ಸಂತ್ರಸ್ತ ಕುಟುಂಬಗಳಿಗೆ ಶಾಪವಾದ ಬುದ್ದಿನ್ನಿ ಕೆರೆ

7

ಸಂತ್ರಸ್ತ ಕುಟುಂಬಗಳಿಗೆ ಶಾಪವಾದ ಬುದ್ದಿನ್ನಿ ಕೆರೆ

Published:
Updated:
ಸಂತ್ರಸ್ತ ಕುಟುಂಬಗಳಿಗೆ ಶಾಪವಾದ ಬುದ್ದಿನ್ನಿ ಕೆರೆ

ಲಿಂಗಸುಗೂರ(ಮುದಗಲ್ಲ): ದಶಕದ ಹಿಂದೆಯೆ ತಾಲ್ಲೂಕಿನ ಬುದ್ದಿನ್ನಿ ಗ್ರಾಮಕ್ಕೆ ಹೊಂದಿಕೊಂಡು ಕೆರೆ ನಿರ್ಮಿಸಲು ಮುಂದಾದಾಗ ರೈತರು ವಿರೋಧ ವ್ಯಕ್ತಪಡಿಸಿದ್ದರು. ರೈತರ ವಿರೋಧದ ಮಧ್ಯೆಯು ಸಣ್ಣ ನೀರಾವರಿ ಇಲಾಖೆ 1.30ಕೋಟಿ ಹಣದಲ್ಲಿ ಕೆರೆಯನ್ನು ನಿರ್ಮಿಸಲಾಯಿತು.ಯಾವ ಉದ್ದೇಶದಿಂದ ಕೆರೆ ನಿರ್ಮಾಣಗೊಂಡಿತೊ ಆ ಸದಾಶಯ ಈಡೇರದೆ, ಸಂತ್ರಸ್ತ ಕುಟುಂಬಗಳಿಗೂ ಶಾಪವಾಗಿ ಪರಿಗಣಿಸಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಇಲಾಖೆ ಕಾರ್ಯವೈಖರಿ ಬಗ್ಗೆ ಖೇದ ವ್ಯಕ್ತಪಡಿಸಿದ್ದಾರೆ.ಕಳೆದ 2002ರ ಅವಧಿಯಲ್ಲಿ ನೊಟಿಫಿಕೇಷನ್ ಜಾರಿ ಮಾಡಿ ರೈತರ ವಿರೋಧದ ಮಧ್ಯೆಯು 56ಕ್ಕೂ ಹೆಚ್ಚು ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸಹಾಯಕ ಆಯುಕ್ತ ಕಚೇರಿ ಎಕರೆಗೆ ಕೇವಲ ರೂ. 37ಸಾವಿರದಂತೆ ಭೂ ಪರಿಹಾರ ನೀಡಿತು.

 

ಅದನ್ನು ಪ್ರಶ್ನಿಸಿ ಸಿವಿಲ್ ನ್ಯಾಯಾಲಯದ ಮೊರೆ ಹೋದಾಗ ನ್ಯಾಯಾಲಯ ಹೆಚ್ಚುವರಿಯಾಗಿ ಪ್ರತಿ ಎಕರೆಗೆ ರೂ. 90ಸಾವಿರದಂತೆ ಭೂ ಪರಿಹಾರ ನೀಡಲು ಆದೇಶ ಮಾಡಿದೆ. ನ್ಯಾಯಾಲಯದ ಆದೇಶಕ್ಕೂ ಭೂ ಪರಿಹಾರ ನೀಡದೆ ಹೋಗಿರುವುದು ಸಂತ್ರಸ್ತ ಕುಟುಂಬಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಆರೋಪಿಸಿದ್ದಾರೆ.ತೆರೆಬಾವಿ, ಬುದ್ದಿನ್ನಿ ಗ್ರಾಮಗಳ 20ಕ್ಕೂ ಹೆಚ್ಚು ಕುಟುಂಬಗಳು ದಶಕ ಕಳೆದರು ಪೂರ್ಣ ಪ್ರಮಾಣದ ಭೂ ಪರಿಹಾರ ದೊರಕದೆ ಕಂಗಾಲಾಗಿ ಅಲೆದಾಡುತ್ತಿದ್ದಾರೆ. ಗುಡಿಹಾಳದಲ್ಲಿ ಕೆಂಪು ಮಣ್ಣಿಗಾಗಿ 4ಎಕರೆ, ಬಿಸಿ ಸ್ವಾಯಿಲ್ (ಕಪ್ಪುಮಣ್ಣು)ಗಾಗಿ ಪ್ರತ್ಯೇಕ 2ಎಕರೆ ಜಮೀನು ಕೂಡ ಸ್ವಾಧೀನ ಪಡಿಸಿಕೊಳ್ಳಲಾಗಿದೆ.ಇದ್ಯಾವುದಕ್ಕೂ ಯಾವೊಂದು ಇಲಾಖೆ ಅಧಿಕಾರಿಗಳು ಸ್ಪಂದಿಸದೆ ಹೋಗಿದ್ದರಿಂದ ಭೂಮಿ ಕಳೆದುಕೊಂಡ ರೈತರು ಇತ್ತ ಭೂಮಿಯು ಇಲ್ಲ, ಅತ್ತ ಉಳಿದ ರೈತರಿಗೂ ಅನುಕೂಲವಾಗದ ಕೆರೆ ಕಂಡು ಮರಗುವಂತಾಗಿದೆ ಎಂದು ಸಂತ್ರಸ್ತ ರೈತ ರಾಘವೇಂದ್ರ ಜೋಷಿ ಖೇದ ವ್ಯಕ್ತಪಡಿಸಿದ್ದಾರೆ.ಭಾಗಶಃ ರೈತರಿಗೆ ಕೆರೆಯ ಕೆಳಭಾಗದ ಅಂದಾಜು 156 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಭರವಸೆಯು ಸುಳ್ಳಾಗಿದೆ. 2004ರಲ್ಲಿ ಕೆರೆ ಕಾಮಗಾರಿ ಪೂರ್ಣಗೊಂಡಿದ್ದರು ಕೂಡ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಕೆರೆ ತುಂಬಿದ ನೆನಪು ಇಲ್ಲ. ರೈತರಿಗೆ ಪರಿಹಾರವು ಇಲ್ಲ. ಕನಸು ಕಂಡಿದ್ದ ರೈತರ ಜಮೀನಿಗೆ ನೀರು ಹರಿಸುವ ಕಾಲುವೆ ನಿರ್ಮಿಸದೆ ಇಡಿ ರೈತ ಸಮೂಹವನ್ನು ಕತ್ತಲೆಯಲ್ಲಿ ಇರಿಸಿ ಕೆರೆ ನಿರ್ಮಿಸಲಾಗಿದೆ ಎಂದು ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.ಕೆರೆ ಪೂರ್ಣಗೊಂಡ ಮೊದಲ ವರ್ಷವೆ ಕೆರೆ ತೂಬಿನ ಗೋಡೆ ಕುಸಿದಿದೆ. ಕೆರೆ ಕೋಡಿ ಹಾಗೂ ಮಣ್ಣಿನ ಏರಿಯಲ್ಲಿ ಅಲ್ಲಲ್ಲಿ ಸೋರಿಕೆ ಕಾಣಿಸಿಕೊಂಡಿದೆ. ಕಳೆದ 8 ವರ್ಷಗಳಿಂದ ಕೆರೆ ನಿರ್ವಹಣೆಗೆಂದು ಪ್ರತಿ ವರ್ಷ ಲಕ್ಷಾಂತರ ಹಣ ಖರ್ಚು ಹಾಕಲಾಗಿದೆ.ಆದಾಗ್ಯೂ ಬಿರುಕು ಬಿಟ್ಟ, ಸೋರಿಕೆ ಕಾಣಿಸಿಕೊಂಡ ಯಾವೊಂದು ದುರಸ್ತಿ ಕಾರ್ಯ ಕೈಗೊಂಡಿಲ್ಲ. ಮುಳ್ಳುಕಂಟಿಗಳ ಬೆಳೆದು ಹೆಮ್ಮರವಾಗಿವೆ. ಉತ್ತಮ ಮಳೆ ಬಿದ್ದರೆ ಮಣ್ಣಿನ ಏರಿ ಕೊಚ್ಚಿ ಗ್ರಾಮಕ್ಕೆ ತೊಂದರೆ ಆಗುವ ಭೀತಿಯಲ್ಲಿ ಕಾಲ ಕಳೆಯುತ್ತಿದ್ದೇವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry