ಭಾನುವಾರ, ಮೇ 9, 2021
28 °C
25 ಕವನ : ತುಂಬಿ ತುಳುಕಿದ ತೋಂ ತನನ!

`ಸಂತೆಗೊಂದು ಮೂರು ಮೊಳ: ಚಪ್ಪಾಳೆ ಪ್ಲೀಸ್'

ಹರ್ಷವರ್ಧನ ಪಿ.ಆರ್. / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  `ಸಂತೆಗೊಂದು ಮೂರು ಮೊಳ, ಚಪ್ಪಾಳೆ ಪ್ಲೀಸ್'

-ಗುಲ್ಬರ್ಗ ಜಿಲ್ಲಾ 13ನೆಯ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಭಾನುವಾರ ನಡೆದ `ಯುವ ಕವಿತೆಗಳ ತೋಂ ತನನ...' ಕವಿಗೋಷ್ಠಿಯನ್ನು ಅತಿಥಿ ಮತ್ತು ಆಶಯ ಭಾಷಣಕಾರರು ಸಮಗ್ರವಾಗಿ ಸೆರೆ ಹಿಡಿದದ್ದು ಹೀಗೆ.ಕವಿಗೋಷ್ಠಿಯ ಆಶಯ ಭಾಷಣ ಮಾಡಿದ ಕವಯತ್ರಿ ಜ್ಯೋತಿ ಕುಲಕರ್ಣಿ, `ಕವಿತೆ ಓದುತ್ತಿದ್ದೇನೆ, ಚುಪ್.... ಚಪ್ಪಾಳೆ ತಟ್ಟಿ ಪ್ಲೀಸ್' ಎನ್ನುವಂತಾಗಿದೆ ಇಂದಿನ ಕವಿತೆಗಳ ಪಾಡು. ಕವಿತೆಗಳು ವೈಚಾರಿಕ ಶುಷ್ಕತೆಯಿಂದ ಕೂಡಿದ್ದು, ಭೌತಿಕ ಕಸರತ್ತು ಮಾತ್ರ ಕಾಣುತ್ತದೆ. ಕಾವ್ಯ ವಾಹಿನಿ ಬತ್ತುತ್ತಿದೆ. `ಕುರಿತೋದದೆಯುಂ...' ಎಂದ ನೆಲದಲ್ಲಿ ಓದದವರೇ ಹೆಚ್ಚಾಗುತ್ತಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದರು. ಅತಿಥಿ ಡಾ.ಡಿ.ಬಿ.ನಾಯಕ ಮಾತನಾಡಿ, `ಸಂತೆಗೊಂದು ಮೂರು ಮೊಳ ಎಂಬಂತೆ ಕವಿಗೋಷ್ಠಿಗೆ ಅಥವಾ ಹೊಗಳಿಕೆಗಾಗಿ ಕವಿತೆ ಬರೆಯುವುದೇ ಹೆಚ್ಚಾಗಿದೆ. ಕವಿತೆಯ ಭಾವನೆಯು ಇನ್ನೊಬ್ಬರ ಮನಸ್ಸಿಗೆ ತಲುಪಬೇಕು. ಅದು ವಿದ್ಯುತ್ ಸಂಚಾರ ಉಂಟು ಮಾಡಬೇಕು. ಕಾವ್ಯ ರಚನೆಗೆ ಪ್ರತಿಭೆ ಜೊತೆ ಪ್ರಯತ್ನವೂ ಮುಖ್ಯ. ಅದೊಂದು ಋಷಿ ಯತ್ನ. ಆದರೆ ಇಂದಿನ ಯುವ ಕವಿಗಳಲ್ಲಿ ಆ ಶ್ರಮ ಕಾಣುತ್ತಿಲ್ಲ' ಎಂದರು.`ಕವಿ ಇಂದ್ರೀಯ ಸೂಕ್ಷ್ಮವಾಗಿರಬೇಕು. ಸಮಾಜಕ್ಕೆ ಸ್ಪಂದಿಸಿ ಆಗುಹೋಗುಗಳನ್ನು ಹುಚ್ಚನಂತೆ ಅನುಭವಿಸಬೇಕು. ಕಾವ್ಯವು ಹುಟ್ಟಿನ ಸೆಲೆಯನ್ನು ಮೀರಿ ಹರಿಯಬೇಕು. ಅದಕ್ಕೆ ಕವಿಗಳು ಪರಂಪರೆಯ ತಿಳಿವಳಿಕೆ, ನೆಲದ ಭಾಷಾ ಪರಿಜ್ಞಾನ ರೂಢಿಸಿಕೊಳ್ಳಬೇಕು. ಕಾವ್ಯದ ಹುಟ್ಟಿಗೆ ಆರಂಭ-ಅಂತ್ಯಗಳಿಲ್ಲ' ಎಂದು ವಿವರಿಸಿದರು. ಒಟ್ಟು 25 ಮಂದಿಯ ಪೈಕಿ ಕೆಲವರು ಕವಿತೆ ವಾಚಿಸಿದರೆ, ಹಲವರು ಓದಿದರು, ಉಳಿದವರು ಹಾಡಿದರು. ಯುವತಿಯರು, ಮಹಿಳೆಯರು, ಮದುವೆ, ಭ್ರಷ್ಟಾಚಾರ, ಕನ್ನಡ ಪ್ರೇಮ, ಚುನಾವಣೆಗಳು, ಅಂಬೇಡ್ಕರ್, ಬಸವ, ಬುದ್ಧ, ಉದಾತ್ತ ಚಿಂತನೆಗಳು ಕವಿತೆಗಳ ವಸ್ತುವಾಗಿದ್ದವು.ಗಮನ ಸೆಳೆದ ಕವಿತೆಗಳು:

`ಜಯಮಾಲಿನ ಪ್ರವೇಶದಿಂದ ಶಬರಿ ಮಲೆ ಮಾಲಿನ್ಯ

ಶನಿಭಕ್ತರ ಗುಡಿಗೂ ಮಹಿಳೆಗೆ ಪ್ರವೇಶವಿಲ್ಲ

ದೇವಿ ವಿಗ್ರಹಕ್ಕೂ ಪೂಜಾರಿಯ ಪೂಜೆ

ಗಂಡಿಗೂ ಪ್ರವೇಶವಿಲ್ಲದ ಗುಡಿ ಇದೆಯೇ?

ಹೆಣ್ಣಾಗುವಳು ಮುಟ್ಟು, ಅದೇ ಸೃಷ್ಟಿಯ ಗುಟ್ಟು

ಮಡಿವಂತರು ಹುಟ್ಟಿದಾದರೂ ಹೇಗೆ?...'

`ಮಾಲಿನ್ಯ' ಶೀರ್ಷಿಕೆಯ ಮಂಗಳಾ ಕಪರೆ ಅವರ ಕವಿತೆಯು ಶ್ರೋತೃಗಳ ಮನಕಲಕಿತು. ಮತಾಂಧ ವ್ಯವಸ್ಥೆಯಲ್ಲಿ ನಲುಗುವ ಮಹಿಳೆಯರ ಪಾಡನ್ನು ತೆರೆದಿಟ್ಟರು.

`ಕಲ್ಲರಳಿ ಹೂವಾಗಿ, ಕಲ್ಬುರ್ಗಿ ನಾಡಾಗಿ

ಸಿಮೆಂಟಿನ ಕಾಶಿಯಿದು, ಬಿಸಿಲ ಬುಗ್ಗೆಯಿದು

ಜಿಲ್ಲೆಯ ಚೋರಗುಂಬಜ, ಅದುವೆ ಗೋಲಗುಂಬಜ

ಹಿಂದುಳಿವಿಕೆ ಹಣೆಪಟ್ಟಿ ಅಳಿಸಲು ಸಾಗುತಿದೆ ಹಾರುವ ಹಕ್ಕಿಯ ಪಯಣ,' ಎಂದು ಜಿಲ್ಲೆಯ ಚಿತ್ರಣವನ್ನು ಪರ್ವೀನ್ ಸುಲ್ತಾನ್ ಕವನದಲ್ಲಿ  ಸೆರೆಹಿಡಿದರು.`ದಾಟಿ ಬಾ ಹೊಸ್ತಿಲಲ್ಲಿ, ನೀನೇಕೆ ಕುಳಿತಿರುವೆ ಕೋಣೆಯಲ್ಲಿ, ನೀನಾಗ ಬೇಡ ಸೀತೆ' ಎಂಬ ಕವಿತಾ ಹಳ್ಳಿ ಅವರ ಅರ್ಥಗರ್ಭಿತ ಕವಿತೆಯು ಮಹಿಳೆಯರ ಮೆಚ್ಚುಗೆಯ ಕರಾಡತನ ಪಡೆಯಿತು.ಅರುಣ್ ಕುಮಾರ್ ಲಗಶೆಟ್ಟಿ ಅವರು `ಪ್ರೇಮಪತ್ರ' ಎಂಬ ಚುಟುಕು ವಾಚಿಸಿದರು. `ಪ್ರೇಮಪತ್ರ'ಕ್ಕೆ ಉತ್ತರಿಸಿದ ಗೆಳತಿಯ ಭಾವಚಿತ್ರದಲ್ಲಿ ಇತ್ತು `ಮಂಗಳಸೂತ್ರ' ಎಂದು ಅಂತ್ಯಪ್ರಾಸದ ಮೂಲಕ ಕುಟುಕಿದ ಅವರ ಕವಿತೆಗೆ ಚಪ್ಪಾಳೆ ಸುರಿಮಳೆ ಬಿತ್ತು. ಮಡಿವಾಳಪ್ಪ ನಾಗರಾಳ ಅವರ ಕವಿತೆಯ `ತಾವೇ ಹಂಚಿದ ಸೀರೆಯ ಸೆರಗ ಹಿಡಿದು ಜಗ್ಯಾರೋ...' ಎಂಬ ಸಾಲಿಗೆ ಸಭಿಕರು ತಲೆದೂಗಿದರು. ಶಿವಾನಂದ ಅಣಜಗಿ, ಬಾಬು ಜಾಧವ, ಸಾವಿತ್ರಿ ಶ್ಯಾನಭೋಗ, ರಾಜಕುಮಾರ ಉದನೂರ, ಮಲ್ಲಿನಾಥ ತಳವಾರ, ವೆಂಕಟೇಶ ಜನಾದ್ರಿ, ಸಿದ್ದಣ್ಣ ಕನ್ನಡಗಿ, ಸಂತೋಷ ತೋಟ್ನಳ್ಳಿ, ಸಿ.ಎಸ್.ಮಾಲಿಪಾಟೀಲ, ಶ್ರೀಮಂತ ಅಟ್ಟೂರು, ಲಕ್ಷ್ಮಣ ರಂಜೋಳ್ಕರ, ರಾಜಕುಮಾರ ಸುಂಬಡ, ಕೆ. ಗಿರಿಮಲ್ಲ, ಶರಣಬಸಪ್ಪ ಓಗೆ, ಗೀತಾ ಮೈಲಾಪುರಿ, ಸಾಗರ್ ವಾಗ್ಮೋರೆ, ಜಯಶ್ರೀ ಕುಲಕರ್ಣಿ, ಎಂ.ಬಿ.ನಿಂಗಪ್ಪ, ವಿಜಯಕುಮಾರ್, ಶಿವಶಾಂತರೆಡ್ಡಿ ಮತ್ತಿತರರು ಕವಿತೆ ವಾಚಿಸಿದರು.ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಕವಿ ಎ.ಕೆ.ರಾಮೇಶ್ವರ ಮಾತನಾಡಿ, `ಕವಿಗಳ ಅನುಭವ ಪಕ್ವವಾಗಬೇಕು. ಅದಕ್ಕೆ ತಾಳ್ಮೆ ಬೇಕು. ಆಗ ಕಾವ್ಯ ಹೊಮ್ಮಲು ಸಾಧ್ಯ. ಕವಿಗಳು ಸಮಾಜದ ಮೇಲೆ ಬೆಳಕು ಚೆಲ್ಲಬೇಕು. ಕುವೆಂಪು ಅವರ ಆಶಯದಂತೆ ವಿಶ್ವ ಮಾನವರಾಗಬೇಕು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.