ಸಂದರ್ಶನವಷ್ಟೇ ಅಲ್ಲ; ಅಭಿಮಾನ ದರ್ಶನ!

7

ಸಂದರ್ಶನವಷ್ಟೇ ಅಲ್ಲ; ಅಭಿಮಾನ ದರ್ಶನ!

Published:
Updated:
ಸಂದರ್ಶನವಷ್ಟೇ ಅಲ್ಲ; ಅಭಿಮಾನ ದರ್ಶನ!

ಥಳುಕು ಬಳುಕು

ಮುಂಬೈ ಹೊರವಲಯದ ಕಚ್ಚಾರಸ್ತೆ. ಮೈಗಂಟಿದ ಬಿಗಿ ಟಿ-ಶರ್ಟ್ ತೊಟ್ಟಿದ್ದ ಸಲ್ಮಾನ್ ಖಾನ್ ಬಿರಬಿರನೆ ನಡೆಯುತ್ತಿದ್ದರೆ, ಅವರ ಹೆಜ್ಜೆಯ ವೇಗಕ್ಕೆ ಹೊಂದಿಕೊಳ್ಳಲು ಪಕ್ಕದಲ್ಲಿದ್ದ ಸುದ್ದಿಮಿತ್ರರು ಪರದಾಡುತ್ತಿದ್ದರು. ಸೂರ್ಯ ಕಣ್ಣುಬಿಟ್ಟು ಮೂರು ತಾಸಾಗಿತ್ತು. ಸಲ್ಮಾನ್ ಖಾನ್ ಫಾರ್ಮ್‌ಹೌಸ್ ತಲುಪುವುದು ನಡಿಗೆಯ ಗುರಿ.ಅದಿದ್ದದ್ದು ಇನ್ನೂ ಎಂಟು ಕಿ.ಮೀ. ದೂರದಲ್ಲಿ. ಸಲ್ಮಾನ್ ಖಾನ್ ಸಂದರ್ಶನ ಪಡೆಯುವ ತಮ್ಮ ನಿರ್ಧಾರದ ಬಗೆಗೆ ಸುದ್ದಿಮಿತ್ರರು ಆ ಕ್ಷಣದಲ್ಲಿ ಪೇಚಾಡಿಕೊಂಡದ್ದು ಸುಳ್ಳಲ್ಲ. `ಬೀದಿಗಿಳಿದಾಗಿದೆ; ಬೆವರೇನು, ಕಾಲುನೋವೇನು~ ಎಂದುಕೊಂಡು ಸುಮ್ಮನಾದದ್ದಾಯಿತು.

 

ಸಲ್ಮಾನ್ ನಡೆಯುತ್ತಲೇ ಆಡುವ ಮಾತುಗಳನ್ನು ರೆಕಾರ್ಡ್ ಮಾಡಿಕೊಳ್ಳುವ ಜರೂರು ಅವರಿಗೆ. ನೋಟ್‌ಪ್ಯಾಡ್‌ನಲ್ಲಿ ಬರೆದುಕೊಳ್ಳುವ ಮಾತಂತೂ ದೂರ. ರೆಕಾರ್ಡರನ್ನು ತಾವೇ ಹಿಡಿದುಕೊಳ್ಳುವಷ್ಟು ಸಲ್ಮಾನ್ ಔದಾರ್ಯ ತೋರಿದಾಗ ಸುದ್ದಿಮಿತ್ರರಿಗೆ ನಿರಾಳ. ಈ ಸಂದರ್ಶನ ನಿಗದಿಯಾದದ್ದು ಒಂದು ವಾರ ಮೊದಲು. ಮೊದಲೇ ಕೇಳಲಾಗುವ ಪ್ರಶ್ನೆಗಳ ಪಟ್ಟಿಯನ್ನು ಕೊಡುವಂತೆ ಸಲ್ಮಾನ್ ಕೇಳಿದಾಗ ಇದೇ ಸುದ್ದಿಮಿತ್ರರು ದಂಗುಬಡಿದುಹೋಗಿದ್ದರು.

 

ಸ್ಟಾರ್ ಸಂದರ್ಶನ ಸಿಗುವುದೇ ದುರ್ಲಭವಾಗಿರುವ ದಿನಗಳಲ್ಲಿ ಪ್ರಶ್ನೆಗಳ ಪಟ್ಟಿ ಕಳುಹಿಸದೆ ಅವರಿಗೆ ವಿಧಿಯೇ ಇರಲಿಲ್ಲ. ಸರಿಯಾಗಿ ಎರಡು ತಾಸು ಚಿಂತಿಸಿ ಪ್ರಶ್ನೆಗಳ ಪಟ್ಟಿ ಬಿಡುಗಡೆ ಮಾಡಿದ್ದಾಯಿತು. ಆ ಪಟ್ಟಿಯನ್ನು ಇ-ಮೇಲ್ ಮೂಲಕ ಪಡೆದ ಸಲ್ಮಾನ್ ಸಹಾಯಕರು ಅದರ ಪ್ರಿಂಟ್‌ಔಟ್ ತೆಗೆದು ಶೂಟಿಂಗ್‌ನ ಬಿಡುವಿನ ವೇಳೆ ಕೈಗಿಟ್ಟರು.ಇನ್ನೂ ಮೂರು ಪ್ರಶ್ನೆಗಳನ್ನು ಸೇರಿಸಬಹುದೆಂಬ ಸಲಹೆ ಸಲ್ಮಾನ್ ಕಡೆಯಿಂದ ಬಂದಾಗಲಂತೂ ಸುದ್ದಿಮಿತ್ರರಿಗೆ `ಇದೆಂಥಾ ಗತಿ ಬಂತಪ್ಪಾ~ ಅನ್ನಿಸಿತು. ಆದರೆ ಸಹೋದ್ಯೋಗಿಗಳು `ಅದು ಸ್ಟಾರ್ ನಟ ತನ್ನ ಬಗೆಗೆ ತೆಗೆದುಕೊಳ್ಳುವ ಕಾಳಜಿಯಷ್ಟೇ; ತಪ್ಪೇನಿಲ್ಲ~ ಎಂದು ಸಾಂತ್ವನ ಹೇಳುವ ಧಾಟಿಯಲ್ಲಿ ಮಾತನಾಡಿದರು. ಹೊಳೆದದ್ದು ತಾರೆ, ಉಳಿದದ್ದು ಆಕಾಶ ಎಂಬ ಮಾತು ಆ ಜಾಣ ಸುದ್ದಿಮಿತ್ರರ ತಲೆಯಲ್ಲೊಮ್ಮೆ ಮಿಂಚಿ ಮಾಯವಾಗಿರಬೇಕು.

 ಹಾಗೆ ಸಿಕ್ಕ ಸಂದರ್ಶನದ ಅವಕಾಶ ನಡಿಗೆಯ ನಡುವಿನ ಮಾತಾಗುತ್ತದೆ ಎಂಬ ಅರಿವಂತೂ ಸುದ್ದಿಮಿತ್ರರಿಗೆ ಇರಲೇ ಇಲ್ಲ. ಸಲ್ಮಾನ್ ಕಾರನ್ನು ಕಂಡ ಅವರು ಸಂದರ್ಶನ ಅಲ್ಲೇ ನಡೆದೀತು ಎಂದೇ ಭಾವಿಸಿದ್ದರು.

 

ಆದರೆ ಸ್ಟಾರ್ ನಟನ ಉಮೇದೇ ಬೇರೆ. ಕಾರಿನಿಂದ ಇಳಿದವರೇ ಕೈಲಿದ್ದ ರಿಮೋಟಿನ ಗುಂಡಿ ಅದುಮಿ ಲಾಕ್ ಮಾಡಿದರು. `ಸಂದರ್ಶನದ ಅನುಭವ ಬೇರೆ ಥರ ಇರಲಿ. ನನ್ನ ಜೊತೆ ನಡೆಯುತ್ತಾ ಬನ್ನಿ. ಹಾಗೆಯೇ ಪ್ರಶ್ನೆ ಕೇಳಿ~ ಎಂದು ತಾಕೀತನ್ನೇ ಪ್ರೀತಿ ಬೆರೆಸಿದ ಧಾಟಿಯಲ್ಲಿ ಹೇಳಿದ ಸಲ್ಮಾನ್, ಎಂಟು ಕಿ.ಮೀ. ವಾಕಿಂಗ್‌ಗೆ ಸಂದರ್ಶನಾಕಾಂಕ್ಷಿ ಪತ್ರಕರ್ತರನ್ನು ಬಲವಂತವಾಗಿ ಎಳೆದುಬಿಟ್ಟಿದ್ದರು.ಎರಡೆರಡು ಹೆಜ್ಜೆಯ ನಡುವೆ `ಭಾಯಿಜಾನ್~, `ಸಲ್ಮಾನ್ ಜೀ~, `ಸಲ್ಲೂ ಭಾಯ್~, `ಹಲೋ ಸಲ್ಮಾನ್ ಖಾನ್~, `ಹಾಯ್ ಸಲ್ಮಾನ್... ಹಾಯ್~ ಹೀಗೆ ಅಭಿಮಾನಿಗಳಿಂದ ಹೃದಯದ ಮಾತು. ಪ್ರಮುಖ ರಸ್ತೆಯ ಪಕ್ಕ ಸಾಗುವಾಗಲಂತೂ ಟ್ರಾಫಿಕ್ ಸಿಗ್ನಲ್‌ನ ಹಸಿರು ದೀಪ ಹೊತ್ತಿದರೂ ಕಾರುಗಳು ಮುಂದೆ ಹೊರಡದೆ ಸಲ್ಮಾನ್ ದರ್ಶನಕ್ಕೆ ನಿಂತಲ್ಲೇ ನಿಂತುಬಿಟ್ಟವು.

 

ಏನಾಗುತ್ತಿದೆ ಎಂದು ನೋಡಲು ಬಂದ ಟ್ರಾಫಿಕ್ ಪೊಲೀಸ್ ಕೂಡ ತಮ್ಮಿಷ್ಟದ ನಟನ ಹಸ್ತಾಕ್ಷರ ಪಡೆದು ಮುಖವನ್ನು ಮೊರದಗಲ ಮಾಡಿ ನಿಂತರು. ಕಟ್ಟಿಕೊಂಡಿದ್ದ ಟ್ರಾಫಿಕ್ ಸರಾಗವಾಗುವಂತೆ ಮಾಡಲು ಅವರಿಗೆ ಆಮೇಲೆ ಹತ್ತು ನಿಮಿಷ ಬೇಕಾಯಿತು. ಅಷ್ಟರಲ್ಲಿ ಸಲ್ಮಾನ್ ಹಾಗೂ ಪತ್ರಕರ್ತರ ಮ್ಯಾರಥಾನ್ ವಾಕಿಂಗ್ ಆ ರಸ್ತೆ ದಾಟಿ ಸಾಕಷ್ಟು ಮುಂದೆ ಸಾಗಿತ್ತೆನ್ನಿ.ತಲೆಗೆ ಸ್ನಾನ ಮಾಡಿ ಕೂದಲನ್ನು ಗಾಳಿ ಜೊತೆ ಮಾತಿಗಿಳಿಬಿಟ್ಟಿದ್ದ ಷೋಡಶಿಯೊಬ್ಬಳು ಸೀದಾ ಬಂದವಳೇ ತನ್ನ ಟಿ-ಶರ್ಟ್ ಮೇಲೆತ್ತಿ ಹೊಟ್ಟೆ ಮೇಲೆ ಹಸ್ತಾಕ್ಷರ ಹಾಕುವಂತೆ ದುಂಬಾಲುಬಿದ್ದಳು. ಸಲ್ಮಾನ್ ಆ ಕೋರಿಕೆಯನ್ನು ಈಡೇರಿಸದೆ ಬುದ್ಧಿವಾದ ಹೇಳಿ, `ಹುಚ್ಚು ಹುಡುಗೀರು~ ಎಂಬ ಉದ್ಗಾರ ತೆಗೆದು ಮುಂದಡಿ ಇಟ್ಟರು.ಹೀಗೆ ಅಭಿಮಾನಿಗಳ ಆರಾಧನೆಯ ವಿವಿಧ ನಮೂನೆಗಳನ್ನು ಕಂಡಮೇಲೆ ಸುದ್ದಿಮಿತ್ರರಿಗೆ ಸ್ಟಾರ್ ಅಂದರೆ ಹೀಗಿರಬೇಕು ಅನ್ನಿಸಿತು. ಆಮೇಲೆ ಸಂದರ್ಶನ ಮುಂದುವರಿಯಿತು. ಸಲ್ಮಾನ್ ಸೇರಿಸುವಂತೆ ಸೂಚಿಸಿದ ಪ್ರಶ್ನೆಗಳೂ ಅದರಲ್ಲಿದ್ದವು.`ನಾನೂ ಮದುವೆಯಾಗುತ್ತೇನೆ, ಬೇಟೆಯಾಡುವುದನ್ನು ಬಿಟ್ಟಿದ್ದೇನೆ, ಕುಡಿದು ಕಾರು ಓಡಿಸಿ ಜೈಲಿಗೆ ಹೋಗಿಬಂದ ಮೇಲೆ ಮತ್ತೆ ಅಂಥ ಕೆಲಸ ಮಾಡುತ್ತಿಲ್ಲ, ಕತ್ರಿನಾ ನನಗೆ ಒಳ್ಳೆಯ ಗೆಳತಿ, ನಿಜವಾದ ಸೂಪರ್ ಸ್ಟಾರ್ ಅಂದರೆ ಅಮೀರ್ ಖಾನ್, ವಯಸ್ಸಾದಷ್ಟೂ ನಾವು ದೈಹಿಕವಾಗಿ, ಮಾನಸಿಕವಾಗಿ ಗಟ್ಟಿಯಾಗಬೇಕು...~ ಇಂಥ ಚೆಲ್ಲಾಪಿಲ್ಲಿ ಮಾತುಗಳು ಪ್ರಕಟವಾದ ಸಲ್ಮಾನ್ ಸಂದರ್ಶನದಲ್ಲಿದ್ದವು.

 

ಈ ಪ್ರಶ್ನೆಗಳಿಗೆ ಉತ್ತರ ಪಡೆಯಲು ಎಂಟು ಕಿ.ಮೀ. ನಡೆದದ್ದಾದರೂ ಯಾಕೆ ಎಂದು ಪತ್ರಕರ್ತರು ಸಾಕಷ್ಟು ಚಿಂತಿಸಿದರು. ತಮಗೆ ಅಭಿಮಾನಿಗಳ ಆರಾಧಾನಾಭಾವದ ದರ್ಶನ ಮಾಡಿಸಲು ಸ್ಟಾರ್ ನಟ ಹೂಡಿದ ತಂತ್ರ ಅದೆಂಬುದು ಹೊಳೆಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಅವರು ಬರೆದ ಈ ಸವಿವರ ಸಂದರ್ಶನ ಓದಿದ ನಂತರ ಸಲ್ಮಾನ್‌ಗೆ ಪ್ರಶ್ನೆಗಳನ್ನು ಕೇಳಲು ಅನೇಕರು ಯೋಚಿಸತೊಡಗಿದ್ದಾರಂತೆ.  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry