ಬುಧವಾರ, ಆಗಸ್ಟ್ 4, 2021
26 °C

ಸಂತ್ರಸ್ತರ ಮನೆಗಳಿಗೆ ಜನಪ್ರತಿನಿಧಿಗಳ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಲ್ಕಿ: ತಾಲ್ಲೂಕಿನ ಕೋಸಂ ಗ್ರಾಮದಲ್ಲಿ ಭಾರೀ ಬಿರುಗಾಳಿ ಮತ್ತು ಮಳೆಯಿಂದಾಗಿ ಭಾನುವಾರ ಸಂಜೆ ಹಾನಿಗೊಳಗಾದ ಮನೆಗಳಿಗೆ ಸೋಮವಾರ ಹಲವು ಗಣ್ಯರು, ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದ ಶಾಲೆಯ ಬಳಿ ಜಮಾಯಿಸಿದ್ದ ಸಂತ್ರಸ್ಥರಿಗೆ ಶಾಸಕ ಈಶ್ವರ ಖಂಡ್ರೆ ಹಣ್ಣು ಹಂಪಲುಗಳನ್ನು ನೀಡಿ ಸಾಂತ್ವನ ಹೇಳಿದರು. ಗ್ರಾಮದಲ್ಲಿನ ನೂರಾರು ಮನೆಗಳ ತಗಡುಗಳು ಹಾರಿದ್ದು, ಆಹಾರ ಧಾನ್ಯಗಳೆಲ್ಲ ನೀರು ಪಾಲಾಗಿದ್ದುದನ್ನು ಸಂತ್ರಸ್ಥರು ಶಾಸಕರಿಗೆ ತೋರಿಸಿ ಕಣ್ಣೀರಿಟ್ಟರು.ಬಟ್ಟೆ ಬರೆಗಳು, ಪಾತ್ರೆ ಪಗಡೆಗಳು, ದಿನ ಬಳಕೆಯ ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಊರ ಮುಂದಿನ ಸರ್ಕಾರಿ ಪ್ರೌಢಶಾಲೆ ಮತ್ತು ಮಂದಿರದ ಬಳಿಯ ಬೃಹತ್ ಮರಗಳು ಮುರಿದು ಬಿದ್ದಿದ್ದವು.ಹಲವೆಡೆಯ ವಿದ್ಯುತ್ ಕಂಭಗಳು ನೆಲಕ್ಕೆ ಒರಗಿದ್ದವು. ಇವುಗಳನ್ನೆಲ್ಲಾ ನೋಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕುಶಾಲ ಪಾಟೀಲ ಗಾದಗಿ, ಶಾಸಕ ಈಶ್ವರ ಖಂಡ್ರೆ ಅವರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದರು.ಕೂಡಲೇ ಹಾನಿಗೀಡಾದ ಆಸ್ತಿ ಪಾಸ್ತಿಯ ಬಗ್ಗೆ ವರದಿ ಸಿದ್ಧಪಡಿಸುವಂತೆ ಸ್ಥಳದಲ್ಲಿದ್ದ ಸಹಾಯಕ ಆಯುಕ್ತ ಪ್ರಸನ್ನಕುಮಾರ ಮತ್ತು ತಹಸೀಲ್ದಾರ ಅವರಿಗೆ ತಿಳಿಸಿದರು.ಆದಷ್ಟು ಬೇಗನೆ ನೆಲಕ್ಕುರುಳಿದ ವಿದ್ಯುತ್ ಕಂಭಗಳನ್ನು ಎತ್ತಿ ತಂತಿಗಳನ್ನು ಜೋಡಿಸಬೇಕು. ತಕ್ಷಣವೇ ಗ್ರಾಮದಲ್ಲಿ ವಿದ್ಯುತ್ ಸರಬರಾಜು ಮಾಡುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.ಸ್ಥಳದಲ್ಲಿಯೇ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದು ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವಂತೆ ತಿಳಿಸಿದರು. ತಾಪಂ ಅಧ್ಯಕ್ಷ ಅಂಬಣ್ಣ ವಗದಾಳೆ, ಜಿಪಂ ಸದಸ್ಯೆ ಮಂಗಲಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.