ಸಂತ್ರಸ್ತರ ನಿಧಿ: ಹಣ ತಲುಪಲು 14 ವರ್ಷ!

7

ಸಂತ್ರಸ್ತರ ನಿಧಿ: ಹಣ ತಲುಪಲು 14 ವರ್ಷ!

Published:
Updated:

ಬೆಂಗಳೂರು: ಓಡಿಶಾದಲ್ಲಿ 1999ರ ಅಕ್ಟೋಬರ್‌ ತಿಂಗಳಿನಲ್ಲಿ ಸಂಭವಿಸಿದ್ದ ಚಂಡಮಾರುತದ ಸಂತ್ರಸ್ತರಿಗೆ ನೀಡಲೆಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು  ನೌಕರರ ಒಕ್ಕೂಟ ಸಂಗ್ರಹಿಸಿದ್ದ ರೂ. 17 ಲಕ್ಷ ಸಂತ್ರಸ್ತರನ್ನು ತಲುಪಲು 14 ವರ್ಷ ಹಿಡಿದಿದೆ!

ಮಾಹಿತಿ ಹಕ್ಕು ಕಾಯ್ದೆಯಡಿ ಉಮಾಪತಿ ಎಂಬುವರು ಪಡೆದ ದಾಖಲೆಗಳಿಂದ ಈ ವಿಷಯ ಬೆಳಕಿಗೆ ಬಂದಿದೆ.ಚಂಡಮಾರುತದಿಂದ ತೊಂದರೆ ಗೊಳಗಾದವರಿಗೆ ಹಣ ತಲುಪಿಸುವ ಉದ್ದೇಶದಿಂದ 1999ರ ಅಕ್ಟೋಬರ್‌ 13ರಂದು ಒಕ್ಕೂಟದ ಅಂದಿನ ಪ್ರಧಾನ ಕಾರ್ಯದರ್ಶಿ ಎಂ.ಅಂಜಲಿ, ಸಂತ್ರಸ್ತರ ಪರಿಹಾರ ನಿಧಿಗೆ ಹಣ ನೀಡುವಂತೆ ಎಲ್ಲ ನೌಕರರಿಗೆ ಮನವಿ ಪತ್ರ ಕಳುಹಿಸಿದ್ದರು.ನಿಧಿಗೆ ಒಂದು ದಿನದ ಸಂಬಳವನ್ನು ನೀಡುವಂತೆ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕರೂ ಅಧಿಸೂಚನೆ ಹೊರಡಿಸಿದ್ದರು. ಅದರಂತೆ ಬ್ಯಾಂಕ್‌ನ ಎಲ್ಲ ನೌಕಕರಿಂದ ಒಟ್ಟು ರೂ. 17 ಲಕ್ಷ ಹಣ ಸಂಗ್ರಹವಾಗಿತ್ತು. ಆ ನಂತರ ಈ ಹಣ ಒಕ್ಕೂಟದ ಖಾತೆಯಲ್ಲೇ 14 ವರ್ಷ ಉಳಿದಿತ್ತು.‘ಪರಿಹಾರ ನಿಧಿಯ ಹಣವನ್ನು 14 ವರ್ಷಗಳ ಕಾಲ ನೌಕರರ ಒಕ್ಕೂಟ ತನ್ನ ಖಾತೆಯಲ್ಲೇ ಉಳಿಸಿಕೊಂಡು ಹಣವನ್ನು ದುರುಪಯೋಗ ಪಡಿಸಿಕೊಳ್ಳಲು ಹೊಂಚು ಹಾಕಿತ್ತು. ರೂ. 17 ಲಕ್ಷ ಮೊತ್ತಕ್ಕೆ 14 ವರ್ಷಗಳಿಗೆ ಬಡ್ಡಿ ಲೆಕ್ಕ ಹಾಕಿದರೆ ಕನಿಷ್ಠ ರೂ. 14 ಲಕ್ಷ ಹಣ ಬರುತ್ತಿತ್ತು. ಹಣವನ್ನು ಸಂತ್ರಸ್ತರಿಗೆ ತಲುಪಿಸದೇ ನೌಕರರ ಒಕ್ಕೂಟ ವಿನಾ ಕಾರಣ ವಿಳಂಬ ಮಾಡಿದೆ’ ಎಂದು ರಾಜ್ಯ ಮಾಹಿತಿಹಕ್ಕು  ಒಕ್ಕೂಟದ ಉಪಾಧ್ಯಕ್ಷ ಎಸ್‌.ಉಮಾಪತಿ ಆರೋಪಿಸಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಬಿಎಂ ನೌಕರರ ಒಕ್ಕೂಟದ ಅಧ್ಯಕ್ಷ ಈರಣ್ಣಯ್ಯ, ‘ಉದ್ದೇಶ ಪೂರ್ವಕವಾಗಿ ನಿಧಿಯ ಹಣವನ್ನು 14 ವರ್ಷಗಳ ಕಾಲ ಇಟ್ಟುಕೊಂಡಿಲ್ಲ. ನಿಧಿಯ ಹಣದಿಂದ ಓಡಿಶಾದ ಗ್ರಾಮವೊಂದರಲ್ಲಿ ಶಾಲೆಯ ಕಟ್ಟಡವನ್ನು ನಿರ್ಮಿಸಲು ಒಕ್ಕೂಟ ನಿರ್ಧರಿಸಿತ್ತು. ಆದರೆ, ಈ ಬಗ್ಗೆ ಹಲವು ಬಾರಿ ಪ್ರಯತ್ನಿಸಿದರೂ ನಾವು ಶಾಲಾ ಕಟ್ಟಡ ನಿರ್ಮಿಸುವ ಕಾರ್ಯ ಕೈಗೂಡಲಿಲ್ಲ’ ಎಂದು ತಿಳಿಸಿದರು.‘ನಂತರ ಈ ಹಣವನ್ನು ಅಲ್ಲಿನ ಸ್ವಯಂಸೇವಾ ಸಂಸ್ಥೆಯೊಂದಕ್ಕೆ ನೀಡಬೇಕೆಂದು ಯೋಚಿಸಿದೆವು, ಆದರೆ, ಅಲ್ಲಿನ ಸ್ವಯಂಸೇವಾ ಸಂಸ್ಥೆಗಳಲ್ಲಿ ಪ್ರಾಮಾಣಿಕತೆ ಇಲ್ಲ ಎಂಬ ಅಭಿಪ್ರಾಯ ಕೇಳಿಬಂತು. ಹೀಗಾಗಿ ಹಣವನ್ನು ಯಾರಿಗೆ ನೀಡಬೇಕೆಂಬ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಆದರೆ, ಅಂತಿಮವಾಗಿ ಈ ವರ್ಷದ ಫೆಬ್ರುವರಿಯಲ್ಲಿ ರೂ. 17 ಲಕ್ಷ ಮೊತ್ತದ ಚೆಕ್‌ ಅನ್ನು ಪ್ರಧಾನಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ಕಳುಹಿಸಲಾಗಿದೆ. ನಿಧಿಯ ಹಣವನ್ನು ಕಬಳಿಸುವ ಯಾವುದೇ ಉದ್ದೇಶ ಒಕ್ಕೂಟಕ್ಕಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry