ಸಂತೆಯಲ್ಲಿ ಪಕ್ಷಿನೋಟ'

7
ಬ್ಲಾಗಿಲನು ತೆರೆದು...

ಸಂತೆಯಲ್ಲಿ ಪಕ್ಷಿನೋಟ'

Published:
Updated:
ಸಂತೆಯಲ್ಲಿ ಪಕ್ಷಿನೋಟ'

ಸಂತೆಯಲ್ಲಿ ಕಾಯಿಪಲ್ಲೆ ಸಿಗುತ್ತದೆ. ಕುರಿ ಕೋಳಿ ಸಂತೆಯೂ ನಡೆಯುತ್ತದೆ. ಆಧುನಿಕ ಸಂದರ್ಭದಲ್ಲಿ ವಾಹನಗಳ ಸಂತೆಯೂ ನಡೆಯುತ್ತದೆ. ಕರ್ನಾಟಕ ಚಿತ್ರಕಲಾ ಪರಿಷತ್ತು ವರ್ಷಕ್ಕೊಮ್ಮೆ `ಚಿತ್ರಸಂತೆ' ನಡೆಸುತ್ತದೆ. ಈಗ ಪರಿಚಯಿಸುತ್ತಿರುವ ಬ್ಲಾಗ್ ಕೂಡ ಸಂತೆಗೆ ಸಂಬಂಧಿಸಿದ್ದೇ. `ಚಿತ್ರಸಂತೆ' ಇದರ ಹೆಸರು. ಇಲ್ಲಿರುವುದು ಕುಂಚಕರ್ಮಿಗಳ ಕಲಾಕೃತಿಗಳಲ್ಲ- ಛಾಯಾಗ್ರಾಹಕ ಕ್ಲಿಕ್ಕಿಸಿದ ಫೋಟೊಗಳು. ಅವುಗಳ ಚೆಲುವು, ಅರ್ಥ ಸಾಧ್ಯತೆ ನೋಡಿದರೆ ಅವು ಕೂಡ ಕಲಾಕೃತಿಗಳೇ.`ಚಿತ್ರಸಂತೆ' (್ಚಜಿಠಿಜ್ಟಚ್ಞಠಿಛಿ.ಚ್ಝಿಟಜಟಠಿ.ಜ್ಞಿ) ಛಾಯಾಚಿತ್ರಗಳ ಸಂಕಲನ. `ಒಂದಿಷ್ಟು ಚಿತ್ರಗಳ ಸಂಗ್ರಹ, ಸಂಗ್ರಹಕ್ಕೆ ಒಪ್ಪುವಂತಹ ಒಂದು ತಲೆಬರಹ ಹಾಗೂ ಈ ರೀತಿಯಾಗಿ ನೋಡುಗರಿಗೆ ಹೆಚ್ಚು ಮುದ ನೀಡುವ ಆಲೋಚನೆ' ಇದಿಷ್ಟು ಬ್ಲಾಗ್‌ನ ಅಡಿಬರಹ. ಉಳಿದಂತೆ, `ನೋಡಿ ಆನಂದಿಸಿ' ಎನ್ನುವ ಆಹ್ವಾನದೊಂದಿಗೆ ಬ್ಲಾಗಿಗರು ಹಿಂದೆ ಸರಿಯುತ್ತಾರೆ, ಚಿತ್ರಗಳನ್ನು ಮುಂದೆ ಮಾಡುತ್ತಾರೆ. ಚಿತ್ರ ಇದ್ದಲ್ಲಿ ಮಾತಿಗೇನು ಕೆಲಸ?ಸಂತೆಯಲ್ಲಿ ಇರುವುದು ಚಿತ್ರಗಳ ಚಿತ್ತಾರವಾದರೂ, ಆ ಚಿತ್ರಗಳಲ್ಲಿ ಏನೆಲ್ಲ ಇದೆ ಎಂದು ಸಹೃದಯರು ತಲೆದೂಗಬೇಕು. `ಚಿತ್ರಸಂತೆ' ಶೀರ್ಷಿಕೆಗೆ ಹೊಂದಿಕೊಂಡಂತೆ ಕಾಣುವ ಸರಳರೇಖೆಯಂತಹ ಆಯದ ಮೇಲೆ ಕೂತು ತಲೆ ಎತ್ತಿ ನೋಡುತ್ತಿರುವ ಪಕ್ಷಿಯ ಚಿತ್ರವಿದೆ. ಆ ಹಕ್ಕಿ ಮೇಲಿನಿಂದ ಕೆಳಗಣ ಜಗತ್ತನ್ನು ನೋಡುತ್ತಿರುವಂತಿದೆ. ಆ `ಪಕ್ಷಿನೋಟ' ಚಿತ್ರಗಳಲ್ಲೂ ಇದೆ.`ಮುಂಗಾರು ಮಳೆ' ಶೀರ್ಷಿಕೆಯ ಚಿತ್ರಗಳನ್ನು ಗಮನಿಸಿ. ಅಲ್ಲಿ ಮಳೆಯ ಸೊಲ್ಲಿಲ್ಲ. ಗುಡುಗು ಮಿಂಚುಗಳ ರಮ್ಯ ರೋಚಕತೆಯಿಲ್ಲ. ಜೀವನೋತ್ಸಾಹಕ್ಕೆ ರೂಪಕವಾದ ಹಸಿರಿನ ಉತ್ಕರ್ಷವೂ ಭೋರ್ಗರೆವ ನದಿಗಳ ಹರಿವೂ ಇಲ್ಲ. ರೈತನ ಸಂಭ್ರಮವೂ ಇಲ್ಲ. ಇರುವುದು ಕಪ್ಪೆಗಳು! ಮುಂಗಾಲುಗಳ ಮೇಲೆ ಕುಳಿತ ಒಂದು ಕಪ್ಪೆ ಶೂನ್ಯದತ್ತ ದೃಷ್ಟಿ ನೆಟ್ಟಿದೆ. ಅದು ಸುಕ್ಕಾದ ಹೊಲದಲ್ಲಿ ಕುಳಿತು ಮುಗಿಲಿನತ್ತ ಕಣ್ಣು ನೆಟ್ಟ ರೈತನನ್ನು ನೆನಪಿಸುವಂತಿದೆ. ಇನ್ನೊಂದು ಕಪ್ಪೆ ಮೈಯನ್ನು ಹಿಡಿಯಾಗಿಸಿಕೊಂಡು ಬೇಟೆಯ ಮೇಲೆ ಎರಗುವಂತಿದೆ. ಮತ್ತೊಂದು ಪುಟಾಣಿ ಕಪ್ಪೆ ಎಲೆಯೊಂದರ ಮೇಲೆ ಕುಳಿತಿದೆ. ಹೀಗೆ, ನಿರಾಶೆ-ನಿರೀಕ್ಷೆ-ಹೋರಾಟ-ಸಂಭ್ರಮಗಳನ್ನು ಛಾಯಾಚಿತ್ರಗಳು ಕಟ್ಟಿಕೊಡುತ್ತವೆ. ಮಳೆಯೆಂದರೆ ಇದೆಲ್ಲವೂ ಹೌದಲ್ಲವೇ?`ಓಹೋ ಹಿಮಾಲಯ' ಸರಣಿ ಚಿತ್ರಗಳನ್ನು ನೋಡಿ. ಶೀತಲ ಮಂಜು, ಎಂದೂ ತೀರದ ನೀಲಿ, ನೀಲಿಗಿಂತಲೂ ವಿಶಾಲವಾದ ಮುಗಿಲು, ನದಿಯ ಪಾತ್ರ, ಬಣ್ಣಗಳ ಓಕುಳಿ- ಹಿಮಾಲಯದ ಘನತೆ ಮತ್ತು ಸೊಬಗನ್ನು ಚಿತ್ರಗಳು ಅದ್ಭುತವಾಗಿ ಕಟ್ಟಿಕೊಡುತ್ತವೆ. `ಆ ದಿನಗಳು' ಶೀರ್ಷಿಕೆಯಡಿಯಲ್ಲಿ, ಹಿಂದೊಮ್ಮೆ ನಮ್ಮ ಹಿರಿಯರ ದೈನಿಕದ ಭಾಗವಾಗಿದ್ದು ಇದೀಗ ಕಾಲಗರ್ಭಕ್ಕೆ ಸರಿಯುತ್ತಿರುವ ಕೆಲವು ವಸ್ತುಗಳ ಚಿತ್ರಗಳಿವೆ. ಜೀವನಶೈಲಿಯಲ್ಲಿನ ಬದಲಾವಣೆಯನ್ನು ಈ ಚಿತ್ರಪಟ ಧ್ವನಿಸುವಂತಿದೆ.ಮರಳಿ ಮರಳಿ ಒಂದೇ ಸ್ಥಳದಲ್ಲಿ ಬಂದು ಕೂರುವ ಪಶ್ಚಿಮ ಘಟ್ಟದಲ್ಲಿನ ಕೆಲವು ಕೀಟಗಳ ಚಿತ್ರಗಳೂ ಸಂತೆಯಲ್ಲಿವೆ. ಇವುಗಳ ವರ್ಣ ವಿನ್ಯಾಸದ ಚೆಲುವು ಪಶ್ಚಿಮ ಘಟ್ಟಗಳ ಅನನ್ಯತೆಯನ್ನು ಸಾರುವಂತಿದೆ. `ಬೆಟ್ಟದ ಮೇಲೊಂದು ಮನೆಯ ಮಾಡಿ' ಚಿತ್ರದಲ್ಲಿ ಬೆಟ್ಟಗಳೂ ಕೋಟೆ ಬುರುಜುಗಳೂ ಇವೆ. ನೆರಳು-ಬೆಳಕಿನ ಚಮತ್ಕಾರದ ಸರಣಿ ಚಿತ್ರಗಳೂ ಇವೆ.ಚಿತ್ರಸಂತೆಯಲ್ಲಿನ ಛಾಯಾಚಿತ್ರಗಳು ತಮ್ಮ ಸಂಯೋಜನೆಯಿಂದ ಗಮನಸೆಳೆಯುತ್ತವೆ. ಚಿತ್ರಗಳ ಹಿನ್ನೆಲೆಯಲ್ಲಿ ಬ್ಲಾಗಿಗರ ಅಭಿರುಚಿ ಮತ್ತು ಪ್ರಯೋಗಶೀಲತೆಯನ್ನು ಅಂದಾಜು ಮಾಡಬಹುದು. ತೆರೆದಷ್ಟೂ ಇರುವ ಚಿತ್ರಪಟ ಸಹೃದಯರ ಮನಸ್ಸಿನೊಳಗೇ ಬೆಳೆಯುತ್ತದೆ. ಅಂದಹಾಗೆ, ಈ ಬ್ಲಾಗಿನ ಪ್ರತಿ ಚಿತ್ರದ ಮೇಲೂ ಕೃಷ್ಣಭಟ್ ಎನ್ನುವ ರುಜುವಿದೆ. ಹಾಗಾಗಿ, ಈ ಬ್ಲಾಗನ್ನು `ಸಂತೆಯಲ್ಲಿನ ಪಕ್ಷಿನೋಟ' ಅಥವಾ `ಭಟ್ಟರ ಪಕ್ಷಿನೋಟ' ಎನ್ನಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry