ಭಾನುವಾರ, ಏಪ್ರಿಲ್ 18, 2021
31 °C

ಸಂದಿಗ್ಧ ಸ್ಥಿತಿಯಲ್ಲಿ ವೈದ್ಯರು

ಪ್ರಜಾವಾಣಿ ವಾರ್ತೆ / ಎಂ. ಕೀರ್ತಿಪ್ರಸಾದ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬಿಬಿಎಂಪಿ ನಡುವೆ ಸಮನ್ವಯದ ಕೊರತೆಯಿಂದ ಸುಮಾರು 50 ಮಂದಿ ವೈದ್ಯರು ಸಂಕಷ್ಟ ಅನುಭವಿಸುವಂತಾಗಿದೆ. ಅತ್ತ ಎರವಲು ಸೇವೆಯಲ್ಲೂ ಮುಂದುವರಿಯದೇ, ಇತ್ತ ಮಾತೃ ಇಲಾಖೆಗೂ ವಾಪಸಾಗಲು ಸಾಧ್ಯವಾಗದೆ ವೈದ್ಯರು ಸಂದಿಗ್ಧ ಸ್ಥಿತಿಯಲ್ಲಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸುಮಾರು 65 ವೈದ್ಯರು ಹಾಗೂ ತಜ್ಞರು ಪಾಲಿಕೆಯಲ್ಲಿ ಎರವಲು ಸೇವೆ ಸಲ್ಲಿಸುತ್ತಿದ್ದರು. ಇವರ ಪೈಕಿ ಬಹುಪಾಲು ವೈದ್ಯರ ಸೇವೆ ಐದು ವರ್ಷ ಮೀರಿದೆ.

ಆದರೆ ನಗರದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯ ಹಿನ್ನೆಲೆಯಲ್ಲಿ ಇವರ ಎರವಲು ಸೇವೆಯನ್ನು ಮುಂದುವರಿಸುವಂತೆ ಕೋರಿ ಹಿಂದಿನ ಆಯುಕ್ತರಾದ ಡಾ. ಎಸ್.ಸುಬ್ರಹ್ಮಣ್ಯ ಹಾಗೂ ಭರತ್‌ಲಾಲ್ ಮೀನಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪತ್ರ ಬರೆದಿದ್ದರು.

ಅದರಂತೆ ಅವರ ಎರವಲು ಸೇವೆಯನ್ನು ಮುಂದುವರಿಸಲಾಯಿತು. ಆದರೆ ಅವಧಿ ಮೀರಿ ವೈದ್ಯರ ಸೇವೆ ಮುಂದುವರಿಸಿರುವ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಕೆಲ ವೈದ್ಯರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲಾಯಿತು. ಈ ನಡುವೆ ಎರವಲು ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಮಾರ್ಚ್ 31ರೊಳಗೆ ಮಾತೃ ಇಲಾಖೆಗೆ ವಾಪಸ್ ಬರುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ನೀಡಿತ್ತು.

ಆದರೆ ಈ ವೈದ್ಯರನ್ನು ವಾಪಸ್ ಕಳುಹಿಸಲು ಪಾಲಿಕೆ ಅವಕಾಶ ನೀಡಿಲ್ಲ. ಇದರಿಂದ ವೈದ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಐದು ವರ್ಷ ಸೇವೆ ಪೂರ್ಣಗೊಳಿಸಿದ ವೈದ್ಯರನ್ನು ವಾಪಸ್ ಕರೆಸಿಕೊಂಡು ಬೇರೆ ವೈದ್ಯರನ್ನು ನಿಯೋಜಿಸುವಂತೆ ಕೋರಿ ಹಲವು ಬಾರಿ ಪತ್ರ ಬರೆದರೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಂದಿಸಲಿಲ್ಲ. ಹಾಗಾಗಿ ಸುಮಾರು 50 ವೈದ್ಯರ ಸೇವೆಯನ್ನು ಮುಂದುವರಿಸುವುದು ಅನಿವಾರ್ಯವಾಯಿತು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಷೋಕಾಸ್ ನೋಟಿಸ್: ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾರ್ಚ್ 31ರೊಳಗೆ ಮಾತೃ ಇಲಾಖೆಗೆ ಹಿಂದಿರುಗುವಂತೆ ಎರವಲು ಸೇವೆ ಅಧಿಕಾರಿಗಳಿಗೆ ಸೂಚಿಸಿತ್ತು. ಈ ವೈದ್ಯರನ್ನು ದಿಢೀರ್ ವಾಪಸ್ ಕಳುಹಿಸಿದರೆ ಪಾಲಿಕೆ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದಂತಾಗುತ್ತದೆ. ಹಾಗಾಗಿ ಅವರನ್ನು ವಾಪಸ್ ಕಳುಹಿಸಿಲ್ಲ. ಆದರೆ ಇಲಾಖೆಯು ವೈದ್ಯರಿಗೆ ಷೋಕಾಸ್ ನೋಟಿಸ್ ನೀಡಿದ್ದು, ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ. ಇದರಿಂದ ವೈದ್ಯರು ಕಂಗಾಲಾಗಿದ್ದಾರೆ’ ಎಂದು ಅವರು ಹೇಳಿದರು.

‘ಸುಮಾರು 50 ವೈದ್ಯರನ್ನು ನೇಮಕ ಮಾಡವಂತೆ ಕೋರಿ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ಹೊಸ ವೈದ್ಯರ ನೇಮಕವಾಗುವವರೆಗೆ ಈ ವೈದ್ಯರನ್ನು ಹಿಂದಕ್ಕೆ ಕಳುಹಿಸುವುದು ಕಷ್ಟ’ ಎಂದು ಆ ಅಧಿಕಾರಿ ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.