ಸಂತ ಶಿಕ್ಷಕನ ಪಾದಗಳಿಗೆ ನಮೋ ನಮಃ

7

ಸಂತ ಶಿಕ್ಷಕನ ಪಾದಗಳಿಗೆ ನಮೋ ನಮಃ

Published:
Updated:

ಅಣ್ಣಿಗೇರಿ: ಅದೊಂದು ಅಪರೂಪದ ಸಮಾರಂಭ. ಈ ಕಾಲದ ಶಿಕ್ಷಣ ಕ್ಷೇತ್ರದ ವಿಸ್ಮಯ. 84ರ ಇಳಿವಯಸ್ಸಿನವರೆಗೂ ವಿದ್ಯಾರ್ಥಿಗಳಿಗಾಗಿಯೇ ತಮ್ಮ ಇಡೀ ಬದುಕನ್ನೇ ಸವೆಸಿದ, ಸವೆಸುತ್ತಿರುವ ಜೀವಂತ ದಂತ ಕಥೆಯಾಗಿರುವ ಸಂತ ಶಿಕ್ಷಕ ಬಿ.ಜಿ. ಅಣ್ಣಿಗೇರಿ ಅವರನ್ನು ಕಣ್ತುಂಬಿಕೊಂಡು ಅವರ ಚರಣ ಕಮಲಗಳಿಗೆ ಹಣೆಮಣಿದು ಧನ್ಯತೆಯ ಭಾವ ಅನುಭವಿಸಿದರು

.

ಶಿಕ್ಷಕರ ದಿನಾಚರಣೆಯ ಈ ಅಪರೂಪದ ಕ್ಷಣಗಳಿಗೆ ಕಾರಣರಾದವರು ಸ್ಥಳೀಯ ನಿಂಗಮ್ಮ ಎಸ್. ಹೂಗಾರ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು.ತಾವೂ ವಿದ್ಯಾರ್ಥಿಯಾಗಿ ಅಣ್ಣಿಗೇರಿ ಸರ್ ಅವರನ್ನು ಸನ್ಮಾನಿಸಿ ಶಿಕ್ಷಕರ ದಿನವನ್ನು ಆಚರಿಸಿದ ಕಾಲೇಜಿನ ಪ್ರಾಚಾರ್ಯ ಎಸ್.ಎಸ್. ಹರ್ಲಾಪೂರ ಮಾತನಾಡಿ, ಎಲ್ಲ ಸ್ತ್ರೀಯರನ್ನು ತಾಯಿಯಂತೆ ಕಂಡ, ಬಡವ, ಕೆಳ ವರ್ಗದ ಮಕ್ಕಳನ್ನು ಪ್ರೀತಿಯಿಂದ ಅಪ್ಪಿಕೊಂಡ, ಇನ್ನೊಬ್ಬರ ಬಗ್ಗೆ ಎಂದೂ ಹಗುರವಾಗಿ ಮಾತನಾಡದ, ಅಧ್ಯಾತ್ಮವನ್ನು ತಮ್ಮ ಬದುಕಿನ ಭಾಗವಾಗಿಸಿಕೊಂಡು ಬದುಕಿದ ಮಹಾತ್ಮ ಅಣ್ಣಿಗೇರಿ ಗುರುಗಳು ಈ ಕಾಲದ ಅಚ್ಚರಿ ಎಂದರು.ತಮ್ಮ ಅಸ್ಖಲಿತ, ಕಂಚಿನ ಕಂಠದಿಂದ ನಿರರ್ಗಳವಾಗಿ ಮಾತನಾಡಿದ ಅಣ್ಣಿಗೇರಿ ಗುರುಗಳು ಇದು ಪವಿತ್ರ ದಿನ. ಶಿಕ್ಷಕ ಎಂದರೆ ದೇವರೇ. ಆ ಪರಮಾತ್ಮನ ಈ ದಿನವನ್ನು  ಆಚರಿಸುವವರು ನೀವು ದೇವರೇ. ನಾನು ಆದರ್ಶ ಅಲ್ಲ. ನಾನಿಲ್ಲಿ ವಿದ್ಯಾರ್ಥಿಯಾಗಿ ಬಂದೆ, ಶಿಕ್ಷಕನಾಗಿ ಅಲ್ಲ. ಇಷ್ಟೊತ್ತು ಹೊಗಳಿಸಿಕೊಂಡವನು ನಾನು ಹೌದೋ ಅಲ್ಲೋ ಗೊತ್ತಿಲ್ಲ. ಕಲ್ಲನ್ನೇ ಕಟೆದು ದೇವರೆಂದು ಭಾವಿಸುವಾಗ ನಮ್ಮಲ್ಲೇ ದೇವರಿದ್ದಾನೆ ಎಂದು ತಿಳಿದುಕೊಳ್ಳಬೇಕು ಆದರ್ಶ ಇದ್ದವನು ಐದು ತಪ್ಪು ಮಾಡಿದರೆ ಇಲ್ಲದವನು ಐದು ಸಾವಿರ ತಪ್ಪು ಮಾಡುತ್ತಾನೆ ಎಂದರು.ಶಿಕ್ಷಕರ ದಿನಾಚರಣೆ ಇಂದಿನ ವಿದ್ಯಾರ್ಥಿಗಳು ಹೇಳುವಂತೆ ಸಿಕ್ಕ ಸಿಕ್ಕವರ ಆಚರಣೆಯಾಗುತ್ತಿದೆ. ವಿದ್ಯಾರ್ಥಿಗಳೇ ನಿಜವಾದ ಇನ್‌ಸ್ಪೆಕ್ಟರ್‌ಗಳು. ಒಳ್ಳೆಯ ಗುರುಗಳ ಬಗ್ಗೆ ಅವರು ತಮ್ಮ ಹೃದಯದಲ್ಲಿ ಬರೆದುಕೊಂಡಿರುತ್ತಾರೆ. ಮಕ್ಕಳಿಗೆ ಆದರ್ಶ ಪುರುಷರ ಕಥೆ ಬೇಡ. ಅವರಿಗೆ ಅವರನ್ನು ಜೀವಂತ ತೋರಿಸಿ ಎಂದರು.ಮಕ್ಕಳು ಬೇರೆಯವರಂತೆ ಆಗ ಬೇಕಾಗಿಲ್ಲ. ನೀವು ನೀವಾಗಿ. ದುರ್ಗುಣ ಹೋದಾಗ ದೇವರಾಗುತ್ತೀರಿ ಎಂದು ವಿದ್ಯಾರ್ಥಿಗಳಿಗೆ ಹೇಳಿದ ಅಣ್ಣಿಗೇರಿ ಸರ್, ನಾನು ಆರ್ಡಿನರಿ ಮನುಷ್ಯ ಎಂದು ಕೊನೆಗೆ ನುಡಿದರು.ಮಾಜಿ ಶಾಸಕ ಡಿ.ಆರ್. ಪಾಟೀಲ ಅಣ್ಣಿಗೇರಿ ಗುರುಗಳ ಆಶೀರ್ವಾದ ಪಡೆದುಕೊಂಡರು. ಮಲ್ಲಿಕಾರ್ಜುನ ಸುರಕೋಡ, ಚಂಬಣ್ಣ ಹುಬ್ಬಳ್ಳಿ, ಶಿವಯೋಗಿ ಹುಬ್ಬಳ್ಳಿ,  ವೇದಾ ಕಟ್ಟಿ, ಫರೀದಾ ಹಾಜರಿದ್ದರು.`ಓದುವ ಹವ್ಯಾಸ ಮೈಗೂಡಿಸಿಕೊಳ್ಳಿ'

ನವಲಗುಂದ: ಶಿಕ್ಷಕರು ತಮ್ಮ ವೃತ್ತಿಯನ್ನು ಗೌರವಿಸಬೇಕು. ಸತತವಾಗಿ ಓದುವ ಹವ್ಯಾಸವನ್ನು ಮೈಗೂಡಿಸಿಕೊಂಡು ಮಕ್ಕಳಿಗೆ ಕಥೆ ಹೇಳುವ ಕಲೆಯನ್ನು ಯಾವ ಶಿಕ್ಷಕರು ಬೆಳೆಸಿಕೊಳ್ಳುತ್ತಾರೆಯೋ ಅವರು ಉತ್ತಮ ಶಿಕ್ಷಕರಾಗುವರು' ಎಂದು ನಿವೃತ್ತ ಆಯುಕ್ತ ವೆಂಕಟೇಶ ಮಾಚಕನೂರ ಅಭಿಪ್ರಾಯಪಟ್ಟರು.ಅವರು  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಇಲ್ಲಿಯ ಹುರಕಡ್ಲಿ ಅಜ್ಜನವರ ಪುಣ್ಯಾಶ್ರಮದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರ ಜನ್ಮದಿನಾಚರಣೆ ಹಾಗೂ ಗುರುವಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಮಾತೃಭಾಷೆ ಶಿಕ್ಷಣದಿಂದ ಮಕ್ಕಳನ್ನು ವಂಚಿಸುತ್ತಿರುವುದರಿಂದ ಭಾಷೆಯ ಅಳಿವು ದೂರವಿಲ್ಲ. ಶೇ 80ರಷ್ಟು ಶಾಲೆಗಳು ಆಂಗ್ಲಮಯವಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ನಗರ ಹಾಗೂ ಗ್ರಾಮೀಣ ಶಿಕ್ಷಣದಲ್ಲಿರುವ ತಾರತಮ್ಯವನ್ನು ಹೋಗಲಾಡಿಸಿ ಮಾತೃಭಾಷೆಗೆ ಒತ್ತುಕೊಡಬೇಕೆಂದು ಕರೆ ನೀಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎನ್.ಎಚ್. ಕೋನರಡ್ಡಿ `ನಮ್ಮನ್ನು ತಿದ್ದಿ ತಿಡಿ ಕಲಿಸಿದ ಶಿಕ್ಷಕರನ್ನು ಸ್ಮರಿಸುವ ದಿನ ಇದಾಗಿದೆ. ಕಲಿಸಿದ ಗುರುಗಳನ್ನು ಯಾವತ್ತು ಮರೆಯಬಾರದು. ಅಷ್ಟೇ ಶಿಕ್ಷಕರೂ ಕೂಡ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಸದಾ ಶ್ರಮಿಸಿ ತಾಲ್ಲೂಕಿನ ಕೀರ್ತಿ ಹೆಚ್ಚಾಗುವಂತೆ ಮಾಡಬೇಕು' ಎಂದು ಸಲಹೆ ನೀಡಿದರು.ಜಿ.ಪಂ. ಉಪಾಧ್ಯಕ್ಷರಾದ ಫಕ್ಕೀರಪ್ಪ ಜಕ್ಕಣ್ಣವರ, ಜಿ.ಪಂ. ಸದಸ್ಯರಾದ ಶಾಂತಾ ನಿಡವಣಿ, ಸುರೇಶ ಗಾಣಿಗೇರ, ತಾ.ಪಂ. ಅಧ್ಯಕ್ಷ ಮಲ್ಲನಗೌಡ ರಾಟಿಮನಿ, ತಾ.ಪಂ. ಇಒ ಎಂ.ಎಂ. ಸದತ್ತಿ, ಮುಖ್ಯಾಧಿಕಾರಿ ಎ.ಸಿ. ಮಠದ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ನಿಂಗಪ್ಪ ಬಾರಕೇರ, ನೌಕರರ ಸಂಘದ ಅಧ್ಯಕ್ಷ ಬಿ.ಎಚ್. ಪಾಟೀಲ, ನಿವೃತ್ತ ಶಿಕ್ಷಕರಾದ ಎಫ್.ಎಚ್. ಜಾಧವ, ಬಿ.ಬಿ. ಉಳ್ಳಾಗಡ್ಡಿ, ಎಸ್.ಎಸ್. ಸೌದಾಗರ, ಎನ್.ವೈ. ಮಲ್ಲಾಪೂರ ಮೊದಲಾದವರು ಉಪಸ್ಥಿತರಿದ್ದರು.ಗಾಯತ್ರಿ ದೇಶಪಾಂಡೆ ಪ್ರಾರ್ಥನಾ ಗೀತೆ ಹಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಮಾಯಾಚಾರಿ ಸ್ವಾಗತಿಸಿದರು. ಎ.ಬಿ. ಕೊಪ್ಪದ ನಿರೂಪಿಸಿದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry