ಸಂತೇಮರಹಳ್ಳಿ ಪ್ರವಾಸಿ ಮಂದಿರ ಅನಾಥ

7

ಸಂತೇಮರಹಳ್ಳಿ ಪ್ರವಾಸಿ ಮಂದಿರ ಅನಾಥ

Published:
Updated:
ಸಂತೇಮರಹಳ್ಳಿ ಪ್ರವಾಸಿ ಮಂದಿರ ಅನಾಥ

ಸಂತೇಮರಹಳ್ಳಿ:ಲೋಕೋಪಯೋಗಿ ಇಲಾಖೆಗೆ ಸೇರಿದ ಅತಿಥಿ ಗಣ್ಯರ ಪ್ರವಾಸಿ ಮಂದಿರ ಉದ್ಘಾಟನೆಗೊಂಡು ಒಂದು ವರ್ಷ ಕಳೆದಿದ್ದರೂ ನಿರ್ವಹಣೆ ಇಲ್ಲದೆ ಅನಾಥವಾಗಿದೆ.ಇಲ್ಲಿನ ಚಾಮರಾಜನಗರ ರಸ್ತೆಯಲ್ಲಿರುವ ಪ್ರವಾಸಿ ಮಂದಿರದ ಸಮೀಪದಲ್ಲಿ ಹೆಚ್ಚುವರಿಯಾಗಿ ನೂತನವಾಗಿ ಅತಿಥಿ ಗಣ್ಯರ ಪ್ರವಾಸಿ ಮಂದಿರಕ್ಕೆ 2006 ರಲ್ಲಿ ಅಂದಿನ ಸಂತೇಮರಹಳ್ಳಿ ಶಾಸಕ ಆರ್.ಧ್ರುವನಾರಾಯಣ್ 40 ಲಕ್ಷ ರೂ. ವೆಚ್ಚದಲ್ಲಿ ಪ್ರವಾಸಿ ಮಂದಿರದ ಕಟ್ಟಡದ ಶಂಕುಸ್ಥಾಪನೆ ಮಾಡಿದ್ದರು. ಕಟ್ಟಡದ ಕಾಮಗಾರಿ ಮುಗಿದು ಒಂದು ವರ್ಷದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಪ್ರವಾಸಿ ಮಂದಿರದ ಉದ್ಘಾಟನೆ ಮಾಡಿದರು.ಆದರೆ, ಪ್ರವಾಸಿ ಮಂದಿರದ ನಿರ್ವಹಣೆಗೆ ಇಲಾಖೆ ಮುಂದಾಗಿಲ್ಲ. ಕಟ್ಟಡವು ಸುಸಜ್ಜಿತವಾಗಿದೆ. 8 ಕೊಠಡಿಗಳನ್ನು ಹೊಂದಿದ್ದು 2 ಸಭಾಂಗಣವನ್ನು ಹೊಂದಿದೆ. ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ. ಕೊಳವೆ ಬಾವಿ ಕೊರೆಯಿಸಲಾಗಿದ್ದು ಪೈಪ್ ಲೈನ್ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಸೋಲಾರ್ ಸಹಾ ಅಳವಡಿಸಲಾಗದೆ. ಕನಿಷ್ಟ ಕಟ್ಟಡದ ರಕ್ಷಣೆಗಾಗಿ ನೌಕರರನ್ನು ನೇಮಿಸಿಲ್ಲ.ಬಿಡಾಡಿ ದನಗಳು, ನಾಯಿಗಳು ಪ್ರವಾಸಿ ಮಂದಿರದ ಮುಂಭಾಗ ಆಶ್ರಯ ತಾಣ ಮಾಡಿಕೊಂಡಿವೆ. ಹಕ್ಕಿ ಪಕ್ಷಿಗಳು ತೆರೆದ ಕಿಟಕಿಗಳ ಮುಖಾಂತರ ಒಳಗಡೆ ಆಶ್ರಯ ಪಡೆದುಕೊಂಡಿವೆ. ಹುಳ ಹುಪ್ಪಟೆಗಳು ಹರಿದಾಡುತ್ತಿವೆ. ಪ್ರವಾಸಿ ಮಂದಿರಕ್ಕೆ ಸುತ್ತುಗೋಡೆ ವ್ಯವಸ್ಥೆ ಇಲ್ಲದ ಪರಿಣಾಮ ಮಳೆಗಾಲದಲ್ಲಿ ದನ, ಆಡು, ಕುರಿ ಕಾಯುವವರಿಗೆ ಆಶ್ರಯ ತಾಣವಾಗಿದೆ.ಪ್ರಸ್ತುತ ಇರುವ ಪ್ರವಾಸಿ ಮಂದಿರದಲ್ಲಿ 4 ಕೊಠಡಿಗಳು ಮಾತ್ರ ಲಭ್ಯವಿದೆ. ಹೆಚ್ಚಿನ ಅಧಿಕಾರಿಗಳು ಉಳಿದುಕೊಳ್ಳವ ಸಂದರ್ಭ ಒದಗಿ ಬಂದರೇ ಕೊಠಡಿಗಳಿಗಾಗಿ ಪರದಾಡುವಂತಹ ಪರಿಸ್ಥಿತ್ಥಿ ನಿರ್ಮಾಣವಾಗುತ್ತದೆ. ಜಿಲ್ಲಾ ಕೇಂದ್ರ ಚಾಮರಾಜನಗರದ ಪ್ರವಾಸಿ ಮಂದಿರಕ್ಕೂ ಅಧಿಕಾರಿಗಳು ಎಡತಾಕುವಂತಾಗಿದೆ. ಈ ಪರಿಸ್ಥಿತಿಯನ್ನು ತಪ್ಪಿಸಲು ಲಭ್ಯವಿರುವ ನೂತನ ಪ್ರವಾಸಿ ಮಂದಿರದ ನಿರ್ವಹಣೆ ಮಾಡಬೇಕಾಗಿದೆ ಎಂದು ಅಧಿಕಾರಿಗಳು ದೂರುತ್ತಾರೆ.   ಸರ್ಕಾರದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪ್ರವಾಸಿ ಮಂದಿರ ಕಟ್ಟಲಾಗಿದೆ. ನಿರ್ವಹಣೆ ಇಲ್ಲದಿದ್ದರೇ ದುಸ್ಥಿತಿಯಾಗುತ್ತದೆ. ಇದನ್ನು ತಪ್ಪಿಸಲು ಇಲಾಖೆ ಎಚ್ಚೆತ್ತು ನಿರ್ವಹಣೆ ಮಾಡಬೇಕು ಎಂದು ಗ್ರಾಮದ ಮುಖಂಡ ಮಹೇಶ್ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry