ಸಂತೆಮರಹಳ್ಳಿಯಿಂದ ಪಾದಯಾತ್ರೆ ನಾಳೆ

7
ಚಾಮರಾಜನಗರದಲ್ಲಿ ದಲಿತರ ಮೇಲೆ ಹಲ್ಲೆ

ಸಂತೆಮರಹಳ್ಳಿಯಿಂದ ಪಾದಯಾತ್ರೆ ನಾಳೆ

Published:
Updated:

ಮೈಸೂರು: ಚಾಮರಾಜನಗರ ಜಿಲ್ಲೆಯ ಆಲ್ದೂರಿನಲ್ಲಿ ದಲಿತರ ಮೇಲೆ ಈಚೆಗೆ ನಡೆದ ಹಲ್ಲೆಗೆ ಕಾರಣರಾದ­ವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳು­ವಂತೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಹಾಗೂ ದಲಿತ ಹಕ್ಕುಗಳ ಸಮಿತಿ ಜ. 9ರಂದು ಬೆಳಿಗ್ಗೆ 11ಕ್ಕೆ ಸಂತೆಮರಹಳ್ಳಿಯಿಂದ ಚಾಮರಾಜನಗರದವರೆಗೆ ಪಾದಯಾತ್ರೆ ಹಮ್ಮಿಕೊಂಡಿವೆ.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮಿತಿ ಸದಸ್ಯ ಗೋಪಾಲಕೃಷ್ಣ ಅರಳಹಳ್ಳಿ,

‘ಜ. 2ರಂದು ಆಲ್ದೂರಿನಲ್ಲಿ ನಡೆದ ಶಂಭುಲಿಂಗೇಶ್ವರ ಉತ್ಸವದಲ್ಲಿ ಮೇಲ್ಜಾತಿ ಯುವಕರು ದಲಿತ ಜನಾಂಗದ ಅವಿನಾಶ್, ಆರ್. ಮಹೇಶ್, ನಾಗ ಮತ್ತು ಪುಟ್ಟಮಾದು ಎಂಬುವರ ಮೇಲೆ ವಿನಾಕಾರಣ ಜಗಳ ತೆಗೆದು ಹಲ್ಲೆ ನಡೆಸಿ ಹೊಡೆದು ಕೊಲೆ ಬೆದರಿಕೆ ಹಾಕಿದ್ದಾರೆ.  ಪೆಟ್ಟು ತಿಂದಿರುವ ದಲಿತರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆದರೆ, ಪೊಲೀಸರು ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ’ ಎಂದು ಆರೋಪಿಸಿದರು.‘ದಲಿತರಿಗೆ ನ್ಯಾಯ ಸಿಗಬೇಕು, ಹಲ್ಲೆ ಮಾಡಿದವ­ರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿ ಸಂತೆಮರಹಳ್ಳಿ­ಯಿಂದ ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ­ವರೆಗೆ ಜ. 9ರಂದು ಪಾದಯಾತ್ರೆ ಹಮ್ಮಿಕೊಂಡಿ­ದ್ದು, ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.ಸಿಪಿಎಂನ ಜಿಲ್ಲಾ ಕಾರ್ಯದರ್ಶಿ ಬಸವರಾಜು ಮಾತನಾಡಿ, ‘ಮೈಸೂರು ಗ್ರಾಮಾಂತರ ಹಾಗೂ ಚಾಮರಾಜನಗರದ ಹಲವು ಭಾಗಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗು­ತ್ತಿವೆ. ಆದರೆ, ಆರೋಪಿತರಿಗೆ ಆಗಿರುವ ಶಿಕ್ಷೆಯ ಪ್ರಮಾಣ ಮಾತ್ರ ತೀರಾ ಕಡಿಮೆ’ ಎಂದು ವಿಷಾದ ವ್ಯಕ್ತಪಡಿಸಿದರು.‘ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು 2010ರಲ್ಲಿ 23 ಘಟನೆಗಳು ನಡೆದಿದ್ದರೆ, 2011ರಲ್ಲಿ 30 ಹಾಗೂ 2012ರಲ್ಲಿ 32 ಪ್ರಕರಣಗಳು ನಡೆದಿವೆ. ಕೇವಲ ಇಲ್ಲಿ ಮಾತ್ರವಲ್ಲ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಗದ್ಯಾಳದಲ್ಲಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ, ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಬಡಚಿ ಗ್ರಾಮದಲ್ಲಿ ದಲಿತ ಬಾಲಕಿ ಮೇಲೆ ಅತ್ಯಾಚಾರ ನಡೆಸಲಾಗಿದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ­ದಲ್ಲಿ ದಲಿತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಲಾ­ಗಿದ್ದರೆ, ಪಡುಬಿದ್ರೆಯಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶವನ್ನು ನಿರಾಕರಿಸಲಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹುಸ್ಕೂರಿನ ಎತ್ತಂಬಾಡಿಯಲ್ಲಿ ಕಾಳೇಶ್ವರ ಜಾತ್ರೆಗೆ ಹೋಗುತ್ತಿದ್ದ ದಲಿತರ ಮೇಲೆ ದೌರ್ಜನ್ಯ ನಡೆಸಲಾಗಿದೆ. ರಾಜ್ಯದ ವಿವಿಧೆಡೆ ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯಕ್ಕೆ ವಿರುದ್ಧವಾಗಿ ರಾಜ್ಯದಾದ್ಯಂತ ಪ್ರತಿಭಟನೆ ಕೈಗೊಳ್ಳಲಾ­ಗು­ವುದು’ ಎಂದು ಗೋಪಾಲಕೃಷ್ಣ ಎಚ್ಚರಿಕೆ ನೀಡಿದರು.ಸಮಿತಿಯ ಸಂಚಾಲಕ ಸೋಮಶೇಖರ್, ಕಾರ್ಯಕರ್ತರಾದ ಶೇಖರ್ ಹಾಗೂ ಪುಟ್ಟಮಲ್ಲಯ್ಯ, ದೌರ್ಜನ್ಯಕ್ಕೆ ಒಳಗಾದ ಮಹೇಶ್ ಹಾಗೂ ಪುಟ್ಟಮಾದು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry