ಸಂತ್ರಸ್ತ ಕುಟುಂಬಗಳಿಗೆ ಪರಿಹಾರ: ಆಗ್ರಹ

7

ಸಂತ್ರಸ್ತ ಕುಟುಂಬಗಳಿಗೆ ಪರಿಹಾರ: ಆಗ್ರಹ

Published:
Updated:

ಶಿಡ್ಲಘಟ್ಟ: ಗ್ರಾಮ ಪಂಚಾಯಿತಿ ಚುನಾವಣೆ ವೇಳೆಯಲ್ಲಿ ನಕಲಿ ಮದ್ಯ ಸೇವಿಸಿ ಮೃತಪಟ್ಟ ಸಂತ್ರಸ್ತ ಕುಟುಂಬದವರಿಗೆ ಒಂದು ವರ್ಷವಾದರೂ ಪರಿಹಾರ ಮತ್ತು ಪುನರ್ವಸತಿ ಸೌಲಭ್ಯವನ್ನು ಕಲ್ಪಿಸಲು ತಾಲ್ಲೂಕು ಮಟ್ಟದ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು ಆರೋಪಿಸಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಪರಿಶಿಷ್ಟಜಾತಿ ಮತ್ತು ಪಂಗಡದ ಹಿತರಕ್ಷಣಾ ಸಭೆಯಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರು ಮಾತನಾಡಿ, ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ ಪ್ರಕಟಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಗ್ರಹಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಮೇಲೂರು ಮಂಜುನಾಥ್ ಮಾತನಾಡಿ,‘ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿ ಗ್ರಾಮದಲ್ಲಿ ದಲಿತರನ್ನು ಸಜೀವ ದಹನ ಮಾಡಿದಾಗ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿತ್ತು. ಅದೇ ಮಾದರಿಯಲ್ಲಿ ನಕಲಿ ಮದ್ಯ ಸೇವಿಸಿ ಮೃತಪಟ್ಟಿರುವವರ ಕುಟುಂಬಗಳಿಗೆ ವಸತಿ ಸೌಲಭ್ಯ ಸಹಿತ ಸೂಕ್ತ ಪರಿಹಾರ ಕಲ್ಪಿಸಬೇಕು’ ಎಂದರು. ಶೇ. 18ರಿಂದ 22ರಷ್ಟು ಅನುದಾನ ಮೀಸಲಿಟ್ಟರೂ ಇನ್ನೂ ಬಹುತೇಕ ದಲಿತರ ಕಾಲೋನಿಗಳು ಮೂಲಸೌಕರ್ಯಗಳಿಂದ ವಂಚಿತವಾಗಿವೆ. ಪೊಲೀಸ್ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಳ್ಳಿಯ ದಲಿತರ ಕಾಲೋನಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಠಿಕಾಣಿ ಹೂಡಿರುವ ‘ಡಿ’ ಗ್ರೂಪ್ ನೌಕರರನ್ನು ಕೂಡಲೇ ಸ್ಥಳಾಂತರಿಸಿ ಆಸ್ಪತ್ರೆಯನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ತಹಶೀಲ್ದಾರ್ ಮಲ್ಲಿಕಾರ್ಜುನ್ ಮಾತನಾಡಿ, ‘ತಾಲ್ಲೂಕಿನಲ್ಲಿ ದಲಿತರಿಗೆ ಮೀಸಲಾಗಿರುವ ಸ್ಮಶಾನದ ಜಾಗ ಒತ್ತುವರಿಯಾಗಿದ್ದರೆ ತೆರವುಗೊಳಿಸಲಾಗುವುದು. ಸರ್ಕಾರಿ ಕೆರೆ ಅಥವಾ ರಾಜಕಾಲುವೆಯಲ್ಲಿ ದಲಿತರು ಶವ ಸಂಸ್ಕಾರ ಮಾಡಬಾರದು. ಸರ್ಕಾರಿ ಗೋಮಾಳದಲ್ಲಿ  ಶವಸಂಸ್ಕಾರಕ್ಕೆ ಜಾಗ ಮೀಸಲಿಡಲಾಗುವುದು’ ಎಂದರು.ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಅಮರನಾಥ್, ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಎನ್.ರಮೇಶ್, ಸಮಾಜ ಕಲ್ಯಾಣಾಧಿಕಾರಿ ರಾಧಾಕೃಷ್ಣಯ್ಯ, ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರ ನರಸಿಂಹಮೂರ್ತಿ, ಪಿಡಬ್ಲುಡಿ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹದೇವಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಂಠ, ಸಿಡಿಪಿಒ ವೆಂಕಟೇಶ್‌ರೆಡ್ಡಿ, ಕೃಷಿ ಸಹಾಯಕ ನಿರ್ದೇಶಕ ರಾಘವೇಂದ್ರ, ದಲಿತ ಸಂಘಟನೆಗಳ ಮುಖಂಡರಾದ ಮೇಲೂರು ಮಂಜುನಾಥ್, ಮುನಯ್ಯ, ದ್ಯಾವಕೃಷ್ಣಪ್ಪ, ಗಂಜಿಗುಂಟೆ ನರಸಿಂಹಮೂರ್ತಿ, ನಾರಾಯಣಪ್ಪ, ವೆಂಕಟೇಶ್, ಬಿ.ಕೆ.ದ್ಯಾವಪ್ಪ, ಮುನಿರಾಜು, ಸಿ.ಎಂ.ಮುನಿಯಪ್ಪ, ಲಕ್ಷ್ಮಣರಾಜು, ತಿರುಮಲೇಶ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry