ಸಂದರ್ಶನ: ಗಾಯ ಅವಿತಿಟ್ಟು ಓದು ಮುಗಿಸಿದ್ದೆ

7

ಸಂದರ್ಶನ: ಗಾಯ ಅವಿತಿಟ್ಟು ಓದು ಮುಗಿಸಿದ್ದೆ

Published:
Updated:
ಸಂದರ್ಶನ: ಗಾಯ ಅವಿತಿಟ್ಟು ಓದು ಮುಗಿಸಿದ್ದೆ

ಚಿತ್ರದುರ್ಗ ಜಿಲ್ಲೆಯ ಸಿಂಗಾಪುರದಿಂದ ಹೊರಟ ಕರುವೊಂದು ಕಾವ್ಯದ ಕೆಚ್ಚಲು ಚೀಪುತ್ತಾ ಬೆಳೆದದ್ದು ಒಂದು ಬೆರಗು. ಆ `ಕರು~ವೇ ಪ್ರೊ.ಎಸ್.ಜಿ.ಸಿದ್ಧರಾಮಯ್ಯ. `ಮಾರ್ಗ~ದ ಹೊಲದಲ್ಲಿ ದೇಸಿ ಬೀಜಗಳನ್ನು ಬಿತ್ತಿ, ಚಳವಳಿಗಳ ಜೋರು ಹೊಳೆಯಲ್ಲಿ ಅರಿವಿನ ತೆಪ್ಪ ಹಿಡಿದು ಸಾಗಿದವರು ಅವರು. `ಗಾಲ್ಫ್ ಉಬ್ಬಿನ ಮೇಲೆ~, `ಕಾಡುವ ಬೇಲಿ ಹೂ~, `ಅವಳೆದೆಯ ಜಂಗಮ~, `ಸೊಲ್ಲು ಫಲವಾಗಿ~, `ಮರುಜೇವಣಿ~, `ಕರೆಬಳಗ~, `ಬೀದಿ ಅಲ್ಲಮ~, `ಉರಿವ ಬತ್ತಿ ತೈಲ~  ಕವನ ಸಂಕಲನಗಳು ಹಾಗೂ `ಅರಿವು ನಾಚಿತ್ತು~ ನೂರೊಂದು ಪ್ರತಿಕ್ರಿಯಾತ್ಮಕ ರಚನೆಗಳು ಅವರ ಕಾವ್ಯ ಪ್ರಭೆಯನ್ನು ಸಾರಿವೆ. ನಾಟಕ, ವಿಮರ್ಶೆಗಳಿಂದಲೂ ಗಮನ ಸೆಳೆದ ಅವರು ಈಗ `ಕಾಲಕಣ್ಣಿಯ ಹಂಗು~ ಸಮಗ್ರ ಕಾವ್ಯದೊಂದಿಗೆ ನಾಡಿನ ಮುಂದಿದ್ದಾರೆ. ಮಣ್ಣ ಘಮದ ಅವರ ಅರವತ್ತೈದು ವರ್ಷಗಳ ಬದುಕು ಹಾಗೂ ನಲವತ್ತು ವರ್ಷಗಳ ಕಾವ್ಯ ಜೀವನವನ್ನು ಹೊಕ್ಕಾಗ...

`ಕಾಲ ಕಣ್ಣಿಯ ಹಂಗಿ~ನಲ್ಲಿ ನಿಂತು ನೋಡುವಾಗ ಏನನ್ನಿಸುತ್ತಿದೆ?

ನಮ್ಮ ಮನೆಯಲ್ಲಿದ್ದ  ಹಸುವೊಂದನ್ನು ಮಾರಾಟ ಮಾಡಿದೆವು. ಆದರೆ ಆರು ತಿಂಗಳಾದ ಮೇಲೆ ಅದು ಮತ್ತೆ ತನ್ನದೇ ಗೊಂತಿಗೆ ಬಂತು. ಈ ಹೊತ್ತಿನಲ್ಲಿ ಇದು ತುಂಬಾ ನೆನಪಾಗುತ್ತಿದೆ.ಬರೆದದ್ದನ್ನೆಲ್ಲ ಮತ್ತೆ

ಓದುವುದೆಂದರೆ;

ಹಲವು ಗೊಂತಿಗಳಲ್ಲಿ ಹುಲ್ಲು ತಿಂದು

ಹಾಲು ಕರೆದ ಹಸುವೊಂದು

ಹೊಸ ಗೊಂತಿಯ ಗೂಟದ ಕಣ್ಣಿ ಹರಕೊಂಡು

ಹಳೆಗೊಂತಿಗಳ ನೆನಪಿನಲ್ಲಿ ಮತ್ತೆ

ಹಕ್ಕೆಗಳನ್ನರಸಿ ಬಂದಂತೆ`ಹಿಂದಣ ಅನಂತವನು ಮುಂದಣ ಅನಂತವನು ಒಂದು ದಿನ ಒಳಕೊಂಡಿತ್ತು ನೋಡಾ~ ಎಂದು ಅಲ್ಲಮ ಹೇಳುತ್ತಾನೆ. ಆ ಕಾಲದಲ್ಲಿ ಬರೆದ ಪಂಪ ಇಂದಿಗೂ ಮಾತನಾಡುತ್ತಿದ್ದಾನೆ. ಕ್ಷಣವೆಂಬುದು ಪರಂಪರೆಗೆ ಸೇರಿದ್ದು. ಇಂದು ಬೆಳೆದ ಕಾಳೆಲ್ಲಾ ಯಾವಾಗಿನವು? ಒಂದು ಬೀಜ ಎಷ್ಟೋ ಯುಗಗಳನ್ನು ದಾಟಿ ಬಂದಿರುತ್ತೆ. ಅದೇ ರೀತಿ ಪರಂಪರೆಯನ್ನು ಜಾನಪದ ಸದಾ ದಾಟಿಸುತ್ತಲೇ ಇರುತ್ತದೆ. `ಕಾಲ ಕಣ್ಣಿಯ ಹಂಗು~ ಈ ಎಲ್ಲಾ ಮೀಮಾಂಸಾ ಆಶಯಗಳನ್ನು ಒಳಗೊಂಡ ಒಂದು `ಕಟ್ಟೋಣ~ವಾಗಿದೆ.

ನವ್ಯದಿಂದಲೂ ಬಿಡಿಸಿಕೊಂಡ, ಬಂಡಾಯದಿಂದಲೂ ದೂರ ನಿಲ್ಲಬಲ್ಲ ಕಾವ್ಯ ನಿಮ್ಮದಾಯಿತು. ಹಾಗೆ ಸದೂರದಲ್ಲಿ ನಿಂತು ಬರೆಯುವುದು ಹೇಗೆ ಸಾಧ್ಯವಾಯಿತು?

ನವ್ಯ ನನ್ನ ಕಾವ್ಯದ ಬಂಧದ ಮೇಲೆ ಹೆಚ್ಚು ಪ್ರಭಾವ ಬೀರಿತು. ಆದರೆ ನವ್ಯದ ಆಶಯಗಳು, ಅವರು ಹೇಳುವ ಅನಾಥ ಪ್ರಜ್ಞೆ, ಈಡಿಪಸ್ ಕಾಂಪ್ಲೆಕ್ಸ್, ವ್ಯಕ್ತಿನಿಷ್ಠವಾದ ಇವೆಲ್ಲವೂ ನಮ್ಮ ನೆಲದವು ಎಂದು ನನಗನ್ನಿಸಲೇ ಇಲ್ಲ. ಹೀಗಾಗಿ ಕೆಲ ಕಾಲ ಬರೆಯುವುದನ್ನು ನಿಲ್ಲಿಸಿದೆ.

 

ಅದೇ ಹೊತ್ತಿಗೆ ನನ್ನನ್ನು ಹೆಚ್ಚು ಪ್ರಭಾವಿಸಿದ್ದು ಜಾನಪದ, ವಚನ ಹಾಗೂ ಕುವೆಂಪು ಚಿಂತನೆಗಳು. ಈ ಮೂರೂ ನನ್ನ ಆಲೋಚನಾ ಶಕ್ತಿ ಕೇಂದ್ರಗಳಾದವು. ಜಾನಪದ ಕೇವಲ ಜನಪರವಲ್ಲ; ಜೀವಪರ. ಈ ಜೀವಪರ ಕೃಷಿ ಅಕ್ಷರಗಳಲ್ಲಿ ಹೆಚ್ಚಾಗಿ ನಡೆದದ್ದು ಕುವೆಂಪು ಅವರಲ್ಲಿ. ಆದರೆ ನವ್ಯರಿಗೆ ಕುವೆಂಪು ಅರ್ಥವಾಗಲಿಲ್ಲ.ನಾನು ನನ್ನ ಕಾಲಮಾನದೊಳಗೆ ಹಲವು ಚಳವಳಿಗಳನ್ನು ಕಂಡಿದ್ದೇನೆ, ತೊಡಗಿಕೊಂಡಿದ್ದೇನೆ. ಆದರೆ ಅಷ್ಟೇ ಗಂಭೀರವಾಗಿ ಕನ್ನಡ ಮಣ್ಣಿನಲ್ಲಿ ನಡೆದ ವಚನ ಚಳವಳಿಯನ್ನೂ ಗ್ರಹಿಸಿದ್ದೇನೆ. ವಚನಕಾರರು ಜಗದ ಡೊಂಕನ್ನು ತಿದ್ದುವ ಜತೆಗೆ ಸ್ವವಿಮರ್ಶೆಯನ್ನೂ ಮಾಡಿಕೊಳ್ಳುತ್ತಿದ್ದರು. ವಚನಗಳಲ್ಲಿ ಘೋಷಣೆ ಕಂಡುಬಾರದು.ಆದ್ದರಿಂದಲೇ ವಚನಗಳಿಗಿರುವ ಶಕ್ತಿ ನಮ್ಮ ಕಾಲಮಾನದ ಬರಹಗಾರರಿಗೆ ಇಲ್ಲ. ವಚನಗಳು ನಮ್ಮ ಕಾಲವನ್ನು ಅರ್ಥಮಾಡಿಕೊಳ್ಳುವ ಜ್ಞಾನ ಸಂಗಾತಿಗಳಾದವು. ಯಾವ ಬರಹಗಾರನಿಗೆ ಸ್ವವಿಮರ್ಶೆ ಸಾಧ್ಯವಾಗದೋ ಆತ ಸೃಜನಶೀಲನಾಗಲಾರ. ಬಂಡಾಯ ಚಳವಳಿಯಲ್ಲಿ ದೇವನೂರ ಮಹದೇವ, ಡಾ.ಬೆಸಗರಹಳ್ಳಿ ರಾಮಣ್ಣ ತಣ್ಣಗೆ ಬರೆದರು.ಯಾವ ಚಳವಳಿಯೊಂದಿಗೆ ಗುರುತಿಸಿಕೊಳ್ಳದೆಯೂ ನಾ.ಡಿಸೋಜ `ತಿರುಗೋಡಿನ ರೈತ ಮಕ್ಕಳು~ ಕೃತಿ ನೀಡಿದರು. ಕೆ.ಟಿ.ಗಟ್ಟಿ, ದು.ನಿಂ.ಬೆಳಗಲಿ ಅವರಿಂದ ಸತ್ವಯುತ ಕೃತಿಗಳು ಹೊರಬಂದವು. ಅವರ ಹಿಂದೆ ಗುಂಪು ಇರಲಿಲ್ಲ ಎಂಬ ಕಾರಣಕ್ಕೆ ಅವರ ಕೃತಿಗಳಿಗೆ ಮನ್ನಣೆ ಸಿಗಲಿಲ್ಲ. ಆದರೆ ಇತ್ತ ಬಂಡಾಯ ಚಳವಳಿಯ ಬಹುತೇಕ ಬರಹಗಾರರ ಕಾವ್ಯ ಘೋಷಣೆಯಾಯಿತು, ಗದ್ಯ ಭಾಷಣವಾಯಿತು. ಇದೆಲ್ಲಾ ನನಗೆ ವಿಚಿತ್ರ ಅನ್ನಿಸತೊಡಗಿತು.ದೇಸಿಯತೆ ಬೆರೆತ ನಿಮ್ಮ ಕಾವ್ಯಕ್ಕೆ ನೀವು ನೀಡುವ ಸ್ಥಾನ ಎಂಥದ್ದು?

ದೇಸಿ ಸಂಸ್ಕೃತಿಗೆ ಸಂಬಂಧಪಟ್ಟಂತೆ ಕಾವ್ಯ ಕ್ಷೇತ್ರದಲ್ಲಿ ವರಕವಿ ಬೇಂದ್ರೆ ಮತ್ತು ಚಂದ್ರಶೇಖರ ಕಂಬಾರರು ಪ್ರಧಾನ ಶಕ್ತಿಗಳು. ಬೇಂದ್ರೆ ಭಾವಗೀತಾತ್ಮಕ ಮಹಾ ಪ್ರತಿಭೆ. ಆದರೆ ಕಂಬಾರರಿಗೆ ಗೇಯತೆ ಸಾಕಾಗಲಿಲ್ಲ. ಅವರು ಬಂದದ್ದೇ ಕಥನ ಪರಂಪರೆಯಿಂದ.ಕಾದಂಬರಿ, ನಾಟಕ ಹಾಗೂ ಕಾವ್ಯ ಏಕತ್ರಗೊಂಡ ರೀತಿಯೊಳಗೆ ಅವರ ದೇಸಿ ಪ್ರತಿಭೆ ಬೆಳಗುತ್ತಾ ಹೋಯಿತು. ಅವರಿಬ್ಬರೂ ನಾಡಿನ ಒಂದು ಭಾಗದ ಭಾಷಿಕ ನೆಲೆಗೆ ಸೇರಿದವರು. ನನ್ನ ನೆಲೆ ಬೇರೆಯದು. ನಮ್ಮ ಕನ್ನಡಕ್ಕೆ ಬಹುತ್ವವಿದೆ. ಆ ಹಲವು ಕನ್ನಡಗಳ ಒಳಗೆ ಒಂದು ಕನ್ನಡದಲ್ಲಿ ನನ್ನ ಕಾವ್ಯದ ಅಸ್ಮಿತೆಯಿದೆ.ನಾನು ವ್ಯವಸಾಯ ಸಂಸ್ಕೃತಿಯನ್ನು ಕಂಡುಂಡು ಬಂದವನು. ಸಹಜವಾಗಿಯೇ ವ್ಯವಸಾಯ ಕ್ಷೇತ್ರದ ಪರಿಭಾಷೆಗಳು ನುಡಿಗಟ್ಟುಗಳು ನನ್ನ ಸಂವೇದನೆಯ ದ್ರವ್ಯ ರೂಪಗಳಾಗಿ ಮಾತನಾಡುತ್ತವೆ.

ನಿಮ್ಮ ಕಾವ್ಯಕ್ಕೆ ಪದಕೋಶ ಅಗತ್ಯವಿದೆ ಎಂದು ಮಾತನಾಡಿಕೊಳ್ಳುವವರೂ ಇದ್ದಾರಲ್ಲಾ?

ನವ್ಯದ ವಿಮರ್ಶಕರು ಹಾಗೆಂದರು. ನಾನದನ್ನು ನಿರಾಕರಿಸಿದೆ. ತುಂಬಾ ವಿನಯದಿಂದ, ಗೌರವದಿಂದ ಗೋಪಾಲಕೃಷ್ಣ ಅಡಿಗರಿಗೂ ಇದೇ ಪ್ರಶ್ನೆ ಎತ್ತುತ್ತೇನೆ.

 

ನಾನು ವಿದ್ಯಾರ್ಥಿಯಾಗಿದ್ದಾಗ ಅವರ ಕಾವ್ಯ ಅರ್ಥವಾಗುತ್ತಿರಲಿಲ್ಲ. ಆಗ ಆ ಕಾವ್ಯದ ಸ್ತರಕ್ಕೆ ಏರಬೇಕು, ಹತ್ತಿರ ಸಾರಬೇಕು ಎನ್ನುತ್ತಿದ್ದರು. `ಬರಲಿ ಪರಿಪೂರ್ಣಾವತಾರಿ ವಿನತಾ ಪುತ್ರ~ ಎಂಬುದು ಕವಿತೆಯ ಒಂದು ಸಾಲು. ಇದನ್ನು ಅರ್ಥ ಮಾಡಿಕೊಳ್ಳಲು ಪುರಾಣ ಪ್ರಜ್ಞೆಯ ಅರಿವಿರಬೇಕು ಎನ್ನುತ್ತಿದ್ದರು. ನೆಲಮೂಲದಿಂದ ಬಂದಂಥ ನನ್ನಂತಹವರಲ್ಲಿ ಪುರಾಣ ಪ್ರಜ್ಞೆಯನ್ನು ಒತ್ತಾಯಿಸುವುದಾದರೆ ನನ್ನ ನೆಲಮೂಲದ ನುಡಿಗಟ್ಟುಗಳನ್ನು ಅವರು ಸ್ವಯಂ ಅರಿಯಬಹುದಲ್ಲವೇ?

 

ವಚನದಲ್ಲಿ ಒಂದು ಮಾತಿದೆ: ಪದವನರ್ಪಿಸಬಹುದಲ್ಲದೆ ಪದಾರ್ಥವನರ್ಪಿಸಲಾಗದು ಎಂದು. ಕಾವ್ಯ ವಿಸ್ತಾರವಾಗಬೇಕಿರುವುದು ಅನುಭವದ ಮೂಲಕವೇ ವಿನಾ ಶಬ್ದಾರ್ಥಗಳಿಂದಲ್ಲ.

ಮೊದಲ ಕವನಸಂಕಲನದಿಂದಲೂ ನಿಮ್ಮಳಗೊಬ್ಬ ರಾಜಕೀಯ ಕವಿ ಆಟವಾಡುತ್ತಿದ್ದಾನೆ...

ನನ್ನೊಳಗಿನ ಎಚ್ಚೆತ್ತ ರಾಜಕೀಯ ಪ್ರಜ್ಞೆಗೆ ಎಪ್ಪತ್ತರ ದಶಕದಲ್ಲಿ ನಡೆದ ಚಳವಳಿಗಳ ಪ್ರಭಾವ ಕಾರಣ. ದೇವರಾಜ ಅರಸು ಅವರಂತಹ ರಾಜಕೀಯ ನಾಯಕರು ವಂಚಿತ ಸಮುದಾಯಗಳೆಡೆಗೆ ತುಡಿದದ್ದು ಕಾರಣ. ನಾನು ಬಂದ ಮೂಲವೂ ಕೂಡ ರಾಜಕೀಯ ಪ್ರಜ್ಞೆಗೆ ಇಂಬು ನೀಡಿತು ಎನ್ನಬಹುದು.

ಒಬ್ಬ ಕವಿಯಾಗಿ ಇಂದಿನ ರಾಜಕೀಯ ಸ್ಥಿತ್ಯಂತರಗಳ ಬಗ್ಗೆ ಏನನ್ನಿಸುತ್ತದೆ?

ಸಾಮಾನ್ಯ ಪ್ರಜೆಯಾಗಿಯೂ ಈಗ ನಡೆಯುತ್ತಿರುವುದು ನೈತಿಕ ರಾಜಕಾರಣದ ಅವನತಿ ಅನ್ನಿಸುತ್ತದೆ.

 

ಇದು ತಲ್ಲಣ ಹುಟ್ಟಿಸುವಂಥದ್ದು. ಜಾಗತೀಕರಣದ ಹೆಸರಿನಲ್ಲಿ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಜಾಗತೀಕರಣದ ಭಾಗವಾಗಿರುವ ಗಣಿಗಾರಿಕೆ ಇದಕ್ಕೆ ದೊಡ್ಡ ಉದಾಹರಣೆ. ಇದರಿಂದ ಬಂದ ಅನೈತಿಕ ಹಣ ಬದುಕಿನ ಎಲ್ಲ ಕ್ಷೇತ್ರಗಳನ್ನೂ ಅನೈತಿಕಗೊಳಿಸುತ್ತಾ ಸಾಗಿದೆ.

 

ಮೊದಲೆಲ್ಲಾ ಒಬ್ಬ ಮನುಷ್ಯನಿಗೆ ಒಂದು ವೋಟು ಎಂಬ ಮಾತಿತ್ತು. ಈಗ ಹಲವು ನೋಟುಗಳಿಗೆ ಒಂದು ವೋಟು ಎಂಬಂತಾಗಿ ಪ್ರಜಾಪ್ರಭುತ್ವದ ಶಕ್ತಿಯನ್ನೇ ನಾಶ ಮಾಡಿತು.ಎಪ್ಪತ್ತರ ದಶಕದ ಚಳವಳಿಗಳು ಹಾಗೂ ಸ್ವಾತಂತ್ರ್ಯ ಹೋರಾಟದ ಆಶಯಗಳು ಕಳೆದ ಐದು ವರ್ಷಗಳಲ್ಲಿ ಅಪವಿತ್ರಗೊಂಡಿವೆ. ನೈತಿಕ ಶಕ್ತಿ ಇಲ್ಲದವರು ಗಾಂಧೀಜಿಯವರ ಸತ್ಯಾಗ್ರಹ ಮಂತ್ರವನ್ನು ಜಪಿಸಿ ಅದನ್ನು ಮಲಿನಗೊಳಿಸುತ್ತಿದ್ದಾರೆ. ಅವರಿಗೆ ತಿದ್ದಿ ಬುದ್ಧಿ ಹೇಳಬೇಕಾದ ಎಡಪಂಥೀಯ ಬುದ್ಧಿಜೀವಿಗಳು ಬೆಂಬಲವಾಗಿ ನಿಲ್ಲುತ್ತಿದ್ದಾರೆ.

 

ಅವರು ಆತ್ಮಸಾಕ್ಷಿಗಳನ್ನು ಕೊಂದುಕೊಂಡ ವ್ಯವಹಾರಿಗಳಾಗಿದ್ದಾರೆ. ಒಂದೆಡೆ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಮಂದಿ, ಮತ್ತೊಂದೆಡೆ ದಿನಗೂಲಿಗೂ ಹೆಣಗುವ ಜನ. ಪ್ರಜಾಪ್ರಭುತ್ವಕ್ಕೆ ನಿಜವಾಗಿಯೂ ಅರ್ಥ ಇದೆಯೇ? ಇವನ್ನು ನೋಡಿದಾಗ ಕಿಂಚಿತ್ ತಿಳಿವಳಿಕೆ ಇರುವವರಿಗೆ `ಅರಿವು ನಾಚಿದ~ ಸ್ಥಿತಿ ಎದುರಾಗಿದೆ.

ಇದರಿಂದಾಗಿಯೇ ನಿಮ್ಮ ಮನಸ್ಸು ವಚನಗಳ ರಚನೆಯತ್ತ ಹೊರಳಿತೆ?

ಖಂಡಿತ. ಕಳೆದ ಐದು ವರ್ಷಗಳಲ್ಲಿ ನಡೆದ ಸಾಮಾಜಿಕ ರಾಜಕೀಯ ವಿದ್ಯಮಾನಗಳಿಗೆ ಪ್ರತಿಕ್ರಿಯೆಯಾಗಿ ವಚನಗಳನ್ನು ಬರೆಯುತ್ತಾ ಹೋದೆ. ಅವುಗಳನ್ನು ಪ್ರತಿಕ್ರಿಯಾತ್ಮಕ ರಚನೆಗಳು ಎಂದೇ ಕರೆದಿದ್ದೇನೆ.

 

70- 80ರ ದಶಕದಲ್ಲಿ ನಾನು ಬರೆಯಲಾಗದ್ದನ್ನು ಈಗ ಬರೆಯಬಹುದಾದದ್ದನ್ನು ಈ ಐದು ವರ್ಷಗಳ ಅನುಭವ ನೀಡಿದೆ. ಮಠ ಮಾನ್ಯಗಳಿಗೆ ಪಾಕೆಟ್ ಮನಿ ಕೊಡುವ ರೀತಿಯೊಳಗೆ ಹಣವನ್ನು ಹಂಚುವ ಬಜೆಟ್‌ನ ಅಪವಿತ್ರೀಕರಣ ನಡೆದಿದೆ. ಮೂಢನಂಬಿಕೆಗಳನ್ನು ಸಾಂಸ್ಕೃತಿಕ ವಿಶ್ಲೇಷಣೆಯ ಹೆಸರಿನಲ್ಲಿ ಸಮರ್ಥಿಸುವ ಬೌದ್ಧಿಕ ವಿದ್ರೋಹಗಳು ನನ್ನನ್ನು ಹೆಚ್ಚು ಅಲುಗಾಡಿಸಿದವು. ಅದಕ್ಕೆ ಕೊಟ್ಟ ಪ್ರತಿಕ್ರಿಯೆಯೇ `ಅರಿವು ನಾಚಿತ್ತು~ ಕೃತಿ.

ನೀವು ನಾಟಕ ಬರೆಯಲು ಪ್ರೇರಕವಾದ ಅಂಶಗಳು?

ನಾನು ಮೂಲತಃ ನಾಟಕಕಾರನಲ್ಲ. ಹಟ ತೊಟ್ಟು ನನ್ನಿಂದ ನಾಟಕ ಬರೆಸಿದ್ದು ಸಿಜಿಕೆ, ರಂಗಭೂಮಿಯ ಒಳಸೂಕ್ಷ್ಮಗಳನ್ನು ಕಲಿಸಿಕೊಟ್ಟ ರಂಗಗುರು ಅವರು. ಅವರ ಸೂಚನೆಯ ಫಲವಾಗಿ `ದಂಡೆ~ ಬರೆದೆ.

 

ಆ ನಂತರ ಬರೆದ `ದಾಳಿ~ ಹಾಗೂ `ಅನ್ನದಾತ~ ಜಾಗತೀಕರಣದ ವಿರುದ್ಧ ರೈತಪರವಾಗಿ ದನಿ ಎತ್ತಿವೆ. ನಮ್ಮ ಜಾನಪದ ಹಾಡುಗಾರ್ತಿ ಸಿರಿಯಜ್ಜಿ ಹಾಗೂ ಇರಾಕಿನ ರಾಬಿಯಾ ಅವರ ಬದುಕು ನನ್ನ ನಾಟಕಗಳಿಗೆ ಮುಖ್ಯ ಪ್ರೇರಣೆ. ಮಧ್ಯಪ್ರಾಚ್ಯದಲ್ಲಿ ಹಿಂಸೆ ಭುಗಿಲೆದ್ದಾಗ ರಾಬಿಯಾ ನೆನಪಾಗುತ್ತಾಳೆ.

 

ಆಕೆ ನರಕದಲ್ಲಿರುವವರಿಗೆ ನೀರೆರೆಯುತ್ತೇನೆ ಸ್ವರ್ಗದಲ್ಲಿರುವವರಿಗೆ ಬೆಂಕಿ ಇಡುತ್ತೇನೆ ಎನ್ನುತ್ತಾಳೆ. ಸಿರಿಯಜ್ಜಿ ಬೆಂಕಿ ನೀರಿನ ಕೂಡಾವಳಿಯಲ್ಲಿ ಬದುಕನ್ನು ಕಂಡವಳು, ನಮ್ಮ ನೆಲದ ಬಹುದೊಡ್ಡ ದಾರ್ಶನಿಕಳು.

ಚಳವಳಿಗಳು ಇಲ್ಲದ ಸಂದರ್ಭದಲ್ಲಿ ಹೊಸ ತಲೆಮಾರಿನ ಸಾಹಿತ್ಯದ ಫಸಲು ಹೇಗೆ ಬರುತ್ತಿದೆ?

ದಲಿತ ಬಂಡಾಯದ ಆಶಯಗಳು ಹೆಚ್ಚು ಸಂವೇದನಾಶೀಲವಾಗಿ ಪ್ರಕಟಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಚಳವಳಿಗಳು ಇಲ್ಲ ಎಂದು ನಂಬುವವನು ನಾನಲ್ಲ. ಹೋರಾಟ ಕ್ಷಣಿಕವಲ್ಲ. ಜನಪರ ಸ್ವರೂಪ ಇರುವ ಅವುಗಳಿಗೆ ಕಾಲದ ನಿರಂತರತೆ ಇದ್ದೇ ಇರುತ್ತದೆ.ಮಹಿಳಾ ಬರಹಗಾರರ ಪಡೆಯೇ ಹುಟ್ಟಿಕೊಂಡಿದೆ. ಇದನ್ನೆಲ್ಲಾ ನೋಡುವಾಗ ಕತೆ, ಕಾವ್ಯ, ವಿಮರ್ಶೆ ವಿವೇಕಯುತ ದಾರಿಯಲ್ಲೇ ಸಾಗಿದೆ. ಸಮಾಜದ ಸ್ವಾಸ್ತ್ಯವನ್ನು ಗಮನದಲ್ಲಿಟ್ಟುಕೊಂಡು ಬರವಣಿಗೆಯ ಪರಿಕ್ರಮ ನಡೆಯುತ್ತಿದೆ. ಇತ್ತೀಚೆಗೆ ಸಾಂಸ್ಕೃತಿಕ ಆಯಾಮವಿರುವ ಸಂಶೋಧನೆಗಳು ಹೆಚ್ಚಿವೆ. ಚಳವಳಿಗಳು ಇದ್ದ ಕಾಲದಲ್ಲಿಯೂ ಸಂಸ್ಕೃತಿ ಕುರಿತ ಸಂಶೋಧನೆಗಳು ಇಷ್ಟು ಗಂಭೀರವಾಗಿ ನಡೆದಿರಲಿಲ್ಲ.

ನಿಮ್ಮ ಬದುಕಿನಲ್ಲಿ ಎಂದೆಂದೂ ಮರೆಯಲಾಗದ ರೂಪಕ?

ಅಂಥ ರೂಪಕಗಳು ಬಹಳಷ್ಟಿವೆ. ಬಂಗಾ ಬಡ್ತನ ಇದ್ದಾಗಲೂ ನನ್ನವ್ವ ಹಾಗೂ ಅಜ್ಜಿ ಮತ್ತೊಬ್ಬರಿಗೆ ಕೊಟ್ಟುಂಡು ಬದುಕಿದ ರೀತಿಯನ್ನು ಮರೆಯಲಾದೀತೆ? ಯಾರೋ ತಾಯಿ-ಮಕ್ಕಳನ್ನು ಕಂಡಾಗ ನನ್ನವ್ವನ ಬೆವರಿನ ವಾಸನೆ, ನೆರಿಗೆಯ ಸಪ್ಪಳ ಹಾಗೂ ಆಕೆಯ ಕೈಬಳೆಯ ಸದ್ದು ನೆನಪಾಗುತ್ತದೆ.

 

ಹಾಗೆಯೇ ನನ್ನ ಕೈಕಾಲುಗಳಿಗೆ ಚಿಕ್ಕಂದಿನಲ್ಲಿ ಆದ ಗಾಯಗಳು. ಕೂಲಿ ಬ್ಯಾಸಾಯಕ್ಕೋ, ದನ ಕಾಯಲು ಹೋದಾಗಲೋ ಆಗುತ್ತಿದ್ದ ಗಾಯಗಳವು. ಪದವಿ ಓದುವವರೆಗೂ ಅವು ಪೂರ್ಣ ಮಾದಿರಲಿಲ್ಲ. ಪ್ಯಾಂಟಿನ ಮರೆಯಲ್ಲೇ ಗಾಯಗಳನ್ನು ಅವಿತಿಟ್ಟು ಓದು ಮುಗಿಸಿದ್ದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry