರದತ್ತ ಸೆಳೆಯಲು ಚಾಲ್ತಿಯಲ್ಲಿರುವ ಬೆಲೆಗಿಂತ ಪ್ರತಿ ಕೆ.ಜಿ.ಗೆ ಒಂದೆರಡು ರೂಪಾಯಿಗಳಷ್ಟು ಹೆಚ್ಚು ಬೆಲೆ ನಿಗದಿ ಪಡಿಸಲಾಗುತ್ತದೆ.ಈ ಊರುಗಳಲ್ಲಿ ಒಬ್ಬ ಕ್ಷೇತ್ರ ಅಧಿಕಾರಿಯನ್ನೂ ನೇಮಿಸಲಾಗಿದೆ. ಇವರು ರೈತರು ಹಾಗೂ ಮಾರುಕಟ್ಟೆಯನ್ನು ಬೆಸೆಯುವ ಕೊಂಡಿಗಳಿದ್ದಂತೆ ಕಾರ್ಯ ನಿರ್ವಹಿಸುತ್ತಾರೆ. ಯಾವಾಗ ತರಕಾರಿ ಬೇಕು? ಎಷ್ಟು ಬೇಕು? ಹಣ್ಣು ಪೂರೈಸುವುದು ಯಾವಾಗ? ಮುಂತಾದವುಗಳ ಮಾಹಿತಿಯನ್ನು ರೈತರಿಗೆ ನೀಡುತ್ತಾರೆ.ತೋಟದಿಂದ ನೇರವಾಗಿ ಮಾರುಕಟ್ಟೆಗೆ ಎಂದುಕೊಂಡಿದ್ದರೆ ತಪ್ಪು. ಇಲ್ಲಿ ಇನ್ನೂ ತರಕಾರಿಯನ್ನು ಶುದ್ಧಗೊಳಿಸಲಾಗುತ್ತದೆ. ತಂದು ನೀಡಿರುವ ರಾಶಿಯಿಂದ ತಾಜಾ ತರಕಾರಿಯನ್ನು ಬೇರ್ಪಡಿಸಲಾಗುತ್ತದೆ. ತುಂಬು ಕಡಿದ, ಹುಳ ಹಿಡಿದ, ಸ್ವಲ್ಪ ಹೆಚ್ಚು ಮಾಗಿದಂತೆ ಆಗಿರುವ ತರಕಾರಿಯನ್ನು `ಸೆಗ್ರಿಗೇಷನ್~ ಹಂತದಲ್ಲಿ ಬೇರ್ಪಡಿಸಲಾಗುತ್ತದೆ.  ನಂತರ ವಿಂಗಡಿಸಿದ್ದ ತರಕಾರಿಯನ್ನು  ನೀರಿನಲ್ಲಿ ತೊಳೆದು ಪರಿಶುದ್ಧಗೊಳಿಸಲಾಗುತ್ತದೆ. ತಾಜಾತನ ಹಾಗೂ ಹಣ್ಣು ತರಕಾರಿಗಳ ತೇವಾಂಶ ಉಳಿಯಲು ಪ್ರಿ ಕೂಲಿಂಗ್ ಯಂತ್ರಗಳನ್ನು ಬಳಸಲಾಗುತ್ತದೆ. ಎರಡು ಡಿಗ್ರಿ ತಾಪಮಾನದಲ್ಲಿರಿಸಿ ಇವು ಕೆಡದಂತೆ ಸಂರಕ್ಷಿಸಿ ಇಡಲಾಗುತ್ತದೆ.

 

ಇಷ್ಟೆಲ್ಲ ಹಂತಗಳನ್ನು ಮುಗಿಸಿ ತೋಟದ ತರಕಾರಿ ಫಳಫಳ ಹೊಳೆಯುತ್ತ ಬೆಂಗಳೂರಿನ ಹಾದಿ ಹಿಡಿಯುತ್ತದೆ. ನಗರದ ಸ್ಪಾರ್ ಹೈಪರ್ ಸೂಪರ್ ಮಾರುಕಟ್ಟೆಯಲ್ಲಿ ನಳನಳಿಸುತ್ತದೆ.ರೈತರಿಗೂ ಇದರಿಂದ ಅನುಕೂಲವಾಗಿದೆ. ಮೊದಲೆಲ್ಲ ಇವರು ಕೆ.ಆರ್. ಮಾರುಕಟ್ಟೆಗೆ ತರಕಾರಿ ತಂದು ಮಾರುತ್ತಿದ್ದರು. ಹಲವಾರು ಸಲ ಸಾಗಣೆ ವೆಚ್ಚವೇ ಹೆಚ್ಚಾಗುತ್ತಿತ್ತು. ಮಧ್ಯವರ್ತಿಗಳ ಹಾವಳಿಯಿಂದಾಗಿ ಕೈಗೆ ಬೆಳೆದ ಬಂಡವಾಳ ಬಂದರೂ ಲಾಭವೇ ಎನಿಸುತ್ತಿತ್ತು.ಆದರೆ ಈಗ ಖರೀದಿ ಕೇಂದ್ರ ಊರ ಬಳಿ ಇದೆ. ಸಾಗಣೆ ವೆಚ್ಚ, ಕೂಲಿ ವೆಚ್ಚವೂ ಉಳಿಯುತ್ತಿದೆ. ಖರ್ಚು ಕಳೆದು, ಒಂದಷ್ಟು ಹಣ ಕಾಣುವಂತಾಗಿದೆ ಎನ್ನುತ್ತಾರೆ ರೈತ ಅಂಬರೀಷ್.ಬದಲಾಗುತ್ತಿರುವ ಮಾರುಕಟ್ಟೆಯ ತಂತ್ರಗಳಿಂದಾಗಿ ಗ್ರಾಹಕರ ಮನಃಸ್ಥಿತಿಯೂ ಬದಲಾಗುತ್ತಿದೆ. ರಸ್ತೆಯ ಮೇಲೆ ಸಿಗುವುದೆಲ್ಲವೂ ಸುರಕ್ಷಿತವಲ್ಲ ಎಂದು ಕೊಳ್ಳುವ ಬಲವಿದ್ದವರು ನಂಬಿದ್ದಾರೆ.ಸ್ಪಾರ್ ಹೈಪರ್ ಸೂಪರ್ ಮಾರುಕಟ್ಟೆ ಈ ನಂಬಿಕೆಯ ಲಾಭ ಪಡೆದು, ಶುದ್ಧ ಹಾಗೂ ಸುರಕ್ಷಿತ ತರಕಾರಿ ಹಣ್ಣು ಮಾರಾಟಕ್ಕೆ ಮುಂದಾಗಿದೆ.ಗ್ರಾಹಕರು ತಾವು ಕೊಳ್ಳುವ ಆಹಾರ ಸುರಕ್ಷಿತವಾಗಲಿ ಎಂದು ಬಯಸಿಯೇ ಮಾರುಕಟ್ಟೆಯ ಜಗಲಿ ಮೇಲಿನ ವ್ಯಾಪಾರಕ್ಕಿಂತ ಮಾರ್ಕೆಟ್‌ನ ವ್ಯಾಪಾರಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ.  ಹೀಗಾಗಿ ವ್ಯಾಪಾರ ಚೆನ್ನಾಗಿದೆ ಎನ್ನುತ್ತಾರೆ ಅವರು.ಅದಷ್ಟೇ ಅಲ್ಲ, ರೈತರಿಗೂ ಇದರಿಂದ ಲಭವಾಗಿದೆ. ಅವರ ಬೆಳೆಗೆ ನೈಜ ಬೆಲೆಯನ್ನು ನೀಡುತ್ತೇವೆ. ಅಷ್ಟೇ ಅಲ್ಲ, ಆಸಕ್ತಿಯುಳ್ಳ ರೈತರಿಗೆ ಹೈಬ್ರಿಡ್ ತಳಿಯ ಬೀಜಗಳನ್ನು ನೀಡಿ ಪ್ರೋತ್ಸಾಹಿಸುತ್ತೇವೆ. ರೈತರಿಗೆ ಹೊಸ ಪ್ರಯೋಗಗಳನ್ನು ಕೈಗೊಳ್ಳುವಂತೆ ಮತ್ತು ಮಾರುಕಟ್ಟೆಯ ವ್ಯವಸ್ಥೆ ಮಾಡುತ್ತಿದೆ ಸ್ಪಾರ್ ಎಂದು  ಸ್ಪಾರ್ ಹೈಪರ್ ಮಾರುಕಟ್ಟೆಯ ಬೈಯಿಂಗ್ ಮತ್ತು ಮಾರ್ಚೆಂಡೈಸಿಂಗ್ (ಪುಡ್)ನ ಹಿರಿಯ ಉಪಾಧ್ಯಕ್ಷ ಪೊನ್ನೂ ಸುಬ್ರಹ್ಮಣ್ಯ.ಇದು ರೈತರು ಹಾಗೂ ಮಾರುಕಟ್ಟೆಯ ಮಾತಾಯಿತು. ಆದರೆ ಜನ ಹೇಳುವುದು ಹೀಗೆ:

`ನನಗೆ ಮಾರುಕಟ್ಟೆಗೆ ಹೋಗಿ ಖರೀದಿಸುವಷ್ಟು ಸಮಯವಿಲ್ಲ. ಸೂಪರ್ ಮಾರುಕಟ್ಟೆಗಳಲ್ಲಿ ದಿನಸಿಯೊಂದಿಗೆ ತರಕಾರಿಯೂ ಸೇರಿ ಎಲ್ಲವನ್ನು ಒಂದೇ ಸೂರಿನಲ್ಲಿ ಖರೀದಿ ಮಾಡಬಹುದು. ಹಾಗಾಗಿ ನಾನು ಆದಷ್ಟು ಸೂಪರ್ ಮಾರುಕಟ್ಟೆಗಳಿಗೆ ಆದ್ಯತೆ ನೀಡುತ್ತೇನೆ~ ಎನ್ನುತ್ತಾರೆ ವಿಪ್ರೊದಲ್ಲಿ ಎಂಜಿನಿಯರ್ ಆಗಿರುವ ದಿಶಾ.ಇದಕ್ಕೆ ವಿರುದ್ಧವಾಗಿ `ನನಗೆ ಮಾರುಕಟ್ಟೆಯಲ್ಲಿಯೇ ಖರೀದಿ ಮಾಡಲು ಇಷ್ಟ, ಅಲ್ಲಿ ತಾಜಾತನ ಇರುತ್ತದೆ. ಸೂಪರ್ ಮಾರುಕಟ್ಟೆಯಲ್ಲಿ ಪ್ಯಾಕಿಂಗ್ ಮಾತ್ರ ಮಾಡಲಾಗಿರುತ್ತದೆ, ಅದು ಯಾವಾಗ ತಂದಿರುತ್ತಾರೆ ಎಂಬುದರ ಬಗ್ಗೆ ಗೊತ್ತಾಗುವುದಿಲ್ಲ ಎಂಬುದು ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಸವಿತಾ ಅವರ ಆತಂಕವಾಗಿದೆ. ನಮ್ಮಲ್ಲಿ ಜನರಿಗೆ ಎಲ್ಲವೂ ಪ್ರತಿಷ್ಠೆಯ ವಿಷಯವಾಗಿದೆ. ಸೂಪರ್ ಮಾರ್ಕೆಟ್‌ನಿಂದ ಖರೀದಿ ಮಾಡಿದೆ ಎಂದು ಹೇಳುವುದರಲ್ಲಿಯೇ ಸುಖ ಕಾಣುತ್ತಾರೆ. ಅಲ್ಲಿ ಪ್ಯಾಕೇಟಿಗಂಟಿಸಿದಷ್ಟು ಹಣ ತೆತ್ತು ತರುವವರು, ನಮ್ಮಲ್ಲಿ ಚಿಕ್ಕಾಸಿಗೂ ಚೌಕಾಸಿ ಮಾಡುತ್ತಾರೆ. ಉಳ್ಳವರು ಅಲ್ಲಿಯೇ ಕೊಳ್ಳಲಿ, ಸಂತೋಷ. ನಮ್ಮಲ್ಲಿ ಬಂದು ಚೌಕಾಸಿ ಮಾಡಿದರೆ ನಮಗೂ ನಷ್ಟ. ಅವರ ಸಮಯವೂ ನಷ್ಟ~ ಎನ್ನುತ್ತಾರೆ ಸೊಪ್ಪಿನ ವ್ಯಾಪಾರಿ ನಂಜಮ್ಮ.ಅವರವರ ಇಷ್ಟ ಹಾಗೂ ಸಾಮರ್ಥ್ಯಕ್ಕೆ ತಕ್ಕಂತೆ ಸಂತೆ ಕಟ್ಟೆಯಾದರೂ ಸೈ, ಮಾರುಕಟ್ಟೆಯಾದರೂ ಸೈ... ಹಸಿದವರ ಹೊಟ್ಟೆ ತುಂಬಿಸುವುದಷ್ಟೇ ನಮಗೆ ಗೊತ್ತು ಎನ್ನುವಂತಿತ್ತು ಅವರ ತಳ್ಳುಗಾಡಿಯಲ್ಲಿದ್ದ ಸೊಪ್ಪು ಹಾಗೂ ತರಕಾರಿ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.